ಫ್ಯಾಶನ್ ಲೋಕದ ಅಂಗಳದಿಂದ

ಫ್ಯಾಶನ್ ಲೋಕದ ಅಂಗಳದಿಂದ

ಬರಹ

ದೂರಕ್ಕೆ ಎಲ್ಲವೂ ರಂಗುರಂಗಾಗಿ ಕಾಣುತ್ತದೆ ಅನ್ನೋದಕ್ಕೇ ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತು ಹುಟ್ಟಿಕೊಂಡದ್ದು. ಅದೇ ಬೆಟ್ಟದ ಬಳಿ ಹೋದಾಗ ಅದು ಎಷ್ಟು ರಂಗಾಗಿದೆ, ಎಷ್ಟು ಚೆನ್ನಾಗಿದೆ ಅನ್ನೋ ಬಗ್ಗೆ ನಿಜವಾದ ಅರಿವಾಗೋದು. ಹಾಗೇ ಈ ಫ್ಯಾಶನ್ ಲೋಕದ ಹತ್ತಿರ ಹೋದರೆ ಅದರ ರಂಗಿನ ಗುಂಗು ನಮಗೆ ಸರಿಯಾಗಿ ಹತ್ತೋದು.

ಹೀಗೆ ಸುಮಾರು ಒಂದು ವರ್ಷದ ಕಾಲ ಈ ಫ್ಯಾಶನ್ ಲೋಕಕ್ಕೆ ಹತ್ತಿರ ಒರಗಿ ನಿಂತು ನೋಡಿದಾಗ ಕಂಡದ್ದು ಇಷ್ಟು. ಪೇಜ್ ತ್ರೀ ಪುಣ್ಯಾತ್ಮರನ್ನು ದೂರದಿಂದಲೇ ನೋಡೋದಕ್ಕೆ ಚೆಂದಕ್ಕಿರುತ್ತದೆ. ಅದಕ್ಕೇ ಹೇಳಿದ್ದು ದೂರದ ಬೆಟ್ಟ ನುಣ್ಣಗೆ. ಅದರರ್ಥ ದೂರದಿಂದ ಚೆನ್ನಾಗಿ ಕಾಣುತ್ತಾರೆ. ಹತ್ತಿರ ಹೋದಾಗ ಮುಖದ ಮೇಲಿನ ನೆರಿಗೆ ಹೆಚ್ಚು ಒತ್ತಾಗಿ ಕಾಣುತ್ತದೆಂದಲ್ಲ. ಆದರೆ ನೆರಿಗೆಯೊಳಗಿನ, ನೆರಿಗೆ ಹಿಂದಿನ ನಾಟಕೀಯ ನೋಟಗಳು ಕಣ್ಣು ಕುಟುಕುತ್ತವೆ. ಅದಕ್ಕೇ ಸಿಕ್ಕುಹಾಕಿದ ಹಾಗೆ ಅವರ ಅಹಮ್ಮಿನ ಯೋಚನೆಗಳು ಬೇರೆ:

ಅವರೆಲ್ಲಾ ಬೆಲೆ ಕೊಡುವವರು

ಪದಗಳಿಗೆ ಬೆಲೆ ಕಟ್ಟುವವರು

ಪ್ರಚಾರದ ಸರಕಾಗಲು ನೋಟಿನ ಹೊಳೆ ಹರಿಸುವವರು

ಪುಟಗಳಲಿ ಕಾಣಿಸಲು ಕಾಂಚಾಣದ ಮೊರೆ ಹೋದವರು

ಅವರು ಬೆಲೆ ಕೊಡುವವರು

ಪದಗಳಿಗೆ ಬೆಲೆ ಕಟ್ಟ ಹೊರಟವರು

ಮೂರನೇ ಪುಟದವರು

ಮೂರ್ಖರು…

(ಯಾರನ್ನೂ ಮೂರ್ಖರು ಅನ್ನೋದಕ್ಕೆ ಹೊರಟಾಗ ನಾವು ಎಷ್ಟು ಬುದ್ಧಿವಂತರು ಅನ್ನೋದನ್ನ ಯೋಚಿಸಬೇಕು. ಇದನ್ನು ಪ್ರೂವ್ ಮಾಡಲು ಹೊರಟು ನನ್ನ ಮೂರ್ಖತನ ಪ್ರದರ್ಶಿಸುವ ಆಸೆ ಸದ್ಯಕ್ಕಿಲ್ಲ!) ಆದರೆ ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿರುವ ನನಗೆ ಈ ಗ್ಲಾಮರ್ ಲೋಕದ ಹತ್ತಿರ ನಿಂತು ನೋಡಿದ ಅನುಭವದಲ್ಲಿ ಸಿಹಿಯ ಪಾಲು ಇದ್ದರೂ ಕೇಳಿದ ಕಥೆಗಳ ಹಿಂದಿನ ಕಹಿ ನೆನಪಾಗುತ್ತದೆ, ಮಡಿಕೆ ಮಡಿಕೆಯಾಗಿ ರಾಶಿ ಬೀಳುತ್ತದೆ.

ಇಲ್ಲಿ ಒಂದೋ ದುಡ್ಡಿರಬೇಕು, ಇಲ್ಲ ದುಡ್ಡಿದ್ದವರ ಬೆಂಬಲ ಇರಬೇಕು. ಆ ಬೆಂಬಲಕ್ಕೆ ಬೇಕಾಗಿರೋದು ಏನೂ ಆಗಿರಬಹುದು. ಅವರೊಂದಿಗಿನ ಸಂಬಂಧ, ಅವರೊಂದಿಗಿನ ಭಾವನಾತ್ಮಕ ಸಂಬಂಧ, ಅಥವಾ ಇನ್ನೂ ಏನೇನೋ. ಆದರೆ ಈ ಸಂಬಂಧದ ಹಿಂದೆ ಬಹಳ ಅರ್ಥಗಳಿವೆ, ಇವು ಬಹಳ ಅನರ್ಥಗಳಿಗೂ ನಾಂದಿಯಾಗಿದ್ದೂ ಇದೆ. ಇಲ್ಲಿ ದೊಡ್ಡವನಾಗಬೇಕು ಅಂದರೆ ಒಂದೋ ದೊಡ್ಡ ಮನುಷ್ಯನ ಮನೆಯಲ್ಲಿ ಬೆಳ್ಳಿ ಸ್ಪೂನ್ ಬಾಯಿಯಲ್ಲಿ ಚೀಪಿಕೊಂಡು ಬೆಳೆಯಬೇಕು ಇಲ್ಲಾಂದ್ರೆ ದೊಡ್ಡವರ ಬೆನ್ನು ಬಿದ್ದು ಅವರ ‘ದಾಸ’ಳಾ(ನಾ)ಗಿ ಬೆಳೆಯಬೇಕು.
ಕೊನೆಗೂ ಈ ಸಮುದ್ರದಲ್ಲಿ ಈಜಿ ದಡ ದಾಟಿದರೆ ಗೆಲುವು ನಿಮ್ಮದೇ.

ಈ ಜಗತ್ತು ನಾನು ಇಲ್ಲಿ ಚಿತ್ರಿಸಿದಷ್ಟೇನು ಕೆಟ್ಟದಿಲ್ಲ ಅನ್ನೋ ಜನಾನೂ ಇರಬಹುದು, ಅಂಥವರು ಇಲ್ಲಿ ಸರಿಯಾಗಿ ಹೊಂದಿಕೊಳ್ತಾರೆ. ಮನಸ್ಸಿನಲ್ಲಿ ಅಸೂಯೆ, ದ್ವೇಷ ಇದ್ದರೂ ತುಟಿಯಲ್ಲಿ ನಗು, ಹಾಯ್ ಹವ್ ಆರ್ ಯೂ, ಯು ಆರ್ ಲುಕಿಂಗ್ ಲವ್ಲೀ ಅನ್ನೋ ಸಿಹಿ ಮಾತುಗಳು ಇಂಥವರಲ್ಲಿ ನಲಿದಾಡುತ್ತಾ ಇರುತ್ತದೆ. ಇದು ಸರಿಯೇ ಬಿಡಿ. ತೋಟ ಶೃಂಗಾರ ಒಳಗೆ ಗೋಳಿಸೊಪ್ಪು ಅನ್ನೋದೇನಕ್ಕೆ ಅನ್ನೋದಾದ್ರೂ ಇದರಿಂದ ತಿಳಿಯುತ್ತದೆ.

ಹೀಗೆ ಬೆಂಗಳೂರಿನ ನಾಡಿಮಿಡಿತಕ್ಕೆ ಇನ್ನಷ್ಟು ಮಗ್ಗುಲುಗಳಿವೆ, ಮತ್ತಷ್ಟು ಹೊಳಪಿನಿಂದ ತುಂಬಿದ ಮಹಾನಗರದ ಝಲಕ್ ಆಗಾಗ ನಮ್ಮನ್ನು ಬೆರಗುಗೊಳಿಸುತ್ತಾ ಇರುತ್ತದೆ. ಇಂತಹಾ ಬೆರಗುಗಳಿಗೆ ಮತ್ತೆ ಅಕ್ಷರ ರೂಪ ಕೊಡುವ ಪ್ರಯತ್ನ ಖಂಡಿತಾ ಮಾಡುತ್ತಾ ಇರುತ್ತೇನೆ. ಈ ಬೆರಗುಗಳ ಒಳಗು ಹೊರಗುಗಳಿಗೆ ನಿಮ್ಮನ್ನು expose ಮಾಡುವ ಕಾತರ ಇದ್ದೇ ಇದೆ. ಆದರೆ ಇನ್ನೊಮ್ಮೆ.