ಬಣ್ಣಿಸಲಾಗದು ನನಗೆ

ಬಣ್ಣಿಸಲಾಗದು ನನಗೆ

ಕವನ

ಒಂದೇ ಬಳ್ಳಿಯಲರಳಿದ ಹೂಗಳು

ಒಂದೆಡೆ ಸೇರಿದ ಖುಷಿಗೆ

ಅಂದದ ನಸುನಗು ಹೊಮ್ಮಿದೆ ಮೊಗದಲಿ

ಚಂದದೆ ನಿಂತರು ನುಡಿಗೆ

 

ನೀಲಿಯ ಬಣ್ಣದ ಸೀರೆಯನುಟ್ಟರು

ಹೋಲುವ ಬಣ್ಣದ ರವಿಕೆ

ಬಾಲೆಯರೀರ್ವರ ಶಿರದಲಿ ಗಿಳಿಗಳು

ನೀಲಿಯ ವರ್ಣವು ಅವಕೆ

 

ಹಿರಿಯಳು ಚಂದದಿ ಬಾಚಿದ ತನ್ನಯ

ತುರುಬನು ಬಿಗಿದಳು ಮೇಲೆ

ಕಿರಿಯವಳೇತಕೊ ಹೆಣೆದಳು ಜಡೆಯನು

ಹಿರಿಹಿರಿ ಹಿಗ್ಗುವ ಬಾಲೆ

 

ಬೇರೆಯೆ ಲೋಕದ ವಾಸಿಗಳಾತರ

ತೋರುವರೀರ್ವರು ನಮಗೆ

ನಾರೀಯರೀರ್ವರು ಬಂದಿಹರಿಲ್ಲಿಗೆ

ದಾರಿಯ ಮರೆಯುತ ಇಳೆಗೆ

 

ಚಿನ್ನದ ನಗರಿಯು ತವರಾಗಿಹುದೇ

ಹೊನ್ನಕಿರೀಟವು ತಲೆಗೆ

ಮನ್ನಿಸಿ ನನ್ನನು ಚೆಲುವಿನ ಗಣಿಗಳ

ಬಣ್ಣಿಸಲಾಗದು ನನಗೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್