ಬಣ್ಣದ ಕಾರು
‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ ಲೋಕ'ದಲ್ಲಿ ಜೇನು, ಬಾನು, ಗಾಳಿ, ಬೇವಿನ ಮರ ಬರುತ್ತವೆ. ಎರಡನೇ ಗೀತೆ 'ಹಸಿರು', ಸಂಪೂರ್ಣವಾಗಿ ಪರಿಸರದ ಕುರಿತದ್ದಾಗಿದೆ. ನಂತರದ ಗೀತೆ 'ಬಣ್ಣದ ಕಾರು', ಇದರಲ್ಲಿಯೂ ಸಹ ಪರಿಸರದ ಅಂಶಗಳು ತುಂಬಿಕೊಂಡಿವೆ ಎನ್ನುತ್ತಾರೆ ಈ ಕೃತಿಗೆ ಮುನ್ನುಡಿಯನ್ನು ಬರೆದ ಲೇಖಕರಾದ ಹ.ಸ.ಬ್ಯಾಕೋಡ ಇವರು. ಇವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು ನಿಮ್ಮ ಓದಿಗಾಗಿ...
“ಸದಾ ಮಕ್ಕಳ ಒಡನಾಟದಲ್ಲಿದ್ದುಕೊಂಡು ಸಾಹಿತ್ಯ ಬರೆದವರ ಸಂಖ್ಯೆ ಬಹಳಷ್ಟಿದೆ. ಆದರೆ ಮಕ್ಕಳ ಸಾಹಿತ್ಯ ಬರೆದವರ ಸಂಖ್ಯೆ ಕಡಿಮೆ ಇದೆ. ಕಡಿಮೆ ಅಂತಲ್ಲ ಬಹಳಷ್ಟು ಕಡಿಮೆ ಎನ್ನಬಹುದು. ಪ್ರತಿ ವರ್ಷಾರಂಭದಲ್ಲಿ ಮತ್ತು ಅಂತ್ಯದಲ್ಲಿ ಮುದ್ರಣಗೊಳ್ಳುವ ಪುಸ್ತಕಗಳಲ್ಲಿ ಮಕ್ಕಳ ಸಾಹಿತ್ಯದ ಕೃತಿಗಳನ್ನು ಎಣಿಸಿದರೆ ಅಚ್ಚರಿಯ ಫಲಿತಾಂಶ ನಮಗೆ ದೊರಕುತ್ತದೆ. ಮಕ್ಕಳ ಸಾಹಿತ್ಯವನ್ನು ಓದಿ ಬೆಳೆದ ಇಂದಿನ ಯುವ ಪೀಳೆಗೆ ಕೂಡ ಮಕ್ಕಳ ಸಾಹಿತ್ಯದ ಕೃತಿಗಳನ್ನು ರಚಿಸುವತ್ತ ಆಸಕ್ತಿ ತೋರುತ್ತಿಲ್ಲ. ಪ್ರೌಢ ಸಾಹಿತ್ಯದತ್ತ ಒಲವು ಹೆಚ್ಚು. ಕುಳಿತಲ್ಲಿ, ನಿಂತಲ್ಲಿ ಕವಿತೆಗಳನ್ನು ಮೊಬೈಲ್‍ಗಳಲ್ಲಿ ಟೈಪ್ ಮಾಡಿ ವಾಟ್ಸ್ ಆಫ್, ಫೆಸ್ ಬುಕ್ ಗಳಿಗೆ ಜೋಡಿಸಿ ಖುಷಿ ಪಡುವುದು. ಅವುಗಳನ್ನು ಒಟ್ಟಗೂಡಿಸಿ ಆಧುನಿಕ ಮುದ್ರಾಣಾಲಯಗಳಿಗೆ ಹೋಗಿ ಅಂದವಾದ ಪುಸ್ತಕಗಳನ್ನು ಹೊರತಂದು ಹಂಚುತ್ತಲೇ ಕವಿಗಳಾಗಿ ಮುನ್ನುಗ್ಗುವವರೇ ಹೆಚ್ಚು. ಅಂತಹವರ ನಡುವೆ ತಮ್ಮ ಪಾಡಿಗೆ ತಾವು ಗ್ರಾಮೀಣ ಪ್ರದೇಶದಲ್ಲಿ ಮುಗ್ಧ ಮಕ್ಕಳ ನಡುವೆ ಇದ್ದುಕೊಂಡು ಅವರಿಗಾಗಿ ಏನಾದರೂ ಬರೆಯಬೇಕು. ಅವರ ಮನಸ್ಸನ್ನು ಅರಳಿಸಬೇಕು ಎನ್ನುವ ತುಡಿತದೊಂದಿಗೆ ಮಕ್ಕಳ ಕಥೆ, ಕವಿತೆಗಳನ್ನು ರಚಿಸುವವರ ಪೈಕಿ ಸುರೇಶ ಕಂಬಳಿ ಕೂಡ ಒಬ್ಬರು.
ಮಳೆಹನಿ ಎನ್ನುವ ಹನಿಗವನ ಸಂಕಲನ, ತುತ್ತು ಕೊಟ್ಟ ಅತ್ತಿಗೆ, ಅಣ್ಣನ ಋಣ, ಮಾಂಗಲ್ಯ ಭಾಗ್ಯ ಎನ್ನುವ ಮೂರು ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ಇನ್ನೂ `ಗುಬ್ಬಿ ಗೂಡು', `ಪುಟಾಣಿ ಗೊಂಬೆ' ಶಿಶು ಗೀತೆಗಳ ಸಂಕಲನವನ್ನು ರಚಿಸಿರುವ ಸುರೇಶ ಅವರ ಹೆಚ್ಚಿನ ಆಸಕ್ತಿ ಮಕ್ಕಳ ಸಾಹಿತ್ಯದ ಕಡೆಗೆ ಇರುವುದಂತೂ ಸತ್ಯ. ಆಗಾಗ ದಿನ ಪತ್ರಿಕೆಗಳ ವಾರದ ಪುರವಣಿಗಳಲ್ಲಿ ಪ್ರಕಟಗೊಳ್ಳುವ ಅವರ ಕಥೆ, ಕವಿತೆಗಳನ್ನು ಗಮನಿಸಿದಾಗ ಅವರಲ್ಲಿರುವ ಮಕ್ಕಳ ಸಾಹಿತ್ಯದ ಆಸಕ್ತಿ, ಅಭಿಮಾನ ಅರಿವಿಗೆ ಬರುತ್ತದೆ. ಅಂತಹ ಆಸಕ್ತಿ, ಅಭಿಮಾನದೊಂದಿಗೆ ಮಕ್ಕಳ ಮನಸ್ಸನ್ನು ಅರಳಿಸಲು ಪುಟ್ಟ ಪುಟ್ಟ ಶಿಶು ಗೀತೆಗಳ ಸಂಕಲನ `ಬಣ್ಣದ ಕಾರು' ಕೃತಿಯನ್ನು ರಚಿಸಿದ್ದಾರೆ. ನಿಜಕ್ಕೂ ಅಭಿನಂದನಾರ್ಹರರು.
ಇದೊಂದು ಪುಟ್ಟ ಕೃತಿ. ಪುಟಾಣಿಗಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಛ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ `ಮಕ್ಕಳ ಲೋಕ'ದಲ್ಲಿ ಜೇನು, ಬಾನು, ಗಾಳಿ, ಬೇವಿನ ಮರ ಬರುತ್ತವೆ. ಎರಡನೇ ಗೀತೆ `ಹಸಿರು', ಸಂಪೂರ್ಣವಾಗಿ ಪರಿಸರದ ಕುರಿತದ್ದಾಗಿದೆ. ನಂತರದ ಗೀತೆ `ಬಣ್ಣದ ಕಾರು', ಇದರಲ್ಲಿಯೂ ಸಹ ಪರಿಸರದ ಅಂಶಗಳು ತುಂಬಿಕೊಂಡಿವೆ. ಜಾತ್ರೆಯಿಂದ ತಂದ ಬಣ್ಣದ ಕಾರು ಪರಿಸರ ಸ್ನೇಹಿ ಕಾರು ಎನ್ನುವ ಸಂಗತಿ, ಅದರ ಗಮ್ಮತ್ತು ಎಲ್ಲವನ್ನೂ ಮೂರು ನಾಲ್ಕು ಪದಗಳಿಂದ ರಚಿಸಿದ ಸಾಲುಗಳ ಶಿಶು ಗೀತೆ ಮಕ್ಕಳ ಓದಿಗಷ್ಟೇ ಮೀಸಲಾಗಿಲ್ಲ. ಹಿರಿಯರು ಸಹ ಓದಲೇಬೇಕಾದಂತಹದ್ದು. ಇಂತಹ ಸಾಕಷ್ಟು ಶಿಶು ಗೀತೆಗಳು ಈ ಕೃತಿಯಲ್ಲಿವೆ.
ಪುಟ ಪುಟಗಳಲ್ಲಿನ ಗೀತೆಗಳನ್ನು ಗಮನಿಸಿದಾಗ ಒಂದು ಸಂಗತಿಯಂತೂ ಮನದಟ್ಟಾಗುತ್ತದೆ. ಅದೇನೆಂದರೆ, ಸುರೇಶ ಕಂಬಳಿ ಅವರು ಒತ್ತಡದಿಂದ ಪದಗಳೊಂದಿಗೆ ಒದ್ದಾಡಿದ್ದು, ಪ್ರಾಸಕ್ಕಾಗಿ ಪೇಚಾಡಿದ್ದು ಗಮನಕ್ಕೆ ಬರುವುದಿಲ್ಲ. ನಿರ್ಗಳವಾಗಿ ಸರಳವಾಗಿ ಬರೆದುಕೊಂಡು ಹೋಗಿದ್ದಾರೆ. ಒಟ್ಟಾರೆಯಾಗಿ ಶಿಶು ಗೀತೆಗಳ ರಚಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವುದಂತೂ ಕಂಡುಬರುತ್ತದೆ.
ಮಕ್ಕಳು ಒಮ್ಮೆ ಶಿಶು ಗೀತೆಯನ್ನು ಓದಿದ ಬಳಿಕ ಆ ಗೀತೆ ಅವರ ಮನದಾಳದಲ್ಲಿ ಬೇರೂರಬೇಕು ಹಾಗೆ ಆಕರ್ಷಕವಾಗುವಂತಹ ಗೀತೆಗಳನ್ನು ಸುರೇಶ ರಚಿಸಿದ್ದಾರೆ. ಮಂಗಣ್ಣನ ಫಜೀತಿ, ತುಂಟ ಪಾಪು, ತರಲೆ ಪುಟ್ಟ, ಪರಿಸರ, ಲಾಲಿಪಪ್ಪು, ಕೂಸುಮರಿ, ಟೀಕು ಇತ್ಯಾದಿ ಶಿಶು ಗೀತೆಗಳು ಮಕ್ಕಳ ನಾಲಿಗೆಯ ಮೇಲೆಯೇ ಉಳಿದು ಬಿಡುವಂತಹವು. ಈ ಸಂಕಲನದಲ್ಲಿ ವಿಭಿನ್ನವಾದ ಗೀತೆಯೊಂದು ಇರುವುದು ಗಮನಕ್ಕೆ ಬಂತು. ಅದರ ಶೀರ್ಷಿಕೆ `ಚಂದ್ರಕಾಂತ ಕರದಳ್ಳಿ'. ಈ ಹೆಸರು ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಚಿರಪರಿಚಿತ. ಜೀವಿತದ ಕೊನೆಯ ದಿನಗಳವರೆಗೂ ಮಕ್ಕಳಿಗಾಗಿ ದುಡಿಯುತ್ತಲೇ ಇದ್ದಂತಹ ಹಿರಿಯ ಜೀವದ ಕುರಿತಾಗಿ ನೆನೆದು ಗೀತೆಯನ್ನು ರಚಿಸಿದ್ದು ವಿಶೇಷವೂ ಕೂಡ. ಮಕ್ಕಳೇ ಹೇಳಿಕೊಳ್ಳುವ ಹಾಗೆ ಗೀತೆಯನ್ನು ರಚಿಸಿದ್ದಕ್ಕೆ ಸುರೇಶ ಕಂಬಳಿ ಅವರನ್ನು ಭೇಷ್ ಎನ್ನಲೇಬೇಕು.
ಮಕ್ಕಳಿಗೆ ಗಂಭೀರ ಸಾಹಿತ್ಯ ಬೇಕಿಲ್ಲ. ಒಟ್ಟಾರೆಯಾಗಿ ಅವರ ಮೃದುಮನಸ್ಸು ಅರಿವಿನೆಡೆಗೆ ತೆರೆದುಕೊಳ್ಳಬೇಕು. ಅಂತಹ ಶಿಶು ಗೀತೆಗಳ ರಚನೆಯ ಅಗತ್ಯತೆ ಇದೆ. ಆದರೆ ಇತ್ತೀಚೆಗೆ ದಿನಗಳಲ್ಲಿ ಅಂತಹ ಶಿಶು ಗೀತೆಗಳ ರಚನೆಯ ಬದಲಾಗಿ ಕೇವಲ ತಮಾಷೆಯಾಗಿ ಮಕ್ಕಳನ್ನು ಬರೀ ರಂಜಿಸುವ ನಿಟ್ಟಿನಲ್ಲಿ ಮಕ್ಕಳ ಕವಿಗಳು ಗಮನಕೊಡುತ್ತಿದ್ದಾರೆ. ವಿಶೇಷವಾಗಿ ಆಂಗ್ಲ ಭಾಷೆಯಲ್ಲಿರುವ ನಾನ್ ಸೇನ್ಸ್ ರೈಮ್ಸ್ ಗಳ ಅನುಕರಣೆಯೊಂದಿಗೆ ಕನ್ನಡದಲ್ಲಿ ಶಿಶು ಗೀತೆಗಳನ್ನು ರಚಿಸುವವರ ಸಂಖ್ಯೆಯೇ ಹೆಚ್ಚು. ಇಂತಹ ಮಕ್ಕಳ ಸಾಹಿತಿಗಳ ನಡುವೆ ಮಕ್ಕಳ ಜ್ಞಾನಕ್ಕೆ ಇಂಬುಕೊಡುವ ಶಿಶು ಗೀತೆಗಳ ರಚನೆಯನ್ನು ಸುರೇಶ ಕಂಬಳಿ ಮಾಡಿದ್ದಾರೆ. ಶಿಶು ಗೀತೆಗಳಲ್ಲಿ ಏನಿರಬೇಕು? ಹೇಗಿರಬೇಕು? ಎನ್ನುವುದನ್ನು ಸುರೇಶ ಕಂಬಳಿ ಬಹಳ ಗಂಭೀರವಾಗಿ ತಮ್ಮ ಮನದೊಳಗೆ ಅಧ್ಯಯನ ಮಾಡಿರುವುದು ಈ ಸಂಕಲನದಲ್ಲಿನ ಶಿಶು ಗೀತೆಗಳನ್ನು ಓದಿದಾಗ ಸ್ಪಷ್ಟವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅಧ್ಯಯನಶೀಲ ಮಕ್ಕಳ ಸಾಹಿತಿಗಳ ಸಂಖ್ಯೆ ಬಹಳ ಕಡಿಮೆ. ಪರಸ್ಪರ ಪೈಪೋಟಿಗಾಗಲಿ, ಹೆಚ್ಚು ಹೆಚ್ಚು ಬರೆಯಬೇಕು ಎನ್ನುವಂತಹ ಗೀಳು ಇಲ್ಲದೆ, ಒಟ್ಟಾರೆಯಾಗಿ ಮಕ್ಕಳಿಗಾಗಿ ಬರೆಯಬೇಕು ಎನ್ನುವ ತುಡಿತ ಸುರೇಶ ಕಂಬಳಿ ಅವರಲ್ಲಿ ಇರುವುದರಿಂದಾಗಿ ಈ `ಬಣ್ಣದ ಕಾರು' ಮಕ್ಕಳ ಮುಂದೆ ಬಂದು ನಿಂತಿದೆ.”