ಬಂಗಾರದ ನಿಧಿಯ ಆಶೆ

ಬಂಗಾರದ ನಿಧಿಯ ಆಶೆ

ಒಂದಾನೊಂದು ಕಾಲದಲ್ಲಿ ಐರ್ಲೆಂಡಿನಲ್ಲಿ ಷೇಮಸ್ ಎಂಬ ಯುವಕನಿದ್ದ. ಅವನು ಶ್ರಮಜೀವಿ, ಪ್ರಾಮಾಣಿಕ. ಆದರೆ ಅವನ ಬಳಿ ಕಿಂಚಿತ್ ಹಣವಿತ್ತು. ಹಾಗಾಗಿ ಅವನು ಒಂದಷ್ಟು ಬಂಗಾರಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ.

ಅದೊಂದು ದಿನ ಬೇರೊಬ್ಬ ರೈತನ ದನಗಳನ್ನು ಪೂರ್ವಹ್ನ ಮೇಯಿಸಿದ ಷೇಮಸ್ ಊಟಕ್ಕಾಗಿ ಮನೆಗೆ ಮರಳುತ್ತಿದ್ದ. ಆಗ ಅವನಿಗೆ ಮರಕುಟಿಕ ಮರ ಕುಟ್ಟುವಂತಹದೇ ಸದ್ದು ಕೇಳಿಸಿತು. ಅದೇನೆಂದು ಅವನು ಅತ್ತಿತ್ತ ನೋಡಿದ. ಕೊನೆಗೆ ಬೇಲಿಯ ಬದಿಯಲ್ಲೇ ಸದ್ದು ಬರುವತ್ತ ಬಗ್ಗಿಕೊಂಡು ನಡೆದ.

ಅವನು ಬೇಲಿಯಿಂದಾಚೆ ತಲೆಯೆತ್ತಿ ನೋಡಿದಾಗ, ಮರದ ಬೊಡ್ದೆಯೊಂದರಲ್ಲಿ ಕುಳಿತಿದ್ದ ಕುಳ್ಳ ವ್ಯಕ್ತಿಯೊಬ್ಬ ಬೂಟ್ಸ್ ತಯಾರಿಸುತ್ತಾ, ಅವಕ್ಕೆ ಮೊಳೆಗಳನ್ನು ಹೊಡೆಯುತ್ತಿದ್ದ. ಷೇಮಸ್ ಆ ವ್ಯಕ್ತಿ ಕುಳ್ಳ ಜನಾಂಗದವನು ಎಂದು ತಕ್ಷಣವೇ ಗುರುತಿಸಿದ. ಷೇಮಸನಿಗೆ ಅವರ ಬಗೆಗಿನ ವದಂತಿಗಳೆಲ್ಲ ನೆನಪಾದವು: ಆ ಜನಾಂಗದ ಪ್ರತಿಯೊಬ್ಬರೂ ಗುಪ್ತ ಜಾಗದಲ್ಲಿ ಒಂದು ಕಿಲೋದಷ್ಟು ಬಂಗಾರವನ್ನು ಬಚ್ಚಿಡುತ್ತಿದ್ದರು. ಆದರೆ ಅವರು ಕಾಣಿಸಿದಾಗ, ಕ್ಷಣಕ್ಷಣವೂ ಎಚ್ಚರದಿಂದಿರಬೇಕು. ಒಂದು ಕ್ಷಣ ನಮ್ಮ ನೋಟ ತಪ್ಪಿದರೂ ಅವರು ಕಣ್ಮರೆಯಾಗುತ್ತಾರೆ.

“ಇವತ್ತು ನಾನು ಎಚ್ಚರದಿಂದಿದ್ದರೆ ನನ್ನ ಅದೃಷ್ಟ ಖುಲಾಯಿಸುತ್ತದೆ” ಎಂದುಕೊಂಡ ಷೇಮಸ್. ಆತ ಸ್ವಲ್ಪವೂ ಸದ್ದು ಮಾಡದೆ ಬೇಲಿ ದಾಟಿದ. ಮೆತ್ತಗೆ ಹೆಜ್ಜೆಗಳನ್ನಿಡುತ್ತಾ ಕುಳ್ಳನ ಹಿಂಬದಿಯಿಂದ ಬಂದು ಧುತ್ತನೆ ಕುಳ್ಳನ ಎದುರು ನಿಂತ. ತನ್ನ ಕೆಲಸದಲ್ಲೇ ಮುಳುಗಿದ್ದ ಕುಳ್ಳನಿಗೆ ಆಘಾತವಾಯಿತು. “ನನ್ನಂತಹ ಅಮಾಯಕ ಮನುಷ್ಯನ ಮುಂದೆ ಹೀಗೆ ಒಂದೇಟಿಗೆ ಬಂದು ನಿಲ್ಲುವ ಮುಂಚೆ ನೀನು ಯೋಚನೆ ಮಾಡಬೇಕಾಗಿತ್ತು. ನಾನು ಹೆದರಿ ಸತ್ತೇ ಹೋಗುತ್ತಿದ್ದೆ” ಎಂದ ಕುಳ್ಳ.

“ಇಲ್ಲಿ ನೀನೇನು ಮಾಡುತ್ತಿದ್ದಿ?” ಕೇಳಿದ ಷೇಮಸ್. “ಓ ಯುವಕನೇ, ನಿನಗೆ ಬೇರೆ ಕೆಲಸವಿಲ್ಲವೇ? ಮೊದಲಾಗಿ ಗೂಢಚಾರನಂತೆ ಬಂದು ನನ್ನನ್ನು ಜೀವ ಹೋಗುವಂತೆ ಹೆದರಿಸಿದೆ. ಈಗ ಇಲ್ಲಸಲ್ಲದ ಪ್ರಶ್ನೆ ಕೇಳಿ ನನ್ನ ಸಮಯ ಹಾಳು ಮಾಡುತ್ತಿದ್ದಿ. ನೀನು ಮೇಯಿಸ ಬೇಕಾಗಿದ್ದ ದನಗಳು ಈಗ ಜೋಳದ ಹೊಲವೊಂದಕ್ಕೆ ನುಗ್ಗಿವೆ ಅನ್ನೋದು ನಿನಗೆ ತಿಳಿದಿದೆಯೇ?" ಎಂದು ಖಾರವಾಗಿ ಉತ್ತರಿಸಿದ.

ಪೆಚ್ಚಾದ ಷೇಮಸ್ ಅಲ್ಲಿಂದ ದನಗಳ ಹಿಂಡಿನತ್ತ ಹೋಗಲು ತಿರುಗಿದ. ಆ ಕ್ಷಣದಲ್ಲೇ ಅವನಿಗೆ ನೆನಪಾಯಿತು, ಒಂದು ಕ್ಷಣ ನೋಟ ತಪ್ಪಿದರೂ ಈ ಕುಳ್ಳ ಜನಾಂಗದವರು ಮಾಯವಾಗುತ್ತಾರೆ ಎಂಬ ಸಂಗತಿ. ಆದ್ದರಿಂದ ಅವನು ಒಂದೇಟಿಗೆ ಕುಳ್ಳನ ಕೋಟಿನ ಕಾಲರ್ ಹಿಡಿದು ಅವನನ್ನು ಮೇಲೆತ್ತಿದ.
 
ಕುಳ್ಳನನ್ನು ತನ್ನ ಮುಖದ ಎತ್ತರಕ್ಕೆ ಎತ್ತಿ, “ನೀನು ಬಚ್ಚಿಟ್ಟಿರುವ ಬಂಗಾರವನ್ನು ನನಗೆ ತೋರಿಸು” ಎಂದ ಷೇಮಸ್. ಕುಳ್ಳ ಚಡಪಡಿಸುತ್ತಾ, “ನನ್ನನ್ನು ಈಗಲೇ ಕೆಳಗಿಳಿಸು" ಎಂದ. “ನೀನು ಬಂಗಾರ ತೋರಿಸುವ ವರೆಗೆ ನಿನ್ನನ್ನು ಕೆಳಕ್ಕೆ ಇಳಿಸೋದಿಲ್ಲ” ಎಂದ ಷೇಮಸ್. "ಸರಿ, ಸರಿ. ಅದಕ್ಕಾಗಿ ಇಷ್ಟೊಂದು ಜಬರದಸ್ತು ಮಾಡಬೇಕಾಗಿಲ್ಲ. ನನ್ನೊಂದಿಗೆ ಬಾ" ಎಂದ ಕುಳ್ಳ.

ಷೇಮಸ್ ಕುಳ್ಳನನ್ನು ಕೆಳಗಿಳಿಸಿದ; ಆದರೆ ಅವನ ಭುಜವನ್ನು ಬಲವಾಗಿ ಹಿಡಿದುಕೊಂಡ. ನಂತರ ಶುರುವಾಯಿತು ಅವರ ವೇಗ ನಡಿಗೆ. ಷೇಮಸನನ್ನು ಕುಳ್ಳ ನಡೆಸುತ್ತಾ ಮುಂದೆ ಸಾಗಿದ. ಗುಡ್ಡಗಳನ್ನು ಏರಿಳಿಯುತ್ತಾ, ತೊರೆಗಳನ್ನು ಹೊಲಗಳನ್ನು ದಾಟುತ್ತಾ ಅವರಿಬ್ಬರೂ ನಡೆದದ್ದೇ ನಡೆದದ್ದು. ಸುಮಾರು ಒಂದು ಗಂಟೆ ನಡೆದ ನಂತರ, ಸುಸ್ತಾದ ಷೇಮಸ್ ಕೇಳಿದ, “ಇನ್ನೆಷ್ಟು ದೂರವಿದೆ?" “ಇಲ್ಲೇ ಹತ್ತಿರವಿದೆ" ಎಂದ ಕುಳ್ಳ.

ಒಂದು ತೊರೆ ದಾಟಿದ ನಂತರ, ಅವರು ಒಂದು ವಿಸ್ತಾರವಾದ ಹೊಲದ ಎದುರು ನಿಂತರು. ಆ ಹೊಲದಲ್ಲಿತ್ತು ಸೂರ್ಯಕಾಂತಿ ಬೆಳೆ. “ಇಲ್ಲೇ ಇದೆ ನಾನು ಬಚ್ಚಿಟ್ಟ ಬಂಗಾರ” ಎಂದ ಕುಳ್ಳ. “ನನಗೆ ಕಾಣಿಸುತ್ತಿಲ್ಲ” ಎಂದು ಷೇಮಸ್ ಹೇಳಿದಾಗ, "ಬಾ, ತೋರಿಸುತ್ತೇನೆ” ಎಂದು ಅವನನ್ನು ಕುಳ್ಳ ಹೊಲದೊಳಗೆ ಕರೆದೊಯ್ದ.
ಕೊನೆಗೆ ಒಂದು ಸೂರ್ಯಕಾಂತಿ ಗಿಡದ ಬಳಿ ನಿಂತು, “ಇದರ ಕೆಳಗಿದೆ ನಾನು ಬಚ್ಚಿಟ್ಟ ಬಂಗಾರ” ಎಂದ ಕುಳ್ಳ. ಷೇಮಸ್ ತಲೆ ಕೆರೆದುಕೊಂಡ. ಯಾಕೆಂದರೆ, ಆ ಬಂಗಾರ ಅಗೆದು ತೆಗೆಯಲು ಅವನಿಗೆ ಹಾರೆ ಬೇಕಾಗಿತ್ತು. ಕುಳ್ಳನಿಗೆ ಷೇಮಸ್ ಹೇಳಿದ, "ನಾನು ಹೋಗಿ ಹಾರೆ ತರುತ್ತೇನೆ. ಈ ಸೂರ್ಯಕಾಂತಿ ಗಿಡವನ್ನು ಗುರುತಿಸಲಿಕ್ಕಾಗಿ ನಾನೊಂದು ಕೆಂಪು ರಿಬ್ಬನನ್ನು ಅದಕ್ಕೆ ಕಟ್ಟುತ್ತೇನೆ. ಆ ರಿಬ್ಬನನ್ನು ನೀನು ಮುಟ್ಟುವುದಿಲ್ಲ ಅಥವಾ ಬೇರೆ ಗಿಡಕ್ಕೆ ಕಟ್ಟುವುದಿಲ್ಲ ಎಂದು ನನಗೆ ಭಾಷೆ ಕೊಡು.”

ಕೆಲವು ಕ್ಷಣ ಯೋಚಿಸಿದ ಕುಳ್ಳ ನಂತರ ಷೇಮಸನಿಗೆ ಭಾಷೆ ಕೊಟ್ಟ. ಷೇಮಸ್ ಬೀಸುಗಾಲು ಹಾಕುತ್ತಾ ಮನೆಗೆ ನಡೆದ. ಅವನಿಗೆ ಕುಸಿದು ಬೀಳುವಷ್ಟು ಆಯಾಸವಾಗಿತ್ತು. ಆದರೆ ಬಂಗಾರದ ನಿಧಿಯ ಆಶೆ ಅವನನ್ನು ಮುಂದಕ್ಕೆ ತಳ್ಳುತ್ತಿತ್ತು. ಅಂತೂ ಹೆಗಲಿನಲ್ಲಿ ಹಾರೆ ಇಟ್ಟುಕೊಂಡು ಷೇಮಸ್ ಆ ಸೂರ್ಯಕಾಂತಿ ಹೊಲಕ್ಕೆ ವಾಪಾಸು ಬಂದಾಗ ಮುಸ್ಸಂಜೆ ಹೊತ್ತು.

ಅಲ್ಲಿ ಕುಳ್ಳ ಇರಲೇ ಇಲ್ಲ. ಷೇಮಸ್ ಸೂರ್ಯಕಾಂತಿ ಗಿಡಗಳ ಹತ್ತಿರ ಬಂದ. ಪೆಚ್ಚಾಗಿ ಕುಸಿದು ಕುಳಿತ. ಯಾಕೆಂದರೆ ಅಲ್ಲಿದ್ದ ಪ್ರತಿಯೊಂದು ಸೂರ್ಯಕಾಂತಿ ಗಿಡಕ್ಕೂ ಒಂದು ಕೆಂಪು ರಿಬ್ಬನ್ ಕಟ್ಟಲಾಗಿತ್ತು!

ಷೇಮಸ್ ಆವೇಶದಿಂದ ಹೊಲದಲ್ಲಿ ಸೂರ್ಯಕಾಂತಿ ಗಿಡಗಳ ಬುಡ ಅಗೆಯತೊಡಗಿದ. ಆ ನಲುವತ್ತು ಎಕರೆ ಹೊಲದಲ್ಲಿ ಆತ ಅಗೆಯುತ್ತಾ ಅಗೆಯುತ್ತಾ ಕತ್ತಲಾಯಿತು. ಅಷ್ಟು ಹೊತ್ತು ಅಗೆದರೂ ಅವನಿಗೆ ಬಂಗಾರದ ನಿಧಿ ಸಿಗಲೇ ಇಲ್ಲ. ಇಡೀ ಹೊಲವನ್ನು ಅಗೆದು ನೋಡಲು ಒಂದು ವರುಷ ಸಾಲದು ಎನಿಸಿತು ಷೇಮಸನಿಗೆ.

ವಿಧಿಯಿಲ್ಲದೆ ಷೇಮಸ್ ಮನೆಗೆ ಹೊರಟ. ಗುಡ್ಡಗಳನ್ನು ಏರಿಳಿಯುತ್ತಾ, ತೊರೆಗಳನ್ನು ಹೊಲಗಳನ್ನು ದಾಟುತ್ತಾ ಮನೆಗೆ ಸಾಗುವಾಗ, ಷೇಮಸ್ ಮತ್ತೆಮತ್ತೆ ತನಗೆ ತಾನೇ ಹೇಳಿಕೊಂಡ, “ಇನ್ನೊಮ್ಮೆ ಯಾವತ್ತಾದರೂ ಆ ಕುಳ್ಳ ಜನಾಂಗದ ಯಾರಾದರೂ ಸಿಕ್ಕರೆ, ಆತ ಬಚ್ಚಿಟ್ಟ ಬಂಗಾರದ ನಿಧಿ ನನ್ನ ಕೈಗೆ ಸಿಗುವ ತನಕ ಆತನನ್ನು ಬಿಡೋದಿಲ್ಲ.”