ಬಂಗಾರದ ನಾಣ್ಯ ಕೊಡುವ ಕತ್ತೆ




ಹ್ಯಾರಿ ಎಂಬಾತ ತನ್ನ ವಿಧವೆ ತಾಯಿಯ ಜೊತೆ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದ. ಅವನು ಶ್ರಮಜೀವಿ. ಆದರೆ ಅವನು ಎಷ್ಟು ದುಡಿದರೂ ಅವರಿಗೆ ಎರಡು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ.
ಅದೊಂದು ದಿನ ಹ್ಯಾರಿಗೆ ಯಾವ ಕೆಲಸವೂ ಸಿಗಲಿಲ್ಲ. ಅವತ್ತು ಸಂಜೆ ಬೇಸರದಿಂದ ಮನೆಗೆ ಮರಳಿದ ಅವನು ತಾಯಿಗೆ ಹೇಳಿದ, “ಇವತ್ತು ನನಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. ನಾನು ಕೆಲಸ ಹುಡುಕಿಕೊಂಡು ನಗರಕ್ಕೆ ಹೋಗಬೇಕಾಗುತ್ತದೆ.”
ಅವನ ತಾಯಿಗೆ ದುಃಖವಾಯಿತು. ಆದರೆ ಬೇರೇನೂ ದಾರಿ ತೋಚಲಿಲ್ಲ. ಮರುದಿನ ಹ್ಯಾರಿ ಒಂದು ತುಂಡು ಬ್ರೆಡ್ ತಗೊಂಡು ನಗರಕ್ಕೆ ಹೊರಟ. ಮಧ್ಯಾಹ್ನದ ವರೆಗೆ ನಡೆದ ಆತ, ದಣಿದು ಒಂದು ಮರದಡಿಯಲ್ಲಿ ಕುಳಿತು ಬ್ರೆಡ್ ತಿಂದ. ಆಗ ಅಲ್ಲಿಗೊಬ್ಬ ದಢೂತಿ ವ್ಯಕ್ತಿ ಬಂದ. "ಗೆಳೆಯಾ, ಅದ್ಯಾಕೆ ಬಹಳ ಬೇಸರದಲ್ಲಿರುವಂತೆ ಕಾಣಿಸುತ್ತಿದ್ದಿ?” ಎಂದು ಕೇಳಿದ.
ತಾನು ಕೆಲಸ ಹುಡುಕುತ್ತಿರುವುದಾಗಿ ಹ್ಯಾರಿ ತಿಳಿಸಿದ. "ಹಾಗಿದ್ದರೆ ನನಗಾಗಿ ಕೆಲಸ ಮಾಡು" ಎಂದ ದಢೂತಿ ವ್ಯಕ್ತಿ. ಅವನು ಹ್ಯಾರಿಯನ್ನು ಮರಗಳ ನಡುವೆ ಇದ್ದ ಒಂದು ಚಂದದ ಮನೆಗೆ ಕರೆದೊಯ್ದ. ತನ್ನ ವಿಶಾಲವಾದ ಹೊಲ ತೋರಿಸುತ್ತಾ ಆತ ಹ್ಯಾರಿಗೆ ಹೇಳಿದ, “ನೋಡು, ಈ ಹೊಲದ ಫಸಲನ್ನೆಲ್ಲ ಕೊಯ್ಲು ಮಾಡಿ ಮುಗಿಸು.” ಮರುದಿನ ಬೆಳಗ್ಗೆಯೇ ಹ್ಯಾರಿ ಆ ಹೊಲದ ಫಸಲಿನ ಕೊಯ್ಲು ಶುರು ಮಾಡಿದ. ಒಂದು ತಿಂಗಳಾಗುವಾಗ ಅಲ್ಲಿನ ಕೊಯ್ಲು ಮುಗಿಯಿತು; ಕಣಜಗಳು ತುಂಬಿದವು.
ಆಗ ಹ್ಯಾರಿ ಯಜಮಾನನ ಬಳಿ ಹೋಗಿ ತನ್ನ ಕೆಲಸದ ಮಜೂರಿ ಕೇಳಿದ. “ನೀನು ಶ್ರದ್ಧೆಯಿಂದ ದುಡಿದಿದ್ದಿ. ನಿನಗೆ ನಾನು ಬೆಳ್ಳಿಬಂಗಾರ ಕೊಡಲಾಗದು. ಆದರೆ ಹಣಕ್ಕಿಂತಲೂ ಬೆಲೆಬಾಳುವ ವಸ್ತುವೊಂದನ್ನು ಕೊಡ್ತೇನೆ. ಈ ಮೇಜನ್ನು ತಗೋ. “ಆಹಾರ ಕೊಡು” ಎಂದು ಹೇಳಿದ ಕೂಡಲೇ ಈ ಮೇಜಿನಲ್ಲಿ ಒಳ್ಳೆಯ ಆಹಾರವಸ್ತುಗಳು ತುಂಬಿಕೊಳ್ಳುತ್ತವೆ” ಎಂದ.
ಹ್ಯಾರಿ ಆ ಮೇಜನ್ನು ತಗೊಂಡು ಸಂತೋಷದಿಂದ ಮನೆಗೆ ಹೊರಟ. ಮಧ್ಯಾಹ್ನದ ಹೊತ್ತಿಗೆ ಹ್ಯಾರಿಗೆ ಹಸಿವಾಯಿತು. ಅವನು ಒಂದು ಮರದಡಿಯಲ್ಲಿ ಕುಳಿತು, ಆ ಮೇಜನ್ನು ನೆಲದಲ್ಲಿಟ್ಟು “ಆಹಾರ ಕೊಡು” ಎಂದು ಕೇಳಿದ. ತಕ್ಷಣ ಆ ಮೇಜಿನಲ್ಲಿ ರುಚಿರುಚಿಯಾದ ಆಹಾರ ತಟ್ಟೆಗಳಲ್ಲಿ ಪ್ರತ್ಯಕ್ಷವಾಯಿತು. ಅದನ್ನೆಲ್ಲ ಹೊಟ್ಟೆತುಂಬ ತಿಂದು, ಹ್ಯಾರಿ ಮುಂದಕ್ಕೆ ಸಾಗಿದ.
ಕತ್ತಲಾದಾಗ ಹ್ಯಾರಿ ದಣಿದಿದ್ದ. ಆಗ ಅವನಿಗೊಂದು ಹೋಟೆಲು ಕಾಣಿಸಿತು. “ಇವತ್ತು ನಾನಿಲ್ಲಿ ಉಳಿಯಬಹುದೇ?” ಎಂದು ಕೇಳಿದ. ಮಾಲೀಕ ಅವನಿಗೆ ಮಲಗಲು ಒಂದು ಮಂಚ ಕೊಟ್ಟ. ಹ್ಯಾರಿ ಆ ಮೇಜನ್ನು ಜೋಪಾನವಾಗಿ ತೆಗೆದಿರಿಸ ಬೇಕೆಂದು ಹೇಳಿದಾಗ ಮಾಲೀಕ ಅಚ್ಚರಿಯಿಂದ ನೋಡಿದ. ಆಗ ಹ್ಯಾರಿ ಮೇಜನ್ನು ನೆಲದಲ್ಲಿಟ್ಟು “ಆಹಾರ ಕೊಡು” ಎಂದು ಹೇಳಿದ. ತಕ್ಷಣವೇ ಆ ಮೇಜಿನಲ್ಲಿ ಬಾಯಲ್ಲಿ ನೀರೂರಿಸುವ ಆಹಾರ ತಟ್ಟೆಗಳಲ್ಲಿ ಪ್ರತ್ಯಕ್ಷವಾಯಿತು.
ಆ ದಿನ ರಾತ್ರಿ ಹ್ಯಾರಿ ಮಲಗಿದಾಗ, ಹೋಟೆಲಿನ ಮಾಲೀಕ ಮೆಲ್ಲನೆ ಅಲ್ಲಿಗೆ ಬಂದ. ಹ್ಯಾರಿಯ ಮೇಜನ್ನು ತಗೊಂಡು, ಅದರ ಬದಲಿಗೆ ಅದರಂತೆಯೇ ಇರುವ ಬೇರೆ ಮೇಜನ್ನು ಅಲ್ಲಿಟ್ಟ. ಮರುದಿನ ಬೆಳಗ್ಗೆ ಮಾಲೀಕ ಇಟ್ಟಿದ್ದ ಮೇಜನ್ನು ತಗೊಂಡು ಹ್ಯಾರಿ ಮನೆಗೆ ಪ್ರಯಾಣ ಮುಂದುವರಿಸಿದ.
ಮನೆಗೆ ಹಿಂತಿರುಗಿದ ಹ್ಯಾರಿ ತಾಯಿಯನ್ನು ಕರೆದು ಹೇಳಿದ, “ಅಮ್ಮಾ ನೋಡಿಲ್ಲಿ, ಒಂದು ಅದ್ಭುತ ಮೇಜು ತಂದಿದ್ದೇನೆ. ನಮಗೆ ಜೀವಮಾನವಿಡೀ ಇದು ಬೇಕುಬೇಕಾದ ಆಹಾರ ಕೊಡುತ್ತದೆ.” ಅನಂತರ ಹ್ಯಾರಿ ಮೇಜನ್ನು ನೆಲದಲ್ಲಿಟ್ಟು “ಆಹಾರ ಕೊಡು” ಎಂದಾಗ ಏನೂ ಆಗಲಿಲ್ಲ. ಹ್ಯಾರಿ ಹಲವಾರು ಸಲ ಹೇಳಿದರೂ ಅದರಲ್ಲಿ ಆಹಾರ ಪ್ರತ್ಯಕ್ಷವಾಗಲಿಲ್ಲ. ಹ್ಯಾರಿಗೆ ಮೋಸವಾಗಿದೆ ಎಂದು ಅವನ ತಾಯಿಗೆ ಅರ್ಥವಾಯಿತು.
ಅದಾಗಿ ಕೆಲವು ತಿಂಗಳು ಹ್ಯಾರಿ ತಾಯಿಯೊಂದಿಗೇ ಇದ್ದ. ಅವನಿಗೆ ಪುನಃ ಎಲ್ಲೂ ಕೆಲಸ ಸಿಗಲಿಲ್ಲ. ಆಗ ಹ್ಯಾರಿ ಇನ್ನೊಮ್ಮೆ ಮನೆಯಿಂದ ಹೊರಟ. ಅವನಿಗೆ ಪುನಃ ಅದೇ ದಢೂತಿ ವ್ಯಕ್ತಿಯ ಭೇಟಿಯಾಯಿತು. ಪುನಃ ಹ್ಯಾರಿ ಆತನ ಹೊಲದಲ್ಲಿ ಕೆಲಸ ಮಾಡಲು ಶುರು ಮಾಡಿದ. ಒಂದು ತಿಂಗಳಿನಲ್ಲಿ ಅಲ್ಲಿನ ಕೆಲಸವನ್ನೆಲ್ಲ ಹ್ಯಾರಿ ಮುಗಿಸಿದ.
ಅನಂತರ ಯಜಮಾನನ ಬಳಿ ಹೋಗಿ ತನ್ನ ಕೆಲಸದ ಮಜೂರಿ ಕೇಳಿದ. “ನಿನಗೆ ಹಣ ಕೊಡಲು ನನ್ನಿಂದಾಗದು. ಆದರೆ ನಿನಗೊಂದು ಕತ್ತೆಯನ್ನು ಕೊಡ್ತೇನೆ. ಅದು ಚಂದವಿಲ್ಲ. ಆದರೆ ನೀನು ಕತ್ತೆಗೆ "ಬಾಯಿ ಬಿಡು” ಎಂದಾಗೆಲ್ಲ ಅದು ಬಾಯಿ ಬಿಟ್ಟು ನಿನಗೊಂದು ಬಂಗಾರದ ನಾಣ್ಯ ಕೊಡ್ತದೆ” ಎಂದ. ಹ್ಯಾರಿ ಆ ಕತ್ತೆಯೊಂದಿಗೆ ಮನೆಗೆ ಹೊರಟ.
ಮಧ್ಯಾಹ್ನದ ಹೊತ್ತಿಗೆ ಹ್ಯಾರಿಗೆ ಹಸಿವಾಯಿತು. ಅವನು ಕತ್ತೆಗೆ "ಬಾಯಿ ಬಿಡು” ಎಂದಾಗ ಅದು ಬಾಯಿ ಬಿಟ್ಟು ಒಂದು ಬಂಗಾರದ ನಾಣ್ಯ ಹೊರ ಹಾಕಿತು. ಅದರಿಂದ ಹ್ಯಾರಿ ಊಟ ಖರೀದಿಸಿ, ಊಟ ಮಾಡಿ ಮುಂದಕ್ಕೆ ಸಾಗಿದ. ಅವತ್ತು ಸಂಜೆ ಹ್ಯಾರಿ ಪುನಃ ಅದೇ ಹೋಟೆಲಿಗೆ ಹೋಗಿ, ಮಲಗಲು ಒಂದು ಮಂಚ ಕೇಳಿದ. ತನ್ನ ಕತ್ತೆಗೂ ಮಲಗಲು ಜಾಗ ಬೇಕೆಂದು ಕೇಳಿದ. ಮಾಲೀಕ ಅಚ್ಚರಿಯಿಂದ ನೋಡಿದಾಗ, ಹ್ಯಾರಿ ಕತ್ತೆಯ ವಿಶೇಷತೆಯನ್ನು ತಿಳಿಸಿದ. ಮಾಲೀಕ ಹ್ಯಾರಿಗೆ ಮಂಚ ಕೊಟ್ಟ. ಕತ್ತೆಯನ್ನು ಒಯ್ದು ಕೊಟ್ಟಿಗೆಯಲ್ಲಿ ಕಟ್ಟಿದ. ಆ ದಿನ ರಾತ್ರಿ ಹ್ಯಾರಿ ಮಲಗಿದಾಗ ಮಾಲೀಕ ಆ ಕತ್ತೆಯನ್ನು ತನ್ನ ಮನೆಗೊಯ್ದು, ಅದರ ಬದಲಾಗಿ ಬೇರೊಂದು ಕತ್ತೆಯನ್ನು ತಂದು ಅಲ್ಲಿ ಕಟ್ಟಿದ.
ಮರುದಿನ ಮಾಲೀಕ ತಂದಿಟ್ಟ ಕತ್ತೆಯೊಂದಿಗೆ ಹ್ಯಾರಿ ಮನೆ ತಲಪಿದ. ತಾಯಿಯನ್ನು ಕರೆದು, "ನೋಡಮ್ಮಾ, ಅದ್ಭುತ ಕತ್ತೆ ತಂದಿದ್ದೇನೆ. ಇದು ನಮಗೆ ಬೇಕಾದಷ್ಟು ಬಂಗಾರದ ನಾಣ್ಯ ಕೊಡುತ್ತದೆ” ಎಂದ. ಆದರೆ ಹ್ಯಾರಿ ಹಲವು ಬಾರಿ "ಬಾಯಿ ಬಿಡು” ಎಂದರೂ ಕತ್ತೆ ಬಾಯಿ ಬಿಡಲಿಲ್ಲ. ಪುನಃ ಹ್ಯಾರಿಗೆ ಮೋಸವಾಗಿದೆ ಎಂದು ಅವನ ತಾಯಿಗೆ ಅರ್ಥವಾಯಿತು.
ಆರು ತಿಂಗಳ ನಂತರ ಹ್ಯಾರಿ ಪುನಃ ಕೆಲಸ ಹುಡುಕುತ್ತಾ ಮನೆಯಿಂದ ಹೊರಟ. ಈ ಸಲವೂ ಅವನಿಗೆ ಅದೇ ವ್ಯಕ್ತಿಯ ಭೇಟಿಯಾಯಿತು. ಮೂರನೆಯ ಸಲ ಹ್ಯಾರಿ ಯಜಮಾನನ ಹೊಲದಲ್ಲಿ ದುಡಿಯಲು ಶುರು ಮಾಡಿದ. ಅಲ್ಲಿನ ಕೆಲಸವೆಲ್ಲ ಮುಗಿದಾಗ ಯಜಮಾನನ ಬಳಿ ಹೋಗಿ ಹೇಳಿದ, “ಇದು ವಿಚಿತ್ರ. ನೀವು ಕೊಟ್ಟ ಮೇಜು ಮತ್ತು ಕತ್ತೆ ನೀವು ಹೇಳಿದಂತೆ ನನಗೆ ಆಹಾರವನ್ನೂ ಕೊಡಲಿಲ್ಲ, ಬಂಗಾರದ ನಾಣ್ಯಗಳನ್ನೂ ಕೊಡಲಿಲ್ಲ.”
ಯಜಮಾನ ಹ್ಯಾರಿಯ ಬಳಿ ಅವನ ಮರುಪ್ರಯಾಣದ ವಿವರ ಕೇಳಿದ. ಅವನಿಗೆ ಹೋಟೆಲಿನ ಮಾಲೀಕ ಹ್ಯಾರಿಗೆ ಮೋಸ ಮಾಡಿದ್ದಾನೆಂದು ಸ್ಪಷ್ಟವಾಯಿತು. ಅವನು ಹ್ಯಾರಿಗೊಂದು ಚೀಲ ಕೊಡುತ್ತಾ ಹೇಳಿದ, “ಈ ಚೀಲದಲ್ಲಿ ಒಂದು ಕೋಲಿದೆ. "ಚೀಲದಿಂದ ಹೊರಗೆ ಬಾ" ಎಂದು ನೀನು ಹೇಳಿದಾಗ ಆ ಕೋಲು ಹೊರಗೆ ಬಂದು, ಯಾರಿಗೆ ಅದು ಬಡಿಯಬೇಕೆಂದು ನೀನು ಬಯಸುತ್ತೀಯೋ ಅವರಿಗೆ ಬಡಿಯುತ್ತದೆ. ಈ ಸಲವೂ ನೀನು ಎರಡು ಬಾರಿ ಉಳಿದಿದ್ದ ಆ ಹೋಟೆಲಿನಲ್ಲೇ ಉಳಿದುಕೋ.”
ಈ ಸಲವೂ ಹ್ಯಾರಿ ಅದೇ ಹೋಟೆಲಿಗೆ ಹೋಗಿ ಮಲಗಲು ಒಂದು ಮಂಚ ಕೇಳಿದ. ಹೋಟೆಲಿನ ಮಾಲೀಕ ಕುಹಕದ ನಗು ನಗುತ್ತಾ ಹ್ಯಾರಿಯನ್ನು ಸ್ವಾಗತಿಸಿದ. ಹ್ಯಾರಿ ಮಾಲೀಕನಿಗೆ ಹೇಳಿದ, “ಈ ಚೀಲವನ್ನು ಮುಟ್ಟಬೇಡ. ಏನೇ ಆದರೂ “ಚೀಲದಿಂದ ಹೊರಗೆ ಬಾ" ಎಂದು ಹೇಳಬೇಡ” ಎಂದು ಎಚ್ಚರಿಸಿದ.
ಆ ದಿನ ರಾತ್ರಿ ಹ್ಯಾರಿ ಮಲಗುವ ವರೆಗೆ ಕಾದಿದ್ದ ಹೋಟೆಲಿನ ಮಾಲೀಕ, ಹ್ಯಾರಿಯ ಪಕ್ಕದಲ್ಲಿದ್ದ ಚೀಲದ ಹತ್ತಿರ ಬಂದು, “ಚೀಲದಿಂದ ಹೊರಗೆ ಬಾ" ಎಂದು ಹೇಳಿದ. ತಕ್ಷಣವೇ ಚೀಲದಿಂದ ಹೊರಬಂದ ಕೋಲು ಮಾಲೀಕನಿಗೆ ಬಡಿಯತೊಡಗಿತು. ಮಾಲೀಕ ಅತ್ತಿತ್ತ ಓಡಿದಾಗ ಅವನನ್ನು ಅಟ್ಟಿಸಿಕೊಂಡು ಹೋಗಿ ಬಡಿಯಿತು. “ನಿಲ್ಲಿಸು, ನಿಲ್ಲಿಸು” ಎಂದು ಚೀರಿದ ಮಾಲೀಕ. ಆಗ ನಿದ್ದೆಯಿಂದೆದ್ದ ಹ್ಯಾರಿ ಹೇಳಿದ, “ಇಲ್ಲ, ನೀನು ನನ್ನಿಂದ ಕದ್ದಿರುವ ಮೇಜು ಮತ್ತು ಕತ್ತೆಯನ್ನು ನನಗೆ ಕೊಡುವ ವರೆಗೆ ಆ ಕೋಲು ನಿನಗೆ ಬಡಿಯುವುದನ್ನು ನಿಲ್ಲಿಸುವುದಿಲ್ಲ.”
ಮಾಲೀಕ ಅವೆರಡನ್ನೂ ತಕ್ಷಣವೇ ಹಿಂತಿರುಗಿಸುತ್ತೇನೆಂದು ಹ್ಯಾರಿಗೆ ಭಾಷೆ ಕೊಟ್ಟ. ಈಗ ಹ್ಯಾರಿ “ಚೀಲದೊಳಗೆ ಹೋಗು” ಎಂದಾಗ ಆ ಕೋಲು ಚೀಲದೊಳಗೆ ಹೋಯಿತು. ಮಾಲೀಕ ತಾನು ಕದ್ದಿದ್ದ ಮೇಜು ಮತ್ತು ಕತ್ತೆಯನ್ನು ಹ್ಯಾರಿಗೆ ಹಿಂತಿರುಗಿಸಿದ.
ಮರುದಿನ ಮನೆಗೆ ಮರಳಿದ ಹ್ಯಾರಿ ತಾಯಿಯನ್ನು ಕರೆದು ಮೇಜು ಮತ್ತು ಕತ್ತೆಯ ವಿಶೇಷತೆಯನ್ನು ತೋರಿಸಿದ. ಅಂತೂ ಹ್ಯಾರಿಗೆ ಈ ಸಲ ಮೋಸವಾಗಲಿಲ್ಲ ಎಂದು ಅವಳು ಸಂತೋಷ ಪಟ್ಟಳು. ಅನಂತರ ತಾಯಿ-ಮಗ ಸುಖವಾಗಿ ಬಾಳಿದರು.