ಬದನೆಕಾಯಿ ಮಸಾಲೆ ಖಾರ ಗೊಜ್ಜು

ಬದನೆಕಾಯಿ ಮಸಾಲೆ ಖಾರ ಗೊಜ್ಜು

ಬೇಕಿರುವ ಸಾಮಗ್ರಿ

ಬದನೆಕಾಯಿ (ಸಣ್ಣ ಗಾತ್ರ) ೩, ಈರುಳ್ಳಿ ೧, ಅರಶಿನ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಒಣ ಮೆಣಸು, ಎಣ್ಣೆ, ಉದ್ದಿನ ಬೇಳೆ, ಚಿಟಿಕೆ ಇಂಗು, ಕರಿಬೇವು, ಬೆಳ್ಳುಳ್ಳಿ ಬೀಜಗಳು, ಸಣ್ಣ ತುಂಡು ಶುಂಠಿ, ಟೊಮೆಟೋ ೨, ಬೆಲ್ಲ ರುಚಿಗೆ ಬೇಕಾಗುವಷ್ಟು, ಗಾಂಧಾರಿ ಮೆಣಸು ೧೦-೧೫, ಕಾಯಿಮೆಣಸು ೪, ಮಸಾಲೆ (ಸಾಂಬಾರು) ಹುಡಿ ೨ ಚಮಚ, ಹುಣಸೆ ಹುಳಿ ಬೇಕಾಗುವಷ್ಟು, ಕೊತ್ತಂಬರಿ ಸೊಪ್ಪು, ಸಣ್ಣ ನಿಂಬೆಹಣ್ಣು

ತಯಾರಿಸುವ ವಿಧಾನ

ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ  ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ  ಸಾಸಿವೆ, ಚಿಟಿಕೆ ಉದ್ದಿನಬೇಳೆ, ಜೀರಿಗೆ, ಒಣಮೆಣಸು, ಎಣ್ಣೆ, ಅರಶಿನ ಹುಡಿ, ಚಿಟಿಕೆ ಇಂಗು, ಹಾಕಿ ಒಗ್ಗರಣೆ ಆಗುವಾಗ, ಕರಿಬೇವು, ಬೆಳ್ಳುಳ್ಳಿ ಬೀಜ ಹಾಕಿ, ಜೊತೆಗೆ ನೀರುಳ್ಳಿ ಸೇರಿಸಿ ಹುರಿಯಬೇಕು. ಒಂದು ತುಂಡು ಶುಂಠಿ ಜಜ್ಜಿ ಹಾಕಬಹುದು. ಇಲ್ಲದಿದ್ದರೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಬಹುದು. ಟೊಮೆಟೊವನ್ನು ಕತ್ತರಿಸಿ ಸೇರಿಸಿ ಫ್ರೈ ಮಾಡಿ, ಬದನೆ ಹೋಳುಗಳನ್ನು ಸೇರಿಸಿ, ಉಪ್ಪು, ಬೆಲ್ಲ,  ಗಾಂಧಾರಿ ಮೆಣಸು ಜಜ್ಜಿ ಹಾಕಿ, ಕಾಯಿಮೆಣಸು, ಕೊತ್ತಂಬರಿ ಸೊಪ್ಪು, ಸ್ವಲ್ಪ ಹುಣಿಸೇಹುಳಿ ಕಿವುಚಿ ಸೇರಿಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಬೇಕು. ಹದ ಬೆಂದಾಗ ಮನೆಯಲ್ಲೇ ತಯಾರಿಸಿದ ಮಸಾಲೆಪೌಡರು (ವಿಧಾನ ಕೊನೆಯಲ್ಲಿ ಇದೆ, ಗಮನಿಸಿ) ಸೇರಿಸಿ ಕುದಿಸಿ ಕೆಳಗಿಳಿಸಿ. ನಿಂಬೆಹಣ್ಣನ್ನು ಹಿಂಡಿ ರಸ ಸೇರಿಸಿ ಮುಚ್ಚಿಟ್ಟು ೧೦ ನಿಮಿಷಗಳ ನಂತರ ಬಳಸಬೇಕು. (ಬೇಕಿದ್ದರೆ ಕರಿ ಎಳ್ಳು ಒಂದು ಚಮಚ ಹುರಿದು ಹುಡಿ ಮಾಡಿ ಸೇರಿಸಬಹುದು.) ಹೆಚ್ಚು ತೆಳ್ಳಗೆ ಸಾರಿನ ಹಾಗೆ ಮಾಡಬಾರದು. ದೋಸೆ, ಚಪಾತಿ, ಊಟ ಎಲ್ಲದಕ್ಕೂ ತಿನ್ನಬಹುದಾದ ರುಚಿಯಾದ ಗೊಜ್ಜು ಇದು. 

ಮನೆಯಲ್ಲೇ ಸಾಂಬಾರ್ ಮಸಾಲೆ ಹುಡಿ ತಯಾರಿಸಿ : ಕೊತ್ತಂಬರಿ, ಜೀರಿಗೆ, ಉದ್ದಿನಬೇಳೆ, ಅರಶಿನ, ಕರಿಬೇವು, ಒಣಮೆಣಸು, ಕಾಳುಮೆಣಸು, ಶುಂಠಿ, ಎಣ್ಣೆ ಹಾಕಿ ಹುರಿಯುವುದು. ನಯವಾದ (ನೈಸ್) ಹುಡಿ ಮಾಡುವುದು.

-ರತ್ನಾ ಭಟ್ ತಲಂಜೇರಿ