ಬಂತೋ ಯುಗಾದಿ

ಬಂತೋ ಯುಗಾದಿ

ಬರಹ

ಜೀವದ ಚೈತ್ರದ ಸ್ವಾಗತ ಕೋರುತ,
ಭಾವದ ಮೈತ್ರಿಯ ಮುನ್ನುಡಿ ಬರೆಯುತ,
ಬಂತೋ ಯುಗಾದಿ,
ತಂತೋ ಮನ ನೆಮ್ಮದಿ.

ಬಾಳ್ವೆಯ ಬೇವಿಗೆ ತುಂಬುತ ಒಲವು,
ನಲ್ಮೆಯ ಹೂವಿಗೆ ತೋರುತ ಗೆಲುವು,
ಬಂತೋ ಯುಗಾದಿ,
ತಂತೋ ಹೂ-ಹಾದಿ.

ಬಂಧದ ನೇಗಿಲ ಉಳುಮೆಯ ಮಾಡುತ,
ನೊಂದಿದ ಹೆಗಲ ಒಲುಮೆಯ ಬೇಡುತ,
ಬಂತೋ ಯುಗಾದಿ,
ತಂತೋ ಜೀವ ಬುನಾಧಿ.

ಪ್ರೀತಿಯ ಬೆಳಕಿಗೆ,ತೆರೆಯುತ ಕಂಗಳ,
ಜಾತಿಯ ಮುಸುಕಿಗೆ,ತೋರುತ ಬೆಳದಿಂಗಳ,
ಬಂತೋ ಯುಗಾದಿ,
ತಂತೋ ಚೈತ್ರ ಕಣಕಣದಿ.

ಸ್ನೇಹದಿಂದ
ಗಣೇಶ್ ಪುರುಷೋತ್ತಮ