ಬಂಗಾರದ ತೋಳಿನ ತಾತನ ಕತೆ

ಆಸ್ಟ್ರೇಲಿಯಾದ ಕಡಲತೀರದ ಜೂನಿ ಎಂಬ ಸಣ್ಣ ಪಟ್ಟಣದಲ್ಲಿ ಜೇಮ್ಸ್ ಹ್ಯಾರಿಸನ್ ಎಂಬ ವ್ಯಕ್ತಿ ಜೀವನ ಸಾಗಿಸಿದ್ದರು. ಮೇಲ್ನೋಟಕ್ಕೆ ಸಾಮಾನ್ಯರಂತೆ ಕಾಣುವ ಇವರು, ಮೊಮ್ಮಕ್ಕಳೊಡನೆ ಆಟವಾಡುವುದು, ಸಂಜೆಯ ಹೊತ್ತು ಸಮುದ್ರ ತೀರದ ಉದ್ದಕ್ಕೂ ವಾಕಿಂಗ್ ಮಾಡುವುದು, ಅಂಚೆ ಚೀಟಿಗಳ ಸಂಗ್ರಹ, ತೋಟದಲ್ಲಿ ಕಾಲ ಕಳೆಯುವುದು—ಇಂತಹ ಸರಳ ಸಂತೋಷಗಳಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿದ್ದರು. ಆದರೆ, ಈ ಸರಳತೆಯ ಹಿಂದೆ ಅಸಾಮಾನ್ಯ ಸಾಧನೆಯ ಕತೆ ಅಡಗಿತ್ತು. ಈ ತಾತ, ೨೪ ಲಕ್ಷ ಶಿಶುಗಳ ಜೀವ ಉಳಿಸಿದ ದೇವಮಾನವರಾಗಿದ್ದರು. ಜಗತ್ತಿನ ಕೋಟ್ಯಂತರ ಮನೆಗಳಲ್ಲಿ ಅವರಿಗಾಗಿ ಮೊಂಬತ್ತಿಗಳು ಬೆಳಗಿದವು, ಏಕೆಂದರೆ ಇವರ ರಕ್ತವೇ ಆ ಶಿಶುಗಳಿಗೆ ಜೀವದಾನ ನೀಡಿತ್ತು.
ಜೇಮ್ಸ್ ಹ್ಯಾರಿಸನ್, 'ಬಂಗಾರದ ತೋಳಿನ ಮನುಷ್ಯ' (Man with Golden Arms) ಎಂದೇ ಜಗತ್ಪ್ರಸಿದ್ಧರಾಗಿದ್ದರು. ೧೮ರಿಂದ ೮೧ರ ವಯಸ್ಸಿನವರೆಗೆ, ಅಂದರೆ ಆಸ್ಟ್ರೇಲಿಯಾದ ಕಾನೂನು ಅನುಮತಿಸುವ ವಯೋಮಿತಿಯ ತನಕ, ಒಟ್ಟು ೧,೧೭೩ ಬಾರಿ ರಕ್ತದಾನ ಮಾಡಿದ್ದರು. ಪ್ರತಿ ಎರಡು ವಾರಗಳಿಗೊಮ್ಮೆ, ಆರು ದಶಕಗಳ ಕಾಲ, ತಪ್ಪದೇ ರಕ್ತದಾನ ಮಾಡಿದ ಈ ಸಾಧನೆ ಅಪೂರ್ವವಾದದ್ದು. ಆದರೆ, ಇವರ ರಕ್ತದಾನದ ಮಹತ್ವವನ್ನು ಅರಿಯಲು, ಆಸ್ಟ್ರೇಲಿಯಾದ ಆರೋಗ್ಯ ಇತಿಹಾಸದ ಒಂದು ಕರಾಳ ಅಧ್ಯಾಯವನ್ನು ತಿಳಿಯಬೇಕು.
೧೯೬೭ಕ್ಕಿಂತ ಮುಂಚೆ, ಆಸ್ಟ್ರೇಲಿಯಾದಲ್ಲಿ ರೀಸಸ್ (RhD negative) ಕಾಯಿಲೆಯಿಂದ ಶಿಶುಗಳ ಜೀವಕ್ಕೆ ಭಾರಿ ಕಂಟಕವಿತ್ತು. ಈ ವಿರಳ ಕಾಯಿಲೆಯಲ್ಲಿ, ಗರ್ಭಿಣಿಯ ರಕ್ತದ ಕಣಗಳು ಭ್ರೂಣದ ರಕ್ತದ ಕಣಗಳ ಮೇಲೆ ದಾಳಿ ಮಾಡುತ್ತವೆ. ಅಮ್ಮನ ರಕ್ತ ರೀಸಸ್ ನೆಗೆಟಿವ್ ಆಗಿದ್ದು, ಶಿಶುವಿನ ರಕ್ತ ರೀಸಸ್ ಪಾಸಿಟಿವ್ ಆಗಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ, ಪ್ರತಿವರ್ಷ ಸಾವಿರಾರು ಶಿಶುಗಳು ಗರ್ಭದಲ್ಲೇ ಮೃತಪಟ್ಟಿದ್ದವು. ಗರ್ಭಪಾತದ ಪ್ರಮಾಣವೂ ಆ ದೇಶದಲ್ಲಿ ಗಗನಕ್ಕೇರಿತ್ತು.
ಜೇಮ್ಸ್ ೧೮ ವರ್ಷದವರಾಗಿ ರಕ್ತದಾನಕ್ಕೆ ಮುಂದಾದಾಗ, ವೈದ್ಯರಿಗೆ ಒಂದು ಅಪೂರ್ವ ಆವಿಷ್ಕಾರವೇ ಸಿಕ್ಕಿತು. ಇವರ ರಕ್ತದಲ್ಲಿ ರೀಸಸ್ ಕಾಯಿಲೆಗೆ ಪ್ರತಿಕಾಯಗಳನ್ನು ಸೃಷ್ಟಿಸಬಲ್ಲ ವಿಶೇಷ ಪ್ಲಾಸ್ಮಾ ಇದೆ ಎಂದು ತಿಳಿಯಿತು. ಈ ಅಪರೂಪದ ಗುಣವನ್ನು ಬಳಸಿಕೊಂಡು, ವೈದ್ಯರು ಜೇಮ್ಸ್‌ನ ರಕ್ತದಿಂದ ಆ್ಯಂಟಿ-ಡಿ ಚುಚ್ಚುಮದ್ದನ್ನು ತಯಾರಿಸಿದರು. ಈ ಔಷಧವನ್ನು ಗರ್ಭಿಣಿಯರಿಗೆ ನೀಡಿದಾಗ, ಭ್ರೂಣದ ಜೀವ ಉಳಿಸುವಲ್ಲಿ ಯಶಸ್ಸು ದೊರೆಯಿತು. ಶಿಶುಗಳು ಗರ್ಭದಿಂದ ಆರೋಗ್ಯವಾಗಿ ಹೊರಬಂದು ಬೆಳೆಯತೊಡಗಿದವು. ಆಸ್ಟ್ರೇಲಿಯಾದ ರೆಡ್ ಕ್ರಾಸ್ ದಾಖಲೆಗಳ ಪ್ರಕಾರ, ಜೇಮ್ಸ್‌ನ ರಕ್ತದಿಂದ ೨೪ ಲಕ್ಷ ಶಿಶುಗಳಿಗೆ ಜೀವದಾನ ಸಿಕ್ಕಿದೆ. ರೀಸಸ್ ಕಾಯಿಲೆಯಿಂದ ಬಳಲುವ ಶೇ.೧೭ರಷ್ಟು ಮಹಿಳೆಯರಿಗೆ ಈ ತಾತನ ರಕ್ತವೇ ಆಸರೆಯಾಯಿತು.
ಜೇಮ್ಸ್‌ಗೆ ಈ ದಾನದ ಮನೋಭಾವ ಎಲ್ಲಿಂದ ಬಂತು? ೧೪ನೇ ವಯಸ್ಸಿನಲ್ಲಿ ಶ್ವಾಸಕೋಶದ ಕಾಯಿಲೆಗೆ ತುತ್ತಾಗಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದಾಗ, ೧೩ ಲೀಟರ್ ರಕ್ತವನ್ನು ದಾನಿಗಳಿಂದ ಪಡೆದಿದ್ದರು. ಆಗ ತಂದೆಯೊಬ್ಬರು ಹೇಳಿದ ಮಾತು, "ದಾನಿಗಳ ರಕ್ತವೇ ನಿನ್ನ ಜೀವ ಉಳಿಸಿತು," ಎಂದು. ಆ ಕ್ಷಣವೇ, ಜೇಮ್ಸ್ ರಕ್ತದಾನದ ಶಪಥ ಮಾಡಿದರು. ಅದನ್ನು ಜೀವನದ ಧ್ಯೇಯವಾಗಿಟ್ಟುಕೊಂಡು, ಸೂಜಿಯ ಭಯವಿದ್ದರೂ, ಒಮ್ಮೆಯೂ ಚುಚ್ಚುವ ಕ್ಷಣವನ್ನು ದಿಟ್ಟಿಸದೆ, ೧,೧೭೩ ಬಾರಿ ರಕ್ತದಾನ ಮಾಡಿದರು. ಪ್ರತೀ ಬಾರಿ ರಕ್ತ ನೀಡುವ ಸಂದರ್ಭದಲ್ಲಿ ಸೂಚಿ ಚುಚ್ಚುವಾಗ ಅವರು ನರ್ಸನ್ನು ಅಥವಾ ಮೇಲಿನ ಛಾವಣಿಯನ್ನು ನೋಡುತ್ತಿದ್ದರಂತೆ.
ಆಸ್ಟ್ರೇಲಿಯಾದ ಸರ್ಕಾರ ಜೇಮ್ಸ್‌ಗೆ ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ಸಮಾಜ ಅವರನ್ನು ಅಪಾರ ಅಭಿಮಾನದಿಂದ ಕಂಡಿತು. ಸೂಜಿಯ ಭಯವಿದ್ದರೂ, ಜಗತ್ತಿನ ಲಕ್ಷಾಂತರ ಜೀವಗಳಿಗೆ ಜೀವದಾನ ಮಾಡಿದ ಈ ತಾತನ ಕತೆ, ಎಲ್ಲರಿಗೂ ಒಂದು ಮಾದರಿಯಾಗಿದೆ. ಒಂದು ಸರಳ ಜೀವನ, ಆದರೆ ಅಸಾಮಾನ್ಯ ಸಾಧನೆ—ಜೇಮ್ಸ್ ಹ್ಯಾರಿಸನ್‌ರ ಕತೆಯೇ ಒಂದು ಜೀವಂತ ಪ್ರೇರಣೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ