ಬಡವರ ಪೋಷಕಾಂಶ ಕೊರತೆ ನೀಗಿಸಲಿಕ್ಕಾಗಿ ಪೌಷ್ಠಿಕ ತಳಿಗಳ ಅಭಿವೃದ್ಧಿ

ಬಡವರ ಪೋಷಕಾಂಶ ಕೊರತೆ ನೀಗಿಸಲಿಕ್ಕಾಗಿ ಪೌಷ್ಠಿಕ ತಳಿಗಳ ಅಭಿವೃದ್ಧಿ

ಅಧಿಕ ಕಬ್ಬಿಣಾಂಶದ  ಸಣ್ಣಜೋಳ ದಶಕದ ಮುಂಚೆ ಸುದ್ದಿ ಮಾಡಿತು. ಇದನ್ನು ಅಭಿವೃದ್ಧಿ ಪಡಿಸಿದವರು ಹೈದರಾಬಾದಿನ ಇಕ್ರಿಸಾಟ್ (ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟ್ರಾಪಿಕ್ಸ್)ನ ವಿಜ್ನಾನಿಗಳು.

ಅಲ್ಲಿನ ಶೀತಾಗಾರದ ಉಷ್ಣತೆ ಶೂನ್ಯ ಡಿಗ್ರಿ ಸೆಲ್‍ಷಿಯಸ್‍ಗಿಂತಲೂ ಕಡಿಮೆ. ಅಲ್ಲಿ, ನಿರ್ವಾತದ ಅಲ್ಯುಮಿನಿಯಂ ಚೀಲಗಳಲ್ಲಿ, ಐಸಿಟಿಪಿ ೮೨೦೩ ಸಣ್ಣಜೋಳದ ಬೀಜಗಳನ್ನು ಸಂಗ್ರಹಿಸಿ ಇಡಲಾಗಿದೆ. ಭಾರತದಲ್ಲಿ ಸಿರಿಧಾನ್ಯಗಳನ್ನು ಬೆಳೆಸುತ್ತಿರುವ ಪ್ರದೇಶದ ವಿಸ್ತರಿಸುತ್ತಿದೆ. ಇದರ ಬಹುಪಾಲು ಪ್ರದೇಶದಲ್ಲಿ ಬೆಳೆಸುತ್ತಿರುವುದು ಈ ತಳಿಯನ್ನು.

ಇಕ್ರಿಸಾಟ್‍ನ ಜೀನ್‍ಬ್ಯಾಂಕಿನಲ್ಲಿ ಸಂಗ್ರಹಿಸಿಟ್ಟಿರುವ ಸಿರಿಧಾನ್ಯದ ತಳಿಗಳ ಸಂಖ್ಯೆ ಸುಮಾರು ೨೦೦೦. ಅವನ್ನೆಲ್ಲ ಪರೀಕ್ಷಿಸಿದ ನಂತರ ವಿಜ್ನಾನಿಗಳು ಆಯ್ಕೆ ಮಾಡಿದ ತಳಿ ಐಸಿಟಿಪಿ ೮೨೦೩ ಎಂಬ ಸಣ್ಣಜೋಳ. ಈ ಆಯ್ಕೆಯ ಉದ್ದೇಶ ಅದರ ಜೈವಿಕ ಬದಲಾವಣೆ ಮಾಡುವ ಮೂಲಕ ಸಿರಿಧಾನ್ಯಗಳ ಪೋಷಕಾಂಶ ಹೆಚ್ಚಿಸುವುದು.

ಈ ತಳಿಯನ್ನು ೧೯೮೨ರಿಂದ ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲಿ ಬೆಳೆಸುತ್ತಿದ್ದ ಸಣ್ಣಜೋಳದ ತಳಿಗಳಿಗಿಂತ ಹೆಚ್ಚಿನ ಕಬ್ಬಿಣಾಂಶ ಇದರಲ್ಲಿದೆ. ಈ ತಳಿಯ ಬೀಜಗಳ ಖನಿಜ ಮತ್ತು ವಿಟಮಿನ್ ಅಂಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಸಂಶೋಧನೆ ಆರಂಭಿಸಲಾಯಿತು.

ಐಸಿಟಿಸಿ ೮೨೦೩ - ಎಫ್‍ಇ ಎಂಬ ಸಣ್ಣಜೋಳದ ತಳಿಯನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ ವಿಜ್ನಾನಿಗಳು ಹತ್ತು ವರುಷ ಶ್ರಮಿಸಿದರು. ಅನಂತರ ೨೦೦೯ರಲ್ಲಿ ಈ ತಳಿಯನ್ನು ಹೊಲಗಳಲ್ಲಿ ಬೆಳೆದು ಇಕ್ರಿಸಾಟ್ ಪ್ರಯೋಗ ನಡೆಸಿತು. ಅದಾಗಿ ನಾಲ್ಕು ವರುಷಗಳ ನಂತರ, ಹಲವಾರು ರೈತರು ಈ ಯಶಸ್ವಿ ಪ್ರಯೋಗದ ಲಾಭ ಪಡೆಯುತ್ತಿದ್ದಾರೆ.

ಅವರಲ್ಲೊಬ್ಬರು ಮಹಾರಾಷ್ಟ್ರದ ಖಂಡೇಶ್ ಪ್ರದೇಶದ ಗೋಡೆಗಾಂವ್ ಹಳ್ಳಿಯ ಕೃಷಿಕ ಚಂದ್ರಕಾಂತ ಗೋಡೆಕರ್. ಅವರ ಹೊಲದಲ್ಲಿ ಸಣ್ಣಜೋಳದ ಸಮೃದ್ಧ ಫಸಲು. ಅವರು ೨೦೧೧ರಲ್ಲಿ ಭಾರತದಲ್ಲಿ ಅಧಿಕ ಪೋಷಕಾಂಶದ ಸಣ್ಣಜೋಳ ಬೆಳೆಸಿದ ಮೊದಲ ತಂಡಕ್ಕೆ ಸೇರಿದವರು. ಆ ಸಣ್ಣಜೋಳದ ತಳಿಯಲ್ಲಿರುವ ಕಬ್ಬಿಣಾಂಶದ ಪ್ರಮಾಣ ೬೦ ಪಿಪಿಎಮ್ (ಮಿಲಿಯದಲ್ಲಿ ೬೦ ಭಾಗ). ಇದು ರೈತರು ಬೆಳೆಸುತ್ತಿದ್ದ ಸ್ಥಳೀಯ ತಳಿಗಳಲ್ಲಿ ಇದ್ದುದಕ್ಕಿಂತ ಇಮ್ಮಡಿ.

ಅವರ ಪತ್ನಿ ಸುನೈನಾ ಹಾಸಿಗೆ ಹಿಡಿದಿದ್ದರು. ಕ್ಯಾನ್ಸರ್ ಕೋಶಗಳನ್ನು ಅವರ ದೇಹದಿಂದ ಕಿತ್ತು ಹಾಕಲಿಕ್ಕಾಗಿ ಹಲವು ಸರ್ಜರಿ ಮಾಡಲಾಗಿತ್ತು. ಈ ಪೋಷಕಾಂಶಭರಿತ ಸಣ್ಣಜೋಳ ತಿನ್ನಲು ಶುರು ಮಾಡಿದ ನಂತರ ಅವರ ಆರೋಗ್ಯ ಸುಧಾರಿಸಿತು. ಅದಕ್ಕಾಗಿಯೇ ಚಂದ್ರಕಾಂತ ಗೋಡೆಕರ್ ಫಸಲಿನ ಬಹುಪಾಲನ್ನು ತನ್ನ ಕುಟುಂಬದ ಊಟಕ್ಕಾಗಿ ತೆಗೆದಿರಿಸುತ್ತಾರೆ. ಮಿಕ್ಕಿದ ಸಣ್ಣಜೋಳವನ್ನು ಹೈಬ್ರಿಡ್ ಸಣ್ಣಜೋಳದ ದರಕ್ಕಿಂತ ಅಧಿಕ ದರದಲ್ಲಿ ಮಾರುತ್ತಾರೆ. ಈ ಸಣ್ಣಜೋಳದ ಎಲೆಗಳು ದನಕರುಗಳಿಗೆ ಅಚ್ಚುಮೆಚ್ಚಿನ ಮೇವು.

ಇಂತಹ ಪೋಷಕಾಂಶಭರಿತ ಸಿರಿಧಾನ್ಯದ ತಳಿಗಳು ನಮ್ಮ ದೇಶದ ಬಡವರ ಪೋಷಕಾಂಶಗಳ ಕೊರತೆಯನ್ನು ತೊಡೆದು ಹಾಕಬಲ್ಲವು. “೧೯೭೦ರಿಂದೀಚೆಗೆ ಆಹಾರಧಾನ್ಯಗಳ ಬೆಲೆಗಳು ಜಾಸ್ತಿಯಾಗಿವೆ. ಇದರಿಂದಾಗಿ, ಬಡಜನರು ಪೋಷಕಾಂಶಗಳ ಕೊರತೆ ಎದುರಿಸುತ್ತಿದ್ದಾರೆ. ಯಾಕೆಂದರೆ ಹಣ್ಣು, ತರಕಾರಿ, ಪ್ರಾಣಿಜನ್ಯ ಆಹಾರವಸ್ತುಗಳ ಬೆಲೆ  ದುಬಾರಿಯಾಗಿದ್ದು, ಅವರು ಖರೀದಿಸುವಂತಿಲ್ಲ. ಅದಕ್ಕಾಗಿಯೇ, ಜನಸಾಮಾನ್ಯರು ಸೇವಿಸುವ ಆಹಾರಧಾನ್ಯಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳನ್ನು ಸೇರಿಸಲು ಜಗತ್ತಿನ ತಳಿಸಂಕರಕಾರರು ಶ್ರಮಿಸುತ್ತಿದ್ದಾರೆ" ಎನ್ನುತ್ತಾರೆ ಹೊವಾರ್ತ್ ಬೊಯಿಸ್. ಅವರು ವಾಷಿಂಗ್‍ಟನಿನ ಅಂತರರಾಷ್ಟ್ರೀಯ ಅಹಾರ ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರು.

ಹಾರ್ವೆಸ್ಟ್ ಪ್ಲಸ್ ಎಂಬುದು ಆ ಸಂಸ್ಥೆಯ ಕಾರ್ಯಕ್ರಮ. ಇದರ ಉದ್ದೇಶ: ಜೀನ್-ಕಾರ್ಯತಂತ್ರ ಬಳಸಿ, ಅಹಾರಧಾನ್ಯ ಮತ್ತು ತರಕಾರಿಗಳ ಕಬ್ಬಿಣಾಂಶ, ಸತುವಿನ ಅಂಶ, ಬೀಟಾ-ಕೆರೊಟಿನ್ ಅಂಶ ಹೆಚ್ಚಿಸುವುದು. ಇದರ ಅನುಸಾರ, ಅಧಿಕ ಕಬ್ಬಿಣಾಂಶದ ಸಣ್ಣಜೋಳದ ಮತ್ತು ಅಧಿಕ ಸತುವಿನಾಂಶದ ಗೋಧಿಯ ಬೀಜಗಳು ಈಗಾಗಲೇ ಲಭ್ಯ. ಅಧಿಕ ಸತುವಿನಾಂಶದ ಭತ್ತ, ಅಧಿಕ ಕಬ್ಬಿಣಾಂಶದ ಬೀನ್ಸ್, ಅಧಿಕ ವಿಟಮಿನ್-ಎ ಇರುವ ಕಿತ್ತಳೆ ಬಣ್ಣದ ಜೋಳ ಮತ್ತು ಗೆಣಸು - ಇವುಗಳ ಬಗ್ಗೆ ಸಂಶೋಧನೆಗಳು ಮುಂದುವರಿದಿವೆ.

ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಭುರ್‍ಕುರಾ ಗ್ರಾಮದ ಒಂದು ಸಾವಿರ ರೈತರು ಅಧಿಕ ಸತುವಿನಾಂಶದ ಗೋಧಿ ತಳಿಯ ಅಭಿವೃದ್ಧಿಗಾಗಿ ವಿಜ್ನಾನಿಗಳಿಗೆ ಸಹಕಾರ ನೀಡಿದರು. ಇಕ್ರಿಸಾಟ್‍ನ ಧನ ಸಹಾಯದ ಈ ಕೃಷಿಕ ಸಹಯೋಗಿ ತಳಿ ಅಭಿವೃದ್ಧಿ ಕಾರ್ಯಕ್ರಮವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮುನ್ನಡೆಸಿತು.

ಈ ಹೊಸ ತಳಿಗಳು ಕೃಷಿಕರಿಗೂ ಬಳಕೆದಾರರಿಗೂ ವರದಾನವಾಗಲೆಂದು ಹಾರೈಸೋಣ.