ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
ಬಸವಣ್ಣನನ್ನು ದಯವಿಟ್ಟು ಅವನ ಪಾಡಿಗೆ ಬಿಟ್ಟುಬಿಡಿ - ಗಣೇಶ್.ಕೆ
ಜಾತಿ ವಿಶ್ಲೇಷಣೆ ಮಾಡಲಿಕ್ಕೆ ಬಸವಣ್ಣನೇ ಬೇಕಿತ್ತೇ? ಬಸವಣ್ಣನ ಜಾತಿ ನಿರ್ಧರಿಸಿ ಯಾವ ಚುನಾವಣೆಗೆ ಮೀಸಲಾತಿ ಪಟ್ಟಿಯಲ್ಲಿ ಬಸವಣ್ಣನನ್ನು ಸೇರಿಸಲಿಚ್ಛಿಸಿದ್ದಾರೆ? ಯಾವ ಕೆಟಗರಿಯಲ್ಲಿ "ಕೋಟಾ" ನೀಡಲು ನಿರ್ಧಸಿದ್ದಾರೆ? ಒಮ್ಮೆ ಯೋಚಿಸಿ ನೋಡಿ. ಜಾತ್ಯಾತೀತ, ಭಾವ ಸಾಮರಸ್ಯದ ನಾಡನ್ನು ಕಟ್ಟಲು ಯತ್ನಿಸಿದ ಮಹಾನ್ ವ್ಯಕ್ತಿಯ ಜಾತಿ ಇವರಿಗೆ ಯಾಕೆ ಬೇಕು? ಜಾತಿ ವಿಶ್ಲೇಷಣೆ ಅಗತ್ಯವೇ? ಬಸವಣ್ಣನ ಬೋಧನೆಗಳ ಬಗ್ಗೆ ವಿಚಾರಧಾರೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಿಸಬಹುದು. ಆದರೆ ಇದು ಚರ್ಚೆಯ ವಸ್ತುವೇ? ಚರ್ಚೆಯ ವಿಷಯವೇ ಅಲ್ಲವೆಂದ ಮೇಲೆ ಚರ್ಚೆಯ ಮಾತೆಲ್ಲಿ? ಮೂರ್ಖರೊಂದಿಗೆ, ಸಂಕುಚಿತ ಮನೋಭಾವದವರೊಂದಿಗೆ, ಅನಗತ್ಯ ವಿವಾದವೆಬ್ಬಿಸಿ "ಮಜಾ" ತೆಗೆದುಕೊಳ್ಳುವವರೊಂದಿಗೆ, ಸಮಾಜದ ಎಲ್ಲಾ ವರ್ಗದ ಜನರ ಹಿತ ಬಯಸಿದ, ವರ್ಗರಹಿತ ನಾಡನ್ನು ಕಟ್ಟಲು ಶ್ರಮಿಸಿದ ವಿಶಾಲ ಹೃದಯಿ ಬಸವಣ್ಣನ ಬಗ್ಗೆ ಚರ್ಚೆ ಮಾಡಲು ಸಾಧ್ಯವೇ? ಇನ್ನೊಂದು ವಿಷಯ, ಹಂದಿಗಳ ಜೊತೆ ಕೆಸರಿನಲ್ಲಿ ಯಾವಾಗಲೂ ಗುದ್ದಾಡಬಾರದು ಯಾಕಂದ್ರೆ ಮಜಾ ಸಿಗೋದು ಹಂದಿಗಳಿಗೆ ಮಾತ್ರ!
ನಾಡು ಕಾಣುತ್ತಿರುವ "ಮಹಾನ್ ಸಾಹಿತಿ", "ಕ್ಯಾತೆ ಸಂಶೋಧಕ", "ಜಾತಿ ವಿಶ್ಲೇಷಕ" ಡಾ||ಬಂಜಗೆರೆ ಜಯಪ್ರಕಾಶ್, ಇನ್ನು ಮುಂದೆ ಎಲ್ಲಾ ಅನುಭಾವಿಗಳ ಜಾತಿಗಳನ್ನು ವಿಶ್ಲೇಷಣೆ ಮಾಡಿ, ಡಿ.ಎನ್.ಎ ಟೆಸ್ಟ್ ಮಾಡಿ, ಗ್ರಂಥಗಳನ್ನು ಬರೆಯುವ ಸಂಭವವಿದೆ. ಯಾಕಂದ್ರೆ ಹೆಸರಿನ ಹಿಂದೆ ಡಾ|| ಇದೆ ನೋಡಿ! ಎಲ್ಲಾ ಕೆಳವರ್ಗದ ಜಾತಿಯವರೂ, ಮೇಲ್ವರ್ಗದ ಜಾತಿಯವರೂ ಬಸವಣ್ಣ "ತಮ್ಮವನೆಂದು" ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದು ಹೃದಯ ವೈಶಾಲ್ಯತೆ. ಆದರೆ ಇವ "ತಮ್ಮ ಜಾತಿಯವನು" ಎನ್ನುವುದು ಸಂಕುಚಿತ ಮನೋಭಾವದ ಪ್ರತೀಕ. "ಆನು ದೇವಾ ಹೊರಗಣವನು" ಕೃತಿಯಲ್ಲಿ ಬಸವಣ್ಣ ಯಾವ ಜಾತಿಯಲ್ಲಿ ಹುಟ್ಟಿರಬಹುದು ಎಂದು ಜಯಪ್ರಕಾಶ್ ಹೇಳಿದ್ದಾರೋ ಆ ಜಾತಿಯವರೆಲ್ಲಾ ಬಸವಣ್ಣ ತಮ್ಮ ಜಾತಿಯವನೆಂದು ಬೀಗಬಹುದು. ಏನು ಬಂತು? ಬಸವಣ್ಣ ದಲಿತರ ಕೇರಿಯಲ್ಲೇ ಹುಟ್ಟಿರಲಿ, ಬ್ರಾಹ್ಮಣರ ವಂಶದಲ್ಲೇ ಹುಟ್ಟಿರಲಿ ಇವರಿಗೇನು ಕಷ್ಟ? ನೆನಪಿಡಿ ಬಸವಣ್ಣ ಬರೀ ಆ ಜಾತಿಯಲ್ಲಿ ಹುಟ್ಟಿದ್ದಾನೆ ಅಂದ ಕಾರಣಕ್ಕೆ ೮ ಶತಮಾನಗಳ ನಂತರವೂ ಸ್ತುತ್ಯರ್ಹನಾಗುತ್ತಿರಲಿಲ್ಲ. ಆತನ ಸಮಾಜ ಸುಧಾರಣೆ, ಎಲ್ಲರನ್ನೂ ಒಗ್ಗೂಡಿಸುವ ಮನೋಭಾವ, ಸಮೃದ್ಧ ಸಮಾಜ ನಿರ್ಮಾಣದ ಆಶಯ, ಆಧ್ಯಾತ್ಮಿಕ ಶಕ್ತಿ ಇವುಗಳಿಂದ ಮಾತ್ರ ಬಸವಣ್ಣ ನಮ್ಮೊಂದಿಗೆ ಇಂದಿಗೂ ಇರೋದು. ಬರೀ ಒಂದು ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ಮಹಾನ್ ವ್ಯಕ್ತಿಯಾಗಲಿಕ್ಕೆ ಸಾಧ್ಯವೇ? ಹಾಗಿದ್ದರೆ ಎಲ್ಲರೂ ಆಗಬೇಕಿತ್ತಲ್ಲ? ಇದಕ್ಕೆ ಉತ್ತರವಿಲ್ಲ! ಜಾತಿಯಿಂದ ಯಾರೂ ಮಹಾನ್ ವ್ಯಕ್ತಿಗಳಾಗುವುದಿಲ್ಲ. ಜಾತಿಗಳನ್ನು ಮೀರಿ ಬೆಳೆದವರು ಮಾತ್ರ ಮಹಾನ್ ವ್ಯಕ್ತಿಗಳಾಗುತ್ತಾರೆ. ಆದರೆ ಮಹತ್ತರ ಸ್ಥಾನಕ್ಕೆ ಏರಿದ ಮೇಲೆ ಅವರ ಜಾತಿ ವಿಶ್ಲೇಷಣೆ ಮಾಡುವುದು ಮಾತ್ರ ಸಂಕುಚಿತತೆ ತಂದ ದುರಂತವೇ ಸರಿ. ಇದು, ಯಾರು ಪ್ರಸಿದ್ಧರಾಗುತ್ತಾರೋ, ಪ್ರಚಲಿತದಲ್ಲಿರುತ್ತಾರೋ ಅವರ ಜಾತಿ ವಿಶ್ಲೇಷಣೆ ಮಾಡಿ, ಧರ್ಮ ವಿಶ್ಲೇಷಣೆ ಮಾಡಿ, ವಿವಾದ ಹುಟ್ಟುಹಾಕಿ, ವಿವಾದದ ಮೂಲಕ ಜನಪ್ರಿಯತೆ ಗಳಿಸುವ ಹುನ್ನಾರ.
ಇನ್ನು ದಾವಣಗೆರೆಯ ವಿಶ್ವವಿಖ್ಯಾತ ಬುದ್ಧಿಜೀವಿಗಳೊಬ್ಬರಿಗೆ ಇದು ಈ ಪ್ರಕರ್ಅಣ "ರೋಚಕ ಪತ್ತೇದಾರಿ ಪ್ರಹಸನ"ದಂತೆ ಕಂಗೊಳಿಸಬಹುದು. ವಿವಾದದೊಂದಿಗೆ ಗುರುತಿಸಿಕೊಂಡರೆ ತಾನೇ "ಬುದ್ಧಿಜೀವಿ", "ಚಿಂತಕ" ಹಣೆಪಟ್ಟಿ ದೊರಕುವುದು! ಇವರಿಗೆ ಆನುದೇವಾ ಹೊರಗಣವನು ಕೃತಿ, "ಜಾತಿ ವಿಶ್ಲೇಷಣೆಯ ಕೆಟ್ಟ ಕುತೂಹಲದ ಪುಸ್ತಕ" ಅಂತಾ ಅನ್ನಿಸಲೇ ಇಲ್ಲ. ಭೈರಪ್ಪನವರ "ಆವರಣ" ಕಾದಂಬರಿ ಬಿಡುಗಡೆಯಾಗಿ ಅನಂತಮೂರ್ತಿಗಳ "ಆವಾಂತರ"ದೊಂದಿಗೆ ವಿವಾದವೆದ್ದಾಗ, ಅನಂತಮೂರ್ತಿ ಹೇಳಿಕೆ ಸಮರ್ಥಿಸಲು ಎಷ್ಟೆಲ್ಲಾ ಸಾಹಿತಿಗಳು, ಒಂದಾದರೂ, ಉರಿದುಬಿದ್ದರೂ, ಮುಗಿಬಿದ್ದರೂ ಒಬ್ಬ ಭೈರಪ್ಪನವರನ್ನು ಎದುರಿಸಲಾಗಲಿಲ್ಲವಲ್ಲ. ಎದುರಿಸಲು ಸಮರ್ಥವಾದ ವಾದ, ದಾಖಲೆ ಎಲ್ಲವೂ ಬೇಕು. ದಾಖಲೆ, ಇತಿಹಾಸದೊಂದಿಗೆ ಚರ್ಚೆಗಿಳಿದ ಭೈರಪ್ಪನವರನ್ನು, ಚರ್ಚೆಯಲ್ಲಿ ಸೋಲಿಸಲು ಒಬ್ಬೇ ಒಬ್ಬ ವಿಮರ್ಶಕನಿಗೂ ತಾಕತ್ತಿಲ್ಲ ಅಂದರೆ ಅದರಲ್ಲಿನ ಸತ್ಯಾಂಶ ಅರಿವಾಗುತ್ತದೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅದನ್ನು ಸಾಬೀತುಪಡಿಸಲು ಸಮರ್ಥ ದಾಖಲೆಗಳು ಇರಬೇಕು. ಬಂಜಗೆರೆ ಜಯಪ್ರಕಾಶ್ ಬಳಿ ಬಸವಣ್ಣನವರ ಯಾವ ಜಾತಿ ಸರ್ಟಿಫ಼ಿಕೇಟು ದಾಖಲೆ ಇದೆ ಅನ್ನೋದನ್ನ ಸಾಬೀತುಪಡಿಸಲಿ ನೋಡೋಣ. ಕೇವಲ ಊಹಾಪೋಹಗಳಿಂದ ವಾದವನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಆವರಣ ಬಿಡುಗಡೆಯಾದಾಗ ದಾವಣಗೆರೆಯ ಇದೇ ಬುದ್ಧಿಜೀವಿಗಳು ಭೈರಪ್ಪನವರನ್ನು ಕೋಮುವಾದಿ ಎಂದು ಜರಿದಿದ್ದರು. ಈಗ ಈ ವಿವಾದದಲ್ಲಿ ಬಂಜಗೆರೆ ಜಯಪ್ರಕಾಶರನ್ನು "ಬಸವಣ್ಣನವರೊಂದಿಗೆ ಭಾವನಾತ್ಮಕವಾಗಿ ಸಮೀಪವರ್ತಿ" ಎಂದಿದ್ದಾರೆ..! ಒಬ್ಬ ವ್ಯಕ್ತಿಯ ಜಾತಿಯನ್ನು ಪ್ರಶ್ನೆ ಮಾಡಿ, ಅವರೊಂದಿಗೆ ಭಾವನಾತ್ಮಕವಾಗಿ ಸಮೀಪವರ್ತಿಗಳಾಗುವುದು ಸಾಧ್ಯವೇ? ನಿಜಕ್ಕೂ ಅಸಾಧ್ಯ..!
ಚರ್ಚೆ ಆರೋಗ್ಯಪೂರ್ಣವಾಗಬೇಕಾದರೆ ಚರ್ಚಾ ವಿಷಯ ಆರೋಪಮುಕ್ತವಾಗಿರಬೇಕು. ಮೊನ್ನೆ ಮೊನ್ನೆ ಬೆಂಗಳೂರು ಕಸಾಪದಲ್ಲಿ ದಯಾನಂದ ಸ್ವಾಮಿಯವರು, ಬಸವಾನುಯಾಯಿಗಳು ಬಸವತತ್ವ ಬಿಟ್ಟು ನೆಡೆಯುತ್ತಿದ್ದಾರೆ, ಅವರೆಲ್ಲಾ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಆಶಿಸುವ ಈ ಬುದ್ಧಿಜೀವಿಗಳು, ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಎಂದ ಬಸವಣ್ಣನವರ ವಚನವನ್ನು ಒಮ್ಮೆ ತಿರುವಿಹಾಕುವುದೊಳಿತು. ಜಾತಿಯನ್ನು, ಕುಲವನ್ನು ಪ್ರಶ್ನೆ ಮಾಡದೆ ಎಲ್ಲರನ್ನೂ ಪ್ರೀತ್ಯಾದರಗಳಿಂದ ಕಾಣಬೇಕೆಂಬ ಈ ವಚನದ ಸಾರವನ್ನು ಬಂಜಗೆರೆ ಜಯಪ್ರಕಾಶ್ಗೆ ಒಮ್ಮೆ ಬೋಧಿಸುವುದೊಳಿತು. ಈ ಜಾತಿ ಚರ್ಚೆ ಇಲ್ಲಿಗೇ ಮುಕ್ತಾಯವಾಗಬೇಕು. ಜಾತಿ, ರಾಜಕೀಯಕ್ಕೆ ಕಾಲಿಟ್ಟು ಬಹಳಷ್ಟು ವರ್ಷಗಳು ಕಳೆದಿವೆ. ಧರ್ಮಕ್ಕೆ, ಆಧ್ಯಾತ್ಮಕ್ಕೆ ಕಾಲಿಡುವುದು ಬೇಡ.
ಈಗ, ಸರ್ಕಾರ ಮುಂದಾಗುವ ಅನಾಹುತಗಳನ್ನು ಊಹಿಸಿ, ಈಗಲೇ ಕೃತಿಯ ಮುಟ್ಟುಗೋಲಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇದು ಅನಗತ್ಯ ವಿವಾದವೆಬ್ಬಿಸುವ, ಸಮಾಜದ ಆರೋಗ್ಯವನ್ನು ಹದಗೆಡಿಸುವ ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಬೇಕು. ಈ ಕೊಳಕು ಮನಸ್ಥಿತಿಯ, ಸಂಕುಚಿತ ಮನೋಭಾವದ, ಕುತ್ಸಿತ ಮನೋಭಾವದ ಜಾತಿವಾದಿ ಬಂಜಗೆರೆ ಜಯಪ್ರಕಾಶರಿಗೆ "ಮಂಗಳಾರತಿ" ಮಾಡಿ ಈ ಅನಗತ್ಯ ಚರ್ಚೆಗೆ ಮಂಗಳ ಹಾಡಬೇಕು. ಇಲ್ಲವೇ ಆ ಕೆಲಸ ನಮ್ಮೆಲ್ಲರಿಂದ ಅನಿವಾರ್ಯವಾಗಲೂಬಹುದು.
Comments
ಉ: ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
ಉ: ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ