ಬತ್ತಿದ ಚಿಲುಮೆ
ಒಡಲಿನಾಳದ ಹಪಹಪಿಕೆ
ರಂಗನು ಮಾರಿದೆ ಸಾಗರಿಕೆ
ಹೆಜ್ಜೆಯ ಸಾಲಿನ ಕನವರಿಕೆ
ಬತ್ತಿದ ಗಂಟಲಿಗೆ ಬಾಯಾರಿಕೆ..
ಸೀಮೆಯು ಸಾರಿದೆ ವರ್ಣದ ಗುಂಗು
ಹಂಗಿನ ಬದುಕಲಿ ಹೊಸತನ ಎಂದು?...
ಗುಟುಕಿನ ನೀರಿಗೆ ಬೆಲೆಯನು ನೀಡೆನು
ನೆನ್ನೆದೆ ರಕುತವ ನಿಮಗರ್ಪಿಸುವೆನು..
ಬಾಲ್ಯವ ಕಳೆಯದ ಹಸುಳೆಯು ನಾನು
ಮೈಲಿಯ ದಾರಿಯ ದಾಟುವೆನು
ಅಂಗುಲ ಜಾಗದ ಬಿಡಾರಕೆ
ಅಗ್ನಿಕುಂಡಲದ ಹೆದರಿಕೆ..
ಮಣ್ಣಿನ ಬಣ್ಣವ ಮೊಗದೊಳೇರಿಸಿ
ಹೊನ್ನಿನ ಹೊಳಪಲಿ ನಗುವವಳು
ಬಿಂದಿಗೆ ನೀರಲಿ ದಿನ ಸಾಗಿಸುತ
ಚೆಂದಗೆ ಕಾಣುವ ಕನಸಿರುವವಳು..
ಕುಟುಕುವ ಹದ್ದಿಗೆ ಭಯಪಡುವುದೆನ್ನೆದೆ
ಸಾವಿರ ನೋವಿನ ಜೋಕಾಲಿ
ಜೀಕಲು ಕಂಬನಿ ಹನಿಹನಿಯಲ್ಲೂ
ವ್ಯರ್ಥವಾಯಿತು ಕಣ್ಣೀರು..
ಮೋಡವೇ ಕಾಣದ ಆಗಸದಲ್ಲಿ
ಚುಕ್ಕಿಯ ಬಯಕೆ ನನಗಿಲ್ಲ
ತಂಪನು ತರದ ಗಾಳಿಯಲೆಯಲ್ಲಿ
ಧ್ಯಾನಿಸೋ ಸ್ವಪ್ನವು ಬೇಕಿಲ್ಲ..
ಚಿಂದಿಯ ಹೊಲಿದು ಬಣ್ಣವ ಬಳಿದ
ನೆಯ್ದಿರೋ ನೂಲಿಗೂ ಬೇಸರಿಕೆ
ನೀರನು ಕಾಣದ ನಖಪುಂಜಗಳಿಗೆ
ಎಂದೂ ಆರದ ನೀರಡಿಕೆ..
ಮಾಸದ ನಗುವಲಿ ಆಸೆಯು ಇಹುದು
ಬತ್ತಿದ ಚಿಲುಮೆಗೆ ಒರತೆಯಾಗಲು
ಅನುದಿನ ಪ್ರತಿಕ್ಷಣ ಕರಗಳು ಬೇಡಿದೆ
ವರುಣನ ಕೃಪೆಗೆ ಹಾತೊರೆಯುತಿದೆ..
-‘ಮೌನರಾಗ’ ಶಮೀರ್ ನಂದಿಬೆಟ್ಟ