ಬಣ್ಣದ ಹಬ್ಬದ ಕವಿತೆಗಳು
ಹೋಳಿ ಹುಣ್ಣಿಮೆ
ಹುಣ್ಣಿಮೆ ಬಂದೈತೆ ಹೋಳಿ ಹಣ್ಣಿಮೆ ಬಂದೈತೆ
ಯುವಜನರಾ ನಡುವೆ ಹೋಳಿ ಹುಣ್ಣಿಮೆ ಬಂದೈತೆ
ಸಡಗರ ತುಂಬೈತೆ ತುಂಬಾ ತುಂಬಿ ತುಳುಕೈತೆ
ಬಣ್ಣದ ಓಕುಳಿ ಸುತ್ತಲು ಚೆಲ್ಲುತ ಸಂತಸ ನಗುತೈತೆ
ಬಣ್ಣವನೆರಚುತಾ ನಡುವೆ ಚೆಲುವನು ಬೀರೈತೆ
ಪ್ರೀತಿಯ ತಂದೈತೆ ಸುಖದೊಳು ನೆಮ್ಮದಿ ಸಿಗುತೈತೆ
ಸೊಬಗಲಿ ಸಾಗುತ ಮನವದು ಸವಿಯನು ಸವಿದೈತೆ
ಬೆಸುಗೆಯ ಕಾಣುತಲೆ ಪ್ರೇಮಕೆ ಒಡಲನು ಕೊಟೈತೆ
ಆಗಸದಂಚಲ್ಲಿ ಸುಂದರ ಚಂದಿರ ಬಂದೈತೆ
ಬೆಳಕನು ಬೀರುತಾ ಮೋಹದ ಹಾಲನು ಚೆಲೈತೆ
ರಂಗು ರಂಗಿನಾ ಒಲವಿನ ಹೋಳಿ ಹರಡೈತೆ
ಮನವನು ಬೆಳಗುತಲೆ ಪ್ರೇಮದಿ ನಮ್ಮನು ಕರೆದೈತೆ
ಬುವಿಯಲಿ ಚೆಂದದಾ ಬಣ್ಣದ ಮಿಂಚದು ಸುಳಿದೈತೆ
ಓಕುಳಿ ಚಿಮ್ಮುತಲೆ ಬಾಹು ಬಂಧನ ಬೆಸೆದೈತೆ
-ಹಾ ಮ ಸತೀಶ
***
ಸಂಭ್ರಮದ ಓಕುಳಿ
ಬಾರೇ ತಂಗವ್ವಾ ಬಣ್ಣದ ಹಬ್ಬಕೆ/ತವರ ಮನಿಗೆ ಹೋಗೋಣ/ಬಾರೆ/
ಸಂಭ್ರಮದ ಓಕುಳಿ ಆಡೋಣ//
ತಾನಿ ತಂದಾನ ತಂದಾನ ತಾನ/ತಾನಿ ತಂದಾನ ತಂದಾನ/ತಂದಾನ ತಾನ ತಂದಾನ//
ಪರಶಿವನು ಭೋಗ ನಿದಿರೆ ಮಾಡವ್ನಂತೆ/ತಾಯಿ ಪಾರ್ವತಿ ತಪಸ್ಸಿಗೆ ಕುಂತವಳ್ನಂತೆ/ತಂಗವ್ವಾ/ಮನುಮಥನ ಸುಟ್ಟು ಭಸ್ಮ ಮಾಡವ್ನಂತೆ//
ದುಷ್ಟ ತಾರಕನ ಉಪಟಳ ಆಗೈತಂತೆ/ಷಣ್ಮುಖ ಸ್ವಾಮಿ ಕೊದ್ನಂತೆ/ತಂಗವ್ವಾ/ಲೋಕಕ್ಕೆ ಕ್ಷೇಮ ತಂದವ್ನಂತೆ//
ಕ್ವಾಪ,ಸಿಟ್ಟು, ಸೆಡವು ಸುಟ್ಹಾಕಿ ಬಿಡೋಣ/ಒಟ್ಟಾಗಿ ನಾವಿಂದು ಬೆರೆಯೋಣ/ತಂಗವ್ವಾ/ಕಾಮನಹಬ್ಬವ ಮಾಡೋಣ//
ಹತ್ತು ತಲೆಯ ರಾವಣನಂತೆ/ಮುತ್ತು ಸಿಂಗಾರ ಮಾಡುತಾರಂತೆ/ತಂಗವ್ವಾ/ಹಳೆ ವಸ್ತ್ರ ಪೇರಿಸಿ ಸುಡ್ತಾರಂತೆ//
ಹೋಳಿ ಹುಣ್ಣಿಮೆಯಲ್ಲಿ ಕುಣಿಯುತ್ತ ನಲಿಯುತ್ತ/ಬಣ್ಣದ ನೀರ ಎರೆಚೋಣ/ತಂಗವ್ವಾ/ಹೋಳಿಗೆ ಸವಿಯ ಸವಿಯೋಣ//
ಅಪ್ಪಯ್ಯಾ ಹೆತ್ತವ್ವ,ತಾತ ಅಜ್ಜಿ/ತಮ್ಮಯ್ಯ ಅಣ್ಯಯ್ಯ ಮಾಮ ಮಾಮಿ/ತಂಗವ್ವಾ/ಬಂಧು ಬಳಗ ಸೇರ್ಯಾರಂತೆ//
ಒಂದಾಗಿ ಹಾಡುತ್ತ ನಲಿಯುತ್ತ ಕುಣಿದು/ನಕ್ಕು ನಗಿಸ ನಲಿಯೋಣ/ತಂಗವ್ವಾ/ಸಂಭ್ರಮದ ಓಕುಳಿ ಆಚರ್ಸೋಣ//ತಾನಿ ತಂದಾನ//
-ರತ್ನಾ ಕೆ.ಭಟ್, ತಲಂಜೇರಿ
***
ರಂಗ ರಂಗಿಯ ಹೋಲಿ..
ನಿನ್ನ ಹೆಸರಿನ ರಂಗು ರಂಗಿನ
ಹೋಲಿ ನನ್ನಯದಾಗಲಿ
ನನ್ನ ಒಲವಿನ ಮುದ್ದು ರಂಗಿಯೆ
ಹಬ್ಬ ಬಂದಿತು ಬಾರಲೆ||
ನಿನ್ನ ಅಂದವು ಎನಿತು ಚೆಂದವು
ಏಳು ಬಣ್ಣವ ಮೀರಿದೆ
ನಿನ್ನ ಗಂಧವು ಹೂವ ಗಂಧವು
ಮಧುರ ಕಂಪನು ಬೀರಿದೆ||
ತಾರೆಯಂಗಳ ಮಿನುಗೊ ತಿಂಗಳು
ನಿನ್ನ ಹೊನಪು ಸೋಜಿಗ
ಬಾರೆ ಭಾಮಿನಿ ನೀಡು ಒಲವುನಿ
ಪ್ರೇಮ ನಿಧಿಯೇ ನೀನಿಗ||
ರಂಗು ರಂಗಿನ ಕನಸ ಕಟ್ಟಿದೆ
ಮನದ ಮಲ್ಲಿಗೆ ಬಾರೆಲೆ
ರಿಂಗಣಿಸುತಿದೆ ಹೃದಯ ವೀಣೆಯು
ರಾಗ ಹೊಮ್ಮಿದೆ ಕೇಳಲೆ||
ಹೋಳಿ ಹಬ್ಬವು ಕಹಿಯ ನೆನೆಪನು
ದಹಿಸಿ ಬಾಳನು ಬೆಳಗಲಿ
ನಾಳೆ ಹೊನ್ನಿನ ಪ್ರೀತಿ ತೇರಲಿ
ರಂಗ ರಂಗಿಯು ಮೆರೆಯಲಿ||
-*ಶ್ರೀ ಈರಪ್ಪ ಬಿಜಲಿ*