ಬಂಧನದ ಬದುಕು

ಬಂಧನದ ಬದುಕು

ಕವನ

ಗೂಡಿನೊಳಗಡೆ ಬಂಧಿ

ಬಾಡಿ ಹೋಗಿಹ ಮನದಿ

ಕೂಡಿ ಬಾಳುವ ಕನಸು ನುಚ್ಚುನೂರು

ಕಾಡಿನೊಳಗಿನ ಬದುಕು

ಜೋಡಿ ಹಕ್ಕಿಯ ನೆನಪು

ನಾಡಿ ಮಿಡಿತದೆ ತುಂಬಿ ಹರಿಯುತಿಹುದು||

 

ಆರು ವರ್ಷದ ಕೆಳಗೆ

ಸೇರಿ ಮರಿಗಳ ಜೊತೆಗೆ

ನೂರು ಕನಸನು ಹೊತ್ತು ಕಾಡಲಿದ್ದೆ

ಸೂರು ಮರಗಳ ಪೊಟರೆ

ಕೀರು ಹಣ್ಣಿನ ರಸವೆ

ದೂರು ಕೇಳುವರಾರು ಬಂಧಿಯಾದೆ||

 

ಬಂದು ನೋಡಿದ ಮನುಜ

ಚಂದಕಾಸೆಯ ಪಟ್ಟ

ತಂದು ನನ್ನನು ತನ್ನ ಗೂಡಲಿಟ್ಟ

ಬಂಧಿಯಾಗಿಹ ನನ್ನ

ಚಂದ ನೋಡುವ ಮುನ್ನ

ನಿಂದು ಯೋಚಿಸಲಾರ ನನ್ನ ಕಷ್ಟ||

 

ಮಂದೆಯಗಲಿದೆನಲ್ಲ

ಬಂಧು ಬಾಂಧವರಿಲ್ಲ

ನೊಂದ ಮನಸನು ನೀನು ಬಲ್ಲೆಯೇನು

ಸಂದ ಬದುಕಿನ ನೆನಪು

ತಂದ ವೇದನೆ ನೂರು

ಕೊಂದು ಬಿಡು ಬದುಕಿನ್ನು ಫಲವದೇನು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್