ಬಣ್ಣದ ಕಾಲು

ಬಣ್ಣದ ಕಾಲು

ಪುಸ್ತಕದ ಲೇಖಕ/ಕವಿಯ ಹೆಸರು
ಜಯಂತ ಕಾಯ್ಕಿಣಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೭೦.೦೦, ಮುದ್ರಣ: ೨೦೦೬

‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು ೧೩ ಸಣ್ಣ ಕಥೆಗಳನ್ನು ಹೊಂದಿರುವ ಪುಸ್ತಕದ ಎಲ್ಲಾ ಕಥೆಗಳು ಒಮ್ಮೆ ಓದಿದ ಬಳಿಕ ಇನ್ನೊಮ್ಮೆ ಓದುವಷ್ಟು ಸೊಗಸಾಗಿವೆ. 

ಪುಸ್ತಕದ ತಮ್ಮ ಮಾತಾದ 'ಅರಿಕೆ' ಯಲ್ಲಿ ಜಯಂತ ಕಾಯ್ಕಿಣಿ ಅವರು ಹೀಗೆ ಬರೆದಿದ್ದಾರೆ “ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ ಹುಲಿಯ ದೇಹದ ಅವಶೇಷಗಳ ಎದುರು ಕೂತು ಅದಕ್ಕೆ ಜೀವ ಬರಿಸುವ ಸಂಜೀವಿನಿ ವಿದ್ಯೆ ನಡೆಸುತ್ತಾನೆ. ಜೀವ ತಳೆದದ್ದೇ ತಡ ಆ ಹುಲಿ ಮೊದಲು ಆತನನ್ನೇ ನುಂಗಿ ಬಿಡುತ್ತದೆ. ಕತೆಗಾರನದೂ ಅದೇ ಕತೆ. ಆತ ಕತೆಯ ಜೀವದ ಅಸ್ಪಷ್ಟ ಸುಳಿವನ್ನಷ್ಟೇ ಇಟ್ಟುಕೊಂಡು ಅದರ ರೂಹುಗಳಿಗಾಗಿ ತಹತಹಿಸುತ್ತಾನೆ ಅಥವಾ ರೂಹುಗಳ ಮೂಲಕ ಜೀವಕ್ಕಾಗಿ ಮಿಡಿಯುತ್ತಾನೆ. ಮೈ ತಳೆದಿದ್ದೇ ತಡ ಈ ಹುಲಿಯೂ ಮೊದಲು ಅವನನ್ನು ತಿಂದು ಬಿಡುತ್ತದೆ. ನಂತರ ಕಾಡಿನ ಕತ್ತಲಲ್ಲಿ ಮೆಲ್ಲಗೆ ಅದು ನಾಡಿನೆಡೆ ಚಲಿಸುತ್ತದೆ.

ಹೊರ ಬಂದಷ್ಟೂ ಕತೆಯ ಹೊರೆ ಹೆಚ್ಚು. ಬಹುಷಃ ಓದುಗನ ಮನ ಸೇರಿಕೊಂಡೇ ಮತ್ತದು ಹಗುರಾಗಬಲ್ಲುದು. ಆ ತನಕ ಅದರ ನಗ್ನ ಮುಜುಗರ, ಭೂಭಾರ ಅನಿವಾರ್ಯ. ನಾನು ಬರೆಯಲಾರಂಭಿಸಿ ಅದಾಗಲೇ ಮೂವತ್ತು ವರ್ಷಗಳು ದಾಟಿದ್ದರೂ, ಎಲ್ಲಾ ನಿನ್ನೆ ಮೊನ್ನೆ ಶುರುವಾದಂತೆ ಅನಿಸುತ್ತಿದೆ. ಪ್ರೇರಣೆ, ಹಂಬಲ, ಖುಷಿ, ಚಡಪಡಿಕೆಗಳೆಲ್ಲ ಹಾಗೇ ಇವೆ.”

ಸುಮಾರು ಎರಡುವರೆ ದಶಕಗಳ ಕಾಲ ಮುಂಬಯಿಯಲ್ಲಿ ದುಡಿದ ಪರಿಣಾಮವೇನೋ ಜಯಂತ ಅವರ ಕಥೆಗಳಲ್ಲಿ ಅಲ್ಲಿಯ ಬದುಕಿನ ವಿವರಣೆಗಳು ಬಹಳ ಸೊಗಸಾಗಿ ಮೂಡಿಬರುತ್ತಿವೆ. ಅಲ್ಲಿಯ ನಗರ ಜೀವನ, ಜೋಪಡಿಯ ಬದುಕು, ಲೋಕಲ್ ಟ್ರೈನ್ ಗಳು, ಬಸ್ಸುಗಳು, ಹಾದಿಬೀದೀಲಿ ಆಡೋ ಮಕ್ಕಳು ಈ ವಿವರಗಳನ್ನು ಕಥೆಗಳಲ್ಲಿ ಓದುವಾಗ ನಾವೂ ಮುಂಬಯಿಯ ಪಯಣದಲ್ಲಿದ್ದೇವೋ ಅನಿಸಿಬಿಡುತ್ತದೆ. ಇಲ್ಲಿರುವ ಪ್ರಥಮ ಅಧ್ಯಾಯದ ಕಥೆಗಳಲ್ಲಿ ಮುಂಬಯಿಯ ಬದುಕಿನ ಕಥನವಿದೆ. 

ಪುಸ್ತಕದ ಶೀರ್ಷಿಕೆಯ ಕಥೆಯಾದ ‘ಬಣ್ಣದ ಕಾಲು' ತಂಟೆಕೋರ ಹುಡುಗನಾದ ಚಂದುವನ್ನು ಅವನ ತಂದೆ ಮುಂಬಯಿಯ ರಿಮಾಂಡ್ ಹೋಮ್ ಗೆ ಸೇರಿಸಲು ಕರೆದುಕೊಂಡು ಹೋಗುವುದೇ ಈ ಕಥೆಯ ತಿರುಳು. ಕಥೆಯ ಮೊದಲಾರ್ಧ ಗೋವಾದಲ್ಲಿ ನಡೆದರೆ ಮುಂದಿನ ಭಾಗ ಮುಂಬಯಿಯಲ್ಲಿ ನಡೆಯುತ್ತದೆ. ಚಂದುವಿನ ತುಂಟಾಟದ ಪರಿಯನ್ನು ಕಥೆಗಾರರು ಬಹಳ ಸೊಗಸಾಗಿ ವರ್ಣನೆ ಮಾಡಿದ್ದಾರೆ. ಆತನ ಉಪಟಳದಿಂದ ಬೇಸತ್ತ ಊರಿನ ಜನರು ಅವನನ್ನು ರಿಮಾಂಡ್ ಹೋಮ್ ಗೆ ಸೇರಿಸಲು ಹೇಳುತ್ತಾರೆ. ಒಲ್ಲದ ಮನಸ್ಸಿನಿಂದ ತಂದೆ-ತಾಯಿಯವರು ಗಟ್ಟಿ ಮನಸ್ಸು ಮಾಡಿ ಆತನನ್ನು ಮುಂಬಯಿಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡುತ್ತಾರೆ. ಮುಂಬೈಗೆ ತೆರಳುವ ಮೊದಲು ಆತನ ಗೆಳೆಯ ಕುಂಟ ಮಂಗೇಶಿ ಹಿಂದಿರುಗಿ ಬರುವಾಗ ಆತನಿಗೆ ಬಣ್ಣದ ಕಾಲುಗಳನ್ನು ತರಲು ಹೇಳುತ್ತಾನೆ. ಮುಂಬಯಿಗೆ ತೆರಳಿದ ಬಳಿಕ ನಡೆಯುವ ಘಟನಾವಳಿಗಳನ್ನು ಓದಿದರೇ ಚೆನ್ನ. ಸಂಕಲನದ ಪ್ರತೀ ಕಥೆಯಲ್ಲಿ ಭಿನ್ನ ಭಿನ್ನ ಭಾವಗಳು ಮೇಳೈಸಿವೆ.  

ಜಯಂತ ಕಥೆಗಳ ಬಗ್ಗೆ ಸಮಕಾಲೀನ ಕಥೆಗಾರರಾದ ಎಂ.ಎಸ್. ಶ್ರೀರಾಮ್, ಜೋಗಿ ಹಾಗೂ ಎಸ್ ಮಂಜುನಾಥ್ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ. ಅವುಗಳನ್ನು ಬೆನ್ನುಡಿಯಲ್ಲಿ ಪ್ರಕಟಿಸಿದ್ದಾರೆ. ಪತ್ರಕರ್ತ, ಕಥೆಗಾರ ಜೋಗಿ ಹೇಳುವಂತೆ “ಮಧ್ಯಮ ವರ್ಗದ ಒಂದು ವಿಕ್ಷಿಪ್ತ ಗಳಿಗೆಯನ್ನು ಜಯಂತ ಮಕ್ಕಳು ಚಿಟ್ಟೆ ಹಿಡಿಯುವ ಹಾಗೆ ಏಕಾಗ್ರತೆಯಿಂದ ಹೊಂಚು ಹಾಕಿ ಹಿಡಿಯುತ್ತಾರೆ. ಮತ್ತು ಎಲ್ಲಾ ಲವಲವಿಕೆ, ತಾಜಾತನದಿಂದ ನಮ್ಮ ಮುಂದಿಡುತ್ತಾರೆ. (ಅವರ ಕತೆಯಲ್ಲೇ ಬರುವ) ಕ್ಷೌರದಂಗಡಿಯ ಹುಡುಗ ಹಿಡಿದು ತೋರಿಸುವ ಕನ್ನಡಿಯ ಹಾಗೆ, ಒಂದರೊಳಗೊಂದು ಕನ್ನಡಿ ಸೇರಿ ಹೋಗಿ ತುಂಬ ದೂರದ ತನಕ ಅದರಲ್ಲಿ ಒಂದೇ ಮುಖ ಬೇರೆಬೇರೆಯಾಗಿ ಕಾಣಿಸುತ್ತಾ ಹೋಗುತ್ತದೆ. ಮತ್ತು ಅದೇ ಕಾಲಕ್ಕೆ ಅಂತರಂಗವನ್ನೂ ತೆರೆಯುತ್ತಾ ಹೋಗುತ್ತದೆ.” 

ಇದೇ ರೀತಿಯ ಅನಿಸಿಕೆಯನ್ನು ಉಳಿದವರೂ ವ್ಯಕ್ತಪಡಿಸಿದ್ದಾರೆ. ಜಯಂತ ಕಾಯ್ಕಿಣಿಯವರು ತಮ್ಮ೧೩೦ ಪುಟಗಳ ಈ  ಪುಸ್ತಕವನ್ನು ಕಾಯಕದ ಕೈಲಾಸ ಮುಂಬಯಿಗೆ ಹಾಗೂ ಕೈಲಾಸವೇ ಕಾಯಕವಾದ ಗೋಕರ್ಣಕ್ಕೆ ಅರ್ಪಣೆ ಮಾಡಿದ್ದಾರೆ. ಹೊಸ ಹೊಸ ವಿಷಯ, ವಿನೂತನ ಶೈಲಿಯ ನಿರೂಪಣೆ, ನೈಜ ಪರಿಸರ ಮೊದಲಾದುವುಗಳನ್ನು ಅರಿಯುವ ಬಯಕೆಯಿದ್ದಲ್ಲಿ ಖಂಡಿತಕ್ಕೂ ಈ ಕಥಾ ಸಂಕಲನ ನಿಮಗೆ ಇಷ್ಟವಾಗುತ್ತದೆ.