ಬಂಪರ್ ಅಲಸಂಡೆ ಬೆಳೆ: ಯುವ ಕೃಷಿಕರಿಬ್ಬರ ಸಾಧನೆ

ಬಂಪರ್ ಅಲಸಂಡೆ ಬೆಳೆ: ಯುವ ಕೃಷಿಕರಿಬ್ಬರ ಸಾಧನೆ

ಕೇರಳದ ವಯನಾಡಿನ ಮೀನನ್‍ಗಾಡಿ ಪಂಚಾಯತಿನ ಮೈಲಂಬಾಡಿ ಗ್ರಾಮದ ಬಿನು ಮತ್ತು ಬೆನ್ನಿ ಬಾಲ್ಯಕಾಲದ ಗೆಳೆಯರು. ಇಬ್ಬರೂ ಕೃಷಿ ಕುಟುಂಬದವರು.
ವಿದ್ಯಾಭ್ಯಾಸ ಮುಗಿಸಿದ ನಂತರ, ಅವರಿಬ್ಬರೂ ಕೃಷಿ ಬದುಕಿಗೆ ಹೆಜ್ಜೆಯಿಡಲಿಲ್ಲ. ಬದಲಾಗಿ, ಬಿನು ಚಿನ್ನದೊಡವೆ ಮಳಿಗೆಯಲ್ಲಿ ದುಡಿದರು. ಬೆನ್ನಿ ಸ್ವಂತ ಟ್ಯಾಕ್ಸಿ ಸೇವೆ ಶುರು ಮಾಡಿದರು. ವರುಷಗಳು ಉರುಳಿದವು. ಇಬ್ಬರಿಗೂ ನೆಮ್ಮದಿಯಿಲ್ಲ.
“ದಿನಕ್ಕೆ ಹನ್ನೆರಡು ಗಂಟೆಗಿಂತ ಜಾಸ್ತಿ ದುಡಿದರೂ, ರಜೆ ಪಡೆಯುವುದೇ ಅಸಾಧ್ಯವಾಗಿತ್ತು. ಏಕತಾನದ ಬದುಕಿನಿಂದ ಬೇಸತ್ತಿದ್ದೆ. ನನ್ನ ಹಳ್ಳಿಗೆ ಹಿಂತಿರುಗಬೇಕೆಂದು ಯೋಚಿಸುತ್ತಿದ್ದೆ” ಎಂದು ನೆನಪು ಮಾಡಿಕೊಳ್ಳುತ್ತಾರೆ ಬಿನು. ಕೊನೆಗೂ ಉದ್ಯೋಗ ತೊರೆದು ಹಳ್ಳಿಗೆ ಮರಳಿದ ಬಿನು ತನ್ನ ಗೆಳೆಯ ಬೆನ್ನಿ ಕೂಡ ಅದೇ ಸಮಸ್ಯೆ ಎದುರಿಸುತ್ತಿದ್ದಾನೆಂದು ತಿಳಿದುಕೊಂಡರು.
“ಕೃಷಿ ಮಾಡೋಣವೇ ಎಂದು ಕೇಳಿದಾಕ್ಷಣ ಬೆನ್ನಿ ಒಪ್ಪಿಕೊಂಡ. ನಮ್ಮ ತಂದೆತಾಯಿಯೇ ನಮಗೆ ಪ್ರೇರಣೆ. ಕೃಷಿ ನಮ್ಮ ರಕ್ತದಲ್ಲಿದೆ ಎಂದು ಸ್ವಲ್ಪ ಸಮಯದಲ್ಲೇ ಗೊತ್ತಾಯಿತು” ಎನ್ನುತ್ತಾರೆ ಬಿನು.
ತಮ್ಮ ತಂದೆತಾಯಿ ಬೆಳೆಸದಿದ್ದ ಬೆಳೆ ಬೆಳೆಯಬೇಕೆಂಬುದು ಮೂವತ್ತರ ಹರೆಯದ ಈ ಯುವಕರ ಕನಸು. ಉತ್ತಮ ಆದಾಯ ಗಳಿಕೆಗಾಗಿ ಅದನ್ನು ವಿಸ್ತಾರವಾದ ಜಮೀನಿನಲ್ಲಿ ಬೆಳೆಯಬೇಕೆಂಬುದು ಅವರ ಯೋಜನೆ. ಅಂತಿಮವಾಗಿ ಅಲಸಂಡೆ ಬೆಳೆಯಬೇಕೆಂಬ ನಿರ್ಧಾರ ಅವರದು.
ಮನೆಯ ಹತ್ತಿರವೇ ೨.೫ ಎಕ್ರೆ ಜಮೀನು ಅವರಿಗೆ ಲೀಸಿಗೆ ಸಿಕ್ಕಿತು. ಆದರೆ, ಕೆಲವು ವರುಷ ಆ ಜಮೀನಿನಲ್ಲಿ ಕೃಷಿ ಮಾಡಿರಲಿಲ್ಲ. ಆದ್ದರಿಂದ ಅದನ್ನು ಕೃಷಿಗೆ ಅಣಿಗೊಳಿಸಲು ಅವರಿಗೆ ಕೆಲವು ತಿಂಗಳು ತಗಲಿತು.
“ನಮ್ಮ ಕುಟುಂಬದವರಿಂದ ಮತ್ತು ಗೆಳೆಯರಿಂದ ಸಲಹೆ ಪಡೆದೆವು – ಆ ಜಮೀನನ್ನು ಕೃಷಿಯೋಗ್ಯ ಮಾಡಲಿಕ್ಕಾಗಿ. ಮಣ್ಣು ಪರೀಕ್ಷೆ ಮಾಡಿ, ಅದರ ಪಿಎಚ್ ಎಷ್ಟೆಂದು ತಿಳಿದೆವು. ನಂತರ, ಕೃಷಿ ಶುರು ಮಾಡುವ ಮುಂಚೆ ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸಿ, ಮಣ್ಣಿನ ಗುಣಮಟ್ಟ ಸುಧಾರಿಸಿದೆವು. ಅಷ್ಟೆಲ್ಲ ಮಾಡಿದ ನಂತರ, ೨೦೧೮ರ ನವಂಬರ್ ಕೊನೆಯಲ್ಲಿ ಕೃಷಿಗೆ ಶುರುವಿಟ್ಟೆವು” ಎಂದು ವಿವರಿಸುತ್ತಾರೆ ಬಿನು.
ಅಲಸಂಡೆ ೧೨೦ ದಿನಗಳೊಳಗೆ ಕೊಯ್ಲಿಗೆ ಬರುವ ಬೆಳೆ. ೧೧ ಫೆಬ್ರವರಿ ೨೦೧೯ರಂದು ಬಿನು ಮತ್ತು ಬೆನ್ನಿ ತಮ್ಮ ಮೊದಲ ಅಲಸಂಡೆ ಫಸಲು ಕೊಯ್ದು ತೂಗಿದಾಗ ೩೦೦ ಕಿಲೋಗ್ರಾಮ್ ತೂಕ! “ನಾವು ಹೆಚ್ಚು ಫಸಲು ನಿರೀಕ್ಷಿಸಿದ್ದೆವು. ಅದಾದ ನಂತರ ಪರಿಸ್ಥಿತಿ ಸುಧಾರಿಸಿತು. ಪ್ರತಿ ಎರಡು ದಿನಕ್ಕೊಮ್ಮೆ ೧,೦೦೦ ಕಿಲೋ ಅಲಸಂಡೆ ಕೊಯ್ಯ ತೊಡಗಿದೆವು. ಎಲ್ಲವೂ ನಾವೆಣಿಸಿದಂತೆ ಆಗದಿದ್ದರೂ, ನಾವು ಎದೆಗುಂದಲಿಲ್ಲ. ಆದ್ದರಿಂದಲೇ, ಕ್ರಮೇಣ ನಾವು ಅಂದಾಜು ಮಾಡಿದಷ್ಟು ಫಸಲು ಪಡೆಯಲು ಸಾಧ್ಯವಾಯಿತು ಎನಿಸುತ್ತದೆ” ಎಂದು ತಿಳಿಸುತ್ತಾರೆ ಬಿನು. ತಮ್ಮ ಅಲಸಂಡೆ ಕೃಷಿ ಸಾಹಸಕ್ಕೆ ಮೀನನ್‍ಗಾಡಿ ಕೃಷಿ ಭವನದ ಸಹಾಯಕ ಕೃಷಿ ಅಧಿಕಾರಿ ಟಿ.ವಿ. ಸಜೀಶ್ ಅವರು ನೀಡಿದ ಮಾರ್ಗದರ್ಶನ ಮತ್ತು ಬೆಂಬಲವನ್ನು ನೆನೆಯುತ್ತಾರೆ ಬಿನು.
ಆರಂಭದಲ್ಲಿ ತಾವು ಬೆಳೆಸಿದ ಅಲಸಂಡೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ತಾವೇ ಮಾರಿದರು – ಕಿಲೋಕ್ಕೆ ರೂ.೨೫ ಬೆಲೆಗೆ. ಈಗ ರಖಂ ವ್ಯಾಪಾರಿಗಳು ಇವರ ಜಮೀನಿಗೆ ಬಂದು ಫಸಲನ್ನು ಒಯ್ಯುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ ಮಾರುಕಟ್ಟೆ ಬೆಲೆ ಅವಲಂಬಿಸಿ ಇಲ್ಲಿನ ಮಾರುಕಟ್ಟೆಯಲ್ಲಿ ಅಲಸಂಡೆ ಬೆಲೆ ನಿರ್ಧಾರವಾಗುತ್ತದೆ ಎನ್ನುತ್ತಾರೆ ಬಿನು. ಮೊದಲ ಎರಡು ವಾರಗಳ ನಂತರ, ತಮ್ಮ ಜಮೀನಿನಿಂದ ಅಲಸಂಡೆಯ ಬಂಪರ್ ಫಸಲು ಸಿಗತೊಡಗಿತು. ಆಗ ಕಿಲೋಕ್ಕೆ ರೂ.೪೦ ದರದಲ್ಲಿ ಅಲಸಂಡೆ ಮಾರತೊಡಗಿದೆವು ಎಂದು ಅವರು ತಿಳಿಸುತ್ತಾರೆ.
“ಬದುಕಿನಲ್ಲಿ ಇಂತಹ ನಿರ್ಧಾರಗಳಲ್ಲಿ ರಿಸ್ಕ್ ಇಲ್ಲವೆಂದಲ್ಲ. ಆದರೆ ನಮ್ಮ ನಿರ್ಧಾರದ ಬಗ್ಗೆ ನಮಗೇ ಗಟ್ಟಿ ನಂಬಿಕೆಯಿರಬೇಕು. ಕೆಲಸ ಆರಂಭಿಸಿದ ನಂತರ ಅರ್ಧದಲ್ಲಿ ಬಿಡಬಾರದು. ಜಮೀನಿನಲ್ಲಿ ಪ್ರತಿಯೊಂದು ಕೆಲಸವನ್ನೂ ಬೆನ್ನಿ ಒಂದಿಂಚೂ ತಪ್ಪದಂತೆ ಯೋಜಿಸುತ್ತಿದ್ದರು. ಉದಾಹರಣೆಗೆ, ಇವತ್ತು ಗೊಬ್ಬರ ಹಾಕುವ ಬದಲಾಗಿ ನಾಳೆ ಹಾಕೋಣ ಎಂದರೆ ಬೆನ್ನಿ ಕೇಳುತ್ತಿರಲಿಲ್ಲ; ಆಯಾ ದಿನವೇ ಗೊಬ್ಬರ ಹಾಕುತ್ತಿದ್ದರು. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡುವುದು ಕೃಷಿಯಲ್ಲಿ ಬಹಳ ಮುಖ್ಯ” ಎಂದು ವಿವರಿಸುತ್ತಾರೆ ಬಿನು.
ತಮ್ಮ ಸ್ವ-ಉದ್ಯೋಗ ಹಾಗೂ ವೇತನದ ಉದ್ಯೋಗ ತೊರೆದು ಬಂದು ಕೃಷಿಯಲ್ಲಿ ತೊಡಗಿದ್ದಕ್ಕೆ ಬಿನು ಮತ್ತು ಬೆನ್ನಿ – ಇಬ್ಬರಿಗೂ ಸಂತೋಷವಿದೆ ಹೊರತು ಬೇಸರವಿಲ್ಲ. ಯಾಕೆಂದರೆ ಈಗ ಅವರು ಮುಂಚಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಅದಲ್ಲದೆ, ಈಗ ಆಗಿನಂತೆ ಒತ್ತಡಗಳಿಲ್ಲ ಹಾಗೂ ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿದೆ.
ಬಿನು ಮತ್ತು ಬೆನ್ನಿ ಈಗ ಅಲಸಂಡೆ ಕೃಷಿಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದಾರೆ. ಭವಿಷ್ಯದಲ್ಲಿ ಇತರ ಬೆಳೆಗಳನ್ನೂ ಬೆಳೆಯಬೇಕೆಂಬುದು ಅವರ ಆಶೆ. ಅದೇನಿದ್ದರೂ, ಪೂರ್ವಸಿದ್ಧತೆ ಹಾಗೂ ಕಠಿಣ ಶ್ರಮದಿಂದ ಕೃಷಿಯಲ್ಲಿ ಯಶಸ್ಸು ಸಾಧಿಸಬಹುದೆಂದು ಈ ಇಬ್ಬರು ಯುವಕೃಷಿಕರು ತೋರಿಸಿಕೊಟ್ಟಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎನ್ನುವವರಿಗೆ ಸೂಕ್ತ ಮಾದರಿಯೊಂದನ್ನು ತೆರೆದಿಟ್ಟಿದ್ದಾರೆ, ಅಲ್ಲವೇ?
ಮಾಹಿತಿ ಮತ್ತು ಫೋಟೋ ಕೃಪೆ: ದ ಬೆಟರ್ ಇಂಡಿಯಾ ವೆಬ್-ಸೈಟ್