ಬಂಗುಡೆ ಮೀನು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ

ಬಂಗುಡೆ ಮೀನು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ

ಪ್ರತಿನಿತ್ಯ ಮೀನು ತಿನ್ನುವವರು ತುಂಬಾ ಬುದ್ಧಿವಂತರಾಗಿರುವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಮೀನಿನಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಹೆಚ್ಚಿನವರು ಮೀನು ಸೇವನೆ ಮಾಡುವರು. ಅದರಲ್ಲೂ ಕರ್ನಾಟಕದ ತುಳುನಾಡಿನ ಭಾಗದವರು ಹೆಚ್ಚಾಗಿ ಮೀನು ಪ್ರಿಯರಾಗಿರುವರು. ಮೀನಿನಲ್ಲಿ ಹಲವಾರು ವಿಧಗಳು ಇವೆ. ಒಂದು ಮೀನಿನಲ್ಲಿ ಇರುವಂತಹ ಪೋಷಕಾಂಶಗಳು ಇನ್ನೊಂದು ಮೀನಿನಲ್ಲಿ ಸಿಗದು. ಹೆಚ್ಚಾಗಿ ಎಲ್ಲಾ ಸಮಯದಲ್ಲಿ ಹಾಗೂ ಪ್ರತಿಯೊಂದು ಕಡೆಯಲ್ಲೂ ಸಿಗುವಂತಹ ಮೀನೆಂದರೆ ಅದು ಬಂಗುಡೆ. ಇದು ತುಂಬಾ ಆರೋಗ್ಯಕಾರಿ ಮೀನು ಎಂದು ಪರಿಗಣಿಸಲಾಗಿದೆ. ನೀವು ಬಂಗುಡೆ ಮೀನನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೊದಲು ಕೆಲವೊಂದು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.

ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ಹಾಗೂ ಆರೋಗ್ಯ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ನೀವು ಬಂಗುಡೆ ಮೀನನ್ನು ಸೇವನೆ ಮಾಡಿಕೊಂಡು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಿ. ಬಂಗುಡೆ ಮೀನು ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು 

ಬಂಗುಡೆ ಮೀನು ಎಂದರೇನು?: ಬಂಗುಡೆ ಮೀನು ಎನ್ನುವುದು ಮೀನುಗಳ 30 ಜಾತಿಗಳನ್ನು ಒಳಗೊಂಡಿರುವಂತಹ ಸಾಮಾನ್ಯ ಪದವಾಗಿದೆ. ಇದರಲ್ಲಿ ಹೆಚ್ಚಿನವುಗಳು ಸ್ಕಾಂಬ್ರಿಡೇಗೆ ಸೇರಿರುವವು. ವಿಶ್ವದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಲ್ (Mackerel) ಮೀನನ್ನು ಬಂಗುಡೆ ಎಂದು ಕರೆಯಲಾಗುತ್ತದೆ. ಬಂಗುಡೆ ಮೀನು ಹೆಚ್ಚಾಗಿ ತುಳುನಾಡಿನ ಭಾಗದಲ್ಲಿ ಕಂಡುಬರುವುದು. ಇದು ಅಲ್ಲಿಯೇ ಮೊಟ್ಟೆಯನ್ನಿಡುವುದು ಮತ್ತು ಬೆಳೆಯುವುದು. ಇವುಗಳು ಹೆಚ್ಚಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಇರುವುದು. ಬಂಗುಡೆ ಮೀನುಗಳು ದೊಡ್ಡ ಪ್ರಮಾಣದಲ್ಲಿ ಸಿಗುವ ಕಾರಣದಿಂದಾಗಿ ಇದು ಮೀನುಗಾರರಿಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದಿಸಿ ಕೊಡುವುದು. ಈ ಕಾರಣದಿಂದಾಗಿ ಬಂಗುಡೆ ಮೀನು ತುಂಬಾ ಜನಪ್ರಿಯವಾಗಿದೆ. ಇದು ಉತ್ತರ ಅಮೆರಿಕಾದ ಆಹಾರದ ಪ್ರಮುಖ ಭಾಗವಾಗಿದೆ. 20 ಸೆ.ಮೀ. ನಿಂದ 200 ಸೆ.ಮೀ. ತನಕ ಇರುವಂತಹ ಈ ಮೀನುಗಳು ದೈಹಿಕವಾಗಿ ಬೇರೆ ಬೇರೆ ವಿನ್ಯಾಸ ಹೊಂದಿರುವುದು. ಆದರ ಇದು ಒಂದೇ ರೀತಿಯ ರುಚಿ ಹಾಗೂ ಪೋಷಕಾಂಶಗಳನ್ನು ಹೊಂದಿರುವುದು.

“ಬಂಗುಡೆ ಮೀನು ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು ವೈದ್ಯಕೀಯ ವಲಯ ಘೋಷಣೆ”

ಬಂಗುಡೆ ಮೀನಿನಲ್ಲಿ ಇರುವಂತಹ ಪೋಷಕಾಂಶಗಳ ಮೌಲ್ಯಗಳು ಬಂಗುಡೆ ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದ್ದು, ಅದೇ ರೀತಿಯಾಗಿ ಇದರಲ್ಲಿ ವಿಟಮಿನ್ ಬಿ12 (ದೈನಂದಿನ ಅಗತ್ಯಕ್ಕೆ ಬೇಕಿರುವ ಶೇ.700ರಷ್ಟು) ಇದೆ. ಬಂಗುಡೆ ಮೀನಿನಲ್ಲಿ ಖನಿಜಾಂಶಗಳಾಗಿರುವ ಸೆಲೆನಿಯಂ, ತಾಮ್ರ, ರಂಜಕ, ಮೆಗ್ನಿಶಿಯಂ ಮತ್ತು ಕಬ್ಬಿನಾಂಶವಿದೆ. ಇದರಲ್ಲಿ ಅಲ್ಪ ಪ್ರಮಾಣದ ವಿಟಮಿನ್ ಎ, ಪೊಟಾಶಿಯಂ, ಸತು ಮತ್ತು ಸೋಡಿಯಂ ಇದೆ. 100 ಗ್ರಾಂ ಬಂಗುಡೆ ಮೀನಿನಲ್ಲಿ ಸುಮಾರು 230 ಕ್ಯಾಲರಿ ಇದೆ. ಇದರಲ್ಲಿ 21 ಗ್ರಾಂ ಪ್ರೋಟೀನ್ ಇದ್ದು, ನಿಮ್ಮ ದೈನಂದಿನ ಅಗತ್ಯತೆ ಬೇಕಾಗಿರುವ ಶೇ. 40ರಷ್ಟು ಪ್ರೋಟೀನ್ ಹೊಂದಿದೆ. ಈ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಮತ್ತು ಹಲವಾರು ವಿಧದಿಂದ ಇದನ್ನು ತಯಾರಿಸಿಕೊಳ್ಳುವ ಕಾರಣದಿಂದಾಗಿ ವಿಶ್ವದೆಲ್ಲೆಡೆಯಲ್ಲಿ ಬಂಗುಡೆ ಮೀನು ಅತಿಯಾಗಿ ಸೇವಿಸುವಂತಹ ಮೀನಾಗಿದೆ.

ಬಂಗುಡೆ ಮೀನಿನ ಆರೋಗ್ಯ ಲಾಭಗಳು: ಬಂಗುಡೆ ಮೀನಿನಲ್ಲಿ ಇರುವಂತಹ ಆರೋಗ್ಯ ಲಾಭಗಳು ಎಂದರೆ ಇದು ಕೂದಲಿನ ಆರೋಗ್ಯ ಕಾಪಾಡುವುದು, ಚರ್ಮವನ್ನು ರಕ್ಷಿಸುವುದು, ವಯಸ್ಸಿಗೆ ಸಂಬಂಧಿಸಿರುವಂತಹ ಅಕ್ಷಿಪಟಲದ ಅವನತಿ ತಡೆಯುವುದು, ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು, ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು, ದೀರ್ಘಕಾಲದ ಕಾಯಿಲೆಗಳನ್ನು ತಡೆಯುವುದು ಮತ್ತು ಮೂಳೆಯ ಆರೋಗ್ಯ ವೃದ್ಧಿಸುವುದು.

ಚರ್ಮದ ಆರೈಕೆ: ಒಮೆಗಾ-3 ಕೊಬ್ಬಿನಾಮ್ಲ ಮತ್ತು ಸೆಲೆನಿಯಂ ಹೊಂದಿರುವಂತಹ ಬಂಗುಡೆ ಮೀನು ನಿಮ್ಮ ಚರ್ಮದ ಆರೈಕೆಗೆ ಬೇಕಾಗಿರುವಂತಹ ಎಲ್ಲಾ ಕೆಲಸಗಳನ್ನು ಮಾಡುವುದು. ಈ ಎರಡು ಅಂಶಗಳು ದೇಹದಲ್ಲಿ ಆಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು. ಇದರಿಂದ ಆಕ್ಸಿಡೇಟಿವ್ ಒತ್ತಡ ಮತ್ತು ಫ್ರೀ ರ್ಯಾಡಿಕಲ್ ನ ಪ್ರಭಾವ ಕಡಿಮೆ ಮಾಡಲು ನೆರವಾಗುವುದು. ನೆರಿಗೆ ಮೂಡುವುದು ಮತ್ತು ವಯಸ್ಸಾಗುವ ವೇಳೆ ಬೀಳುವಂತಹ ಕಲೆಗಳನ್ನು ನಿವಾರಿಸುವುದು. ಸೋರಿಯಾಸಿಸ್ ಮತ್ತು ಇಸಬುನಂತಹ ಕೆಲವೊಂದು ಉರಿಯೂತದ ಸಮಸ್ಯೆಗಳನ್ನು ಕೂಡ ಇದು ನಿವಾರಣೆ ಮಾಡುವುದು.

ಕೂದಲಿನ ಆರೈಕೆ: ಬಂಗುಡೆ ಮೀನಿನಲ್ಲಿ ಕೂದಲಿನ ಆರೈಕೆಗೆ ಬೇಕಾಗಿರುವಂತಹ ಕೆಲವೊಂದು ಪ್ರಮುಖ ಪೋಷಕಾಂಶಗಳಾಗಿರುಂತಹ ಪ್ರೋಟೀನ್, ಕಬ್ಬಿಣ, ಸತು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಇವೆ. ಪ್ರತಿನಿತ್ಯವು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ಒಳಪಡಿಸಿದರೆ ಅದರಿಂದ ಕಾಂತಿಯುತ ಹಾಗೂ ಸುಂದರ ಕೂದಲು ನಿಮ್ಮದಾಗುವುದು. ಇದು ಕೂದಲಿನ ತುದಿಗಳನ್ನು ಬಲಗೊಳಿಸುವುದು ಮತ್ತು ತಲೆಬುರುಡೆಯ ಸಮಸ್ಯೆಯಾಗಿರುವ ತಲೆಹೊಟ್ಟಿನಂತಹ ಸಮಸ್ಯೆ ನಿವಾರಣೆ ಮಾಡುವುದು.

ಪ್ರತಿರೋಧಕ ಶಕ್ತಿ ವೃದ್ಧಿ: ಬಂಗುಡೆ ಮೀನಿನಲ್ಲಿ ವಿಟಮಿನ್ ಸಿ ಪ್ರಮಾಣವು ತುಂಬಾ ಕಡಿಮೆಯಿದ್ದರೂ ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಿಭಾಯಿಸುವ ಪಾತ್ರಕ್ಕಾಗಿ ಶ್ಲಾಘಿಸಲ್ಪಟ್ಟಿದೆ. ಕೋನ್ಜಿಮ್ ಕ್ಯೂ10 ಎನ್ನುವ ಅಂಶವು ಬಂಗುಡೆ ಮೀನಿನಲ್ಲಿದ್ದು, ಇದು ದೇಹಕ್ಕೆ ಭಾದಿಸುವಂತಹ ಸೋಂಕು ನಿವಾರಣೆ ಮಾಡುವುದು ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ದೇಹವನ್ನು ಬಲಪಡಿಸುವುದು. ಪ್ರತಿರೋಧಕ ವ್ಯವಸ್ಥೆ ಮೇಲೆ ಅನಗತ್ಯವಾಗಿ ಒತ್ತಡವನ್ನು ಹೇರುವಂತಹ ಉರಿಯೂತವನ್ನು ಬಂಗುಡೆ ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಕಡಿಮೆ ಮಾಡುವುದು.

ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು: ಬಂಗುಡೆಯಲ್ಲಿ ಇರುವಂತಹ ಹೆಚ್ಚಿನ ಮಟ್ಟದ ಒಮೆಗಾ-3 ಕೊಬ್ಬಿನಾಮ್ಲದಿಂದಾಗಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ಇದು ಎಲ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು ಮತ್ತು ಎಚ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದು. ಅಪಧಮನಿಗಳಲ್ಲಿ ಪದರಗಳಾಗಿ ನಿರ್ಮಾಣವಾಗಿರುವಂತಹ ಕೊಲೆಸ್ಟ್ರಾಲ್ ನ ಮಟ್ಟವನ್ನು ಇದು ತಗ್ಗಿಸುವುದು. ಇದರಿಂದಾಗಿ ಈ ಮೀನು ಅಪಧಮನಿ ಕಾಠಿಣ್ಯ, ಹೃದಯಾಘಾತ, ಪಾರ್ಶ್ವವಾಯು ಮತ್ತು ಪರಿಧಮನಿಯ ಹೃದಯ ರೋಗಗಳನ್ನು ತಡೆಯುವುದು.

ದೀರ್ಘಕಾಲದ ಕಾಯಿಲೆ ನಿವಾರಣೆ: ಬಂಗುಡೆ ಮೀನಿನಲ್ಲಿ ಇರುವಂತಹ ಉನ್ನತ ಮಟ್ಟದ ಆಯಂಟಿಆಕ್ಸಿಡೆಂಟ್ ಪರಿಣಾಮ, ಅದರಲ್ಲೂ ಇದರಲ್ಲಿ ಇರುವಂತಹ ಸೆಲೆನಿಯಂ ಅಂಶದಿಂದಾಗಿ ಇದು ಪರಿಣಾಮಕಾರಿ. ನಿಮ್ಮ ದೈನಂದಿನ ಅಗತ್ಯತೆಗೆ ಬೇಕಿರುವ ಪ್ರಮಾಣಕ್ಕಿಂತ ಶೇ.80ರಷ್ಟು ಹೆಚ್ಚಿನ ಸೆಲೆನಿಯಂ ಅಂಶ ಇದರಲ್ಲಿದೆ. ಸೆಲೆನಿಯಂ ದೇಹದಲ್ಲಿ ಆಯಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು. ಕೋಶಗಳ ರೂಪಾಂತರ ತಡೆಯಲು ನೆರವಾಗುವುದು ಮತ್ತು ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸಿ ದೀರ್ಘಕಾಲದ ಕಾಯಿಲೆ ತಡೆಯುವುದು. ಫ್ರೀ ರ್ಯಾಡಿಕಲ್ ದೇಹದ ಕೋಶಗಳು, ಅಂಗಾಂಶಗಳು ಮತ್ತು ಅಂಗಾಂಗಗಳಿಗೆ ಹಾನಿಯಾಗದಂತೆ ಇದು ತಡೆಯುವುದು.

ಮೂಳೆಯ ಖನಿಜಾಂಶ ಸಾಂದ್ರತೆ ಸುಧಾರಿಸುವುದು: ಬಂಗುಡೆ ಮೀನಿನಲ್ಲಿ ವಿವಿಧ ರೀತಿಯ ಖನಿಜಾಂಶಗಳಾಗಿರುವಂತ ತಾಮ್ರ, ಸೆಲೆನಿಯಂ, ಮೆಗ್ನಿಶಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ ಮತ್ತು ಕಬ್ಬಿಣವಿದೆ. ಇದು ಮೂಳೆಯ ಖನಿಜ ಸಾಂದ್ರತೆ ತಡೆಯುವುದು. ನಿಯಮಿತವಾಗಿ ಬಂಗುಡೆ ಮೀನಿನ ಸೇವನೆ ಮಾಡಿದರೆ ಅದರಿಂದ ನೀವು ಅಸ್ಥಿರಂಧ್ರತೆ ತಡೆಯಬಹುದು. ಇದರಿಂದ ನೀವು ಹದಿಹರೆಯದವರಂತೆ ಹೆಚ್ಚು ಬಲಿಷ್ಠರಾಗಿ ಇರಬಹುದು.

ಅರಿವು ಹೆಚ್ಚಿಸುವುದು: ಬಂಗುಡೆ ಮೀನಿನಲ್ಲಿ ಇರುವಂತಹ ಹೆಚ್ಚಿನ ಮಟ್ಟದ ಒಮೆಗಾ-3 ಕೊಬ್ಬಿನಾಮ್ಲವು ಪ್ರಮುಖವಾಗಿ ಡಿಎಚ್ ಎ, ಇದರಿಂದ ಅರಿವಿನ ಕಾರ್ಯವು ಸುಧಾರಣೆಯಾಗುವುದು ಮತ್ತು ಕೆಲವೊಂದು ನರಸಂಬಂಧಿ ಕಾಯಿಲೆಗಳ ಅಪಾಯವು ಕಡಿಮೆಯಾಗುವುದು. ಉರಿಯೂತ ಶಮನಕಾರಿ ಗುಣವು ಪದರಗಳು ನಿರ್ಮಾಣವಾಗದಂತೆ ತಡೆಯುವದು ಮತ್ತು ಇದರಿಂದಾಗಿ ಅಲ್ಝೈಮರ್ ಮತ್ತು ಪರ್ಕಿಸನ್ ನಂತಹ ಕಾಯಿಲೆಯ ಲಕ್ಷಣಗಳು ದೂರವಾಗುವುದು.

ತೂಕ ಇಳಿಸಲು: ಬಂಗುಡೆಯಲ್ಲಿ ಒಂದು ತುಂಡಿನಲ್ಲಿ ಸುಮಾರು 250 ಕ್ಯಾಲರಿ ಇದೆ. ಅದೇ ರೀತಿಯಲ್ಲಿ ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಕೂಡ ಇದೆ. ಇದು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದು. ಅಧಿಕ ಪ್ರೋಟೀನ್ ಇರುವಂತಹ ಆಹಾರ ಸೇವನೆ ಮಾಡಿದರೆ ಹೊಟ್ಟೆ ತುಂಬಿದಂತೆ ಇರುವುದು. ಇದರಿಂದ ಅತಿಯಾಗಿ ತಿನ್ನುವುದು ಮತ್ತು ದಿನಕ್ಕೆ ಬೇಕಾಗಿರುವ ಕ್ಯಾಲರಿ ಪ್ರಮಾಣ ಸೇವನೆಯನ್ನು ಮಿತಿಗೊಳಿಸುವುದು.

ಮಧುಮೇಹ ನಿಯಂತ್ರಿಸುವುದು: ಬಂಗುಡೆಯಲ್ಲಿ ಏಕಪರ್ಯಾಪ್ತ ಕೊಬ್ಬಿನಾಮ್ಲವು ಇರುವ ಕಾರಣದಿಂದಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಇನ್ಸುಲಿನ ಪ್ರತಿರೋಧಕವನ್ನು ನಿಯಂತ್ರಿಸುವುದು ಎಂದು ಅಧ್ಯಯನಗಳು ಹೇಳಿವೆ. ಮಧುಮೇಹಿಗಳಿಗೆ ಇದು ಅದ್ಭುತವಾಗಿರುವಂತಹ ಸುದ್ದಿಯಾಗಿದೆ. ಮಧುಮೇಹವು ಉನ್ನತ ಮಟ್ಟದಲ್ಲಿರುವಂತಹ ವ್ಯಕ್ತಿಗಳು ಬಂಗುಡೆಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಮ ಪ್ರಮಾಣದಲ್ಲಿರುವುದು.

ಅಕ್ಷಿಪಟಲದ ಅವನತಿ ಅಪಾಯ ತಗ್ಗಿಸುವುದು: ಬಂಗುಡೆ ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಕಣ್ಣುಗಳಿಗೆ ಅತ್ಯುತ್ತಮವಾಗಿರುವ ಆಹಾರವಾಗಿದೆ ಎಂದು ಅಧ್ಯಯನಗಳು ಹೇಳಿವೆ. ಇದು ಮಧುಮೇಹದಿಂದ ಕಣ್ಣಿಗೆ ಉಂಟಾಗುವ ಹಾನಿಯನ್ನು ತಡೆಯುವುದು. ಮಧುಮೇಹ ಮತ್ತು ಅಂಧತ್ವದ ನಡುವಿನ ಸಂಪರ್ಕವನ್ನು ಕೂಡ ಅಧ್ಯಯನಗಳು ಹೇಳಿವೆ. ಎರಡು ಕೂಡ ಜತೆ ಜತೆಯಾಗಿರುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಈ ಎಲ್ಲಾ ಕಾರಣಗಳಿಂದ ಮಾಂಸಹಾರ ಸೇವನೆ ಮಾಡುವವರು ತಾವು ಸೇವಿಸುವ ಆಹಾರದಲ್ಲಿ ನಿಯಮಿತವಾಗಿ ಬಂಗುಡೆ ಮೀನನ್ನು ಬಳಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

-ಡಾ. ಗೋಪಾಲ್ ಕೋಟ್ಯಾನ್  

ಚಿತ್ರ ಕೃಪೆ: ಇಂಟರ್ನೆಟ್ ತಾಣ