ಫ್ರಾಂಕನ್ ಸ್ಟೈನ್

ಫ್ರಾಂಕನ್ ಸ್ಟೈನ್

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦-೦೦ ಮೊದಲ ಮುದ್ರಣ: ಸೆಪ್ಟೆಂಬರ್ ೨೦೨೦

ಮೇರಿ ಶೆಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಬಹುಮಟ್ಟಿಗೆ ಚಾಲ್ತಿಯಲ್ಲಿದ್ದ ಕಾದಂಬರಿಕಾರ್ತಿ. ಅವಳು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಬರೆದ ‘ಫ್ರಾಂಕನ್ ಸ್ಟೈನ್’ ಎಂಬ ಕಾದಂಬರಿ ಅವಳನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿಬಿಟ್ಟಿತು. ಮೇರಿ ಶೆಲ್ಲಿ ೧೭೯೭ರ ಆಗಸ್ಟ್ ೩೦ರಂದು ಇಂಗ್ಲೆಂಡಿನಲ್ಲಿ ಹುಟ್ಟಿದಳು. ಉತ್ತಮ ಶಿಕ್ಷಣವನ್ನು ಪಡೆದ ಮೇರಿ, ತನ್ನ ಹದಿನೆಂಟನೇ ವಯಸ್ಸಿನಲ್ಲಿ ತನ್ನದೇ ತಂದೆಯ ಗೆಳೆಯನಾದ ಪರ್ಸಿ ಬಿ.ಶೆಲ್ಲಿ ಜೊತೆ ಪ್ರೇಮಾಂಕುರವಾಗಿ ಅವನ ಜೊತೆ ಪ್ಯಾರಿಸ್ಸಿಗೆ ಓಡಿ ಹೋದಳು. ನಂತರ ಹಲವಾರು ಸಂಕಷ್ಟಗಳನ್ನು ಎದುರಿಸಿ ೧೮೧೬ರಲ್ಲಿ ಮದುವೆಯಾದಳು. ಅವಳ ಪ್ರೇಮಿ ಪರ್ಸಿ ಶೆಲ್ಲಿ ಆ ಕಾಲದ ಪ್ರಮುಖ ಇಂಗ್ಲಿಷ್ ಕವಿಯೂ ಆಗಿದ್ದನು. 

೧೮೧೭ರಲ್ಲಿ ಪರ್ಸಿಯ ಗೆಳೆಯನಾದ ಲೇಖಕ ಲಾರ್ಡ್ ಬೈರಾನ್ ನ ಭೂತದ ಕತೆ ಬರೆಯುವ ಪಂಥಾಹ್ವಾನವನ್ನು ಸ್ವೀಕರಿಸಿ ಮೇರಿ ಶೆಲ್ಲಿ ಬರೆದ ಕಾದಂಬರಿಯೇ ಫ್ರಾಂಕನ್ ಸ್ಟೈನ್. ಈ ಕಾದಂಬರಿ ಅವಳ ಜೀವನದ ಬಗ್ಗೆ ಇರುವ ವ್ಯಾಖ್ಯಾನವೂ ಹೌದು ಎನ್ನುತ್ತಾರೆ ವಿಮರ್ಶಕರು. ಯಾಕೆಂದರೆ ಈ ಕಾದಂಬರಿಯಲ್ಲಿ ಬರುವ ಸ್ಥಳಗಳಾದ ಜಿನೀವಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಇಟಲಿ, ಪ್ಯಾರಿಸ್ ಇವುಗಳನ್ನೆಲ್ಲಾ ಮೇರಿ ಸ್ವತಃ ನೋಡಿದ್ದಳು. ತನ್ನ ಕಿರಿಯ ವಯಸ್ಸಿಗೇ ಹಲವಾರು ಕಹಿಘಟನೆಗಳನ್ನು ಉಂಡ ಶೆಲ್ಲಿ ಕೊನೆಗೊಮ್ಮೆ ತನ್ನೆಲ್ಲಾ ಆಸ್ತಿ ಪಾಸ್ತಿ, ಜನಿಸಿದ ಮೂವರು ಮಕ್ಕಳು ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು. ಕೊನೆಯ ಮಾಗ ಮಾತ್ರ ಬದುಕಿ ಉಳಿದ. ಮೇರಿ ಶೆಲ್ಲಿಯು ಹಲವಾರು ಕಾದಂಬರಿಗಳನ್ನು ಬರೆದರೂ ಓದುಗರು ನೆನಪಿನಲ್ಲಿ ಇಟ್ಟುಕೊಳ್ಳುವುದು ಫ್ರಾಂಕನ್ ಸ್ಟೈನ್ ಮೂಲಕವೇ. 

‘ನನ್ನೆದುರು ನಿಂತದ್ದು ಒಬ್ಬ ಸುಕುಮಾರ ರಾಜಕುಮಾರನಲ್ಲ; ಅಂದಚಂದಗಳಿಲ್ಲದ ಶ್ರೀಸಾಮಾನ್ಯನೂ ಅಲ್ಲ. ಬದಲು ಅದೊಂದು ಅಕರಾಳ ವಿಕರಾಳ ರೂಪ! ಸಂಕ್ಷಿಪ್ತವಾಗಿ ಹೇಳಬೇಕೆಂದರೆ ರಾಕ್ಷಸ! ದೆವ್ವ! ನನ್ನ ಎದೆ ಭಯದಿಂದ ಲಡಬಡ ಹೊಡೆದುಕೊಳ್ಳುತ್ತಿತ್ತು. ಈ ವಿಚಿತ್ರ ಜೀವಿಯ ಕೈಯಿಂದ ಹೇಗಾದರೂ ಪಾರಾಗಿ ಬದುಕಿಕೊಂಡರೆ ಸಾಕಪ್ಪಾ ಅನ್ನಿಸಿತು. ಅವನನ್ನು ಅಲ್ಲೇ ಬಿಟ್ಟು ಕೆಳಮಾಳಿಗೆಗೆ ಓಡಿದೆ. ಬಾಗಿಲು ಕಿಟಕಿಗಳನ್ನು ಭದ್ರಪಡಿಸಿಕೊಂಡು ಕೋಣೆಯೊಳಗೆ ಶತಪಥ ತಿರುಗಿದೆ. ಏನು ಮಾಡಲಿ? ಈ ಜೀವಿಯಿಂದ ಹೇಗೆ ಪಾರಾಗಲಿ ಎಂದು ಮನಸ್ಸು ಗಾಢವಾಗಿ ಚಿಂತಿಸಹತ್ತಿತು.’ ಈ ಸಾಲುಗಳು ಕಾದಂಬರಿಯ ಬೆನ್ನುಡಿಯಲ್ಲಿ ಮುದ್ರಿತವಾಗಿವೆ. ಇದನ್ನು ಓದುತ್ತಲೇ ನಿಮ್ಮಲ್ಲಿ ಇಡೀ ಕಾದಂಬರಿಯನ್ನು ಓದುವ ತವಕ ಖಂಡಿತವಾಗಿಯೂ ಹುಟ್ಟುತ್ತದೆ. 

ಮೇರಿ ಶೆಲ್ಲಿಯ ಫ್ರಾಂಕನ್ ಸ್ಟೈನ್ ಕಾದಂಬರಿಯನ್ನು ಸಂಕ್ಷಿಪ್ತಗೊಳಿಸಿ ಕನ್ನಡಕ್ಕೆ ತಂದಿದ್ದಾರೆ ಲೇಖಕರಾದ ರೋಹಿತ್ ಚಕ್ರತೀರ್ಥ ಇವರು. ಇವರು ಗಣಿತ, ವಿಜ್ಞಾನ ಲೇಖಕರೆಂದೇ ಖ್ಯಾತಿ ಹೊಂದಿದ್ದಾರೆ. ಸುಮಾರು ೨೨ ಕೃತಿಗಳನ್ನು ಹೊರತಂದಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗುತ್ತಿವೆ. ಅಯೋಧ್ಯಾ ಪ್ರಕಾಶನದವರು ಹೊರ ತಂದ ಹತ್ತನೇ ಪುಸ್ತಕ ಇದಾಗಿದ್ದು, ಇದರ ಓದು, ಓದುಗರಿಗೆ ಹೊಸದಾದ ಅನುಭವ ನೀಡುವುದರಲ್ಲಿ ಸಂಶಯವಿಲ್ಲ. ಸೋನು ಅವರ ಮುಖಪುಟ ವಿನ್ಯಾಸ ಪುಸ್ತಕಕ್ಕೆ ಹೊಸ ಕಳೆ ನೀಡಿದೆ. ಪುಸ್ತಕದಲ್ಲಿ ೧೨ ಅಧ್ಯಾಯಗಳಿವೆ ಮತ್ತು ಸೊಗಸಾದ ಚಿತ್ರಗಳೂ ಇವೆ. ೧೦೦ ಪುಟಗಳ ಈ ಕಾದಂಬರಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಬಹುದು.