ಬಂಜೆತನ

ಬಂಜೆತನ

ಬರಹ

ಬಂಜೆತನ ಹೆಣ್ಣಿನ ಬದುಕಿನಲ್ಲಿ ಮಾನಸಿಕ ವೇದನೆಯನ್ನು ಮೂಡಿಸುವಂತದ್ದಾಗಿದೆ. ಕುಟುಂಬಗಳಲ್ಲಿ, ಸಭೆ - ಸಮಾರಂಭಗಳಲ್ಲಿ, ಶುಭ ಕಾರ್ಯಗಳಲ್ಲಿ, ಸಾಮಾಜಿಕವಾಗಿ ಅತ್ಯಂತ ಕೀಳಾಗಿ ಮನನೋಯಿಸುವ ಬಾಹ್ಯಾಂತರಿಕ ಚಿತ್ರಣಗಳನ್ನು ಆಂದಿನಿಂದ ಇಂದಿನವರೆಗೂ ಕಾಣುತ್ತಿದ್ದೇವೆ. ಮಕ್ಕಳಿರುವ ಹೆಣ್ಣಿಗೆ ಎಷ್ಟು ಬೆಲೆ, ಗೌರವ, ಘನತೆ, ಹಿರಿಮೆ ಇರುತ್ತದೆಯೋ, ಆದರೆ ಆವಳಿಗೆ ಮಕ್ಕಳಿರುವ ಹೆಣ್ಣಿಗೆ ಎಷ್ಟು ಬೆಲೆ, ಗೌರವ, ಘನತೆ, ಹಿರಿಮೆ ಇರುತ್ತದೆಯೋ, ಆದರೆ ಆವಳಿಗೆ ಮಕ್ಕಳಾಗದಿದ್ದರೆ ಅಷ್ಟೇ ಕೀಳಾಗಿ ಮನನೋಯಿಸುವ ಸಂದರ್ಭಗಳನ್ನೂ ಕಾಣುತ್ತಿದ್ದೇವೆ. ಹೆಣ್ಣಿನ ವ್ಯಕ್ತಿತ್ವ ಚಲನಶೀಲವಾದದ್ದು. ಒಂದು ಸಣ್ಣ ಬೀಜ - ಸಸಿಯಾಗಿ ಗಿಡವಾಗಿ ಮರವಾಗಿ, ಹೂಬಿಟ್ಟಿ, ಕಾಯಾಗಿ, ಹಣ್ಣಾಗಿ ಪುನಃ ಬೀಜವಾಗಿ ಪುನರವರ್ತನೆಯಾಗುವಂತೆ ; ಪ್ರತಿಯೊಬ್ಬ ಸ್ತ್ರೀಯೂ ಮಗುವಿಗೆ ಜನ್ಮದಾತಳಾಗಿ ಪಾಲನೆ - ಪೋಷಣಿ ಮಾಡಿ ಸಂಸಾರದಲ್ಲಿ ನಿರತರಾಗುವವರೆಗೂ ಜವಾಬ್ದಾರಿ ವಹಿಸುತ್ತಾಳೆ. ಅದೇ ರೀತಿ ಪುನರಾವರ್ತಿಯಾಗಿ ವಂಶಾಭಿವೃದ್ಧಿಯಾಗುತ್ತಾ ಹೋಗುತ್ತದೆ ಇದು ಅನಂತವಾದುದು.
ಹೆಣ್ಣನ್ನು ಭೂಮಿ ತಾಯಿಗೆ ಹೋಲಿಸಿ ವರ್ಣಿಸುತ್ತಾರೆ. ಅದು ಅಕ್ಷರಶಃ ಸತ್ಯ. ಭೂಮಿಯು ಸಕಲ ಜೀವರಾಶಿಗಳ್ಳನ್ನು ಹೊತ್ತು ನಿಂತು, ತನ್ನದೇ ಆದ ವಿಶಿಷ್ಟ ಮೆರುಗನ್ನು ನೀಡುವಂತೆ ಮಗುವಿಗೆ ಜನ್ಮಕೊಡುವ ತಾಯಿಯು ಆ ಮಗುವನ್ನು ಹೊತ್ತು ಹೆತ್ತು ಪಾಲನೆ ಪೋಷಣೆ ಮಾಡುವ ನಿಸ್ವಾರ್ಥ ಸೇವೆ ಚಿರಸ್ಮರಣೀಯವಾದುದು. ಈ ಸೇವೆಯಲ್ಲಿಯೇ ಸಹನೆ, ತಾಳ್ಮೆ, ಮನದಾಳದಲ್ಲಿ ಸೃಷ್ಟಿಸಿಕೊಳ್ಳುತ್ತಾಳೆ. ಇಂತಹ ಅತ್ಯಂತ ಗೌರವ ಸ್ಥಾನಮಾನವಿರುವ ಹೆಣ್ಣು ಯಾವುದೇ ಕಾರಣಕ್ಕೂ ಬಂಜೆತನವನ್ನು ಇಷ್ಟಪಡುವುದಿಲ್ಲ.
ಪ್ರಸ್ತುತ ಆಧುನಿಕ ವೈಜ್ಞಾನಿಕ ಯುಗದಲ್ಲಿ ಪ್ರಕೃತಿ ವಿಕೋಪಗಳು ನಾನಾ ರೀತಿಯಲ್ಲಿ ತಾಂಡವವಾಡುತ್ತಾ, ಪ್ರವಹಿಸಿ ಇಡೀ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಇದಕ್ಕೆ ಮಾನವ ಸೃಷ್ಟಿಯಾಗಿ ನಲುಗಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರಸ್ತುತ ಮಾನವ ಕುಲದ ಸೃಷ್ಟಿಯಲ್ಲಿ - ದಂಪತಿಗಳಲ್ಲಿ ಬಂಜೆತನವು ಮೊದಲಿಗಿಂತಲೂ ಇತ್ತೀಚೆಗೆ ಹೆಚ್ಚಾಗುತ್ತಿರುವುದನ್ನು ವೈದ್ಯಕೀಯ ಕ್ಟೇತ್ರದಿಂದ ತಿಳಿದು ಬರುತ್ತದೆ. ಮದುವೆಯಾಗಿ ಕೆಲವು ವರ್ಷಗಳವರಗೆ ಹಾಗೂ ಜೀವನಾಂತ್ಯದವರೆಗೂ ಮಕ್ಕಳಾಗದೇ ಇರುವ ದಂಪತಿಗಳನ್ನು ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿದ್ದೇವೆ. ಇದಕ್ಕೆ ಪ್ರಸ್ತುತ ಆಧುನಿಕ ಕಾಲಮಾನದ ಪರಿಸರವೂ ಕಾರಣವಾಗಿದೆ.
ಒಂದು ಸಂಸಾರವೆಂದರೆ ತಂದೆ - ತಾಯಿ, ಗಂಡ- ಹೆಂಡತಿ, ಮಕ್ಕಳು, ಮನೆ ಅವಶ್ಯಕತೆಗೆ ಬೇಕಾದಂತಹು ವಸ್ತುಗಳಿದ್ದರೆ ಅದನ್ನು ಸುಂದರ ಸಂಸಾರವೆಂದು ಕರೆಯಬಹುದು. ಆ ಸಂಸಾರದ ಕಣ್ಣುಗಳೇ ಮಕ್ಕಳು, ಮಕ್ಕಳ ಕಿಲಕಿಲ ಮಾತು, ನಗುವಿಗೆ ಮನ ಸೋಲದವರಾರು ? ಆ ಮುದ್ದು ಕಂದನ ಮುಂದೆ ಸಾವಿರ ನೋವು, ಕಷ್ಟಗಳಿದ್ದರೂ ಬೆಳಕಿನ ಮುಂದೆ ಕತ್ತಲೆ ಮರೆಯಾದಂತೆ ಎಲ್ಲವೂ ಮರೆಯಾಗುತ್ತವೆ. ನೋವು ಕಷ್ಟಗಳೆಲ್ಲಾ ದೂರಮಾಡುವ ಒಂದು ಮುದ್ದು ಮಗುವಿಗಾಗಿ ಆದೆಷ್ಟೋ ಜನ, ಅದೆಷ್ಟೋ ಕಾತುರದಿಂದ, ಸಂತೋಷದಿಂದ ಮಗುವಿನ ಬರುವಿಕೆಗಾಗಿ ಕಾಯುತ್ತಿರುತ್ತಾರೆ.
ಎಷ್ಟೋ ದಂಪತಿಗಳಲ್ಲಿ ’ಮಗು’ ಮರೀಚೀಕೆಯಾಗಿ ಉಳಿದುಬಿಡುತ್ತದೆ. ಅದಕ್ಕೆ ಆ ದಂಪತಿಗಳು ಮಾಡಿದ ’ಪಾಪ’ ಕಾರಣವಲ್ಲ ಅಥವಾ ಯಾವುದೇ ಜನ್ಮದಲ್ಲಿ ಮಾಡಿದ ’ಕರ್ಮ’ದಿಂದಲ್ಲ. ಅದೊಂದು ದೇಹ ಪ್ರಕೃತಿಯಲ್ಲಾದ ದೇಹರಚನೆಯಲ್ಲಿ ದೋಷವಾಗಿರುತ್ತದೆಯೇ ಹೊರತು ಬೇರೆ ಯಾವ ಕಾಜಣದಿಂದಿಲ್ಲ. ಆದ್ದರಿಂದ ನಾವು ಬಂಜೆತನ ಎಂದರೇನು? ಯಾವ ಕಾರಣಗಳಿಂದ ಉಂಟಾಗುತ್ತದೆ? ಯಾವ - ಸಮಯದಲ್ಲಿ ಯಾರಿಗೆ ಉಂಟಾಗುತ್ತದೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
ಬಂಜೆತನವು ಸಾಮಾನ್ಯ ತೊಂದರೆಯಾಗಿ ಕಂಡಬಂದರೂ ಅದು ಸಮಾಜದಲ್ಲಿ ಅಸಾಮಾನ್ಯವಾಗುವ ಸಾಧ್ಯತೆಯಿರುತ್ತದೆ. ಇದನ್ನು ನಿವಾರಿಸುವಂತಹ ವೈದ್ಯೋಪಾಚಾರ ಚಿಕಿತ್ಸೆಗಳು ಪ್ರಸ್ತುತದಲ್ಲಿ ಸಾಕಷ್ಟಿವೆ. ಆದುದರಿಂದ ತಜ್ಞ ವೈದ್ಯರ ಸಲಹೆಯನ್ನು ಪಡೆಯುವುದು ಮುಖ್ಯ. ದಂಪತಿಗಳು ಮಕ್ಕಳನ್ನು ಪಡೆಯಲು ಸತತ ಪ್ರಯತ್ನ ನಡೆಸಿ ಸ್ತ್ರೀ ಗರ್ಭಧರಿಸದಿದ್ದರೆ ಇದಕ್ಕೆ ಸ್ತ್ರೀಯದೇ ತೊಂದರೆ ಎಂದು ಮೌಢ್ಯತೆಯಿಂದ ಭಾವಿಸಬಾರದು. ಪುರುಷನೂ ಕಾರಣವಾಗಿರಬಹುದು. ಪ್ರಸ್ತುತ ವೈಜ್ಞಾನಿಕ ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಸಮಸ್ಯೆಗಳನ್ನು ಪರೀಕ್ಷಿಸುವ ಪರಿಹರಿಸುವ ಕಾರ್ಯವನ್ನು ಕೈಗೊಂಡು ಸಫಲವಾಗಿರುವಂತಹದು ಸಾಕಷ್ಟಿವೆ.
ಬಂಜೆತನ :-
ಮದುವೆ ಆದ ದಂಪತಿಗಳು ಮಕ್ಕಳನ್ನು ಪಡೆಯಲು ಸತತ ಪ್ರಯತ್ನ ನಡೆಸಿ ಒಂದು ವರ್ಷವಾದರೂ ಗರ್ಭಧರಿಸದೇ ಇದ್ದರೆ ಅದನ್ನು ಬಂಜೆತನ ಎಂದು ಕರೆಯಲಾಗುತ್ತದೆ.
’ಬಂಜೆತನ’ ಕನ್ನಡದಲ್ಲಿ ಉಪಯೋಗಿಸುವ ಶಬ್ದ. ಈ ಪದವನ್ನು ಇಂಗ್ಲೀಷ್ ನಲ್ಲಿ ’ಇನ್ ಫರ್ಟಿಲಿಟಿ’ ಮತ್ತು ’ಸ್ಟೆರಿಲಿಟಿ’ ಎಂದು ಕರೆಯುತ್ತಾರೆ. ಇವೆರಡು ಪಾರಿಭಾಷಿಕ ಪದಗಳಿಗೆ ಕನ್ನಡದಲ್ಲಿ ಬೇರೆ ಬೇರೆ ಅಥ೯ಗಳು ಕಂಡುಬರುತ್ತವೆ. ಅವುಗಳೆಂದರೆ ಕ್ರಮವಾಗಿ ತಾತ್ಕಾಲಿಕ ಬಂಜೆತನ ಮತ್ತು ಶಾಶ್ವತ ಬಂಜೆತನ. ಇವುಗಳನ್ನು ಈ ಎರಡು ರೀತಿಯಲ್ಲಿ ಬಂಜೆತನದ ವಿಧಗಳು ಎಂದು ಕರೆಯುತ್ತಾರೆ.
ಬಂಜೆತನದ ವಿಧಗಳು :-
೧. ಪ್ರಾಥಮಿಕ ಬಂಜೆತನ
೨. ತರುವಾಯದ (ನಂತರದ) ಬಂಜೆತನ

೧. ಪ್ರಾಥಮಿಕ ಬಂಜೆತನ : ಪ್ರಾಥಮಿಕ ಬಂಜೆತನ ಎಂದರೆ ಮದುವೆಯಾಗಿ ಮಗುವನ್ನು ಪಡೆಯಲು ಸತತ ಪ್ರಯತ್ನ ನಡೆಸಿ ಒಮ್ಮೆಯೂ ಗರ್ಭವತಿಯಾಗಲಿಲ್ಲವೆಂದರೆ ಅದನ್ನು ಪ್ರಾಥಮಿಕ ಬಂಜೆತನ ಎನ್ನಬಹುದು.
೨. ತರುವಾಯದ (ನಂತರದ) ಬಂಜೆತನ : ತರುವಾಯ ಬಂಜೆತನ ಎಂದರೆ ಒಂದು ಅಥವಾ ಒಂದಕ್ಕಿಂತ ಅಧಿಕ ಸಾರಿ ಗರ್ಭಧರಿಸಿ ಪೂರ್ಣ ಅವಧಿಯನ್ನು ತಲುಪದೆ ಗರ್ಭಪಾತವಾಗಿ ಆನಂತರ ಎಷ್ಟೇ ಪ್ರಯತ್ನ ಪಟ್ಟರೂ ಗರ್ಭಧರಿಸದೇ ಇದ್ದರೇ ಅದನ್ನು ತರುವಾಯದ ಬಂಜೆತನ ಎಂದು ಕರೆಯಬಹುದು.
ಅಲ್ಲದೆ ಒಂದು ಅಥವಾ ಹೆಚ್ಚು ಮಕ್ಕಳಿದ್ದು (ಬದುಕಿರಬಹುದು ಇಲ್ಲವೇ ಮರಣ ಹೊಂದಿರಬಹುದು) ಪುನಃ ಮತ್ತೊಂದು ಮಗು ಬೇಕೆನ್ನಿಸಿದಾಗ ಮಗುವಾಗದಿದ್ದರೆ ಮತ್ತೆ ಈಗಾಗಲೇ ಮಕ್ಕಳಿದ್ದು ಮುಂದು ಮಕ್ಕಳಾಗದಂತೆ ಗರ್ಭ ನಿರೋಧಕ, ಅಂಡನಳಿಕೆ ಕೊಯ್ತೆಗೆತ, ವೀರ್ಯನಾಳ ಕೊಯ್ತೆಗೆತ ಶಸ್ತ್ರಚಿಕಿತ್ಲೆ ಮಾಡಿಸಿಕೊಂಡಿದ್ದು ಅನಿವಾರ್ಯಕಾರಣಗಳಿಂದ ಪುನಃ ಮಕ್ಕಳು ಬೇಕೆನ್ನಿಸಿ ಶಸ್ತ್ರಚಿಕಿತ್ಸೆಯ ಮೂಲಕ ಅಂಡನಳಿಕೆಗಳನ್ನು ಮರು ಜೋಡಣೆ ಮಾಡಿಸಿಕೊಂಡ ನಂತರವೂ ಮಕ್ಕಳಾಗಲಿಲ್ಲಿವೆಂದರೆ ಇದನ್ನು ನಂತರದ ಅಥವಾ ತರುವಾಯದ ಬಂಜೆತನ ಎಂದು ಕರೆಯಬಹುದು.
ಹಾಗೆಯೇ ಕೆಲವೊಂದು ಸಂದರ್ಭದಲ್ಲಿ ಮಹಿಳೆ ಅಥವಾ ಪುರುಷ ಮರು ಮದುವೆ ಆದ ಸಂದರ್ಭಗಳಲ್ಲಿ ಮೊದಲನೆ ಪತಿ ಅಥವಾ ಪತ್ನಿಯ ಜೊತೆಯಲ್ಲಿ ಮಕ್ಕಳಾಗಿದ್ದು ಎರಡನೇ ಪತಿ ಅಥವಾ ಪತ್ನಿಯೊಂದಿಗಿರುವಾಗ ಮಕ್ಕಳಾಗದಿರುವ ಸಂದರ್ಭವನ್ನೂ ತರುವಾಯದ ಬಂಜೆತನ ಎಂದು ಕರೆಯುತ್ತಾರೆ.
ಬಂಜೆತನಕ್ಕೆ ಕಾರಣಗಳು.
ಹೆಣ್ಣು ಪರಿಪೂರ್ಣ ಎನಿಸುವುದು ಆಕೆ ತಾಯಿಯಾದಾಗ ಮಾತ್ರ. ಆದರೆ ಮಕ್ಕಳಾಗಲಿಲ್ಲವೆಂದರೆ ಮಾತ್ರ ಹೆಣ್ಣನ್ನೆ (ಸ್ರ್ತೀಯನ್ನೇ) ದೂಷಿಸುತ್ತಾರೆ. ಬಂಜೆತನಕ್ಕೆ ದಂಪತಿಗಳಿಬ್ಬರೂ ಕಾರಣ ಎಂಬುದನ್ನು ಮರೆತುಬಿಡುತ್ತಾರೆ. ಇತರೆ ಅನೇಕ ಕಾರಣಗಳಿಂದಲೂ ಬಂಜೆತನ ಉಂಟಾಗಬಹುದು. ಅವುಗಳೆಂದರೆ ಬದಲಾಗುತ್ತಿರುವ ಜೀವನ ಶೈಲಿಯಿಂದ ಉಂಟಾಗಬಹುದು. ದೈಹಿಕ ಅಂಗರಚನೆಯಲ್ಲಿನ ದೋಷಗಳಿಂದ, ಲೈಂಗಿಕ ಕ್ರಿಯೆಯ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದರಿಂದ - ಮುಂತಾದ ಕಾರಣಗಳಿಂದ ಬಂಜೆತನ ಉಂಟಾಗಬಹುದು.
ಬಂಜೆತಕ್ಕೆ ಸ್ತ್ರೀಯೊಬ್ಬಳೇ ಕಾರಣ ಎಂದು ಹೇಳುತ್ತಿದ್ದರು. ಆದರೆ ಇಂದು ಬಂಜೆತನಕ್ಕೆ ಪುರುಷನೂ ಪ್ರಮುಖ ಕಾರಣನಾಗಿದ್ದಾನೆ ಎಂಬುದು ಅಂಕಿ ಅಂಶಗಳಿಂದ ಸಾಭೀತಾಗಿದೆ. ಅಂಕಿ ಅಂಶಗಳ ಪ್ರಕಾರ ಪುರುಷ ಮತ್ತು ಸ್ತ್ರೀಯಲ್ಲಿನ ಬಂಜೆತನದ ಕಾರಣಗಳು ಈ ರೀತಿ ಇದೆ.
೧. ಶೇ ೪೨% ರಷ್ಟು ಪುರುಷ ಪ್ರಧಾನ ಕಾರಣ
೨. ಶೇ ೩೮% ರಷ್ಟು ಸ್ತ್ರೀ ಪ್ರಧಾನ ಕಾರಣ
೩. ಶೇ ೧೦% ರಷ್ಟು ಇಬ್ಬರಲ್ಲಿ ನ್ಯೂನತೆ ಕಂಡುಬರುವುದು
೪. ಶೀ ೧೦% ರಷ್ಟು ವಿವರಿಸಲಾಗದ ಅಥವಾ ಗೊತ್ತಾಗದಂತಹ ಕಾರಣಗಳಿರುತ್ತವೆ.
ಸಾಮಾನ್ಯವಾಗಿ ದಂಪತಿಗಳು ಮಕ್ಕಳನ್ನು ಪಡೆಯಲು ಸತತವಾಗಿ ಪ್ರಯತ್ನಿಸುತ್ತಿದ್ದು, ಮೊದಲ ತಿಂಗಳಲ್ಲಿ ಗರ್ಭಧರಿಸಬಹುದು, ಶೇ ೮೦% ರಷ್ಟು ದಂತಿಗಳು ಮೊದಲ ವರ್ಷದಲ್ಲಿ ಗರ್ಭಧರಿಸಬಹುದು, ನಂತರದ ವರ್ಷಗಳಲ್ಲಿ ಶೇ ೫ರಿಂದ ೧೦% ರಷ್ಟು ದಂಪತಿಗಳು ಗರ್ಭಧರಿಸಬಹುದು, ಮತ್ತೆ ಶೇ ೧೦ರಿಂದ ೧೫ ದಂಪತಿಗಳಲ್ಲಿ ಶಾರೀರಿಕ ರಚನೆಯ (ದೇಹಪ್ರಕೃತಿಯಿಂದ) ತೊಂದರೆಯಿಂದ ಗರ್ಭಧರಿಸಲು ಸಾಧ್ಯವಿಲ್ಲದೇ ಇರಬಹುದು.
ದಂಪತಿಗಳಲ್ಲಿ ಯಾರಾದರೂ ಬಂಜೆತನಕ್ಕೆ ಕಾರಣವಾಗಲೀ ಒಳ್ಳೆಯ ದೃಷ್ಟಿಯಿಂದ, ಉತ್ತಮ ಮನೋಭಾವನೆಯಿಂದ ಒಬ್ಬರನೊಬ್ಬರು ದೂಷಿಸದೇ, ಹಿಯಾಳಿಸದೇ, ಒಬ್ಬರೊನ್ನೊಬ್ಬರು ಗೌರವಿಸಿ, ಸಮಾಧಾನ ಮಾಡುತ್ತಾ ತಜ್ಞವೈದ್ಯರಲ್ಲಿ ಪರೀಕ್ಷಿಸಿಕೊಂಡು, ಸಮಸ್ಯೆಗೆ ಕಾರಾಣ ತಿಳಿದುಕೊಂಡು ಸೂಕ್ತ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಂಡು ಬಂಜೆತನವನ್ನು ನಿವಾರಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನ ಪಡಬೇಕು.
”ಸಮಸ್ಯೆ ಯಾರಿಗಿರುವುದಿಲ್ಲ ಸಮಸ್ಯೆಗೆ ಹೆದರದೇ, ಧೈರ್ಯಗುಂದದೇ, ಸಮಾಧಾನದಿಂದಿ ಪರಿಹಾರ ಕಂಡುಕೊಳ್ಳಬೇಕು”