ಬಜೆಟ್ ಪ್ರಾಥಮಿಕ ಪರಿಚಯ

ಬಜೆಟ್ ಪ್ರಾಥಮಿಕ ಪರಿಚಯ

ಪುಸ್ತಕದ ಲೇಖಕ/ಕವಿಯ ಹೆಸರು
ಟಿ ಆರ್ ಚಂದ್ರಶೇಖರ್
ಪ್ರಕಾಶಕರು
ಜನ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೨

ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ಮಂಡನೆ ಮಾಡುತ್ತವೆ. ಬಹಳಷ್ಟು ಜನ ಸಾಮಾನ್ಯರಿಗೆ ಈ ಬಜೆಟ್ ಅನ್ನು ಅರ್ಥೈಸುವುದೇ ಒಂದು ಸವಾಲ್. ಈ ಬಜೆಟ್ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡಲು ಟಿ ಆರ್ ಚಂದ್ರಶೇಖರ್ ಇವರು ಒಂದು ಪುಸ್ತಕವನ್ನು ಹೊರತಂದಿದ್ದಾರೆ. “ನಮ್ಮ ಆರ್ಥಿಕತೆಯ ಅಭಿವೃದ್ಧಿಯನ್ನು ನಿರ್ಧರಿಸುವ ಒಂದು ಸಾಧನವೆಂದರೆ ವಾರ್ಷಿಕ ಬಜೆಟ್‌, ಬಜೆಟ್ಟಿನ ಬಗ್ಗೆ ಸಾರ್ವಜನಿಕರು ಸಿವಿಲ್ ಸೊಸೈಟಿ ಅರ್ಥ ಮಾಡಿಕೊಳ್ಳಬೇಕಾದುದು ಅಗತ್ಯ. ಬಜೆಟ್ ಜನಪರವಾಗಿದೆಯೋ ಅಥವಾ ಜನವಿರೋಧಿಯಾಗಿದೆಯೋ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಜೆಟ್ ಬಗೆಗಿನ ತಿಳುವಳಿಕೆ ಅಗತ್ಯ" ಎನ್ನುತ್ತಾರೆ ಲೇಖಕ ಟಿ.ಆರ್. ಚಂದ್ರಶೇಖರ. ಅವರ ‘ಬಜೆಟ್‌ ಪ್ರಾಥಮಿಕ ಪರಿಚಯ’ ಕೃತಿಗೆ ಬರೆದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿ ನೀಡಲಾಗಿದೆ...

“ನಮ್ಮ ದೇಶದಲ್ಲಿ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಮಾಧ್ಯಮಗಳಲ್ಲಿ, ಟಿವಿಗಳಲ್ಲಿ, ನಿಯತಕಾಲಿಕಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಹಾಗೂ ಅಂತರ್ಜಾಲದಲ್ಲಿ ಸರ್ಕಾರಗಳ ಬಜೆಟ್ ಕುರಿತಂತೆ ಬಿಸಿ ಬಿಸಿ ಚರ್ಚೆಗಳು ನಡೆಯುವುದು ವಾಡಿಕೆ. ವರ್ಷದಲ್ಲಿ ಮೊದಲು ಒಕ್ಕೂಟ (ಭಾರತ) ಸರ್ಕಾರದ ಬಜೆಟ್‌ ಮಂಡನೆಯಾಗುತ್ತದೆ. ಅದರಲ್ಲಿನ ಸಂಪನ್ಮೂಲ ವರ್ಗಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ತಮ್ಮ ತಮ್ಮ ಬಜೆಟ್ಟುಗಳನ್ನು ಸಿದ್ಧಪಡಿಸಿ ಮಂಡಿಸುತ್ತವೆ.

ಇಂದು ರಾಜ್ಯಗಳು ತೆರಿಗೆಯನ್ನು ವಿಧಿಸುವ ಹಕ್ಕನ್ನು ಗೂಡ್ಸ್ ಆಂಡ್ ಸರ್ವಿಸಸ್ ಟ್ಯಾಕ್ಸ್ (ಜಿಎಸ್‌ಟಿ)ನಿಂದಾಗಿ ಕಳೆದುಕೊಂಡಿವೆ. ಅವುಗಳಿಗೆ ತೆರಿಗೆಗಳನ್ನು ವಿಧಿಸುವ ಅಥವಾ ತೆರಿಗೆ ದರಗಳನ್ನು ಬದಲಾಯಿಸುವ ಹಕ್ಕಿಲ್ಲ. ಆದ್ದರಿಂದ ಅವು ಸಂಪನ್ಮೂಲಕ್ಕೆ ಒಕ್ಕೂಟ ಸರ್ಕಾರವನ್ನು ಅವಲಂಬಿಸಬೇಕಾಗಿದೆ. ಕೃಷಿ, ಶಿಕ್ಷಣ, ವ್ಯಾಪಾರ-ವಹಿವಾಟು ಮುಂತಾದವುಗಳಿಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳನ್ನು ಒಕ್ಕೂಟ ಸರ್ಕಾರ ತನ್ನ ವಶಮಾಡಿಕೊಳ್ಳುತ್ತಿದೆ.

ಉದಾ: ಸಂವಿಧಾನದಲ್ಲಿ ಕೃಷಿಯನ್ನು ರಾಜ್ಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾಯಿದೆಗಳನ್ನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಮಾತ್ರ ಇದೆ. ಆದರೆ 2020ರಲ್ಲಿ ಒಕ್ಕೂಟ ಸರ್ಕಾರವು ಒಂದು ನೆಪ ಹೇಳಿಕೊಂಡು ಕೃಷಿಗೆ ಸಂಬಂಧಿಸಿದ ಮೂರು ಕಾಯಿದೆಗಳನ್ನು ಜಾರಿಗೊಳಿಸಿತ್ತು. ಇದು ನೇರವಾಗಿ ಸಂವಿಧಾನದ ಒಕ್ಕೂಟ ತತ್ವಕ್ಕೆ ದ್ರೋಹ ಬಗೆಯುವ ಕಾರ್ಯವಾಗಿದೆ. ಈಗ ಅವುಗಳನ್ನು ಹಿಂಪಡೆಯಲಾಗಿದೆ. ಇದು ಬೇರೆ ಸಂಗತಿ. ಆದರೆ ಒಕ್ಕೂಟ ಸರ್ಕಾರವು ಒಂದಲ್ಲ ಒಂದು ರೀತಿಯಲ್ಲಿ 2014ರಿಂದ ರಾಜ್ಯಗಳ ಅಧಿಕಾರವನ್ನು ಸೀಮಿತಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ.

ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸಿ ಒಕ್ಕೂಟ ಸರ್ಕಾರವು ವೈದ್ಯಕೀಯ - ದಂತ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಯನ್ನು ರಾಷ್ಟ್ರಮಟ್ಟದಲ್ಲಿ ನಡೆಸುವ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್) ಕ್ರಮವನ್ನು ತೆಗೆದುಕೊಂಡಿದೆ. ಇದರಿಂದ ದೇಶದ ನಾನಾ ರಾಜ್ಯಗಳಲ್ಲಿ ಸ್ಥಳಿಯ ಭಾಷೆಯಲ್ಲಿ ಕಲಿತ ಮಕ್ಕಳಿಗೆ, ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗೆ ಅನ್ಯಾಯವಾಗುತ್ತದೆ. ಈ ವ್ಯವಸ್ಥೆಯು ನಗರ ಪ್ರದೇಶದ ಉಳ್ಳವರ-ಎಲೈಟ್(elite) ಮಕ್ಕಳ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡಿದ್ದಂತಹ ಅನೇಕ ನಿದರ್ಶನಗಳಿವೆ.

ನಮ್ಮ ಆರ್ಥಿಕತೆಯ ಅಭಿವೃದ್ಧಿಯನ್ನು ನಿರ್ಧರಿಸುವ ಒಂದು ಸಾಧನವೆಂದರೆ ವಾರ್ಷಿಕ ಬಜೆಟ್‌, ಬಜೆಟ್ಟಿನ ಬಗ್ಗೆ ಸಾರ್ವಜನಿಕರು ಸಿವಿಲ್ ಸೊಸೈಟಿ ಅರ್ಥ ಮಾಡಿಕೊಳ್ಳಬೇಕಾದುದು ಅಗತ್ಯ. ಬಜೆಟ್ಟಿನಲ್ಲಿ ವೆಚ್ಚಮಾಡುವ ಪ್ರತಿಯೊಂದು ರೂಪಾಯಿಯೂ ಪಡೆಗಳು ನೀಡಿದ ತೆರಿಗೆಯಾಗಿದೆ. ಅದ್ದರಿಂದ ಸರ್ಕಾರಕ್ಕೆ, ತೆರಿಗೆ ಮತ್ತು ಇತರ ರೂಪದಲ್ಲಿ ನಾಗರಿಕರು ನೀಡಿದ ಹಣವು ಒಟ್ಟು ಸಮರ್ಥವಾಗಿ ಬಳಕೆಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಿಜೆಪಿ ಅಧ್ಯಯನ ಅಗತ್ಯ. ಈ ದೃಷ್ಟಿಯಿಂದ ಪ್ರಸ್ತುತ ಪಟ್ಟ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಈ ಹೊತ್ತಿಗೆಯನ್ನು ಮುಖ್ಯವಾಗಿ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಮತ್ತು ನಾಗರಿಕರನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಇದೊಂದು ಬಜೆಟ್‌ ಕುರಿತ ಪ್ರಾಥಮಿಕ ಪರಿಚಯ ಪಠ್ಯವಾಗಿದೆ (ಪೈಮರ್), ಬಜೆಟ್ಟನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ಅದರಲ್ಲಿ ನಾಗರಿಕರು ಗಮನವಿಟ್ಟು ಪರಿಶೀಲಿಸಬೇಕಾದ ಸಂಗತಿಗಳಾವುವು, ಅದನ್ನು ವಿಮರ್ಶಿಸುವುದು ಹೇಗೆ ಮುಂತಾದ ವಿಷಯವನ್ನು ಇಲ್ಲಿ ಚರ್ಚಿಸಲಾಗಿದೆ. ಅದಕ್ಕಾಗಿ ಒಕ್ಕೂಟ ಸರ್ಕಾರದ (ಭಾರತ) ಮತ್ತು ಕರ್ನಾಟಕ ರಾಜ್ಯದ 2022-23ನೆಯ ಸಾಲಿನ ಬಜೆಟ್ಟುಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಬಜೆಟ್ಟಿನ ವಿವಿಧ ಭಾಗಗಳು, ತೆರಿಗೆಗಳಿಗೆ ಸಂಬಂಧಿಸಿದ ವಿವರಗಳು, ಸಾರ್ವಜನಿಕ ವೆಚ್ಚದ ಮಹತ್ವ, ಸಾರ್ವಜನಿಕ ಋಣ ಮತ್ತು ಜಿಡಿಪಿ/ಜಿಎನ್‌ ಪಿ ಬೆಳವಣಿಗೆ ಮುಂತಾದ ಸ೦ಗತಿಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಬಜೆಟ್ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿ- ಅಂಕಿ ಅಂಶಗಳನ್ನು ಸರ್ಕಾರದ ಅಧಿಕೃತ ಬಜೆಟ್‌ ಪ್ರಕಟಣೆಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಬಜೆಟ್ಟು ಜನಪರವಾಗಿದೆಯೋ ಅಥವಾ ಜನವಿರೋಧಿಯಾಗಿದೆಯೋ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಜೆಟ್ ಬಗೆಗಿನ ತಿಳುವಳಿಕೆ ಅಗತ್ಯ. ಉದಾ: ಬಜೆಟ್ ಭಾಷಣಗಳಲ್ಲಿ ವಿತ್ತ ಮಂತ್ರಿ ಅವರು 'ವೆಲ್ ಕ್ರಿಯೇಟರ್' ಬಗ್ಗೆ ಮಾತನಾಡುತ್ತಾರೆ. ಅವರ ಪರಿಭಾಷೆಯಲ್ಲಿ ಉದ್ದಿಮೆದಾರರು, ಬಂಡವಾಳ ಹೂಡುವವರು, ವಾಣಿಜ್ಯೋದ್ಯಮಿಗಳು ವೆಲ್ ಕ್ರಿಯೇಟರ್, ನಮಗೆ ಅರ್ಥಶಾಸ್ತ್ರದಲ್ಲಿ 'ಶ್ರಮವು ಉತ್ಪಾದನೆಯ ಮೂಲ' ಎಂದು ಹೇಳಿಕೊಡಲಾಗಿದೆ. ಶ್ರಮಶಕ್ತಿಯ ಪಾತ್ರವಿಲ್ಲದೆ ಆರ್ಥಿಕ ಸಮೃದ್ಧತೆಯನ್ನು ಸಾಧಿಸಿಕೊಳ್ಳುವುದು ಅಸಾಧ್ಯ. ಅಭಿವೃದ್ಧಿಗೆ ಬಂಡವಾಳ ಅಗತ್ಯ. ಅದೇ ಸಮಯದಲ್ಲಿ ಕಾರ್ಮಿಕ ಶಕ್ತಿಯ ಪಾತ್ರವೂ ಬಹಳ ಮುಖ್ಯವಾಗಿದೆ. ಬಂಡವಾಳ ಮತ್ತು ಶ್ರಮಶಕ್ತಿ ಪರಸ್ಪರ ಪೂರಕ ಸಂಪನ್ಮೂಲಗಳು ಇವೆರಡರಲ್ಲಿ ಒಂದು ಇಲ್ಲದಿದ್ದರೆ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಇಂದು ನಮ್ಮ ಸರ್ಕಾರವು ಅಭಿವೃದ್ಧಿಯಲ್ಲಿ ಬಂಡವಾಳವನ್ನು ವೈಭವೀಕರಿಸುತ್ತದೆ. ಶ್ರಮಶಕ್ತಿಯನ್ನು ಕಾರ್ಮಿಕ ವರ್ಗವನ್ನು ಕಡೆಗಣಿಸುತ್ತಿದೆ. ಬಜೆಟ್. ಅಧ್ಯಯನದ ಮೂಲಕ ಅದು ಯಾರ ಪರವಾಗಿದೆ, ಸಮಾಜದ ಯಾವ ವರ್ಗವನ್ನು ಓಲೈಸುತ್ತಿದೆ. ಯಾವ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಗಿದೆ ಮುಂತಾದ ಸೂಕ್ಷ್ಮ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಬಜೆಟ್‌ ಜ್ಞಾನ ಅಗತ್ಯ ಬಜೆಟ್ ಅಧ್ಯಯನವು ಒಂದು ಜ್ಞಾನ ಶಿಸ್ತು. ಅದರ ವಿವರವಾದ ಮತ್ತು ವಿಮರ್ಶಾತ್ಮಕ ಅಧ್ಯಯನಕ್ಕೆ ಬಜೆಟ್ ಎಲ್ಲ ಆಯಾಮಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಎಲ್ಲ ಸಂಗತಿಗಳನ್ನು ಪ್ರಸ್ತುತ ಹೊತ್ತಿಗೆಯಲ್ಲಿ ಚರ್ಚಿಸಲಾಗಿದೆ. ಬಜೆಟ್ಟಿನಲ್ಲಿ ಎರಡು ಭಾಗಗಳಿರುತ್ತವೆ: ಒಂದು - ಸಾರ್ವಜನಿಕ ರೆವಿನ್ಯೂ ಭಾಗ. ಎರಡು ಸಾರ್ವಜನಿಕ ವೆಚ್ಚದ ಭಾಗ ಬಜೆಟ್ಟಿನಲ್ಲಿ ಒಂದು ಮುಖ್ಯವಾದ ಸಂಗತಿಯೆಂದರೆ ರೆವಿನ್ಯೂ ಖಾತೆಯಲ್ಲಿ ಅಥವಾ ವಿತ್ತೀಯ ಖಾತೆಯಲ್ಲಿನ ಕೊರತೆಗಳು, ವಿತ್ತೀಯ ಕೊರತೆಯು ಒಂದು ಮಟ್ಟವನ್ನು ಮೀರಿದರೆ ಅದು ಆರ್ಥಿಕತೆಯ ಮೇಲೆ ಮತ್ತು ದೇಶದ ಆರ್ಥಿಕತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿಯಲ್ಲಿ ರೆವಿನ್ಯೂ ಕೊರತೆಯು ಸರ್ಕಾರವೊಂದರ ಹಣಕಾಸು ಅಶಿಸ್ತನ್ನು ತೋರಿಸುತ್ತದೆ. ಈ ಎಲ್ಲ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಬಜೆಟ್ಟುಗಳಲ್ಲದೆ ಬಜೆಟ್ಟಿನ ಜೋಡಿಯಾದ ಆರ್ಥಿಕ ಸಮೀಕ್ಷೆಯನ್ನು ಇಲ್ಲಿ ವಿವರವಾಗಿ ಚರ್ಚಿಸ ಲಾಗಿದೆ. ಇದು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಹಾಗೂ ಆರ್ಥಿಕ ಸಂಗತಿಗಳ ಬಗ್ಗೆ ಕುತೂಹಲಿಗಳಾಗಿರುವ ನಾಗರಿಕರಿಗೂ ಉಪಯೋಗವಾಗುತ್ತದೆ ಎಂದು ಭಾವಿಸಲಾಗಿದೆ.”