ಬಟ್ಟೆ ಇಲ್ಲದ ಊರಿನಲ್ಲಿ

ಬಟ್ಟೆ ಇಲ್ಲದ ಊರಿನಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಮಿರ್ಜಾ ಬಷೀರ್
ಪ್ರಕಾಶಕರು
ಅಂತಃಕರಣ ಪ್ರಕಾಶನ, ಶಿವಮೊಗ್ಗ
ಪುಸ್ತಕದ ಬೆಲೆ
ರೂ.110/-

ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಡಾ.ಮಿರ್ಜಾ ಬಷೀರ ಅವರ ಮೊದಲ ಕಥಾ ಸಂಕಲನ, ‘ಬಟ್ಟೆ ಇಲ್ಲದ ಊರಿನಲ್ಲಿ’. ಇದು ವಾಸ್ತವ ಮತ್ತು ಕಲ್ಪನೆಯನ್ನು ಅವಲಂಬಿಸಿದ ಸಾಮಾಜಿಕ ಚಿತ್ರಣ. ಪ್ರಶಸ್ತಿ ವಿಜೇತ ಕತೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕತೆಗಳನ್ನು ಒಳಗೊಂಡ ಸಂಗ್ರಹ. ತಮ್ಮ ವೃತ್ತಿ ಜೀವನದಲ್ಲಿ ಸಂಭವಿಸಿದ ಅಥವಾ ಸಂಭವಿಸಿರಬಹುದಾದ ಘಟನೆಗಳ ಸುತ್ತ ಹೆಣೆದಿರುವ ಕತೆಗಳಲ್ಲದೆ ಲೇಖಕರು ಕಲ್ಪನೆಯ ಲೋಕಕ್ಕೆ ನಮ್ಮನ್ನು ಒಯ್ಯುವ ಕತೆಗಳೂ ಇವೆ. ಈ ಕತೆಗಳ ಮೂಲಕ ಬಷೀರರು ನಮ್ಮ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತಾರೆ.
ಹೆಚ್ಚಿನ ಕತೆಗಳಲ್ಲಿ ನಡೆಯುವ ಘಟನೆಗಳು ತೀರಾ ಸಾಮಾನ್ಯವಾದವು. ಭಾಷೆಯೂ ಸರಳವಾಗಿದೆ. ನಿರೂಪಣೆಯಲ್ಲಿ ನಾಟಕೀಯತೆ ಇಲ್ಲದೆಯೂ ಕುತೂಹಲವನ್ನು ಬೆಳೆಸುವ ಗುಣವಿದ್ದು ಕತೆಗಳು ಓದಿಸಿಕೊಂಡು ಹೋಗುತ್ತವೆ. ಬಷೀರರ ಕತೆಗಳಲ್ಲಿ ಮನುಷ್ಯರಲ್ಲದೆ, ಪ್ರಕೃತಿ, ಪ್ರಾಣಿಗಳೂ ಸೇರಿಕೊಂಡು ನಿರೂಪಣೆ ಸಾಗುತ್ತದೆ. ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ನಂಬಿಕೆಗಳು, ಬಡತನದ ಸವಾಲುಗಳು ಕತೆಗಳಿಗೆ ವಸ್ತುವಾಗಿ ಓದುಗನ ಮನಸ್ಸನ್ನು ಸೆಳೆಯುತ್ತವೆ.
ಪಾತ್ರಗಳ ಚಿತ್ರೀಕರಣದಲ್ಲಿ ಸಹಜತೆಯನ್ನು ಹೆಚ್ಚಿನ ಬರಹಗಳಲ್ಲಿ ಗಮನಿಸಬಹುದು. ಅವರ ಕತೆಗಳಲ್ಲಿ ಕಾಣಬರುವ ಮಕ್ಕಳ ಮುಗ್ಧತೆ, ಬಡವನ ಪ್ರಾಮಾಣಿಕತೆ, ವೈದ್ಯನಿಗೆ ತನ್ನ ವೃತ್ತಿಗೆ ಅಗತ್ಯವಾದ ನಿಯತ್ತು ಮತ್ತು ಮಾನವ ಸಹಜಗುಣಗಳು ಕತೆಗಳನ್ನು ಆಪ್ತವಾಗಿಸುತ್ತವೆ, ಸಹಜತೆಯ ಮೂಲಕ ಕೆಲವೊಮ್ಮೆ ಓದುಗನನ್ನು ಭಾವಪ್ರಪಂಚಕ್ಕೆ ಒಯ್ಯುವ ವೈಶಿಷ್ಟ್ಯ ಬಷೀರರ ಬರವಣಿಗೆಯದು.
ಇಂದಿನ ದಿನಗಳಲ್ಲಿ ನಮ್ಮನ್ನು ಆಗಾಗ ಕಾಡುವ ಕೋಮು ವೈಷಮ್ಯ ಹೇಗೆ ಉಂಟಾಗುತ್ತದೆ ಮತ್ತು ಈ ಗಲಭೆಗಳಲ್ಲಿ ಎರಡೂ ಕೋಮಿನ ಅಮಾಯಕರ ಮೇಲೆ ಆಗುತ್ತಿರುವ ಹಾನಿಗಳ ಬಗ್ಗೆ ಲೇಖಕರು ತಮ್ಮ ಕತೆಗಳಲ್ಲಿ ಬರುವ ಪಾತ್ರಗಳ ಮೂಲಕ ತಮ್ಮ ಆತಂಕಗಳನ್ನೂ, ಖಚಿತ ನಿಲುವನ್ನೂ ಒತ್ತಿ ಹೇಳುತ್ತಾರೆ. ವಿಧ್ವಂಸಕರು ಎರಡು ಕೋಮಿನಲ್ಲಿಯೂ ಇದ್ದಾರೆ ಎಂದು ಬಷೀರರು ನಿರ್ದಾಕ್ಷಿಣ್ಯವಾಗಿ ಉಲ್ಲೇಖಿಸುತ್ತಾರೆ.
ವಾಸ್ತವ ಮತ್ತು ಕಲ್ಪನಾಲೋಕಕ್ಕೆ ಸೇತುವೆ:
ಸಂಗ್ರಹದ ಎರಡು ಕತೆಗಳು, ‘ಕತ್ತರಿ’ ಮತ್ತು ‘ಬಟ್ಟೆ ಇಲ್ಲದ ಊರಿನಲ್ಲಿ’ ಬಷೀರರ ಅದ್ಭುತ ಕಲ್ಪನೆಯಿಂದ ಹುಟ್ಟಿವೆ. ತಮ್ಮ ನಿರೂಪಣಾ ತಂತ್ರದಿಂದ ಓದುಗನನ್ನು ವಾಸ್ತವದಿಂದ ಕಲ್ಪನಾ ಲೋಕಕ್ಕೆ ಒಯ್ಯುವುದು ಮಾತ್ರವಲ್ಲದೆ, ಅಲ್ಲಿ ಸಂಭವಿಸುವ ಘಟನೆಗಳು ಕಣ್ಣೆದುರಿಗೇ ನಡೆಯುವ ಭಾವನೆಯನ್ನು ಅವರು ತರಿಸುತ್ತಾರೆ. ಒಂದು ನಿರ್ಜೀವ ಕತ್ತರಿ ತನ್ನ ಪ್ರಯಾಣದ ಕತೆಯನ್ನು ಹೇಳುತ್ತದೆ. ಆಸ್ಪತ್ರೆ, ಪಶುವೈದ್ಯಶಾಲೆ, ಕಳ್ಳ, ದೊಡ್ಡ ಕಾರ್ಯಕ್ರಮವನ್ನು ಉದ್ಘಾಟಿಸುವ ಗಣ್ಯರು - ಹೀಗೆ ಕೈಗಳಿಂದ ಕೈಗಳಿಗೆ ಸಾಗುವ ಕತ್ತರಿ ಸಮಕಾಲೀನ ಪಿಡುಗುಗಳನ್ನು ವಿಶ್ಲೇಷಿಸುತ್ತದೆ.
ಸಂಕಲನದ ಶೀರ್ಷಿಕೆ, ‘ಬಟ್ಟೆ ಇಲ್ಲದ ಊರಿನಲಿ’್ಲ ಕತೆಯಲ್ಲಿ, ಊರಿನಲ್ಲಿ ಇದ್ದಕ್ಕಿದ್ದಂತೆ ಎಲ್ಲರ ಬಟ್ಟೆಗಳೂ ಮಾಯವಾಗುತ್ತವೆ, ಎಲ್ಲರೂ ಬೆತ್ತಲಾದರೆ ಯಾರೂ ನಾಚಿಕೆ ಪಡಬೇಕಾಗಿಲ್ಲ. ಆದರೂ ಸತ್ಯವನ್ನು ಮುಚ್ಚಿಡುವ ಪ್ರಯತ್ನದಲ್ಲಿರುವ ರಾಜಕಾರಣಿಗಳು, ಸಾಧುಸನ್ಯಾಸಿಗಳು, ಜ್ಯೋತಿಷಿಗಳು ಬೆತ್ತಲೆಯಾಗುತ್ತಿದ್ದಂತೆ ಎದುರಿಸುತ್ತಿರುವ ಕಷ್ಟಗಳ ನಿರೂಪಣೆಯಲ್ಲಿ ನವಿರಾದ ಹಾಸ್ಯ ಮತ್ತು ವ್ಯಂಗ್ಯವಿದ್ದು ಜನಸಾಮಾನ್ಯರ ಭಾವನೆಗಳನ್ನೇ ಪ್ರತಿಬಿಂಬಿಸಿದ ಅನುಭವವಾಗುತ್ತದೆ, ಎದ್ದಿರುವ ಸಮಸ್ಯೆಗೆ ಪರಿಹಾರ ಹೇಗೆ ಎಂದು ಓದುಗನ ಕುತೂಹಲವನ್ನೂ ಹೆಚ್ಚಿಸುವ ಗುಣ ಕತೆಯಲ್ಲಿದೆ. ಇವೆರಡೂ ಕತೆಗಳಲ್ಲದ ಕತೆಗಳು: ಮೌಲಿಕವಾಗಿ ಅವು ಎದ್ದು ನಿಲ್ಲುತ್ತವೆ.
ಪ್ರಾಣಿಗಳು, ಬಡತನ ಮತ್ತು ಕೋಮು ಗಲಭೆ:
‘ಒಂದು ಸಾವಿನ ಸುತ್ತ’, ‘ಅಣ್ಣ’, ‘ಬಾ ಇಲ್ಲಿ ಸಂಭವಿಸು’ ಮತ್ತು ‘ರೇಬಿಸ್’ ಕತೆಗಳು ಲೇಖಕರ ವೃತ್ತಿಜೀವನದ ಘಟನೆಗಳ ಹಿನ್ನೆಲೆಯಲ್ಲಿವೆ. ಮೇಲ್ನೋಟಕ್ಕೆ ಪಶುಗಳ ಚಿಕಿತ್ಸೆಗೆಂದು ಬರುವ ಪಶುವೈದ್ಯನ ಮೂಲಕ ಮನುಷ್ಯ-ಪ್ರಾಣಿಗಳ ಸಂಬಂಧವನ್ನು ಅವನಲ್ಲಿಯೂ ಹುದುಗಿಕೊಂಡಿರುವ ಮಾನವೀಯತೆಯನ್ನು, ಧರ್ಮದ ಹೆಸರಿನಲ್ಲಿ ನಡೆಯುವ ಕ್ಷೋಭೆಯನ್ನು, ಬಡತನದಿಂದಾಗಿ ಜೀತದ ಆಳಾಗುವುದನ್ನು, ವೃತ್ತಿಯಲ್ಲಿರಬೇಕಾದ ಕರ್ತವ್ಯಪ್ರಜ್ಞೆಯನ್ನು ಬಷೀರರು ನಮ್ಮ ಮುಂದಿಡುತ್ತಾರೆ.
ಸಾಯಲು ಕ್ಷಣಗಣನೆ ಮಾಡುತ್ತಿದ್ದ ಮನೆಯ ಎಲ್ಲರ ಅಚ್ಚುಮೆಚ್ಚಿನ ನಾಯಿ ಡೈಮಂಡ್ ‘ಒಂದು ಸಾವಿನ ಸುತ್ತ’ ದ ಕೇಂದ್ರ ಬಿಂದು. ಅದರ ಪರಿಸ್ಥಿತಿಯನ್ನು ಅರಿತ ಮನೆಯವರ ದುಗುಡಗಳನ್ನು ಸೂಚ್ಯವಾಗಿ ಲೇಖಕರು ದಾಖಲಿಸುತ್ತಾರೆ. ಹತ್ತು ವರ್ಷದ ಮಗ ಟಿವಿ ಚಾನೆಲ್ ಬದಲಾಯಿಸುತ್ತಾ ಇದ್ದ, ಮನೆ ಓರಣವಾಗಿರಲಿಲ್ಲ, ಮನೆಗೆ ಬಂದ ವೈದ್ಯನನ್ನು ಕಂಡಾಗ ಸಾಕ್ಷಾತ್ ಯಮನನ್ನು ಕಂಡಂತೆ ಮನೆಮಂದಿಯೆಲ್ಲ ದುಃಖಿತರಾಗಿದ್ದರು. ಜೊತೆಗೇ ವೈದ್ಯನ ಕಣ್ಣಿನಲ್ಲಿ ಬರುವ ನೀರು ಮುಂತಾದ ಸನ್ನಿವೇಶಗಳು ಡೈಮಂಡ್ ಬಗೆಗೆ ಮನೆಮಂದಿಗೆಲ್ಲ ಇರುವ ಪ್ರೀತಿ ಮತ್ತು ಅದರ ಅನಾರೋಗ್ಯದಿಂದ ಅವರಲ್ಲಿ ಹುಟ್ಟುವ ವೇದನೆಯನ್ನು ಪರಿಣಾಮಕಾರಿಯಾಗಿ ತೋರಿಸುತ್ತವೆ. ಇಂಜಕ್ಷನ್ ಮೂಲಕ ನಾಯಿಯನ್ನು ಕೊಂದು ಅದನ್ನು ಸಂಕಟದಿಂದ ಬಿಡುಗಡೆ ಮಾಡಬೇಕೆಂದು ವೈದ್ಯ ಸಲಹೆ ನೀಡಿದಾಗ ದಯಾಮರಣದ ಪ್ರಸ್ತುತತೆಯತ್ತ ನಮ್ಮ ಗಮನವನ್ನು ಸೆಳೆಯುತ್ತಾರೆ.
‘ಅಣ್ಣ’ ಚಪ್ಪೆ ರೋಗ ಬಡಿದ ಸಣ್ಣ ಕರುವಿನ ಕತೆ; ಅದರ ಯಜಮಾನ ನಂಜಪ್ಪ ಮತ್ತು ಮನೆಯವರ ಬಡತನ ಹಾಗೂ ಅದನ್ನು ನೀಗಿಸಲು ಅವರು ಒದ್ದಾಡುವ ಪ್ರಯತ್ನ ಕತೆಯ ವಸ್ತು. ‘ಬಡವನಿಗೇಕೆ ಸಾರ್, ಅಪ್ಪ, ಅಣ್ಣ? ನಾನು ಬರೀ ನಂಜ’, ಗುಡಿಸಲಿನ ಒಳಕ್ಕೂ ಹೊರಕ್ಕೂ ಏನೂ ವ್ಯತ್ಯಾಸವಿರಲಿಲ್ಲ, ಒಂದೆರಡು ಕಡೆ ಹರಿದ ಬನಿಯನ್, ಖಾಕಿ ಚಡ್ಡಿಯೂ ಒಂದೆರಡು ಕಡೆ ಹರಿದಿದ್ದು ಅದನ್ನು ಬೇರೆ ಬಣ್ಣದ ಬಟ್ಟೆಯಲ್ಲಿ ಒರಟಾಗಿ ತೇಪೆ ಹಾಕಲಾಗಿತ್ತು, ಒಲೆ ಹೊತ್ತಿಸಲು ಹರಸಾಹಸಪಡುತ್ತಿದ್ದ ಹೆಂಡತಿ -ಮುಂತಾದ ವಾಕ್ಯಗಳು ಬಡತನದ ಆಳವನ್ನು ನಮ್ಮ ಮುಂದೆ ತೆರೆದಿಡುತ್ತವೆ. ಸಣ್ಣ ಅರೆಬೆತ್ತಲ ಹುಡುಗಿಯ ಮುಗ್ಧ ಪ್ರಶ್ನೆ ‘ಅಣ್ಣನ್ನ ಯಾವಾಗ ಕರ್ಕೊಂಡು ಬರೋದು’ ಮತ್ತೆ ಮತ್ತೆ ನಂಜಪ್ಪ ಮತ್ತು ಪಶುವೈದ್ಯನನ್ನು ಕಾಡುತ್ತದೆ. ಅದಕ್ಕೆ ನಂಜಪ್ಪ ಕೊಡುವ ಉತ್ತರ, ಬಡತನದ ತೀವ್ರ ಒತ್ತಡಕ್ಕೆ ಜೀತಪದ್ಧತಿಯ ಮೂಲಕ ಪರಿಹಾರ ಕಂಡುಕೊಳ್ಳುವ ಅಮಾನವೀಯ ದಾರಿಯನ್ನು ನೆನಪಿಸುತ್ತದೆ, 1975ರಲ್ಲಿ ಕೇಂದ್ರ ಸರಕಾರದ 20 ಅಂಶದ ಕಾರ್ಯಕ್ರಮಗಳಲ್ಲಿ ಜೀತದಾಳುಗಳ ವಿಮೋಚನೆಯೂ ಒಂದಾಗಿತ್ತು. ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶರ ಸಂಸ್ಥೆಯೂ ಜೀತದಾಳುಗಳ ಬಿಡುಗಡೆಗಾಗಿ ನಿರಂತರ ಯತ್ನ ನಡೆಸುತ್ತಿದೆ. ಆದರೂ ಈ ಶಾಪದಿಂದ ವಿಮೋಚನೆಯಾಗದ ದುಡಿಮೆಯ ಮಂದಿ ಇಂದೂ ನಮ್ಮಲ್ಲಿದ್ದಾರೆಂದು ಬಷೀರರು ತಮ್ಮ ಕತೆಯ ಮೂಲಕ ನೆನಪಿಸುತ್ತಾರೆ. ಇಡೀ ಸಂಕಲನದಲ್ಲಿ ಮನ ಕರಗಿಸುವ ನಿರೂಪಣೆಯುಳ್ಳ ಕತೆ ಇದು.
‘ಬಾ ಇಲ್ಲಿ ಸಂಭವಿಸು’ ತನ್ನ ವಿಶಿಷ್ಟ ಶೀರ್ಷಿಕೆಯ ಮೂಲಕ ಸೃಷ್ಟಿ, ಅನಿಶ್ಚಿತತೆ, ಸಾವು ಮುಂತಾದವುಗಳ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಹಸುವಿಗೆ ಕೃತಕಗರ್ಭಧಾರಣೆ ಮಾಡಿಸಲು ಪಶುವೈದ್ಯ ಬಂದಾಗ ಬಹಳಷ್ಟು ಮಾತುಗಳನ್ನಾಡಿದ್ದ ಜೋಸೆಫ್ ಮುಂದಿನ ಬಾರಿ ಹೋದಾಗ ಇಲ್ಲ. ‘ಅವರು ನಮ್ಮ ಹಸುವಿಗೆ ಕೃತಕ ಗರ್ಭಧಾರಣೆ ಮಾಡಿದ ದಿನವೇ ಹೃದಯಾಘಾತದಿಂದ ತೀರಿಕೊಂಡರು’ ಎಂದು ಕೇಳಿದಾಗ ವೈದ್ಯರ ಪ್ರತಿಕ್ರಿಯೆ, ವೃತ್ತಿಜೀವನ ಮತ್ತು ಹೊರಜಗತ್ತಿನ ಅವಿನಾಭಾವ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತದೆ.
‘ರೇಬೀಸ್’ ಕತೆ ಮೇಲ್ನೋಟಕ್ಕೆ ನಾಯಿಗೆ ಬರುವ, ಮುಂದಾಗಿಯೇ ತಡೆಯಲು ಸಾಧ್ಯವಾಗುವ ಕಾಯಿಲೆಯ ಬಗ್ಗೆ, ಅದು ಕತೆಯ ನಿರೂಪಣೆಗೆ ಒಂದು ನಿಮಿತ್ತ ಅಷ್ಟೆ. ಇಲ್ಲಿಯ ನೈಜ ವಸ್ತು ಕೋಮು ಗಲಭೆ. ಯಾವುದೇ ಕಾರಣವಿಲ್ಲದೆ ಗುಂಪುಗಲಭೆ ಹುಟ್ಟಲು ಸಾಧ್ಯ, ಎರಡು ತಂಡಗಳ ಮನೋವಿಕಾರಗಳಿಂದ ಸಮಾಜಕ್ಕೆ ಹಾನಿಯಾಗುವ ಪರಿ, ಅದರಿಂದ ದೈನಂದಿನ ಜೀವನಕ್ಕೆ ವ್ಯತ್ಯಯ, ಜೀವನೋಪಾಯಕ್ಕೆ ಸಂಚಕಾರ-ಇವುಗಳೆಲ್ಲ ಎಲ್ಲರಿಗೂ ತಿಳಿದ ವಿಷಯಗಳು. ಆದರೆ ಬಷೀರರು ಡಾ. ಸಲೀಮ್, ಗೌರಿ ಮತ್ತು ಮಹದೇವರ ಮೂಲಕ ಗುಂಪುಗಲಭೆಯ ಕಾರಣ ಮತ್ತು ರೂಪವನ್ನು ಸಮರ್ಥವಾಗಿ ಸೆರೆಹಿಡಿದಿದ್ದಾರೆ. ಈ ಮೂರೂ ಪಾತ್ರಗಳೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತವೆ.
ಮಕ್ಕಳ ಮುಗ್ಧತೆ:
‘ಬೀಬಜ್ಜಿ’ ಮತ್ತು ‘ಕ್ರೌರ್ಯ’ ಕತೆಗಳು ಮಕ್ಕಳ ಮುಗ್ಧತೆಯ ಮೂಲಕ ಜೀವನಕ್ಕೆ ಅರ್ಥ ನೀಡುವ ಪ್ರಯತ್ನವನ್ನು ಮಾಡುತ್ತವೆ. ಒಬ್ಬಂಟಿ ಬೀಬಜ್ಜಿಯ ಬಡತನ, ಶವವಾದ ಆಸೆಗಳು, ಆಕೆಯ ಮೊಮ್ಮಕ್ಕಳ ಮೇಲಿನ ಮಮತೆಯನ್ನು ಆರಿಸುವುದಿಲ್ಲ. ಸಾಲ ಸೋಲ ಮಾಡಿ ಕಷ್ಟಪಟ್ಟು ಹುಗ್ಗಿ ಅಡಿಗೆ ಮಾಡಿ ಅವರಿಗೆ ಊಟ ಹಾಕುವುದರಲ್ಲಿ ಅನನ್ಯ ಸುಖವನ್ನು ಕಂಡುಕೊಳ್ಳುತ್ತಾಳೆ. ಅವರ ಮುಗ್ಧ ಪ್ರತಿಕ್ರಿಯೆಗಳು ಅವಳ ದುಃಖವನ್ನು ಮರೆಯುವಂತೆ ಮಾಡುತ್ತವೆ. ನಾಟಕೀಯತೆ ಇಲ್ಲದ ಅತ್ಯಂತ ಸರಳವಾದ ನಿರೂಪಣೆ ಮತ್ತು ಗಂಭೀರ ಸಂದರ್ಭಗಳಲ್ಲಿ ಸ್ವಾಭಾವಿಕವೆನ್ನುವ ಪ್ರತಿಕ್ರಿಯೆಗಳ ಮೂಲಕ ಮನಸ್ಸನ್ನು ಹಗುರವಾಗಿಸುವ ಶೈಲಿ ಕತೆಯಲ್ಲಿ ಆಸಕ್ತಿಯನ್ನು ಕೆರಳಿಸುತ್ತದೆ.
ಸೊಸೆಯ ಕ್ರೌರ್ಯವನ್ನು, ಮಕ್ಕಳ ನಡೆನುಡಿಯನ್ನು ಗಮನಿಸುತ್ತಾ ಜೀವನ ಸಾಗಿಸುವ ಸಜ್ಜನನೊಬ್ಬನ ಕತೆ ‘ಕ್ರೌರ್ಯ’. ಆಕೆಯ ಮನೋಧರ್ಮ ತನ್ನ ಸಜ್ಜನಿಕೆಗೇ ಸವಾಲು. ಅದನ್ನು ಮಕ್ಕಳ ಮೂಲಕ ಎದುರಿಸುವ ಛಲ ಕುರುಡರಾದ ನಿವೃತ್ತ ಪ್ರೊಫೆಸರ್ ರಹಮಾನರದ್ದು. ಅವರಿಗೆ ಕಣ್ಣೀರು ಬರುವಂತೆ ಮಾಡಿದರೆ ದೃಷ್ಟಿ ಬರಬಹುದೆಂದು ನಂಬಿ ವರ್ತಿಸುವ ಮೊಮ್ಮಕ್ಕಳ ಪಾತ್ರಗಳು ಜೀವಂತವಾಗಿವೆ.
ತಾರ್ಕಿಕ ನೆಲೆಗಟ್ಟು:
‘ಜಮಾಲ’ ಮತ್ತು ‘ನೆರೆ’ ಎಂಬ ಇನ್ನೆರಡು ಕತೆಗಳು ಜೀವನದ ನಿಯತ್ತು ಮತ್ತು ಆಸೆಗಳ ನಡುವಿನ ಹೊಯ್ದಾಟವನ್ನು ಬಿಂಬಿಸುತ್ತವೆ.
ಇಂಗ್ಲಿಷ್ ಭಾಷೆಯ ಪರೀಕ್ಷೆಯಲ್ಲಿ ಪಾಸೇ ಆಗದ ಜಮಾಲನಿಗೆ ಪೇಪರು ತಿದ್ದುವ ದೂರದ ಮಾವ ಮಾರ್ಕು ಕೊಟ್ಟು ತೇರ್ಗಡೆ ಮಾಡಿಸಬಹುದೆಂಬ ಅದಮ್ಯ ಆಸೆ. ಆದರೆ ನಿಯತ್ತಿನಲ್ಲಿರುವ ಮಾವನಿಗೆ ಲಕ್ಷ್ಮಣರೇಖೆಯನ್ನು ದಾಟುವುದು ಸಾಧ್ಯವಾಗದ ಮಾತು. ಜಮಾಲನ ಆಸೆ ಕಮರಿಹೋಗುತ್ತದೆ. ಆದರೂ ಅವನಿಗೆ ಜೀವನದಲ್ಲಿರುವ ಉತ್ಸಾಹ, ಇತರರಲ್ಲಿ ಅವನು ತೋರುವ ಅಕ್ಕರೆ ಮನವನ್ನು ತಟ್ಟುತ್ತದೆ.
‘ನೆರೆ’, ವರದಕ್ಷಿಣೆಯ ಪಿಡುಗು ಮುಸ್ಲಿಂ ಸಮುದಾಯವನ್ನೂ ಅಂಟಿಕೊಂಡಿದೆ ಎಂಬುದಕ್ಕೆ ಕನ್ನಡಿ. ತಾರ್ಕಿಕವಾಗಿ ಗಟ್ಟಿ ಇಲ್ಲದ ಕತೆ ಎಂದು ಅನಿಸುವುದಾದರೂ, ಒಂದು ಧರ್ಮದವರನ್ನು ಸಂಶಯದ ದೃಷ್ಟಿಯಿಂದ ಕಾಣುವ ಸನ್ನಿವೇಶ ಮತ್ತು ಆ ಸಂಶಯಕ್ಕೆ ವಿನಾ ಕಾರಣ ಗುರಿಯಾದವರಿಗೆ ಇನ್ನೊಂದು ಧರ್ಮದವರು ಸಾಂತ್ವನ ನೀಡುವುದು, ಕೆಳಮಧ್ಯಮವರ್ಗದವರ ಬೇಕು ಬೇಡಗಳ ತಾಕಲಾಟಗಳ ಚಿತ್ರಣಗಳಿಂದ ಕತೆ ಪ್ರಸ್ತುತವಾಗುತ್ತದೆ.
ಒಟ್ಟಿನಲ್ಲಿ ಮಿರ್ಜಾ ಬಷೀರರ ಕಥನ ಶೈಲಿ, ಸರಳತೆ ಮತ್ತು ಪ್ರಚಲಿತ ವಾತಾವರಣಕ್ಕೆ ಪ್ರಸ್ತುತವಾಗುವ ಕಥಾವಸ್ತು ಮತ್ತು ಅಲ್ಲಿ ಮೂಡಿಬಂದ ಪಾತ್ರಗಳ ಜೀವಂತಿಕೆಯ ಮೂಲಕ ‘ಬಟ್ಟೆ ಇಲ್ಲದ ಊರಿನಲ್ಲಿ’ ಕಥಾ ಸಂಗ್ರಹ ಓದುಗನನ್ನು ಚಿಂತನೆಗೆ ಒಡ್ಡುತ್ತದೆ. ತನ್ಮೂಲಕ ಒಂದು ಉತ್ತಮ ಕೃತಿಯಾಗಿ ಹೊರಹೊಮ್ಮಿದೆ.