ಬಡತನದ ಶ್ರೀಮಂತ ವ್ಯಕ್ತಿತ್ವ- ಶ್ರೀಮಂತಿಕೆಯಲ್ಲಿ ಬಡತನದ ಛಾಯೆ

ಬಡತನದ ಶ್ರೀಮಂತ ವ್ಯಕ್ತಿತ್ವ- ಶ್ರೀಮಂತಿಕೆಯಲ್ಲಿ ಬಡತನದ ಛಾಯೆ

ಬರಹ

ಸ್ವಾತಂತ್ರ್ಯನಂತರದ ಪ್ರಧಾನಿ ಜವಹಾರಲಾಲ್ ನೆಹರೂರವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ನೇಮಕಗೊಂಡವರು ಲಾಲ್ ಬಹದ್ದೂರ್ ಶಾಸ್ತ್ರಿ. ಸರಳತೆ, ಸಜ್ಜನಿಕೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿರೂಪ. ಸಾಮಾನ್ಯ ಶಿಕ್ಷಕನ ಮಗನಾಗಿ ಹುಟ್ಟಿದರೂ ಈ ರಾಷ್ಟ್ರದ ಪ್ರಧಾನಿ ಹುದ್ದೆಯನ್ನಲಂಕರಿಸಿ ಮಾದರಿ ಎನಿಸಿಕೊಂಡ ಧೀಮಂತ ರಾಜಕಾರಿಣಿ, ಸಮಾಜ ವಿಙಾನಿ, ಮಹಾ ಮಾನವತವಾದಿ. ೧೯೬೪ರಲ್ಲಿ ಪ್ರಧಾನಮಂತ್ರಿ ನೆಹರೂರವರ ಮರಣದನಂತರ ಬಹುಮತದ ಮೂಲಕ ಪ್ರಧಾನಿಯಾಗಿ ಆಯ್ಕೆಯಾದ ಸಂಧಭ೯ದಲ್ಲಿ ರಾಷ್ಟ್ರದ ಸಮಸ್ಯೆಗಳು ಹಲವಾರು. ೧೯೬೨ರ ಭಾರತ-ಚೀನಾ ಯುದ್ಧದಿಂದ ಹೊರಬರುವ ಮೊದಲೇ ೧೯೬೫ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ. ಈ ಸಂದರ್ಭದಲ್ಲಿ ರಾಷ್ಟ್ರದ ಬಹುತೇಕ ಭಾಗಗಳಲ್ಲಿ ತಲೆದೊರಿದ ಭೀಕರ ಬರಗಾಲದಿಂದ ಆಹಾರದ ಸಮಸ್ಯೆ. ಇಂತಹ ಸಂಕಷ್ಟ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಷ್ಟ್ರವನ್ನು ಮುನ್ನಡೆಸಿದ ಶಾಸ್ತ್ರಿಯವರ ಬದುಕು ಬಡತನದಿಂದ ಕೂಡಿದ್ದರೂ ಆದರ್ಶವೆಂಬ ಶ್ರೀಮಂತಿಕೆಯಿಂದ ಕೂಡಿದ್ದು ಶಾಸ್ತ್ರಿಜೀಯವರ ಸರಳತೆ, ಸಜ್ಜನಿಕೆ ಮುಂದಿನ ಜನಾಂಗಕ್ಕೆ ಮಾರ್ಗದರ್ಶನ:-

ನೆಹರೂ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ೭-೯-೧೯೫೬ರಲ್ಲಿ ಮೊಘಲ್ ಸರಾಯ್ ಎಂಬಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ ೧೧೭ ಜನ ಮೃತಪಟ್ಟ ಘಟನೆಯಿಂದ ಮನನೊಂದು ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ.

೧೯೬೫ರ ಪಾಕಿಸ್ತಾನದ ಆಕ್ರಮಣ ಮತ್ತು ಅಂದಿನ ಬೀಕರ ಬರಗಾಲವನ್ನೆದುರಿಸಲು ಸೈನಿಕರಿಗೆ ಮತ್ತು ರೈತರಿಗೆ “ಜೈಜವಾನ್ ಜೈ ಕಿಸಾನ್" ಘೋಷಣೆ ಹೊರಡಿಸಿ ಶ್ರಮಿಕ ವರ್ಗಗಳಿಗೆ ಬೆಂಬಲ ಸೂಚಿಸುತ್ತಾರೆ. ದೇಶದ ಆಹಾರ ಸಮಸ್ಯೆಯಿಂದಾಗಿ ಹಸಿವಿನಿಂದ ಸಾಯುತ್ತಿರುವ. ಬಳಲುತ್ತಿರುವ ವಿಷಯ ತಿಳಿದು ಆಹಾರ ಸಮಸ್ಯೆ ನೀಗುವವರೆಗೆ ಪ್ರತಿ ಸೋಮವಾರ ಉಪವಾಸವ್ರತ ಕೈಗೊಳ್ಳುತ್ತಾರೆ.

೯-೬-೧೯೬೪ ರಿಂದ ೧೧-೦೧-೧೯೬೬ರವರೆಗೆ ಸುಮಾರು ೧೯ ತಿಂಗಳ ಕಾಲಾವದಿಯವರೆಗೆ ರಾಷ್ಟ್ರದ ಪ್ರಧಾನಿ ಹುದ್ಧಯನ್ನಲಂಕರಿಸಿದರೂ ಸಹ ಶಾಸ್ತ್ರಿ ಮರಣದನಂತರ ಇವರ ಕುಟುಂಬ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದು, ನಂತರ ಬಾಡಿಗೆ ಕಟ್ಟಲಾಗದೇ ಮನೆಯ ಮಾಲೀಕ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದ ಪ್ರಸಂಗವೂ ನಡೆಯಿತು.

ಲಾಲ್ ಬಹದ್ಧೂರ್ ಶಾಸ್ತ್ರಿಯವರ ಮರಣದ ಸಂಧರ್ಭದಲ್ಲಿ ಇವರ ಬ್ಯಾಂಕ್ ಖಾತೆಯಲ್ಲಿದ್ದ ಬಾಕಿ ಹಣ ಕೇವಲ ಹತ್ತು ರೂಪಾಯಿ ಮಾತ್ರ.

ಸಾವಿರಾರು ಜನರ ಪ್ರಾಣ ಕಳೆದುಕೊಳ್ಳಲು ಕಾರಣನಾದ ಮಂತ್ರಿಗೆ ಸಾರ್ವಜನಿಕರೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರೂ ರಾಜೀನಾಮೆ ನೀಡದ ಇಂದಿನ ಬಂಡ ಮಂತ್ರಿಗಳೆಲ್ಲಿ! ತಮ್ಮ ಇಲಾಖೆಯಲ್ಲಿ ನಡೆದ ರೈಲ್ವೇ ಅಪಘಾತದ ಸಾವು-ನೋವಿಗೆ ಮನನೊಂದು ನೈತಿಕ ಹೊಣೆ ಹೊತ್ತು ತಾವೇ ಸ್ವತಃ ರಾಜೀನಾಮೆ ನೀಡಿದ ಶಾಸ್ತ್ರಿ ಎಲ್ಲಿ? ಬಡತನ ಮತ್ತು ಹಸಿವಿನ ಬೆಲೆಯೇ ಗೊತ್ತಿರದ ಇಂದಿನ ಹೊಟ್ಟೆ ಡುಬ್ಬಣ್ಣ ಮಂತ್ರಿಗಳೆಲ್ಲಿ, ರಾಷ್ಟ್ರದ ಜನತೆಗಾಗಿ ವಾರದ ಒಂದು ದಿನ ಉಪವಾಸವ್ರತ ಕೈಗೊಂಡ ಬಡಕಲು ದೇಹದ ಶಾಸ್ತ್ರಿ ಎಲ್ಲಿ? ಮೂರು ದಿವಸ ಮಂತ್ರಿಯಾದರೆ ಸಾಕು ಮೂರು-ನಾಲ್ಕು ತಲೆಮಾರಿಗಾಗುವಷ್ಟು ಮನೆ, ಸಾವಿರಾರು ಎಕರೆ ಜಮೀನು, ಆಸ್ತಿ-ಪಾಸ್ತಿ, ಹಣ ಬಂಗಾರ ಸಂಪಾದಿಸಿ ಸ್ವಿಸ್ ಬ್ಯಾಂಕಿನಲ್ಲಿಟ್ಟಿರುವ ಇಂದಿನ ಮಂತ್ರಿಗಳೆಲ್ಲಿ ! ದಶಕಗಳ ಕಾಲ ಕೇಂದ್ರ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿಯಾಗಿದ್ದು ನಂತರ ಬಾಡಿಗೆ ಮನೆಯಲ್ಲಿ ವಾಸಿಸಿದ ಶಾಸ್ತ್ರಿ ಕುಟುಂಬವೆಲ್ಲಿ ? ಬಾಂಕ್ ಖಾತೆಯಲ್ಲಿ ಕೇವಲ ಹತ್ತು ರೂಪಾಯಿ ಬಾಕಿ ಉಳಿಸಿದ ಶಾಸ್ತ್ರಿ ಎಲ್ಲಿ ? ಎತ್ತಂದೆತ್ತಣ ಸಂಬಂಧ .................... ಶಾಸ್ತ್ರಿಜೀಯವರದು ಬಡತನದ ಶ್ರೀಮಂತ ವ್ಯಕ್ತಿತ್ವವಾದರೆ ಇಂದಿನ ರಾಜಕಾರಿಣಿಗಳದ್ದು ಶ್ರೀಮಂತಿಕೆಯಲ್ಲಿ ಬಡತನದ ಛಾಯೆ.