ಬಜೆ

ಬಜೆ

ಪುಸ್ತಕದ ಲೇಖಕ/ಕವಿಯ ಹೆಸರು
ಮುನಿಯಾಲ್ ಗಣೇಶ್ ಶೆಣೈ
ಪ್ರಕಾಶಕರು
ನಾಲಂದಾ ಸಾಹಿತ್ಯ, ಖಾರ್ವಿಕೇರಿ ರಸ್ತೆ, ಕುಂದಾಪುರ -೫೭೬೨೦೧
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೧೦

ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೧ನೇ ಪುಸ್ತಕವೇ ಬಜೆ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ. 

ಬಜೆ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. “ಪುಟ್ಟ ಮಕ್ಕಳ ನಾಲಿಗೆಗೆ ತೇಯ್ದ ಬಜೆಯನ್ನು ಲೇಪಿಸುವ ಸಂಪ್ರದಾಯ ನಮ್ಮಲ್ಲಿ ಇದೆ. ಇದರಿಂದ ಮಕ್ಕಳ ಮಾತನಾಡುವ ಶಕ್ತಿ ಮತ್ತು ಬುದ್ಧಿ ಬೆಳವಣಿಗೆಗೆ ನೆರವಾಗುತ್ತದೆಂಬ ನಂಬಿಕೆ ಇದೆ. ಆಯುರ್ವೇದದ ಅನೇಕ ಔಷಧಿಗಳಲ್ಲಿ ಬಳಕೆಯಾಗುವ ಬಜೆ ಇಂದು ಒಳ್ಳೆಯ ಬೇಡಿಕೆಯಿರುವ ಸಸ್ಯವಾಗಿದೆ.” ಎನ್ನುವುದು ಬೆನ್ನುಡಿಯಲ್ಲಿ ಕಂಡ ಬರಹ.

ಲೇಖಕರಾದ ಮುನಿಯಾಲ್ ಗಣೇಶ್ ಶೆಣೈ ಅವರು ‘ಸಸ್ಯ ಸಂಪದ' ಪರಿಕಲ್ಪನೆಯ ಬಗ್ಗೆ ಹೇಳುವುದು ಹೀಗೆ..." ಕಳೆದ ಮೂರು ದಶಕಗಳಿಂದ ನಾನು ಗಿಡಮರಗಳ ಕುರಿತು ಆಸಕ್ತಿ ತಾಳಿದ್ದೇನೆ. ನಮ್ಮ ಸುತ್ತಲೂ ಇರುವ ಸಾವಿರಾರು ಬಗೆಯ ಗಿಡಮರ ಬಳ್ಳಿಗಳು ಒಂದೊಂದು ಹೊಸ ಜಗತ್ತನ್ನು ತೆರೆದಿಟ್ಟಿವೆ. ನಮ್ಮ ದೇಶದ ಒಂದೊಂದು ಪ್ರದೇಶದಲ್ಲೂ ನೂರಾರು ವರ್ಷಗಳಿಂದ ಬೆಳೆದು ಬಂದಿರುವ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಹಲವಾರು ಗಿಡಗಳನ್ನು ಬಳಸುತ್ತ ಬಂದಿದ್ದಾರೆ. ಈಗಲೂ ಆಧುನಿಕ ವೈದ್ಯಕೀಯ ಭರಾಟೆಯ ನಡುವೆಯೂ ಹಳ್ಳಿ ಮದ್ದುಗಳು ಅಪಾರ ಜನಪ್ರಿಯತೆಯನ್ನು ಗಳಿಸಿರಲು ಗಿಡಮರಗಳ ಕೊಡುಗೆ ಅನನ್ಯವಾದುದು.

ಒಂದೊಂದು ಗಿಡವೂ ಅಪಾರ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಡುತ್ತವೆ. ಈ ಸಸ್ಯಗಳ ಕುರಿತು ಇರುವ ಸಸ್ಯ ವೈಜ್ಞಾನಿಕ ಮಾಹಿತಿ, ಅವುಗಳ ಕೃಷಿ ವಿಧಾನ, ಆರ್ಥಿಕವಾಗಿ ಅವುಗಳ ಮಹತ್ವ, ಔಷಧವಾಗಿ ಅವುಗಳ ಬಳಕೆ, ಆಯುರ್ವೇದದಲ್ಲಿ ಇಂತಹ ಗಿಡಗಳ ಮಹತ್ವ, ಆಧುನಿಕ ಸಂಶೋಧಕರ ದೃಷ್ಟಿಯಲ್ಲಿ ಈ ಸಸ್ಯಗಳ ಪಾತ್ರ - ಇಂತಹ ಸಂಗತಿಗಳ ಬಗೆಗೆ ಅಧ್ಯಯನವನ್ನು ಮಾಡುತ್ತ ಬಂದಿರುವ ನಾನು ಇವನ್ನೆಲ್ಲ ಪುಸ್ತಕಗಳ ರೂಪದಲ್ಲಿ ನಿಮ್ಮ ಕೈಗಿಡುವ ಪ್ರಯತ್ನ ಮಾಡುತ್ತಿದ್ದೇನೆ.”

ಬಜೆ ಪುಸ್ತಕದ ಪ್ರಸ್ತಾವನೆಯಲ್ಲಿ ಲೇಖಕರು “ ಮಹಿಳೆಯ ಆರೋಗ್ಯ, ಗರ್ಭಿಣಿಯರ ಆರೋಗ್ಯ, ಬಾಣಂತಿಯರ ಆರೋಗ್ಯ, ಹುಟ್ಟಿದ ಮಗುವಿನ ಆರೋಗ್ಯ -ಇಲ್ಲೆಲ್ಲ ಬಳಕೆಯಾಗುತ್ತಿದ್ದುದು ನಮ್ಮದೇ ಗಿಡಗಳು. ಹುಟ್ಟಿದ ಮಗುವಿನ ನಾಲಗೆಗೆ ಹಚ್ಚಿದ ಬಜೆಯಿಂದ ಮಗುವಿಗೆ ಎಷ್ಟೆಲ್ಲ ಪ್ರಯೋಜನವಾಗುತ್ತಿತ್ತು ಎಂಬ ಬಗೆಗೆ ಆಧುನಿಕ ವಿಜ್ಞಾನವೇ ಬೆರಗುಪಟ್ಟು ಸಮ್ಮತಿ ನೀಡುತ್ತಿದೆ. ಬುದ್ಧಿ ಶಕ್ತಿ, ಮಾತುಗಾರಿಕೆ - ಇಂತಹವಕ್ಕು ನಮ್ಮಲ್ಲಿ ಗಿಡಮೂಲಿಕೆಗಳು ಬಳಕೆಯಾಗುತ್ತಿದ್ದವು ಎನ್ನುವುದಕ್ಕೆ ಬಜೆ ಒಂದ ನಿದರ್ಶನ.

ಆಯುರ್ವೇದದ ಅನೇಕ ಔಷಧಗಳ ತಯಾರಿಕೆಯಲ್ಲಿ ಬಜೆ ಬಳಕೆಯಾಗುತ್ತಿದೆ. ಹೊಸ ಯುಗದಲ್ಲಿ ಹೊಸ ಹೊಸ ಕಾಯಿಲೆಗಳು ತಲೆದೋರುತ್ತಿದ್ದರೂ ಆಯುರ್ವೇದವು ಒಂದು ಪ್ರಭಾವಶಾಲಿ ಆರೋಗ್ಯ ವಿಜ್ಞಾನವಾಗಿ ಸದೃಢವಾಗಿ ನಿಂತಿದೆ. ಆಯುರ್ವೇದದ ಔಷಧಗಳು ಸಹ ಸಾವಿರಾರು ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ. ಈ ಹಿನ್ನಲೆಯಲ್ಲಿ ಬಜೆಯಂತಹ ಔಷಧೀಯ ಸಸ್ಯಗಳ ಬಗೆಗೆ ಇಡಿಯ ಜಗತ್ತೇ ಹೊಸ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಉಚಿತವೇ ಆಗಿದೆ.” ಎಂದಿದ್ದಾರೆ.

ಈ ಕೃತಿಯಲ್ಲಿ ಲೇಖಕರು ಇತಿಹಾಸದ ಪುಟಗಳಲ್ಲಿ ಬಜೆ, ಸಸ್ಯ ಪರಿಚಯ, ಬಜೆಯ ಕೃಷಿ, ಆಯುರ್ವೇದದಲ್ಲಿ ಬಜೆ, ಮನೆ ಔಷಧಿಯಾಗಿ ಬಜೆ, ಸಂಶೋಧನೆಯಲ್ಲಿ ಬಜೆ ಮೊದಲಾದ ವಿವರಗಳನ್ನು ನೀಡಿದ್ದಾರೆ. ಪುಸ್ತಕದಲ್ಲಿ ಬಜೆ ಕುರಿತಾದ ಸೂಕ್ತ ಚಿತ್ರಗಳನ್ನೂ ಮುದ್ರಿಸಿದ್ದಾರೆ. ನೂರು ಪುಟಗಳ ಈ ‘ಬಜೆ' ಎನ್ನುವ ಕೃತಿ ಮಾಹಿತಿಪೂರ್ಣವೂ, ಆರೋಗ್ಯ ಸಂಬಂಧಿ ಕೃತಿಯಾಗಿಯೂ ಓದಲು ಅನುಕೂಲ.