ಬದನೆಕಾಯಿ ಕದ್ದ ತೆನಾಲಿ ರಾಮ !

ಬದನೆಕಾಯಿ ಕದ್ದ ತೆನಾಲಿ ರಾಮ !

ಒಂದು ದಿನ ಕೃಷ್ಣದೇವರಾಯ ಭೋಜನ ಕೂಟ ಏರ್ಪಡಿಸಿದ್ದ. ಅದರಲ್ಲಿ ತನ್ನ ತೋಟದ ಬದನೆಕಾಯಿಯ ಪಲ್ಯವನ್ನೂ ಮಾಡಿಸಿದ್ದ. ಪಲ್ಯ ಎಷ್ಟು ರುಚಿಯಾಗಿತ್ತೆಂದರೆ ಎಲ್ಲರೂ ಮತ್ತೆ ಮತ್ತೆ ಬಡಿಸ್ಕೊಂಡು ತಿಂದರು. ತೆನಾಲಿ ರಾಮ ಮನೆಗೆ ಬಂದು ಹೆಂಡತಿ ಬಳಿ ಬದನೆಯ ಸ್ವಾದವನ್ನು ವರ್ಣನೆ ಮಾಡಿ, ಆಕೆಯ ಬಾಯಿಯಲ್ಲಿ ನೀರೂರುವಂತೆ ಮಾಡಿದ. ಇದನ್ನು ಕೇಳಿದ ಅವನ ಹೆಂಡತಿ, ಅದೇ ತೋಟದಿಂದ ಬದನೆ ತಂದು ತಮ್ಮಲ್ಲೂ ಅದನ್ನು ಅಡುಗೆ ಮಾಡಿ ತಿನ್ನಲೇಬೇಕೆಂದು ಹಠ ಹಿಡಿದಳು. ಆದರೆ ಕೃಷ್ಣ ದೇವರಾಯನಿಗೆ ಆ ಬದನೆಕಾಯಿಯ ಗಿಡಗಳ ಮೇಲೆ ಎಷ್ಟು ಮೋಹವಿತ್ತೆಂದರೆ, ಆ ತೋಟದ ಬದನೆ ಕಾಯಲು ವಿಶೇಷ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲ, ಒಂದು ಬದನೆ ಕಾಣೆಯಾದರೂ ಕದ್ದವರನ್ನು ಹುಡುಕಿ ಅವರ ತಲೆಕಡಿಯುವಂತೆ ಆಜ್ಞೆ ಮಾಡಿದ್ದ.

ಆದ್ದರಿಂದ ಈ ಎಲ್ಲ ಸಂಗತಿಯನ್ನು ಹೆಂಡತಿಗೆ ಬಗೆಬಗೆಯಾಗಿ ತೆನಾಲಿ ರಾಮ ಹೇಳಿದರೂ ಹೆಂಡತಿ ಹಠ ಬಿಡಲಿಲ್ಲ. ಕೊನೆಗೆ ತೆನಾಲಿ ರಾಮ ತನ್ನೆಲ್ಲಾ ಜಾಣ್ಮೆ ಬಳಸಿ, ಕಾವಲುಗಾರನ ಕಣ್ಣು ತಪ್ಪಿಸಿ, ರಾಯರ ತೋಟದ ಒಂದು ಬದನೆಕಾಯಿಯನ್ನು ಕದ್ದು ತಂದೇ ಬಿಟ್ಟ. ಹೆಂಡತಿ ರಾತ್ರಿಗೆ ಬದನೆಯ ಅಡುಗೆ ಮಾಡಿ, ಅದರ ರುಚಿ ಸವಿದು ಪರವಶಳಾದಳು. ಬೇಸಿಗೆ ಕಾಲವಾದುದರಿಂದ ಅವರ ಒಬ್ಬನೇ ಮಗ ಮನೆಯ ಹೊರಗೆ ಮಲಗಿದ್ದು, ಅವನಿಗೆ ಇಷ್ಟು ರುಚಿಯ ಬದನೆಯ ಪಲ್ಯ ಕೊಡದಿದ್ದರೆ ಹೇಗೆ ಎಂದು ಹೆಂಡತಿ ಒತ್ತಾಯ ತೆಗೆದಳು. 

ತೆನಾಲಿ ರಾಮನಿಗೆ ಅಂಜಿಕೆ. ಈ ಹುಡುಗ ಎಲ್ಲಿಯಾದರೂ ಬಾಯಿ ಬಿಟ್ಟರೆ ನಮ್ಮ ಗತಿ ಏನು? ಎಂದು. ಆದರೆ ಹೆಂಡತಿಯ ಒತ್ತಡ ತಡೆಯಲಾಗದೇ ಕೊನೆಗೊಂದು ಉಪಾಯ ಮಾಡಿದ. ಒಂದು ಕೊಡದಲ್ಲಿ ನೀರು ತೆಗೆದುಕೊಂಡು, ಮಗ ಮಲಗಿದ್ದಲ್ಲಿ ಹೋಗಿ, ಮಗನ ಮೇಲೆ ಚೆಲ್ಲಿ 'ನೋಡು ಮಳೆ ಬರುತ್ತಿದೆ. ಎದ್ದು ಒಳಗೆ ಬಂದು ಊಟ ಮಾಡು' ಎಂದು ಎಬ್ಬಿಸಿ ಕರೆದುಕೊಂಡು ಹೋಗಿ ಒದ್ದೆ ಬಟ್ಟೆ ತೆಗೆಸಿ, ಬೇರೆ ಬಟ್ಟೆ ಹಾಕಿಸಿ, ಬದನೆ ಪಲ್ಯ ಬಡಿಸಿ ಊಟ ಮಾಡಿಸಿದ. ಹುಡುಗ ತುಂಬಾ ಖುಷಿಯಿಂದ ಊಟ ಮಾಡಿದ. ತೆನಾಲಿ ರಾಮ ಮತ್ತೆ ಮಗನಿಗೆ ಹೊರಗೆ ಮಳೆ ಬರುತ್ತಿದೆ, ನೀನು ಒಳಗೆ ಮಲಗು ಎಂದ. ರಾತ್ರಿಯ ಕತ್ತಲೆಯಲ್ಲಿ ಮತ್ತು ನಿದ್ರೆಯ ಅಮಲಿನಲ್ಲಿ ಮಗನೂ ತೆನಾಲಿ ರಾಮನ ಮಾತನ್ನು ನಂಬಿ ಒಳಗೆ ಹೋಗಿ ಮಲಗಿದ. 

ಕೃಷ್ಣ ದೇವರಾಯನ ತೋಟದ ಬದನೆ ಕದ್ದ ವಿಚಾರ ಮರುದಿನ ಸುದ್ದಿ ಆಯಿತು. ಯಾರೋ ತೆನಾಲಿ ರಾಮನ ಮನೆಯಲ್ಲಿ ಬದನೆಕಾಯಿ ಪಲ್ಯ ಮಾಡಿದ್ದಾರೆ ಎಂಬ ವಿಷಯವನ್ನು ಕೃಷ್ಣದೇವರಾಯನ ಕಿವಿಗೆ ಉಸುರಿದರು. ಚಾಣಾಕ್ಷ ತೆನಾಲಿ ರಾಮ ನಿಜ ಹೇಳಲಾರ, ಆತನ ಮಗ ಸತ್ಯ ಹೇಳಿಯಾನು ಹೀಗೆ ಭಾವಿಸಿ ಮಗನನ್ನು ಕರೆಯಿಸಿದರು. ನಿನ್ನೆ ರಾತ್ರಿ ಬದನೆ ಪಲ್ಯ ಊಟ ಮಾಡಿದೆಯಾ ಕೇಳಿದಾಗ ಮಗ ಹೌದೆಂದ. ಇನ್ನೇನು ತೆನಾಲಿ ರಾಮನ ತಲೆ ಕಡಿಯಲು ಆಜ್ಞೆಯಾಯಿತು. 

ಆಗ ತೆನಾಲಿ ರಾಮ ಹೇಳಿದ, ರಾಜಾ, ಈ ಹುಡುಗ ಕನಸಿನಲ್ಲಿ ಏನೇನೋ ಕನವರಿಸುತ್ತಾನೆ. ಅವನ್ನೆಲ್ಲಾ ನಿಜ ಎಂದು ನಂಬಲಾಗುತ್ತದೆಯೇ? ಬೇಕಾದರೆ ನೀವೇ ಕೇಳಿ ನಿನ್ನೆ ಮಳೆ ಬಂದಿತ್ತು ಅಂತಾನೆ. ಬೇಕಾದರೆ ಕೇಳಿ ನೋಡಿ ಎಂದ. ಆಗ ತೆನಾಲಿಯ ಮಗನಿಗೆ ನಿನ್ನೆ ರಾತ್ರಿ ಮಳೆ ಬಂದಿತ್ತಾ? ಎಂದು ಕೇಳಿದಾಗ ಅವನು 'ಹೌದು, ಜೋರು ಮಳೆ ಬಂದಿತ್ತು. ನಾನು ಹೊರಗೆ ಮಲಗಿದ್ದೆ, ನನ್ನ ಎಬ್ಬಿಸಿ, ಒದ್ದೆ ಆದ ನನ್ನ ಬಟ್ಟೆ ಬದಲಾಯಿಸಿದರು, ಆಮೇಲೆ ನಾನು ಊಟ ಮಾಡಿ ಮನೆಯ ಒಳಗೆ ಮಲಗಿದೆ' ಎಂದ ! ಕೃಷ್ಣ ದೇವರಾಯ ಇವನ ಮಾತು ಕೇಳಿ ಆತ ಬದನೇ ಕಾಯಿ ತಿಂದದ್ದು ಕನಸಿನಲ್ಲೇ ಎಂದು ನಂಬಿ ತೆನಾಲಿ ರಾಮನನ್ನು ಶಿಕ್ಷೆಯಿಂದ ಮುಕ್ತಗೊಳಿಸಿದ.

ಜೀವನದಲ್ಲಿ ಇಂತಹ ವಿಲಕ್ಷಣ ಪರಿಸ್ಥಿತಿಗಳು ನಮಗೂ ಎದುರಾಗುತ್ತವೆ. ಆಗ ನಮಗೆ ಕೆಟ್ಟದು ಮಾಡುವ ಸತ್ಯಕ್ಕಿಂತ, ಯಾರಿಗೂ ಹಾನಿ ಮಾಡದ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಮಾತು ಬಲ್ಲವರು ಚಾಣಾಕ್ಷತನದಿಂದ ಬಂದ ಪರಿಸ್ಥಿತಿ ನಿಭಾಯಿಸಿಕೊಳ್ಳುತ್ತಾರೆ. ಜೀವನಕ್ಕೆ ಬೇಕಾದ್ದು ಇಂತಹದೇ ಚಾಣಾಕ್ಷತನ. ಅದರಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ಎಚ್ಚರವಹಿಸುವುದೂ ಅಷ್ಟೇ ಮುಖ್ಯ.

(ವಿಶ್ವವಾಣಿ ಕೃಪೆ)

ಚಿತ್ರ : ಇಂಟರ್ನೆಟ್ ತಾಣ