ಬಡವ - ಶ್ರೀಮಂತ ತಾರತಮ್ಯ...
ಎರಡು ಶ್ರೀಮಂತ ಉದ್ದಿಮೆಗಳು ಮತ್ತು ಇಬ್ಬರು ಉದ್ದಿಮೆದಾರರ ಸುದ್ದಿಗಳ ನಡುವೆ ಮತ್ತೊಂದು ಬಡ ವಿಶೇಷ ಸಂಪನ್ಮೂಲ ಪ್ರಾಥಮಿಕ ಶಿಕ್ಷಕರ ಸುದ್ದಿ ಗಮನ ಸೆಳೆಯಿತು.
ಮೊದಲನೆಯದು, ಬಹಳ ವಿರೋಧಗಳ ನಡುವೆಯೂ, ಈಗಾಗಲೇ ಇದನ್ನು ಆಗ ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದ ಈಗಿನ ರಾಜ್ಯ ಸರ್ಕಾರ, ಬಳ್ಳಾರಿಯ ಸುತ್ತಮುತ್ತಲಿನ ಸುಮಾರು 3677 ಎಕರೆಯಷ್ಟು ಜಮೀನನ್ನು ಒಂದು ಎಕರೆಗೆ 1,25,000-1,50,000 ರೂಪಾಯಿಗಳಿಗೆ ಜಿಂದಾಲ್ ಸ್ಟೀಲ್ ಕಂಪನಿಗೆ ಗಣಿಗಾರಿಕೆಗಾಗಿ ಗುತ್ತಿಗೆಯ ಮಾರಾಟ ಮಾಡಲಾಗಿದೆ. ಅಲ್ಲಿನ ಈಗಿನ ಮಾರುಕಟ್ಟೆ ಬೆಲೆ ಸುಮಾರು 30/40 ಲಕ್ಷದಷ್ಟಿದೆ ಎಂಬ ಮಾಹಿತಿ ಇದೆ.
ಎರಡನೆಯದು, ಕೇಂದ್ರ ಸರ್ಕಾರದ ತೆರಿಗೆ ಇಲಾಖೆ ಅಧಿಕೃತವಾಗಿ ತೆರಿಗೆ ವಂಚನೆಯ ನೋಟಿಸ್ ನೀಡಿ ವಿವಾದವಾಗಿದ್ದ ದೇಶದ ಎರಡನೇ ಅತಿದೊಡ್ಡ ಪ್ರಭಾವಶಾಲಿ ಸಾಪ್ಟ್ವೇರ್ ಕಂಪನಿ ಇನ್ಫೋಸಿಸ್ ನ ಸುಮಾರು 33300 ಕೋಟಿ ರೂಪಾಯಿ ಜಿಎಸ್ಟಿ ತೆರಿಗೆಯನ್ನು ರದ್ದುಗೊಳಿಸಿದೆ. ಆ ಬಗ್ಗೆ ಸೆಪ್ಟೆಂಬರ್ 9 ರಂದು ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸುದ್ದಿ ಮಾಧ್ಯಮಗಳು ಪ್ರಕಟಿಸಿವೆ.
ತುಂಬಾ ಸಂತೋಷ. ಹೇಗೋ ಉದ್ಯಮಿಗಳು, ಉದ್ಯಮಗಳು ಚೆನ್ನಾಗಿ ಬೆಳೆಯಲಿ, ಎಲ್ಲರಿಗೂ ಉದ್ಯೋಗ ನೀಡಲಿ. ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಎಂದು ಆಶಿಸೋಣ, ಹಾಗೆಯೇ ಇದರ ಒಳಗಿನ ಹುನ್ನಾರ ಮತ್ತು ಪಕ್ಷಪಾತದ ಆಳ ಅಗಲಗಳನ್ನು ವಿಮರ್ಶಿಸುವ ವಿವೇಚನಾ ಸ್ವಾತಂತ್ರ್ಯವನ್ನು ನಿಮಗೇ ಬಿಡುತ್ತಾ...
ಆದರೆ ಅದೇ ಸಮಯದಲ್ಲಿ ಮತ್ತೊಂದು ಅತ್ಯಂತ ಆಘಾತಕಾರಿ ಸುದ್ದಿ ಗೆಳೆಯರಿಂದ ಕೇಳಿ ಬೇಸರವಾಯಿತು. ಅದೇನೆಂದರೆ, ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯ ವಿಶೇಷ ಸಂಪನ್ಮೂಲ ಪ್ರಾಥಮಿಕ ಶಿಕ್ಷಕರಾಗಿ ಗುತ್ತಿಗೆ ಆಧಾರದ ಮೇಲೆ ನೌಕಾರರನ್ನು ಸೇವೆ ಸಲ್ಲಿಸಲು ನಿಯೋಜಿಸಿದೆ. ಗ್ರಾಮೀಣ ಪ್ರದೇಶದ ವಿಶೇಷ ಚೀತನರ ಮನೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವಿಕಲ ಚೇತನರ ಬಗ್ಗೆ ಮಾಹಿತಿ, ಅವರ ಶಿಕ್ಷಣ ವ್ಯವಸ್ಥೆ, ಪೋಷಕರಿಗೆ ಮಾರ್ಗದರ್ಶನ, ಮುಂತಾದ ಕೆಲಸಗಳನ್ನು ಇವರು ಮಾಡುತ್ತಿದ್ದಾರೆ. ಇವರಲ್ಲಿ ಸಾಕಷ್ಟು ವಿಕಲ ಚೇತನರು ಆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ಇವರ ಪ್ರತಿ ತಿಂಗಳ ಸಂಬಳ 20,000 ರೂಪಾಯಿ ಆಗಿತ್ತು. ಅದನ್ನು ಕೂಡ ನಿಶ್ಚಿತ ಅವಧಿಯಲ್ಲಿ ಕೊಡದೆ ಐದು ತಿಂಗಳಿಗೋ ಆರು ತಿಂಗಳಿಗೋ ಒಮ್ಮೆ ಒಟ್ಟಾಗಿ ಕೊಡುತ್ತಿದ್ದರು. ಆದರೆ ಆರು ವರ್ಷಗಳಿಂದ ನಿಗದಿತವಾಗಿ ಬರುತ್ತಿದ್ದ ಈ ಹಣವನ್ನು ಈ ತಿಂಗಳಿನಿಂದ ಅದರಲ್ಲಿ 5000 ಕಡಿತಗೊಳಿಸಿ 15000 ಹಣ ಮಾತ್ರ ಪಾವತಿಸಲಾಗುತ್ತಿದೆ. ಅಂದರೆ ಆರು ವರ್ಷಗಳ ನಂತರ 5,000 ಹಣವನ್ನು ಕಡಿತಗೊಳಿಸಲಾಗಿದೆ.
ಅವರು ಬದುಕುವುದಾದರೂ ಹೇಗೆ. ಅವರು ಗುತ್ತಿಗೆ ಆಧಾರದ ಮೇಲೆ ಇರಲಿ, ದಿನಗೂಲಿ ಆಧಾರದ ಮೇಲೆ ಇರಲಿ ಅಥವಾ ತಾತ್ಕಾಲಿಕ ಹುದ್ದೆಗಳಲ್ಲೇ ಇರಲಿ ಅವರು ನಮ್ಮದೇ ಜನ, ಅವರು ಕೂಡ ಈ ಸಮಾಜದಲ್ಲಿ ಬದುಕಬೇಕಲ್ಲವೇ. ಏಕಾಏಕಿ ಯಾವುದೋ ಕಾರಣದಿಂದ ಆರು ವರ್ಷಗಳ ನಂತರ ಹಣ ಕಡಿತಗೊಳಿಸಿದರೆ ಅದು ಬಹುದೊಡ್ಡ ಅನ್ಯಾಯವಲ್ಲವೇ. ಅದಕ್ಕೆ ಸರ್ಕಾರಗಳು ಸಮರ್ಥನೆಗಾಗಿ ಯಾವುದೋ ತಾಂತ್ರಿಕ ಅಥವಾ ಕಾನೂನಿನ ಕಾರಣ ನೀಡಬಹುದು. ಮೇಲಿನ ಎರಡು ಸುದ್ದಿಗಳಲ್ಲಿ ಸರ್ಕಾರ ಉದ್ಯಮಿಗಳಿಗೆ ಇಷ್ಟೆಲ್ಲಾ ಅನುಕೂಲ ಮಾಡಿಕೊಡುವಾಗ ಈ ರೀತಿಯ ಬಡ ವಿಶೇಷ ದಿನಗೂಲಿ ಸಂಪನ್ಮೂಲ ಪ್ರಾಥಮಿಕ ಶಿಕ್ಷಕರಿಗೆ ಅನ್ಯಾಯ ಮಾಡುವುದು ಯಾವ ನ್ಯಾಯ?
ಮಾನ್ಯ ಮುಖ್ಯಮಂತ್ರಿಗಳೇ, ಮಾನ್ಯ ಶಿಕ್ಷಣ ಸಚಿವರೇ ಅಥವಾ ಅದಕ್ಕೆ ಸಂಬಂಧಿಸಿದ ಯಾರೇ ಆಗಿರಿ ಕನಿಷ್ಠ ಮಾನವೀಯ ಪ್ರಜ್ಞೆ ಇರಬೇಕು. ಸರ್ಕಾರಗಳು ಆಡಳಿತ ನಡೆಸಬೇಕಾಗಿರುವುದು ಉಳ್ಳವರ ಪರವಾಗಿ ಅಲ್ಲಾ, ಇಲ್ಲದವರ ಪರವಾಗಿ, ಅಸಹಾಯಕರ ಪರವಾಗಿ, ದುರ್ಬಲರ ಪರವಾಗಿ, ಬಡವರ ಪರವಾಗಿ. ಅವರಿಗಾಗಿಯೇ ಆಡಳಿತ ವ್ಯವಸ್ಥೆ ಕೆಲಸ ಮಾಡಬೇಕಿರುವುದು. ಮುಖ್ಯವಾಗಿ ಆ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ.
ಆದ್ದರಿಂದ ದಯವಿಟ್ಟು ಯಾರಾದರೂ ಈಗಿನ ಕರ್ನಾಟಕದ ಮುಖ್ಯಮಂತ್ರಿಗಳನ್ನು ಅಥವಾ ಶಿಕ್ಷಣ ಸಚಿವರನ್ನು ಸಂಪರ್ಕಿಸುವಷ್ಟು ಪ್ರಭಾವಶಾಲಿಗಳಾಗಿದ್ದರೆ ಇದನ್ನು ಅವರ ಗಮನಕ್ಕೆ ತಂದು ಆ ವಿಶೇಷ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು
ಇಲ್ಲಿ ಮೊದಲಿನ ಎರಡು ಸುದ್ದಿಗಳನ್ನು ಪ್ರಸ್ತಾಪಿಸಲು ಕಾರಣ ಸರ್ಕಾರಗಳು ಹೇಗೆ ಪ್ರಭಾವಶಾಲಿಗಳಿಗೆ ಖುದ್ದು ಸಚಿವ ಸಂಪುಟದಲ್ಲಿಯೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೋ, ಹಾಗೆಯೇ ಬಡವರ ಬಗ್ಗೆಯೂ ಆಸಕ್ತಿ ತೆಗೆದುಕೊಳ್ಳಬೇಕು. ಅವರನ್ನು ನಿರ್ಲಕ್ಷಿಸಿ, ಅನ್ಯಾಯ ಮಾಡಿ, ಅವರನ್ನು ಗುಲಾಮರಂತೆ ನೋಡಿಕೊಂಡರೆ ದೇಶ, ದೇಶಪ್ರೇಮ ಎಂದೆಂದಿಗೂ ಉಳಿಯುವುದಿಲ್ಲ.
ದೇಶದ ಅಭಿವೃದ್ಧಿ, ಸಮಷ್ಠಿ ಪ್ರಜ್ಞೆಯಿಂದ, ಸಮಗ್ರ ಮತ್ತು ಸುಸ್ಥಿರವಾಗಿ ಆಗಬೇಕೆ ಹೊರತು ಕೇವಲ ಕೆಲವರಿಗೆ ಮಾತ್ರ ಅಭಿವೃದ್ಧಿಯ ಲಾಭ ದೊರೆತರೆ, ಉಳಿದವರು ಅಸಹಿಷ್ಣುತೆ ಮತ್ತು ಅಸಮಾಧಾನ ಬೆಳೆಸಿಕೊಂಡು ಅಸಹನೆಯಿಂದಲೇ ಇರುತ್ತಾರೆ. ಇದು ತೊಲಗಬೇಕು. ಕನಿಷ್ಠ ಅಧಿಕಾರಿಗಳಾದರೂ ಒಂದಷ್ಟು ಮಾನವೀಯ ಪ್ರಜ್ಞೆಯ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತಾಗಲಿ. 7 ನೇ ವೇತನ ಆಯೋಗದ ಲಾಭ ಅವರಿಗೆ ದೊರಕಿರುವಾಗ ಇಂತಹ ಸಣ್ಣ ಮಟ್ಟದ ಹಣಕ್ಕಾಗಿ ಸತಾಯಿಸುವುದು ಒಳ್ಳೆಯ ಲಕ್ಷಣವಲ್ಲ. ದಯವಿಟ್ಟು ಯಾರಾದರೂ ಈ ಬಗ್ಗೆ ಬೇಗ ಗಮನಹರಿಸಿ ಎಂದು ಮನವಿ ಮಾಡಿಕೊಳ್ಳುತ್ತಾ.....
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ