ಬಣ್ಣದ ಲೋಕದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಕಪ್ಪು‍ ಬಿಳುಪು ಮೂಕಿ ಚಿತ್ರ "ದಿ ಆರ್ಟಿಸ್ಟ್"

ಬಣ್ಣದ ಲೋಕದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಕಪ್ಪು‍ ಬಿಳುಪು ಮೂಕಿ ಚಿತ್ರ "ದಿ ಆರ್ಟಿಸ್ಟ್"

 ಮಾತುಗಳನಾಡದೇ ಹೃದಯ ಗೆಲ್ಲಬಹುದೆಂಬುದಕ್ಕೆ ಮಾದರಿ ಚಿತ್ರ "ದಿ ಆರ್ಟಿಸ್ಟ್". ಯಾವುದೇ ಭಾಷೆಯ ಜನ ನೋಡಿ ಅರ್ಥೈಸಬಹುದಾದ ಚಿತ್ರವಿದು. ದೇಶ-ಭಾಷೆಗಳ ಗಡಿ ದಾಟಿದ ಚಿತ್ರ. ಇದೇ ಈ ಚಿತ್ರದ ವೈಶಿಷ್ಠತೆ.

1927 ಮೂಕಿ ಚಿತ್ರಗಳ ಕಾಲ. ಆ ಕಾಲದ ಹೆಸರಾಂತ ಹಿರೋ ವೆಲೆಂಟಿನ್. ಜನ ಮನ ಗೆದ್ದ ಮೂಕ ನಾಯಕ. ಹೆಸರು ಹಣವನ್ನು ತರುವುದರ ಜೊತೆಗೆ ಅಹಂಕಾರವನ್ನು ಮಾಮೂಲಿಯಂತೆ ಪಡೆದ ನಾಯಕ. ಆತನ ಚಿತ್ರವೊಂದರಲ್ಲಿ ಸಹ ನಟಿಯಾಗಿ ಅಭಿನಯಿಸಲು ಬಂದ ಸುಂದರಿ ಪೆಪ್ಪಿ ಮಿಲ್ಲರ್ "ಹಿರೋಯಿನ್ ಆಗಬೇಕಾದರೆ ವಿಭಿನ್ನವಾಗಿ ಕಾಣಬೇಕು" ಎಂದು ಮೂಗಿನ ಪಕ್ಕ ಕಪ್ಪು ಚುಕ್ಕಿಯೊಂದನ್ನು ವೆಲೆಂಟಿನ್ ಇಡುತ್ತಾನೆ. ಪೆಪ್ಪಿ ಮಿಲ್ಲರ್ ವೆಲೆಂಟಿನ್ ನನ್ನು ಇಷ್ಟಪಡುತ್ತಾಳೆ.

ಅಷ್ಟರೊಳಗೆ ಟಾಕಿ ಚಿತ್ರಗಳು ಕಾಲಿಡುವ ವಸಂತಕಾಲ. ಪ್ರಖ್ಯಾತ ಕಿನೊಗ್ರಾಫ್ ಸ್ಟುಡಿಯೊ ಕಾಲಕ್ಕೆ ತಕ್ಕಂತೆ ಮೂಕಿ ಚಿತ್ರಗಳನ್ನು ನಿಲ್ಲಿಸಿ, ಟಾಕಿ ಚಿತ್ರಗಳನ್ನು ತಯಾರಿಸಲು ನಿರ್ಧರಿಸಿದಾಗ, ಹೀರೊ ವೆಲೆಂಟಿನ್ ಮಾತನಾಡಲು ಒಪ್ಪುವುದಿಲ್ಲ. ತಾನೇ ನಿರ್ಮಾಪಕನಾಗಿ "ಪ್ರೀತಿಯ ಕಣ್ಣೀರು" ಎಂಬ ಮೂಕಿ ಚಿತ್ರವನ್ನು ನಿರ್ದೇಶಿಸಿ, ಹೀರೊ ಆಗಿ ಅಭಿನಯಿಸುತ್ತಾನೆ. ಅದು ನೆಲ ಕಚ್ಚುತ್ತದೆ. ಪೆಪ್ಪಿ ಮಿಲ್ಲರ್ ಟಾಕಿ ಚಿತ್ರಗಳ ಮೂಲಕ ಹೆಸರಾಂತ ಹೀರೋಯಿನ್ ಆಗುತ್ತಾಳೆ.
 
ನಮ್ಮ ಮೂಕಿ ಹೀರೊ ದುರಂತ ನಾಯಕನಾಗುತ್ತಾನೆ. ಅರ್ಥಿಕವಾಗಿ ಮತ್ತು ನೈತಿಕವಾಗಿ ಪತನವಾಗುತ್ತಾನೆ. ಅವನು ಕೊನೆಗೆ ಏನಾಗುತ್ತಾನೆ? ಪೆಪ್ಪಿ ಮಿಲ್ಲರ್ ತನ್ನ ಬದುಕಿನ ಹೀರೊಗೆ ಕೈ ಕೊಡುತ್ತಾಳಾ? ಇನ್ನಿತರ ಕುತೂಹಲದೊಂದಿಗೆ ಚಿತ್ರ ಮುಂದುವರಿಯುತ್ತದೆ.


ಇಡೀ ಚಿತ್ರಗಳಲ್ಲಿ ವೆಲೆಂಟಿನ್ ನನ ನಾಯಿ ತನ್ನ ಪಾತ್ರದೊಂದಿಗೆ ಚಿತ್ರವನ್ನು ಜೀವಂತವಾಗಿರುಸುತ್ತದೆ. ನಾಯಿ ಪೋಲಿಸ್ನ್ನು ಕರೆದುಕೊಂಡು ಬಂದು ನಾಯಕನ ಜೀವವನ್ನು ಉಳಿಸುವ ದೃಶ್ಯ ಉತ್ತಮವಾಗಿ ಮೂಡಿಬಂದಿದೆ. ಫ್ರೆಂಚ್ ಚಿತ್ರಲೋಕದ ಹೆಸರಾಂತ ನಟ ಜೀನ್ ಡುಜಾಡ್ರಿನ್ ನಾಯಕನ ಪಾತ್ರದಲ್ಲಿ ಒಳ್ಳೆಯ ಅಭಿನಯವನ್ನು ನೀಡಿದ್ದಾರೆ. ಚಿತ್ರ ನೋಡಲು ಕಿರಿ ಕಿರಿ ಕೊಡದಂತೆ ಪ್ರೇಮಕತೆಯೊಂದಿಗೆ ಲಯಬದ್ಧವಾಗಿ ಮೂಡುವ ಅದ್ಭುತ ಸಂಗೀತವನ್ನು ಲುಡೊವಿಕ್ ಬೌರ್ಸೆ ನೀಡಿದ್ದಾರೆ.

ಲವಲವಿಕೆಯೊಂದಿಗೆ ಕೂಡಿದ ಈ ಚಿತ್ರ ಎಲ್ಲೂ ಮಾತೇ ಇಲ್ಲ ಅನ್ನುವುದು ಗಮನಕ್ಕೆ ಬಾರದ ರೀತಿಯಲ್ಲಿ ನವಿರಾದ ಹಾಸ್ಯ ಭರಿತ ಮೌನದೊಂದಿಗೆ ಪ್ರೇಕ್ಷಕನಿಗೆ ಮುದವನ್ನು ನೀಡುತ್ತದೆ. ಫ್ರೆಂಚ್ನ ವಿದ್ಯಾವಂತನಿಂದ ಹಿಡಿದು ಭಾರತದ ಅಜ್ಜಿಯೂ ನೋಡಿ ಖುಷಿ ಪಡಬಹುದಾದ ಚಿತ್ರ "ದಿ ಆರ್ಟಿಸ್ಟ್".

2012ರ ಅಸ್ಕರ್ ಪ್ರಶಸ್ತಿಗೆ 10 ವಿಭಾಗಗಳಲ್ಲಿ ನಾಮನಿದ್ರೇಶನಗೊಂಡ "ದಿ ಆರ್ಟಿಸ್ಟ್",  ಮೈಕೆಲ್ ಹಝನವಿಸಿಯಸ್ಗೆ ಅತ್ಯುತ್ತಮ ನಿದ್ರೇಶನ, ಲುಡೊವಿಕ್ ಬೌರ್ಸೆಗೆ ಅತ್ಯುತ್ತಮ ಸಂಗೀತ, ಅತ್ಯುತ್ತಮ ವಸ್ತ್ರವಿನ್ಯಾಸ, ಜೀನ್ ಡುಜಾಡ್ರಿನ್ಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುವುದರೊಂದಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.