ಫೋರೆಸ್ಟ್ ಮ್ಯಾನ್ ಆಫ್ ಇಂಡಿಯಾ- ಜಾಧವ್ ಪಯಾಂಗ್

ಫೋರೆಸ್ಟ್ ಮ್ಯಾನ್ ಆಫ್ ಇಂಡಿಯಾ- ಜಾಧವ್ ಪಯಾಂಗ್

ನಿಮಗೆಲ್ಲಾ ಸಾಲು ಮರದ ತಿಮ್ಮಕ್ಕ ಗೊತ್ತೇ ಇದೆ. ತಮಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಗಳ ಇಕ್ಕೆಲಗಳಲ್ಲಿ ಗಿಡ ನೆಟ್ಟು ಅದನ್ನು ಪೋಷಿಸಿ ಮರ ಮಾಡಿ ಮಕ್ಕಳಂತೆ ಆರೈಕೆ ಮಾಡಿ ನೀಗಿಸಿಕೊಂಡವರು. ಸಾಲು ಮರದ ತಿಮ್ಮಕ್ಕನವರಂತೆಯೇ ಮರಬೆಳೆಸಿ ಒಂದು ಅರಣ್ಯವನ್ನೇ ಸೃಷ್ಟಿಸಿದ ‘ಅರಣ್ಯ ಮನುಷ್ಯ' ಫೋರೆಸ್ಟ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತಿ ಗಳಿಸಿದ ಜಾಧವ್ ಪಯಾಂಗ್ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಿದೆ. ಈಗಾಗಲೇ ತಮ್ಮ ಜೀವಿತಾವಧಿಯ ೪೦ ವರ್ಷಗಳನ್ನು ಅವರು ಕಾಡು ಮಾಡುವುದಕ್ಕೇ ಶ್ರಮಿಸಿದ್ದಾರೆ. ಅವರ ಈ ಅವಿರತ ಶ್ರಮದ ಫಲವೇ ಸುಮಾರು ೫೦೦ ಹೆಕ್ಟೇರ್ ಗಳಷ್ಟು ದೊಡ್ಡದಾದ ಕಾಡು ನಿರ್ಮಾಣವಾಗಿರುವುದು. 

ಮೊಲಾಯಿ ಕಾಡುಗಳೆಂದು ಕರೆಯುವ ಈ ಅರಣ್ಯ ನಿರ್ಮಾಣದ ಹಿಂದೆ ಒಂದು ಕತೆಯಿದೆ. ಅಸ್ಸಾಂ ನ ತೀರಾ ಹಿಂದುಳಿದ ಆದಿವಾಸಿ ಜನಾಂಗಕ್ಕೆ ಸೇರಿದ ಜಾಧವ್ ‘ಮೊಲಾಯಿ’ ಪಯಾಂಗ್ ಹುಟ್ಟಿದ್ದು ೧೯೬೩ರಲ್ಲಿ. ಅಸ್ಸಾಂ ರಾಜ್ಯದ ಜೊರಹಾಟ್ ಎಂಬ ಪಟ್ಟಣದ ಬಳಿ ಇರುವ ಮೊಜಾಲಿ ಎಂಬ ಸಣ್ಣ ದ್ವೀಪ ಊರಿನಲ್ಲಿ ವಾಸವಾಗಿರುವ ಜಾಧವ್ ಅಲ್ಲಿಯೇ ತಮ್ಮದೊಂದು ಸಣ್ಣ ಗುಡಿಸಲು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದರು. ಆ ದ್ವೀಪದ ಜನಸಂಖ್ಯೆ ಸುಮಾರು ೧೫೦೦. ಭಾರತದ ಹಲವಾರು ಸಣ್ಣ ಊರಿನಂತೆಯೇ ಇರುವ ಈ ಊರಿನಲ್ಲಿ ಪ್ರಾಥಮಿಕ ಸೌಕರ್ಯಗಳ ಕೊರತೆ ಸದಾ ಇತ್ತು. ೧೯೭೯ರಲ್ಲಿ ಜಾಧವ್ ಪಯಾಂಗ್ ತಮ್ಮ ಊರಿನ ಹತ್ತಿರ ಇರುವ ಬ್ರಹ್ಮಪುತ್ರ ನದಿಯ ದಂಡೆಯ ಬಳಿ ಹಲವಾರು ಹಾವುಗಳು ಸತ್ತು ಬಿದ್ದಿರುವುದನ್ನು ಗಮನಿಸುತ್ತಾರೆ. ಊರಿನ ಹಿರಿಯರ ಬಳಿ ಕಾರಣ ಕೇಳಿದಾಗ ಸೆಖೆಯ ಕಾರಣದಿಂದ ಈ ರೀತಿ ಹಾವುಗಳು ಸಾಯುತ್ತಿವೆ ಎಂದು ಅವರಿಗೆ ಅರಿವಾಗುತ್ತದೆ. ಆ ಪ್ರದೇಶ ಆಗ ಒಂದು ಬರಡು ಭೂಮಿಯಾಗಿರುತ್ತದೆ. ಇವತ್ತು ಹಾವುಗಳು, ನಾಳೆ ಪ್ರಾಣಿಗಳು ಮತ್ತೆ ಮುಂದೊಂದು ದಿನ ಮನುಷ್ಯರೇ ಸಾವಿಗೆ ತುತ್ತಾಗುವ ಕಾಲ ಬರುತ್ತದೆ ಎಂದು ಕೇವಲ ೧೬ ವರ್ಷದ ಜಾಧವ್ ಗೆ ಅರಿವಾಗುತ್ತದೆ. ಸ್ವಲ್ಪವಾದರೂ ಮರಗಳನ್ನು ಬೆಳೆಸಿದರೆ ಭೂಮಿ ತಂಪಾಗಬಹುದೆಂದು ಬೇಗ ಬೆಳೆಯುವ ಬಿದಿರಿನ ಸಸಿಗಳನ್ನು ತಂದು ನದಿಯ ಬಳಿಯ ಮರಳು ದಂಡೆಗಳಲ್ಲಿ ನೆಡುತ್ತಾರೆ.  ಬ್ರಹ್ಮಪುತ್ರ ನದಿಯು ಪ್ರತೀ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿತ್ತು ಮತ್ತು ಊರಿನಲ್ಲಿ ನೆರೆಯ ಸಂಕಷ್ಟ ಎದುರಾಗುತ್ತಿತ್ತು.

ಪ್ರತೀ ವರ್ಷ ನೆರೆ ಬರುತ್ತಿರುವುದರಿಂದ ಮೊಜಾಲಿ ದ್ವೀಪದ ಭೂಭಾಗವು ಕೊಚ್ಚಿ ಹೋಗಿ ಕ್ರಮೇಣ ದ್ವೀಪವೇ ನಾಶವಾಗ ಬಹುದೆಂಬ ಭೀತಿ ವಿಜ್ಞಾನಿಗಳಿಗೆ ಕಾಡುತ್ತಿತ್ತು. ಸ್ಥಳೀಯ ವನ್ಯಜೀವಿ ಛಾಯಾಗ್ರಾಹಕ ಜೀತೂ ಕಲಿಟ ಎಂಬ ವ್ಯಕ್ತಿ ಮೊಜಾಲಿ ದ್ವೀಪದ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಅಲ್ಲಿ ಛಾಯಾಗ್ರಹಣಕ್ಕೆ ಹೋಗುತ್ತಿದ್ದರು. ಅವರು ಒಮ್ಮೆ ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣ ಮಾಡುವಾಗ ದೊಡ್ಡ ದೊಡ್ಡ ಮರಗಳನ್ನು ಕಂಡರು. ಅದನ್ನು ಹತ್ತಿರದಿಂದ ನೋಡಲು ಹೋದಾಗ ಅದೊಂದು ದೊಡ್ಡದಾದ ಕಾಡಾಗಿತ್ತು. ಆ ಬರಡು ಪ್ರದೇಶದಲ್ಲಿ ಕಾಡು ಬೆಳೆದ ಸಂಗತಿ ನೋಡಿ ಅವರಿಗೆ ಆಶ್ಚರ್ಯವಾಗಿತು. ಆಗ ಅವರಿಗೆ ಕಾಣಿಸಿದ ವ್ಯಕ್ತಿಯೇ ಜಾಧವ್ ಪಯಾಂಗ್. ಜೀತೂ ಅವರನ್ನು ಜಾಧವ್ ಮೊದಲ ಸಲ ಕಂಡಾಗ ಕಾಡು ಕಡಿಯಲು ಬಂದ ವ್ಯಕ್ತಿ ಅಥವ ಪ್ರಾಣಿಗಳ ಬೇಟೆಗಾರ ಎಂದು ತಿಳಿದು ಅವರನ್ನು ಅಲ್ಲಿಂದ ಹೋಗಲು ಹೇಳಿದ್ದರು. ನಂತರ ಜೀತು ಅವರ ವಿಷಯ ತಿಳಿದು ಅವರ ಬಳಿ ತಮ್ಮ ವಿವರಗಳನ್ನು ಹೇಳತೊಡಗಿದರು.  

ಜೀತೂ ಕಲಿಟ ಎಂಬ ವ್ಯಕ್ತಿ ಜಾಧವ್ ಅವರನ್ನು ಮತ್ತು ಅವರು ಬೆಳೆಸಿದ ಕಾಡನ್ನು ಮೊದಲ ಸಲ ಕಂಡದ್ದು ೨೦೦೯ ನೇ ಇಸವಿಯಲ್ಲಿ. ಅಲ್ಲಿಯವರೆಗೆ ಜಾಧವ್ ಪಯಾಂಗ್ ಅವರ ಕಾಡು ಹೊರ ಜಗತ್ತಿಗೆ ಅಪರಿಚಿತವಾಗಿಯೇ ಉಳಿದಿತ್ತು. ೧೯೭೯ರಲ್ಲಿ ಜಾಧವ್ ಪಯಾಂಗ್ ಮೊದಲ ಗಿಡ ನೆಟ್ಟಿದ್ದರು. ೨೦೦೯ರ ಹೊತ್ತಿಗೆ ಜೀತೂ ಅವರು ಜಾಧವ್ ಅವರನ್ನು ಭೇಟಿಯಾಗುವ ಸಮಯದಲ್ಲಿ ದೊಡ್ಡ ಕಾಡು ನಿರ್ಮಾಣವಾಗಿತ್ತು. ಅಲ್ಲಿ ಅಸಂಖ್ಯಾತ ಪ್ರಾಣಿ-ಪಕ್ಷಿಗಳು ನೆಲೆ ನಿಂತಿದ್ದವು. ಆನೆಗಳು, ಹುಲಿಗಳು, ಖಡ್ಗಮೃಗಗಳು, ಜಿಂಕೆಗಳು, ಮಂಗಗಳು, ನೂರಾರು ಹಕ್ಕಿಗಳು ಸಹಬಾಳ್ವೆ ನಡೆಸುತ್ತಿದ್ದವು. ಕಾಡಿನಲ್ಲಿ ಅರ್ಜುನ, ಗುಲ್ ಮೊಹರ್ ಮೊದಲಾದ ಮರಗಳು ಇದ್ದುವು. ಈ ಕಾಡಿನ ಬಗ್ಗೆ, ಜಾಧವ್ ಪಯಾಂಗ್ ಬಗ್ಗೆ ಜೀತೂ ಸ್ಥಳೀಯ ಪತ್ರಿಕೆಯಲ್ಲಿ ಒಂದು ಲೇಖನವನ್ನು ಬರೆದು ಪ್ರಕಟಿಸುತ್ತಾರೆ. ಇದರಿಂದ ಪ್ರಪಂಚಕ್ಕೆ ಜಾಧವ್ ಪಯಾಂಗ್ ಅವರ ಸಾಧನೆಯು ತಿಳಿಯುತ್ತದೆ. ಈಗ ಇವರ ಕಾಡಿಗೆ ೪೦ ವರ್ಷಗಳು ಕಳೆದಿವೆ. ಈಗಲೂ ಜಾಧವ್ ಪಯಾಂಗ್ ತಮ್ಮ ೬೦ನೇ ವಯಸ್ಸಿನಲ್ಲೂ ಗಿಡ ನೆಡಲು ಹೋಗುತ್ತಾರೆ.  ಜಾಧವ್ ಅವರು ಬೆಳೆಸಿದ ಕಾಡು ನ್ಯೂಯಾರ್ಕ್ ನಲ್ಲಿರುವ ಸೆಂಟ್ರಲ್ ಪಾರ್ಕ್ (ಸುಮಾರು ೩೫೦ ಹೆಕ್ಟೇರ್ ವಿಸ್ತೀರ್ಣ) ಗಿಂತಲೂ ದೊಡ್ಡದು ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಾಡಿನ ಬಳಿಯೇ ತಮ್ಮ ಪತ್ನಿ ಜೆನಿಟಾ ಹಾಗೂ ಮೂವರು ಮಕ್ಕಳ ಜೊತೆ ವಾಸವಾಗಿರುವ ಇವರಿಗೆ ತಮ್ಮ ಕಾಡು ಹಾಗೂ ಅಲ್ಲಿರುವ ಪ್ರಾಣಿ ಪಕ್ಷಿಗಳ ಅಳಿವಿನ ಭೀತಿ ಯಾವಾಗಲೂ ಕಾಡುತ್ತದೆಯಂತೆ. ಅವರ ಪ್ರಕಾರ ಕಾಡು ಹಾಗೂ ಪ್ರಾಣಿಗಳ ದೊಡ್ಡ ಶತ್ರು ಎಂದರೆ ಮನುಷ್ಯನೇ ಅಂತೆ. ಏಕೆಂದರೆ ಮನುಷ್ಯ ತನ್ನ ದುರಾಸೆಗೆ ಪ್ರಾಣಿ ಹತ್ಯೆ ಮಾಡುತ್ತಾನೆ, ಕಾಡು ಕಡಿದು ಮರಗಳ ಕಳ್ಳ ಸಾಗಾಟ ಮಾಡುತ್ತಾನೆ. ಇದರಿಂದ ವನ್ಯ ಜೀವಿಗಳಿಗೆ, ಪರಿಸರಕ್ಕೆ ಹಾನಿಯಾಗುತ್ತದೆ. ಜಾಧವ್ ಅವರ ಪರಿಸರ ಕಾಳಜಿಯನ್ನು ಗಮನಿಸಿದ ಭಾರತ ಸರಕಾರ ೨೦೧೫ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೩ರಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಸುಧೀರ್ ಕುಮಾರ್ ಸೊಪಾರಿಯವರು ಜಾಧವ್ ಅವರ ಸಾಧನೆಯನ್ನು ಗಮನಿಸಿ ಅವರನ್ನು ಸನ್ಮಾನಿಸಿದ್ದರು. ಆ ಸಂದರ್ಭದಲ್ಲಿ ಸೊಪಾರಿಯವರು ಜಾಧವ್ ಅವರನ್ನು ‘ಫೋರೆಸ್ಟ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆದರು. ಅಸ್ಸಾಂ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕಾಜೀರಂಗ ವಿಶ್ವವಿದ್ಯಾನಿಲಯವು ಜಾಧವ್ ಅವರ ಕಾರ್ಯ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಸಾಧನೆ ಮಾಡಲು ಹೊರಟವನಿಗೆ ಅಸಾಧ್ಯವೆನ್ನುವ ಮಾತೇ ಇಲ್ಲ ಎಂಬಂತೆ ಜಾಧವ್ ಪಯಾಂಗ್ ಅವರು ಸಾಧಿಸಿದ್ದು ಬಹಳ. ತಮ್ಮ ಬಹುಪಾಲು ಜೀವಾವಧಿಯನ್ನು ಈ ‘ಮೊಲಾಯಿ' ಕಾಡು ಬೆಳೆಸಲು ಸವೆದರು, ಇವರ ಈ ಪ್ರಯಾಣ ಇನ್ನೂ ಮುಂದುವರೆಯಲಿ ಎಂಬುದೇ ನಮ್ಮ ಆಶಯ. ಆದರೆ ಇದನ್ನು ಮುಂದೆಯೂ ಉಳಿಸಿ-ಬೆಳೆಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯಬಾರದು ಅಷ್ಟೇ.

ಚಿತ್ರ ಕೃಪೆ: ಅಂತರ್ಜಾಲ ತಾಣ