ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ

ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ

ಬರಹ

ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ

ಬೆಂಗಳೂರಿನ ಗಾಂಧಿನಗರಕ್ಕೆ ಕಣ್ಣಲ್ಲಿ ಕನಸುಗಳ ತುಂಬಿಕೊಂಡು ಬಂದ ಎಷ್ಟೋ ಜನ ಕಂಬಿನಿಯಿಟ್ಟು ತಮ್ಮ ಊರಿಗೆ ತಿರುಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಅವರು ಇಲ್ಲಿ ಪಟ್ಟ ಪಾಡು, ಅವಮಾನ ಇವುಗಳ ಬಗ್ಗೆ ಒಂದು ನೋಟ. ನಾನು ಗಾಂಧಿನಗರದ ಯಾತ್ರಿನಿವಾಸ್ ಮುಂದೆ ಗೆಳೆಯನೊಬ್ಬನ ಜತೆಗೆ ಹರಟುತ್ತ ನಿಂತಾಗ ಯುವಕನೊಬ್ಬ ಗ್ರೀನ್ ಹೌಸ್ ನತ್ತ ಕಾಯುತ್ತ ನಿಂತಿದ್ದ. ನಾವು ಹರಟೆಯಲ್ಲಿ ಮಗ್ನ ರಾಗಿ ಒಂದು ಘಂಟೆಗೂ ಹೆಚ್ಚು ಕಾಲ ನಿಂತಿದ್ದೆವು. ಆದರೆ ಈ ಯುವಕ ಮಾತ್ರ ಹಾಗೆ ನಿಂತಿದ್ದ. ಕುತೂಹಲದಿಂದ ಮಾತನಾಡಿಸಿದೆ. ಅವನು ನಟನಾಗಬೇಕೆಂದು ಬೆಂಗಳೂರಿಗೆ ಬಂದವನು ಎಂದು ಗೊತ್ತಾಯಿತು. ಯಾರೋ ಅವನಿಗೆ ಚಲನಚಿತ್ರಗಳ ಸಭೆ ಸಮಾರಂಭಗಳು ಇಲ್ಲಿ ನಡೆಯುತ್ತವೆ ಎಂದು ಹೇಳಿದ್ದಾರೆ. ಅದಕ್ಕೆ ಯಾರಾದರೂ ಅಥವಾ ನಟರೋ ನಿರ್ದೇಶಕರೋ ಸಿಕ್ಕರೆ ಅವಕಾಶಗಳನ್ನು ಕೇಳಬೇಕೆಂದು ನಿಂತಿದ್ದೇನೆ ಅಂದ. ಕೈ ಯಲ್ಲಿ ಒಂದು ಚೀಲ, ಅದರಲ್ಲಿ ಅವನ ಏಕಪಾತ್ರಾಭಿನಯದ ಕೆಲವು ಚಿತ್ರಗಳಿದ್ದವು. ಆಗ ಇವನಂತೆ ಬಂದವರು ಎಷ್ಟು ಜನ ಸಫಲರಾಗಿದ್ದಾರೆ ಅನ್ನುವುದಕ್ಕಿಂತ ವಿಫಲರಾದವರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಗಾಂಧಿನಗರವನ್ನೆಲ್ಲ ತಿರುಗಿದೆ. ಸಿಕ್ಕರೂ ಕೇವಲ ಮೂರು ಜನ ಸಿಕ್ಕರು. ಒಬ್ಬನು ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಒಬ್ಬನು ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬನು ಕೆಲಸವಿಲ್ಲದೆ ಅಲೆದಾಡುತ್ತಿದ್ದಾನೆ. ಅವನನ್ನು ಕೇಳಿದಾಗ, ಇಲ್ಲಾ ಸಾರ್ ಊರಿಂದ ದೊಡ್ಡ ಮನಷ್ಯಾ ಆಗ್ತಿನಂತ ಓಡಿ ಬಂದಿದ್ದೇನೆ. ಇಲ್ಲಿ ಬಂದರೆ ಹೀಗೆ, ಮೊದಲು ಕೈ ಯಲ್ಲಿ ಕಾಸಿದ್ದಾಗ ದೈನಿಕ್ ಪಾಸ್ ಕೊಂಡು ಬೆಂಗಳೂರನ್ನು ನೋಡ್ತಾ ಇದ್ದೆ. ಈಗ ಅದೂ ಇಲ್ಲ, ಇಲ್ಲೆ ಸೆಟ್ ದೋಸೆ ಅಥವಾ ಪೂರಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಪ್ರತಿಭೆ ಇದೆ ಸಾರ್ ಅವಕಾಶ ಇಲ್ಲಾ, ಆದರೂ ಬಿಡಲ್ಲ ಅನ್ನುತ್ತಾನೆ ಈ ಛಲದಂಕ ಮಲ್ಲ. ಇನ್ನಿಬ್ಬರು ಕೆಲಸವನ್ನೇನೊ ಮಾಡುತ್ತಿದ್ದಾರೆ. ಆದರೆ ನಟರಾಗುವ ಆಸೆಯನ್ನು ಮಾತ್ರ ಬಿಟ್ಟಿಲ್ಲ. ರಜೆ ಇದ್ದ ಸಮಯದಲ್ಲಿ ಜನಾರ್ದನ ಮತ್ತು ಕನಿಷ್ಕ್ ಹೋಟೆಲ್ ಕಡೆಗೆ ಹೋಗಿ ನಿರ್ಮಾಪಕರು ಮತ್ತು ಸಂಭಾಷಣೆಯನ್ನು ಬರೆಯುವವರನ್ನು ಭೇಟಿ ಮಾಡಿದ್ದೇವೆ. ಮುಂದಿನದು ಆ ಭಗವಂತನ ಇಚ್ಛೆ ಎನ್ನುತ್ತಾರೆ ಈ ಯುವಕರು. ಕನ್ನಡದಲ್ಲಿ ಹೊಸಬರ ಗಾಳಿ ಬೀಸುತ್ತಿದ್ದು ಅದು ನಮಗೆ ವರವಾದರೆ ಸಾಕು. ನಮ್ಮ ಜೀವನ ಸಾರ್ಥಕ ಎನ್ನುವುದು ಇವರಿಬ್ಬರ ಅಭಿಪ್ರಾಯ. ಇವರಿಗೆ ಒಳ್ಳೇಯದಾಗಲಿ ಎಂದು ಆ ದೇವರನ್ನು ಪ್ರಾರ್ಥಿಸಿದೆ. ಇಂತಹ ಎಷ್ಟೊ ಜನರು ಗಾಂಧಿನಗರದ ಬೀದಿ ಬೀದಿಗಳಲ್ಲಿ ಸುತ್ತುತ್ತಿದ್ದಾರೆ. ನಿಮಗೂ ಭೇಟಿಯಾದರೆ ಮಾತನಾಡಿಸಿ. ಮುಂದೆ ಅವರಲ್ಲೊಬ್ಬ ಸ್ಟಾರ್ ಆಗಬಹುದೇನೋ ಅಲ್ಲವೇ...