ಬಂಡಲ್ ಕತೆಗಳು

ಬಂಡಲ್ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಸುರೇಂದ್ರನಾಥ್
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೪೦-೦೦, ಮೊದಲ ಮುದ್ರಣ ೨೦೨೦

ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ನಾಗಮಂಡಲ, ಕಾನೂರು ಹೆಗ್ಗಡತಿ, ಕೆಂಡಸಂಪಿಗೆ ಮೊದಲಾದ ಕೆಲವು ಚಲನ ಚಿತ್ರಗಳಿಗೆ ಕತೆ/ಚಿತ್ರಕತೆ/ಸಂಭಾಷಣೆ ಬರೆದಿದ್ದಾರೆ. ಹದಿಮೂರು ವರ್ಷಗಳ ಕಾಲ ಈಟಿವಿಯಲ್ಲಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಟ್ಟು ಕತೆಗಳು, ತಾಪತ್ರಯಗಳು ಇವರ ಕಥಾ ಸಂಕಲನಗಳು. ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ರಂಗ ಶಂಕರದಲ್ಲಿ ಕಾರ್ಯಕ್ರಮದ ಉಸ್ತುವಾರಿ. ಪ್ರಸ್ತುತ ಸ್ವತಂತ್ರ ನಾಟಕಕಾರ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಂಡಲ್ ಕತೆಗಳು ಎಸ್. ಸುರೇಂದ್ರನಾಥ್ ಅವರ ಮೂರನೇ ಕಥಾ ಸಂಕಲನ. ಕಥೆಗಳನ್ನು ಲೇಖಕರು ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಬಂಡಲ್ ಕತೆಗಳು ಅಡಿಯಲ್ಲಿ ಆರು ಕಥೆಗಳಿದ್ದರೆ, ನೀನು, ಮಧ್ಯಮ ಪುರುಷ ಅಡಿಯಲ್ಲಿ ಮೂರು ಕತೆಗಳು ಹಾಗೂ ಹಾಗೇ ಸುಮ್ಮನೆ ಕತೆಗಳು ಅಡಿಯಲ್ಲಿ ಎರಡು ಕತೆಗಳಿವೆ. ಬಂಡಲ್ ಕತೆಗಳ ಅಡಿಯಲ್ಲಿ ಬರುವ ಎಲ್ಲಾ ಕತೆಗಳು ಬಂಡಲ್ ಎಂದು ಅನಿಸುವುದೇ ಇಲ್ಲ. ನಮ್ಮ ನಿಮ್ಮ ನಡುವೆ ನಡೆದ ಘಟನೆಗಳಂತೆಯೇ, ದೈನಂದಿನ ಆಗು ಹೋಗುಗಳಂತೆಯೇ ಮುಂದುವರೆಯುತ್ತಾ ಹೋಗುತ್ತದೆ. ಪ್ರತೀ ಕಥೆಯ ಕೊನೆಯಲ್ಲಿ ಕನ್ನಡದ ಪ್ರಸಿದ್ಧ ಲೇಖಕ, ಕಥೆಗಾರರೋರ್ವರ ಅನಿಸಿಕೆ ಇದೆ. ಕಥಾ ಸಂಕಲನದ ಮಟ್ಟಿಗೆ ಇದೊಂದು ಹೊಸ ಟ್ರೆಂಡ್ ಎಂದು ಹೇಳ ಬಹುದು. ಮುನ್ನುಡಿ, ಬೆನ್ನುಡಿ, ಹಿತ ನುಡಿ ಎಲ್ಲಾ ಆಯಿತು. ಈಗ ಈ ಹೊಸ ಬಗೆ ಕಥೆಗೊಂದು ನುಡಿ. ಶ್ರೀನಿವಾಸ ವೈದ್ಯ, ಕೆ.ವಿ.ತಿರುಮಲೇಶ್, ಜಯಂತ ಕಾಯ್ಕಿಣಿ, ಕಥೆಗಾರ ಜೋಗಿ, ನಾಗರಾಜ ವಸ್ತಾರೆ, ಎಂ.ಎಸ್. ಶ್ರೀರಾಮ್, ನರೇಂದ್ರ ಪೈ ಮೊದಲಾದ ಖ್ಯಾತನಾಮರೆಲ್ಲಾ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ಪ್ರತೀ ಕಥೆಯ ಕೊನೆಯಲ್ಲಿ ಅವರ ನುಡಿಗಳು ಇರುವುದರಿಂದ ಕಥೆಯ ಬಗ್ಗೆ ಅವರ ಅನಿಸಿಕೆಗಳು ಕೂಡಲೇ ತಿಳಿದು ಬರುತ್ತವೆ. ಅದರ ಜೊತೆ ಕಥೆಯನ್ನು ಆಗಷ್ಟೇ ಓದಿ ಮುಗಿಸಿದ ನಮ್ಮ ಅಭಿಪ್ರಾಯವೂ ಸಮ್ಮಿಳಿತವಾಗುತ್ತದೆ. 

ಬೆಂಗಳೂರಿನ ಛಂದ ಪುಸ್ತಕ ಪ್ರಕಾಶನದವರ ೮೧ನೇ ಪ್ರಕಾಶಿತ ಪುಸ್ತಕ ಇದು. ಮುಖಪುಟದಲ್ಲಿ ಪ್ರಾಹ್ ನ ಕಲಾವಿದೆ ಅನ್ನಾ ಕ್ರೋಮಿಯ ಪ್ರಖ್ಯಾತ ಶಿಲ್ಪಕೃತಿಯ ಚಿತ್ರವಿದೆ. ಈ ಶಿಲ್ಪ ಕೃತಿಯ ಹೆಸರು ‘ ಪಿಯೆಟಾ’ (Pieta- Coat of Peace). ಇದು ಅರೆಗತ್ತಲಿನಲ್ಲಿ ಗುಟ್ಟಾಗಿ ಅಡಗಿಕೊಂಡಂತೆ ಕುಳಿತ ಮುಖವಿರದ ವ್ಯಕ್ತಿಯಂತೆ ಕಾಣುತ್ತದೆ. ಸುಮಾರು ೧೪೦ ಪುಟಗಳಿರುವ ಈ ಕಥಾ ಸಂಗ್ರಹದ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.