ಬಂಧುಗಳನ್ನು ಬನ್ನಿ ಎಂದು ಕರೆಯಬೇಕೆ ?

ಬಂಧುಗಳನ್ನು ಬನ್ನಿ ಎಂದು ಕರೆಯಬೇಕೆ ?

ಬನ್ನಿ ಎಂದು ಕರೆಸಿಕೊಂಡ ನಂತರವೇ ಬರುತ್ತೇನೆ ಎನ್ನುವವರು ಬಂಧುಗಳು ಹೇಗೆ ಆಗುತ್ತಾರೆ? ಹಾಗೆ ಕರೆಸಿಕೊಳ್ಳುವುದರ, ಬರುವುದರ ಬಗ್ಗೆಯೇ ಇರುವ ನಿಜಜೀವನದ ಕುತೂಹಲಕಾರಿ ಪ್ರಸಂಗ ಇಲ್ಲಿದೆ.

ಸ್ವಾಮಿನಾರಾಯಣ ಪಂಥದ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವರಿಂದ ನಿರ್ಮಿಸಲ್ಪಟ್ಟ ನವದೆಹಲಿ ಮತ್ತು ಅಹಮದಾಬಾದಿನ ಅದ್ಭುತ ದೇವಾಲಯಗಳಾದ ‘ಅಕ್ಷರಧಾಮ’ಗಳನ್ನು ನೋಡಿ ಅಚ್ಚರಿಗೊಂಡಿದ್ದೇವೆ! ಒಮ್ಮೆ ಆ ಪಂಥದ ಮುಖ್ಯ ಆಚಾರ್ಯರಾದ ‘ಪ್ರಮುಖ್ ಸ್ವಾಮಿ ಮಹಾರಾಜ್’ (1921-2016) ಅವರ ಬಳಿ ಒಬ್ಬ ಯುವಕ ಬಂದರು. ನಮಸ್ಕರಿಸಿದರು. ಸ್ವಾಮೀಜಿಯವರು ಅವರ ಯೋಗ ಕ್ಷೇಮ ವಿಚಾರಿಸಿದರು. ಆನಂತರ ‘ನೀವು ‘ಅಕ್ಷರಧಾಮ’ಕ್ಕೆ ಬರುತ್ತಿರುತ್ತೀರಾ? ಸತ್ಸಂಗದಲ್ಲಿ ಭಾಗವಹಿಸುತ್ತೀರ?’ ಎಂದು ಪ್ರಶ್ನಿಸಿದರು. ಆ ಯುವಕ ಬಿಗುಮಾನದಿಂದ ‘ನಾನು ಒಂದೆರಡು ಸಾರಿ ಅಕ್ಷರಧಾಮಕ್ಕೂ, ಸತ್ಸಂಗಕ್ಕೂ ಬಂದೆ. ಆದರೆ ನನ್ನನ್ನು ಯಾರೂ ಒಳಗೆ ಬರಹೇಳಲಿಲ್ಲ. ಗುರುತಿಸಲಿಲ್ಲ. ಗೌರವಿಸಲಿಲ್ಲ. ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು. ಇಲ್ಲಿಗೆ ಬರುವುದನ್ನು ಬಿಟ್ಟುಬಿಟ್ಟೆ’ ಎಂದು ಉತ್ತರಿಸಿದರು. 

ಪ್ರಮುಖ ಸ್ವಾಮೀಜಿಯವರು ಗಟ್ಟಿಯಾಗಿ ನಕ್ಕು ‘ಹೌದು! ಕೆಲವೊಮ್ಮೆ ಹೀಗಾಗುತ್ತದೆ. ನಿಮ್ಮದೇನೂ ತಪ್ಪಿಲ್ಲ. ಇರಲಿ ಬಿಡಿ. ಅದರ ಬಗ್ಗೆ ಆನಂತರ ಮಾತನಾಡೋಣ. ಈಗ ನಿಮ್ಮ ಬಗ್ಗೆ ಮಾತನಾಡೋಣ. ನಿಮ್ಮ ಮನೆ ಇರುವುದೆಲ್ಲಿ?’ ಎಂದು ಕೇಳಿದರು. ಯುವಕ ಹೆಮ್ಮೆಯಿಂದ ದೆಹಲಿಯ ಅತ್ಯಂತ ಶ್ರೀಮಂತರಿರುವ ಪ್ರತಿಷ್ಠಿತ ಬಡಾವಣೆಯಾದ ಗಾಲ್ಫ್ ಲಿಂಕ್ಸ್ ‌ನಲ್ಲಿ ನಮ್ಮ ಮನೆ ಇದೆ ಎಂದು ಹೇಳಿದರು.

ಆಶ್ಚರ್ಯಗೊಂಡವರಂತೆ ಕಂಡ ಸ್ವಾಮೀಜಿಯವರು ‘ಇದೆಂಥ ಆಕಸ್ಮಿಕ! ಭಾನುವಾರ ಮುಂಜಾನೆ ಹತ್ತು ಗಂಟೆಗೆ ರಾಷ್ಟ್ರಪತಿಯವರು ನಿಮ್ಮ ಬಡಾವಣೆಗೆ ಬರುವವರಿದ್ದಾರೆ. ಇದು ನಿಮಗೆ ಗೊತ್ತೇ?’ ಎಂದು ಕೇಳಿದರು. ಆ ಯುವಕ ಉತ್ಸಾಹದಿಂದ ‘ಹೌದಾ! ಎಂಥ ಸಂತೋಷದ ಸುದ್ದಿ! ಹಾಗಿದ್ದರೆ ನಾನೊಂದು ದೊಡ್ಡ ಪುಷ್ಪಗುಚ್ಚದೊಂದಿಗೆ ಅವರನ್ನು ಸ್ವಾಗತಿಸಿ ಉಪಚರಿಸುತ್ತೇನೆ’ ಎಂದರು. ಸ್ವಾಮೀಜಿಯವರು ‘ಅಧ್ಯಕ್ಷರ ಪರಿಚಯ ನಿಮಗಿದೆಯೇ? ಅವರು ನಿಮ್ಮನ್ನು ಗುರುತಿಸುತ್ತಾರೆಯೇ? ಗೌರವಿಸುತ್ತಾರೆಯೇ? ಆಕಸ್ಮಿಕವಾಗಿ ಅವರು ಪುಷ್ಪಗುಚ್ಚವನ್ನು ಸ್ವೀಕರಿಸದಿದ್ದರೆ ಏನು ಮಾಡುತ್ತೀರಿ? ನಿಮಗೆ ಅಗೌರವವಾಗುವುದಿಲ್ಲವೇ? ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟಾಗುವುದಿಲ್ಲವೇ?’ ಎಂದು ಕೇಳಿದರು. ಯುವಕ ಉತ್ಸಾಹದಿಂದಲೇ ‘ಅವರು ನನ್ನನ್ನು ಗುರುತು ಹಿಡಿಯದಿದ್ದರೇನು? ಗೌರವಿಸದಿದ್ದರೇನು? ಖಂಡಿತ ನನ್ನ ಸ್ವಾಭಿಮಾನಕ್ಕೆ ಪೆಟ್ಟಾಗುವುದಿಲ್ಲ. ದೇಶದ ಪ್ರಮುಖರನ್ನು ಗೌರವಿಸುವುದು ನನ್ನ ಕರ್ತವ್ಯ’ ಎಂದು ಹೇಳಿದರು.

ಸ್ವಾಮೀಜಿಯವರು ಮೆಲುದನಿಯಲ್ಲಿ ‘ಜಗತ್ತಿನ ಪುಟ್ಟದೊಂದು ಭಾಗವಾದ ದೇಶದ ಪ್ರಮುಖರು ನಿಮ್ಮ ರಸ್ತೆಗೆ ಬರುವುದಾದರೆ, ಅವರು ನಿಮ್ಮ ಗುರುತು ಹಿಡಿಯದಿದ್ದರೂ, ಗೌರವಿಸದಿದ್ದರೂ, ಅವರೊಂದಿಗೆ ಇರುವುದು ನಿಮ್ಮ ಕರ್ತವ್ಯವೆಂದು ಭಾವಿಸುತ್ತೀರಿ. ಹಾಗಿದ್ದರೆ ಇಡೀ ಜಗತ್ತಿನ ಒಡೆಯನಾದ ದೇವರ ಮಂದಿರಕ್ಕೆ ಬಂದಾಗ ಅಲ್ಲಿರುವವರು ನಿಮ್ಮನ್ನು ಗುರುತಿಸಲಿಲ್ಲ, ಗೌರವ ತೋರಿಸಲಿಲ್ಲ, ಸ್ವಾಗತಿಸಲಿಲ್ಲ ಎಂದು ಭಾವಿಸುವುದು ಸರಿಯೇ? ಸ್ವಾಗತಿಸಲಿ, ಬಿಡಲಿ, ಅಲ್ಲಿಗೆ ಹೋಗುವುದು ನಿಮ್ಮ ಕರ್ತವ್ಯವಲ್ಲವೇ?’ ಎಂದು ಪ್ರಶ್ನಿಸಿದರು. 

ಸ್ವಾಮೀಜಿಯವರ ಮಾತಿನಿಂದ ಯುವಕ ಮೂಕವಿಸ್ಮಿತರಾದರು. ಕೊಂಚ ಹೊತ್ತು ಸುಮ್ಮನಿದ್ದರು. ಆನಂತರ ‘ಸ್ವಾಮೀಜಿ! ನನ್ನ ತಪ್ಪಿನ ಅರಿವು ನನಗಾಯಿತು. ಇನ್ನು ಮುಂದೆ ಇಂಥ ತಪ್ಪಾಗುವುದಿಲ್ಲ. ಅಕ್ಷರಧಾಮದಲ್ಲಿ ಸತ್ಸಂಗದಲ್ಲಿ ಗುರುತಿಸದಿರಲಿ, ಗೌರವಿಸದಿರಲಿ, ನನ್ನ ಕರ್ತವ್ಯವೆಂದು ಭಾವಿಸಿ ಬರುತ್ತೇನೆ’ ಎಂದರು.

ಸ್ವಾಮೀಜಿಯವರು ಮತ್ತೊಮ್ಮೆ ಗಟ್ಟಿಯಾಗಿ ನಕ್ಕು ‘ರಾಷ್ಟ್ರಪತಿಗಳು ಬರುವ ವಿಷಯವನ್ನು ನಾನು ತಮಾಷೆಗಾಗಿ ಹೇಳಿದೆ ಅಷ್ಟೆ! ಅದು ನಿಜವಲ್ಲ! ಆದರೆ ದೇವಮಂದಿರಕ್ಕೆ ಕರ್ತವ್ಯವೆಂದು ಭಾವಿಸಿ ಬನ್ನಿ. ಕಾಟಾಚಾರಕ್ಕೆ ಬರಬೇಡಿ. ಪ್ರೀತಿಯಿಂದ ಬನ್ನಿ! ಏಕೆಂದರೆ ಭಗವಂತನು ದೀನಬಂಧು ಅಲ್ಲವೇ? ಆತನಿಗೂ ನಮಗೂ ಬಂಧುತ್ವ ಇದೆಯಲ್ಲವೇ?’ ಎಂದು ಹೇಳಿ ಆತನನ್ನು ಆಶೀರ್ವದಿಸಿ ಬೀಳ್ಕೊಟ್ಟರು. ಆನಂತರ ಆ ಯುವಕ ಅಕ್ಷರಧಾಮದ, ಸತ್ಸಂಗದ ಸಕ್ರಿಯ ಸ್ವಯಂಸೇವಕರಾದರಂತೆ! ಭಗವಂತ ಮತ್ತು ನಾವು ಬಂಧುಗಳಾದ ಮೇಲೆ ನಮ್ಮನ್ನು ಬನ್ನಿ ಎಂದು ಕರೆಯಬೇಕೆ?*

(ಪುಸ್ತಕವೊಂದರಲ್ಲಿಯ ಮಾಹಿತಿ ಆಧಾರ)

-ಪ್ರಭಾಕರ ಅಡಿಗ, ಉಡುಪಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ