ಬಡತನದ ಕವನ

ಬಡತನದ ಕವನ

ಕವನ

ನನ್ನೂರಿನ ನನ್ನ ಯುವಕನಿಗೆ

ಉದ್ಯೋಗ ಸಿಗದಿದ್ದಾಗ

ಚಿಂತೆಯಾಗಿ ಮೂಡಿ ಬಂತು

ನನ್ನ ಕವನ

ನನ್ನೂರಿನ ನನ್ನ ಯುವತಿಗೆ

ಮುಂದೇನು ಎಂಬ ಪ್ರಶ್ನೆ ಮೂಡಿದಾಗ

ಬೇಸರವಾಗಿ ಮೂಡಿ ಬಂತು ಕವನ

 

ನನ್ನೂರಿನ ನನ್ನ ಅಣ್ಣ

ಕೆಲಸ ಕಳೆದುಕೊಂಡಾಗ

ಆತನ ಭವಿಷ್ಯದ

ಪ್ರಶ್ನೆಯಾಗಿ ಮೂಡಿ ಬಂತು

ನನ್ನ ಕವನ

ನನ್ನೂರಿನ ತನ್ನ ಅಕ್ಕ

ತನ್ನ ಗಂಡನ ಕಳೆದುಕೊಂಡಾಗ

ಬದುಕಿನ ಯಕ್ಷಪ್ರಶ್ನೆಯಾಗಿ

ಮೂಡಿಬಂತು ಕವನ

 

ನನ್ನೂರಿನ ನನ್ನ ಹರೆಯದ ಮಕ್ಕಳು

ಒಡೆಯನ ಮನೆಯಲ್ಲಿ

ಆಧುನಿಕ ಜೀತಮಾಡುವಾಗ

ಮೂಡಿ ಬಂತು ಕವನ

ನನ್ನೂರಿನ ನನ್ನ ಸೋದರಿಯರು

ದುಡ್ಡಿಗಾಗಿ ಮೇಲ್ಜಾತಿ ಯುವಕರತ್ತ

ಅಸಹಾಯಕತೆ ಯ ನೋಟ ಹರಿಸಿದಾಗ

ಬರೆದು ಕುಳಿತಿತು ಕವನ

 

ನನ್ನೂರಿನ ನನ್ನ ಜನರು

ದುಡ್ಡಿಗಾಗಿ ಪರದಾಡುತ್ತಿದ್ದಾಗ ಯಾಕೆ ಹೀಗೆ

ಎಂಬ ಪ್ರಶ್ನೆ ಯಾಗಿ ಮೂಡಿತು ಕವನ

ನನ್ನೂರಿನ ಜನರು ಉಳ್ಳವರ ಗಲ್ಲವನ್ನು

ವ್ಯಾಪಾರ ದ ಹೆಸರಿನಲ್ಲಿ ತುಂಬಿಸುತ್ತಿದ್ದಾಗ

ಏನಿದು ಎಂಬ ಪ್ರಶ್ನೆ ಯಾಗಿ ಬಂತು ಕವನ

 

ನನ್ನೂರಿನ ನನ್ನ ಜನರು ವ್ಯಾಪಾರ ವ್ಯವಹಾರ ಮಾಡಲು ಹಿಂಜರಿದಾಗ

ವರ್ಣಾಶ್ರಮದ ಎರಡನೆಯ ವರ್ಣ

ಪ್ರಶ್ನಿಸಿತು ಕವನ

ನನ್ನೂರಿನ ನನ್ನ ಸೋದರಿಯರು

ದುಡ್ಡಿಗಾಗಿ ಸೆರಗು ಹಾಸಲು ಸಿದ್ಧರಾದಾಗ

ಕಣ್ಣಂಚಿನ ಒದ್ದೆಯಾಗಿ ಮೂಡಿತು ಕವನ

 

ನನ್ನೂರಿನ ನನ್ನ ಜನರು ಆರ್ಥಿಕ ಶಕ್ತಿ ಪಡೆಯಲು ಪರದಾಡುತ್ತಿದ್ದಾಗ

ಆಕ್ರೋಶದ ಕಟ್ಟೆಯಾಗಿ ಮೂಡಿತು ಕವನ

ನನ್ನಪ್ಪ ರಿಸರ್ವ್ ಬ್ಯಾಂಕ್ ಸ್ಥಾಪಿಸಿದರೂ

ಬಡತನ ತೊಲಗದ ನಮ್ಮ ಸ್ಥಿತಿ ಕಂಡು

ಅಸ್ಪೃಶ್ಯತೆಯ ಝಾಡಿಸಿ ಒದೆಯಿತೆಂದ ಕವನ

 

ನನ್ನ ಕವನ

ನೋಟು ಎಣಿಸು

ಅಸ್ಪೃಶ್ಯತೆ ಒಗೆ

ಎಂದು ಗುಟ್ಟೇಳಿ ಹೋದ ಕವನ...

 

-ರಘೋತ್ತಮ ಹೊ.ಬ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್