ಬದನೆಯಲ್ಲಿ ಕಾಯಿಕೊರಕದ ನಿಯಂತ್ರಣ ಸಾಧ್ಯ !

ಬದನೆಯಲ್ಲಿ ಕಾಯಿಕೊರಕದ ನಿಯಂತ್ರಣ ಸಾಧ್ಯ !

ನಾವು ಮಾರುಕಟ್ಟೆಯಿಂದ ಖರೀದಿಸಿ ತರುವ ಬದನೆಯಲ್ಲಿ ಒಂದಾದರೂ ತೂತು ಇದ್ದೇ ಇರುತ್ತದೆ. ನಾವೆಷ್ಟೇ ಹುಳ ಕೊರೆದ ತೂತು ಇಲ್ಲದ ಬದನೆಯನ್ನು ಹುಡುಕಾಡಿದರೂ ನಮಗೆ ನಿರಾಸೆಯೇ ಆಗುತ್ತದೆ. ಬದನೆಯನ್ನು ಬೆಳೆಯುವ ರೈತರೂ ಬದನೆಗೆ ಹುಳ ಬೀಳದಿರಲೆಂದು ಬೇರೆ ಬೇರೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೂ ಬದನೆಗೂ ಕಾಯಿ ಕೊರಕ ಹುಳಕ್ಕೂ ಬಿಟ್ಟಿರಲಾರದ ಸಂಬಂಧ. ಬದನೆ ಬೆಳೆಗೆ ರಾಸಾಯನಿಕಗಳನ್ನು ಬಳಸಿದರೆ ಮಾತ್ರವೇ ಈ ಕೀಟದಿಂದ ಮುಕ್ತಿ ಸಾಧ್ಯ. ಹುಳ ರಹಿತ ಬದನೆ ತಿನ್ನ ಬಯಸುವವರು ಅನಿವಾರ್ಯವಾಗಿ ರಾಸಾಯನಿಕದ ವಿಷವನ್ನು ಸೇವಿಸಲೇಬೇಕು. ವಿಷವಿಲ್ಲದೆ ಬದನೆ ಬೇಸಾಯದಲ್ಲಿ ಕಾಯಿ ಕೊರಕ ಮತ್ತು ಕುಡಿ (ಚಿಗುರು ಕಾಯಿ ಅಥವಾ ಎಳೇ ಕಾಯಿ) ಕೊರಕವನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಖಂಡಿತಾ ಇದೆ.

ಬದನೆ ಬೆಳೆಸದೇ ಇರುವ ರೈತರೇ ಕಡಿಮೆ. ಬಳಸದೇ ಇರುವ ಗ್ರಾಹಕರೂ ಕಡಿಮೆ. ಬದನೆಗೆ ತರಕಾರಿಗಳಲ್ಲಿ ರಾಜ ಮರ್ಯಾದೆ ಇದೆ. ರಾಜ್ಯದ ಎಲ್ಲಾ ಪ್ರದೇಶಗಳಲ್ಲೂ ಬದನೆಯನ್ನು ಬೆಳೆಯಲಾಗುತ್ತದೆ. ಹೆಚ್ಚಿನ ತರಕಾರಿ ತಿನ್ನುವ ವರ್ಗದವರಿಗೆ ಬದನೇ ಕಾಯಿ ಇಲ್ಲದೆ ಊಟವೇ ಪೂರ್ಣವಾಗುವುದಿಲ್ಲ. ವರ್ಷದಾದ್ಯಂತ ಎಲ್ಲಾ ಋತುಮಾನಗಳಲ್ಲೂ ಬದನೆಯನ್ನು ಬೆಳೆಯಲಾಗುತ್ತದೆ. ಈಗ ನಗರ ಪ್ರದೇಶಗಳಲ್ಲೂ ತಾರಸಿಯಲ್ಲಿ ತೋಟವನ್ನು ಮಾಡಿ ಕುಂಡಗಳಲ್ಲಿ ಮತ್ತು ಗ್ರೋಬ್ಯಾಗ್ ಗಳಲ್ಲಿ ಬದನೆಯನ್ನು ಬೆಳೆಯುತ್ತಾರೆ. ತಮ್ಮ ತಮ್ಮ ಮನೆಗೆ ಬೇಕಾದಷ್ಟು ಬದನೆಯನ್ನು ಬೆಳೆದುಕೊಳ್ಳುತ್ತಾರೆ. ಕೆಲವೊಂದು ಸಮಯದಲ್ಲಿ (ಅನ್ ಸೀಸನ್) ಬೆಳೆದ ಬೆಳೆಗೆ ಒಳ್ಳೆಯ ಧಾರಣೆ ಲಭ್ಯವಾಗುತ್ತದೆ. ಅನ್ ಸೀಸನ್ ನಲ್ಲಿ ಬೆಳೆಯುವ ಬೆಳೆಗೆ ಕೀಟ ನಾಶಕ ಮತ್ತು ರೋಗನಾಶಕಗಳಿಗಾಗಿ ಖರ್ಚು ಹೆಚ್ಚು.

ಬದನೆಗೆ ಇರುವ ನಿರ್ದಿಷ್ಟ ಬೇಡಿಕೆಗಾಗಿ ರೈತರು ಇದನ್ನು ಬೆಳೆಸಿಯೇ ತೀರುತ್ತಾರೆ. ಇದರಿಂದ ಉತ್ತಮ ವರಮಾನವೂ ಇದೆ. ಆದರೆ ಕುಡಿ ಕೊರಕ, ಮೊಗ್ಗು ಭಕ್ಷಕ ಮತ್ತು ಕಾಯಿ ಭಕ್ಷಕಗಳಿಂದ ರಕ್ಷಣೆ ಮಾಡಿಕೊಳ್ಳಬೇಕು. ಹೆಚ್ಚಿನ ರೈತರು ಇದರ ನಿವಾರಣೆಗಾಗಿ ವಿಷಕಾರಿ ರಾಸಾಯನಿಕ ಕೀಟನಾಶಕಗಳನ್ನು ಬಳಕೆ ಮಾಡುತ್ತಾರೆ. ಕೆಲವು ರೈತರು ೧೫ ದಿನಕ್ಕೊಮ್ಮೆ  ಒಂದೊಂದು ಗಿಡದ ಬುಡಕ್ಕೆ ೧ ಚಮಚದಷ್ಟು ಫೋರೇಟ್  ಇಲ್ಲವೇ ಫ್ಯುರಡಾನ್ ಕೀಟನಾಶಕವನ್ನು ಸುರಿಯುವುದನ್ನು  ಕಾಣಬಹುದು. ಇದರ ನಿವಾರಣೆಗಾಗಿ ಶಿಫಾರಸು ಮಾಡುವ ಕೀಟ ನಾಶಕಗಳು ವಾರ- ಎರಡು ವಾರ ಕಾಲ ತನ್ನ ಉಳಿಕೆ ಕಾಲಾವಧಿಯನ್ನು ಹೊಂದಿದ್ದು ರೈತರು ಆಗಾಗ ಇದನ್ನು ಬಳಕೆ ಮಾಡುವುದರಿಂದ ಅದು ತಿನ್ನುವ ಗ್ರಾಹಕರಿಗೆ ಅಪಾಯಕಾರಿಯಾಗುತ್ತದೆ.

ಕಾಯಿ ಕೊರಕ ಮರಿಹುಳುಗಳು ಕಾಯಿಯನ್ನು ಕೊರೆದು ಒಳಹೊಕ್ಕು ಒಳಭಾಗದ ತಿರುಳನ್ನು ಭಕ್ಷಿಸಿ ಒಳಗೆ ಕಪ್ಪು ಹಿಕ್ಕೆಗಳನ್ನು ಹಾಕುತ್ತವೆ. ಅದೇ ರೀತಿಯಲ್ಲಿ ಕುಡಿ ಕೊರಕ ಮರಿಹುಳುಗಳೂ ಎಳೆ ಟೊಂಗೆ ಮತ್ತು ಕುಡಿಗಳನ್ನು ಕೊರೆದು ಒಳ ಸೇರುತ್ತವೆ. ಒಳ ತಿರುಳನ್ನು ತಿಂದು ಅದು ಒಣಗಿ ಸಾಯುವಂತೆ ಮಾಡುತ್ತದೆ. ಹೂ ಮೊಗ್ಗು ಹಂತದಲ್ಲಿ ಬಾಧಿಸಿದ ಹುಳುಗಳು ಮೊಗ್ಗನ್ನೇ ತಿಂದು ಫಸಲು ನಷ್ಟ ಉಂಟು ಮಾಡುತ್ತವೆ.

ಕಾಯಿ ಕೊರಕ, ಮೊಗ್ಗು ಕೊರಕ ಮತ್ತು ಟೊಂಗೆ ಕೊರಕ ಹುಳು ಒಮ್ಮೆ ಪ್ರವೇಶವಾದರೆ ನಂತರ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತದೆ. ಅದು ಮಣ್ಣಿನಲ್ಲಿದ್ದು ಸಂತಾನಾಭಿವೃದ್ದಿ ಮಾಡುತ್ತಿರುತ್ತದೆ. ಒಂದು ಬೆಳೆ ಮಾಡಿ ಅದೇ ಜಾಗದಲ್ಲಿ ಮತ್ತೊಮ್ಮೆ ಬೆಳೆ ಬೆಳೆಸಿದರೂ ಅದಕ್ಕೂ ಇದು ತೊಂದರೆ ಮಾಡುತ್ತದೆ. ಇದಕ್ಕೆ ಸಸಿ ನಾಟಿ ಮಾಡಿ ಮೂರು ವಾರ ಕಳೆದ ನಂತರ ೨ ವಾರಗಳಿಗೊಮ್ಮೆ ಡೈಮಿಥೋಯೇಟ್ ೩೦ ಇಸಿ, ಅಥವಾ ಫಾಸ್ಪೋಮೀಡಾನ್ ಅಥವಾ ಕ್ವಿನಾಲ್ ಫೋಸ್ ಕೀಟನಾಶಕವನ್ನು ಸಿಂಪರಣೆ ಮಾಡಬೇಕು ಎನ್ನುತ್ತಾರೆ. ಕಾಯಿ ಬಿಟ್ಟ ನಂತರ ೧೫ ದಿನಗಳ ಅಂತರದಲ್ಲಿ ೨-೩ ಬಾರಿ ಕಾರ್ಬಾರಿಲ್ ಕೀಟನಾಶಕವನ್ನು ಅಥವಾ ಮೆಲಾಥಿಯಾನ್  ಪುಡಿಯನ್ನು ಸಿಂಪಡಿಸಬೇಕೆನ್ನುತ್ತಾರೆ. ನಾಟಿ ಮಾಡುವಾಗ ಮಣ್ಣಿಗೆ ಬೇವಿನ ಹಿಂಡಿಯನ್ನು ನಂತರ ಪ್ರತೀ ತಿಂಗಳಿಗೊಮ್ಮೆ ಮಣ್ಣಿಗೆ ಸ್ವಲ್ಪ ಸ್ವಲ್ಪ ಬೇವಿನಹಿಂಡಿಯನ್ನು  ಹಾಕಬೇಕು ಎಂಬುದು ವಿಜ್ಞಾನಿಗಳ ಶಿಫಾರಸು. ಆದರೆ ಇದನ್ನು ತರಕಾರಿ ಕಠಾವು ಮಾಡುವ ಸಮಯದಲ್ಲಿ ಸಿಂಪಡಿಸಿದರೆ ಅದರ ಉಳಿಕೆ ಇರುತ್ತದೆ. ಆದ ಕಾರಣ ಕೀಟನಾಶಕವನ್ನು ಬಳಕೆ ಮಾಡುವುದು ಯಾವ ಕಾರಣದಿಂದಲೂ ಸುರಕ್ಷಿತವಲ್ಲ. ಅಲ್ಲದೇ ಬೆಳೆಗಾರರಿಗೆ ಈ ರೀತಿ ಕೀಟನಾಶಕವನ್ನು  ಬಳಕೆ ಮಾಡುವುದರಿಂದ ಖರ್ಚೂ ಹೆಚ್ಚಳವಾಗುತ್ತದೆ. ಇದಕ್ಕಾಗಿ ಈಗ  ಲಿಂಗಾಕರ್ಷಕ  ಬಲೆಗಳು ಬಂದಿದ್ದು ಇದನ್ನು ಬದನೆ ಬೆಳೆಸುವ ಸ್ಥಳದಲ್ಲಿ ಇಡುವುದರಿಂದ ಹೆಚ್ಚಿನ ಕಾಯಿ ಕೊರಕ, ಮೊಗ್ಗು ಕೊರಕ ಹಾಗೂ ರೆಂಬೆ ಕೊರಕ ಹುಳುಗಳನ್ನು ನಾಶಮಾಡಬಹುದು.

ಜಗತ್ತಿನಾದ್ಯಂತ ಬೆಳೆಸಲ್ಪಡುವ ಬೆಳೆಯಾದ ಬದನೆಗೆ ಎಲ್ಲಾ ಕಡೆಯಲ್ಲೂ ಈ ಸಮಸ್ಯೆ  ಜ್ವಲಂತವಾಗಿರುವ ಕಾರಣ ಇದನ್ನು ಜೈವಿಕವಾಗಿ  ನಿಯಂತ್ರಣ ಮಾಡುವುದೇ ಸೂಕ್ತವೆಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಅದಕ್ಕಾಗಿ ಈಗಾಗಲೇ ನಿರೋಧಕ ಶಕ್ತಿ ಪಡೆದ ಬಿಟಿ ಬದನೆಯನ್ನು ಅಭಿವೃದ್ದಿ ಪಡಿಸಲಾಗಿದ್ದು, ಅದು ನಮ್ಮ ದೇಶದಲ್ಲಿ ಬೆಳೆಯಲು ಸೂಕ್ತವಾದ ಅಧಿಕೃತ ಪರವಾನಿಗೆ ದೊರೆತಿಲ್ಲ. ಆದರೂ ಅನಧಿಕೃತವಾಗಿ ಇದು ಬೆಳೆಸಲ್ಪಡುತ್ತಿರುವ ಬಗ್ಗೆ ವರದಿಗಳಿವೆ. ಇದಕ್ಕೆ ಪರವಾನಿಗೆ ದೊರೆತರೆ ಗ್ರಾಹಕರು ವಿಷಬಳಕೆ ಮಾಡಿರದ ಕಾಯಿ ಕೊರಕ ಹುಳಗಳ ಅಂಜಿಕೆ ಇಲ್ಲದೆ ಬದನೆಯನ್ನು ತಿನ್ನಲು ಸಾಧ್ಯ. ರೈತರೂ ಈ ಕೀಟ ಸಮಸ್ಯೆ ದೂರವಾದರೆ ಹೆಚ್ಚಿನ ಪ್ರಮಾಣದಲ್ಲಿ ಬದನೆ ಬೆಳೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಆದರೂ ಬಿಟಿ ಬದನೆಗಳ ಬಗ್ಗೆ ಇನ್ನೂ ರೈತರಲ್ಲಿ ಸಂಶಯ ಇದ್ದೇ ಇದೆ. ಇದರ ಇನ್ನಷ್ಟು ಪ್ರಯೋಗಗಳು ಆಗಬೇಕಾಗಿವೆ. ಒಂದು ಸಮಸ್ಯೆಯ ನಿವಾರಣೆಗಾಗಿ ಹಲವಾರು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಹಾಗೆ ಆದರೆ ಕಷ್ಟ. ರೈತರು ಯಾವುದೇ ಬೆಳೆಯನ್ನು ಹೊಸದಾಗಿ ಬೆಳೆಯಬೇಕಾದಲ್ಲಿ ಮೊದಲೇ ಯೋಚನೆ ಮಾಡಬೇಕಾದುದು ಅತ್ಯಗತ್ಯ. ಆದರೂ ಈಗಿನ ಕೇಂದ್ರ ಸರಕಾರ ವಂಶೋನ್ನತ (Genetically Modified) ಬೆಳೆಗಳ ಕ್ಷೇತ್ರ ಪ್ರಯೋಗಕ್ಕೆ ಹಸಿರು ನಿಶಾನೆ ತೋರಿದ ಕಾರಣ ಮುಂದೆ ಅಧಿಕೃತವಾಗಿ ನಾವು ಹುಳು ಮುಕ್ತ ಬದನೆ ಬೆಳೆದು ತಿನ್ನಬಹುದೇನೋ?

ಚಿತ್ರಗಳ ವಿವರ: ೧. ಬಿಟಿ ಬದನೆ ೨. ಬದನೆ ಕಾಯಿಗೆ ಹುಳ ಕೊರೆದ ತೂತು ೩. ಬದನೆಯನ್ನು ಕತ್ತರಿಸಿದಾಗ ಕಂಡು ಬರುವ ದೃಶ್ಯ. ೪. ಬದನೆ ಗಿಡದ ಗೆಲ್ಲುಗಳಲ್ಲಿ ಕಂಡು ಬರುವ ಹುಳ

ಚಿತ್ರಗಳು: ರಾಧಾಕೃಷ್ಣ ಹೊಳ್ಳ