ಬಂದ್ ಒಗ್ಗಟ್ಟಿನ ಧ್ವನಿಯಾಗಲಿ
ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆಯಿದ್ದರೂ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಲುವಿನ ವಿರುದ್ಧ ಕನ್ನಡಿಗರು ‘ಬೆಂಗಳೂರು ಬಂದ್' ಯಶಸ್ವಿಯಾಗಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿರುವುದು ಸೂಕ್ತವೇ ಆಗಿದೆ. ಬಂದ್ ಸಲ್ಲದು ಎಂದು ಘನ ನ್ಯಾಯಾಲಯಗಳು ಆಗಾಗ ಹೇಳುತ್ತಲೇ ಇವೆಯಾದರೂ, ಇಂಥಾ ಅಸಹಾಯಕ ಹಾಗೂ ವಿಕೋಪದ ಸ್ಥಿತಿಯಲ್ಲಿ ಸಮಾಜದ ಒಡಲುರಿ ಹೀಗೆ ಸ್ಫೋಟವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.
೨೫೦ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಕೈಜೋಡಿಸಿದ್ದಲ್ಲದೆ, ಮಹಾನಗರದ ಬಹುತೇಕ ಜನರೂ ಮನೆಗಳಲ್ಲೇ ಬಂದಿಯಾಗಿ ಬಂದ್ ಗೆ ಬೆಂಬಲ ಸೂಚಿಸಿರುವುದು ಗಮನಾರ್ಹ. ಆದರೆ, ಕಾವೇರಿ ಹೋರಾಟದ ಬಂದ್ ವಿಚಾರವಾಗಿ ಕನ್ನಡಿಗರ ಸಾಮೂಹಿಕ ಆಕ್ರೋಶದಲ್ಲೂ ಬಣಗಳಾಗಿ ಏರ್ಪಟ್ಟಿರುವುದು ನಮ್ಮ ಒಗ್ಗಟ್ಟಿನ ಕೊರತೆಯನ್ನು ಎತ್ತಿಹಿಡಿದಂತಾಗಿದೆ.
ಬಂದ್ ಎನ್ನುವುದು ಸುಖಾಸುಮ್ಮನೆ ನಡೆಯುವ ಆಚರಣೆಯಲ್ಲ. ಹೋರಾಟಗಾರರ ಆಕ್ರೋಶದ ಜತೆಗೆ ಬಂದ್ ಗೆ ಒಳಪಡುವ ಪ್ರದೇಶದ ಪ್ರತಿಯೊಬ್ಬರ ಒಮ್ಮತವೂ ಅಲ್ಲಿ ತ್ಯಾಗವೇ ಆಗಿ ಮಾರ್ಪಟ್ಟಿರುತ್ತದೆ. ಇಡೀ ದಿನ ಆ ನಿಗದಿತ ಪ್ರದೇಶದ ಆರ್ಥಿಕ ವಹಿವಾಟು ಸ್ತಬ್ಧವಾಗಿ, ಕೋಟ್ಯಾಂತರ ರೂಪಾಯಿ ನಷ್ಟವಾಗಿರುತ್ತದೆ. ಒಪ್ಪೊತ್ತಿಗಾಗಿ ಕೂಲಿಗೆ ಹೋಗುವವರಿಂದ ಹಿಡಿದು ಕಾರ್ಮಿಕರು, ನೌಕರರು ಕಚೇರಿ-ಕಾರ್ಖಾನೆಗೆ ತೆರಳದೆ ಸೂಚಿಸಿದ ತಮ್ಮ ಅಮೂಲ್ಯ ಬೆಂಬಲ ಸಣ್ಣದೇನಲ್ಲ. ಶಾಲಾ - ಕಾಲೇಜುಗಳೂ ಬಾಗಿಲು ಮುಚ್ಚುವುದರಿಂದ ಪಠ್ಯಾದಿ ಚಟುವಟಿಕೆಗಳಿಗೂ ಹಿನ್ನಡೆಯಾಗಿರುತ್ತದೆ. ಅತ್ತಿಂದಿತ್ತ ಓಡಾಡಲಾಗದೆ ಸಾರ್ವಜನಿಕರು, ರೋಗಿಗಳು ಪರದಾಡಿರುತ್ತಾರೆ. “ಒಂದು ದಿನ ಕಳೆದರೆ ಸಾಕಪ್ಪಾ” ಎನ್ನುವ ಭಾವ ಪ್ರತಿಯೊಬ್ಬ ಶ್ರೀಸಾಮಾನ್ಯನನ್ನು ತಟ್ಟಿರುತ್ತದೆ. ಅದಾಗ್ಯೂ ಇವರೆಲ್ಲ ತಮಗೆಷ್ಟೇ ನಷ್ಟವಾದರೂ ನಾಡು - ನುಡಿಯ ವಿಚಾರದಲ್ಲಿ ಸಹಿಷ್ಣುಗಳಾಗಿಯೇ ಒಂದು ದಿನವನ್ನು ಸಮರ್ಪಿಸುತ್ತಾರೆ. ಇಂಥ ಶ್ರೀಸಾಮಾನ್ಯರ ಒಮ್ಮತಕ್ಕೆ ಗೌರವ ಸೂಚಿಸುತ್ತಲೇ ಒಂದೇ ದಿನ ಬಂದ್ ಆಯೋಜಿಸಿದ್ದಿದ್ದರೆ ಎಲ್ಲರಿಗೂ ಅನುಕೂಲವೇ ಆಗಿರುತ್ತಿತ್ತು. ಒಗ್ಗಟ್ಟಿನ ಧ್ವನಿ ಎನ್ನುವುದು ಜಗತ್ತಿನಲ್ಲಿ ಅತ್ಯಂತ ಪರಿಣಾಮಕಾರಿ ಅಸ್ತ್ರ. ಒಮ್ಮೆ ಬೆಂಗಳೂರು ಬಂದ್, ಮತ್ತೊಮ್ಮೆ ಕರ್ನಾಟಕ ಬಂದ್ ಎನ್ನುವ ಎರಡೆರಡು ಪ್ರತಿಭಟನಾ ಧ್ವನಿಗಳು ನಮ್ಮ ನಡುವಿನ ಗೆರೆಯನ್ನು ತೋರ್ಪಡಿಸಬಾರದು.
ಎಲ್ಲಕ್ಕಿಂತ ಮಿಗಿಲಾಗಿ ಬಂದ್ ಎನ್ನುವುದು ಯಾರಿಗೂ ರಾಜಕೀಯ ಲಾಭಕ್ಕೆ ಬಳಕೆಯಾಗುವ ಅಸ್ತ್ರವಾಗಬಾರದು. ಬಂದ್ ನ ಉದ್ದೇಶ ಎಲ್ಲರಿಗೂ ಒಂದೇ ಇದ್ದಾಗ ಮಾತ್ರವೇ ಜನಸಾಮಾನ್ಯರು ನೀಡಿದ ಬೆಂಬಲಕ್ಕೆ ಸಾರ್ಥಕತೆ. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಸರಕಾರ ಕೂಡ ತನ್ನ ಕಡೆಯಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತಾ ಸಿಬ್ಬಂದಿ ನಿಯೋಜಿಸಲು ಶ್ರಮಿಸಿರುತ್ತದೆ ಎಂಬುದನ್ನು ಮರೆಯಬಾರದು. ಎರಡೆರಡು ದಿನ ಬಂದ್ ಎಂದಾಗ, ಸಿಬ್ಬಂದಿಗಳ ನಿಯೋಜನೆ ಕೂಡ ಆಡಳಿತಕ್ಕೆ ಹೊರೆಯಾಗಿ, ಜನಸಾಮಾನ್ಯರ ತೆರಿಗೆ ವ್ಯರ್ಥಕ್ಕೆ ಅದು ಇನ್ನೊಂದು ದಾರಿಯಷ್ಟೇ.
ನಾಡು- ನುಡಿ ವಿಚಾರಕ್ಕೆ ಬಂದಾಗ ಬೆಂಗಳೂರು, ಕರ್ನಾಟಕ ಎಂದು ಪ್ರತ್ಯೇಕಿಸಿ ನೋಡದೆ, ಸಂಘಟನೆಗಳು ಏಕಭಾವದಿಂದ ಇಡೀ ರಾಜ್ಯವನ್ನು ನೋಡುವ ಅಗತ್ಯವಿತ್ತು. ಭವಿಷ್ಯದಲ್ಲಾದರೂ ಬಂದ್ ನಲ್ಲಿ ಅಪಸ್ವರಗಳು ಅಳಿದು, ಏಕತೆ ಮೂಡುವಂತಾಗಲಿ. ನಾಡು-ನುಡಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೆಜ್ಜೆ ಇಡುವಂತಾಗಲಿ. ಮೇಲಿಂದ ಮೇಲೆ ಬಂದ್ ಗಳಿಂದಾಗಿ ಅನಗತ್ಯ ನಷ್ಟಗಳು ತಪ್ಪುವಂತಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೭-೦೯-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ