ಬದರ್- ನೂರು ಅಬಾಬಿಗಳು

ಬದರ್- ನೂರು ಅಬಾಬಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ತೆಲುಗು ಮೂಲ: ಷೇಕ್ ಕರೀಮುಲ್ಲಾ, ಕನ್ನಡಕ್ಕೆ: ಧನಪಾಲ ನಾಗರಾಜಪ್ಪ
ಪ್ರಕಾಶಕರು
ಧನಪಾಲ ನಾಗರಾಜಪ್ಪ, ℅. ಶ್ರೀನಿವಾಸ ಎನ್, ಅಂಚೆ ಸಹಾಯಕರು, ನೆಲವಾಗಿಲು-ಅಂಚೆ, ನಂದಗುಡಿ, ಹೊಸಕೋಟೆ, ಬೆಂಗಳೂರು ಗ್ರಾ. 562122
ಪುಸ್ತಕದ ಬೆಲೆ
ರೂ.100.00, ಮುದ್ರಣ: 2021

ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಮುಸಲ್ಮಾನರ ಬದುಕಿನ ಬವಣೆಗಳೇ ಇವರ ಬರಹಗಳಲ್ಲಿರುವ ಜೀವಸೆಲೆ.

ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಧನಪಾಲ ನಾಗರಾಜಪ್ಪ. ಜೂನ್ 20, 1987ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹುಟ್ಟಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಗಳು. ವೈದ್ಯಕೀಯ ಪ್ರಯೋಗಾಲಯದ ಡಿಪ್ಲೊಮಾ ಮಾಡಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಮೂಲ ಲೇಖಕರಾದ ಷೇಕ್ ಕರೀಮುಲ್ಲಾ ಅವರ ಮಾತುಗಳ ಪ್ರಕಾರ “ಅಬಾಬಿಗಳನ್ನು ಯಾಕೆ ಅವಿಷ್ಕರಿಸಿದೇನೆಂದರೆ,

ವರ್ತಮಾನ ತೆಲುಗು ಸಾಹಿತ್ಯ ವಿಸ್ತೃತವಾದುದ್ದಾಗಿದೆ. ಅಸ್ತಿತ್ವದಲ್ಲಿರುವ ಅನೇಕಾನೇಕ ಹೋರಾಟಗಳ ನಿಲಯವಿದು. ಈ ಕ್ರಮದಲ್ಲಿ ಭಾಷೆಯಲ್ಲಿನ ಸಂಕ್ಲಿಷ್ಟತೆಯನ್ನು ದೂರ ಮಾಡುತ್ತ ಜನ ಸಾಮಾನ್ಯರಿಗೆ ಹತ್ತಿರವಾಗುವಂತೆ ಕಾವ್ಯ ಸಂಕ್ಷಿಪ್ತ ರೂಪವನ್ನು ಪಡೆದುಕೊಳ್ಳುತ್ತಿರುವ ದೆಶೆಯಿದು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಕವಿಗಳಿಗೆ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತ ಚೈತನ್ಯವನ್ನು ತುಂಬುವ ಒಂದು ಹೊಸ ರೀತಿಯ ವಚನಾ ಪ್ರಕ್ರಿಯೆಯ ಅಗತ್ಯವಿದೆ ಎಂದು ನನಗನಿಸಿತು. ಈ ಆಲೋಚನೆ ಬಂದಿದ್ದೇ ತಡ ʼಅಬಾಬಿಗಳು’ ಎಂಬ ಹೊಸ ರೀತಿಯ ವಚನಾ ಪ್ರಕ್ರಿಯೆಯನ್ನು ಅವಿಷ್ಕರಿಸುವ ಉದ್ದೇಶದಿಂದ ಈ ʼಬದರ್‌ʼ ಅನ್ನು ನಿಮ್ಮ ಮುಂದೆ ತರುತ್ತಿದ್ದೇನೆ.

“ಅಬಾಬಿಗಳು’’ ಎಂಬ ಈ ಹೊಸ ರೀತಿಯ ಕಾವ್ಯ ಪ್ರಕಾರಕ್ಕೆ ನಾನು ಪಂಚಪದಿಗಳನ್ನು ಆರಿಸಿಕೊಂಡಿದ್ದೇನೆ. ಮುಸಲ್ಮಾನರ ನಡವಳಿಕೆಗೆ ಪಂಚಸೂತ್ರಗಳು ಇರುವಂತೆಯೇ ಪ್ರತಿ ಅಬಾಬಿಯೂ ಐದು ಸಾಲುಗಳಿಂದ ಮುಗಿಯುತ್ತದೆ. ಸಮಸ್ಯೆ, ವಿಷಯ ವಿಶ್ಲೇಷಣೆ, ವಿವರಣೆ, ಆತ್ಮಾವಲೋಕನ, ಸಂದೇಶ ಇಲ್ಲವೆ ವ್ಯಂಗ್ಯವಾದ ವಿಡಂಬನೆಯಿಂದ ಅಬಾಬಿಗಳು ಮುಗಿಯುತ್ತವೆ.

ಅಬಾಬಿಗಳು ಎಂಬ ಈ ಹೊಸ ಕಾವ್ಯ ಪ್ರಕಾರವನ್ನು ಕೇವಲ ಮುಸ್ಲಿಂ ಕವಿಗಳೇ ಮಾತ್ರವಲ್ಲದೆ ಶೋಷಿತ ವರ್ಗಕ್ಕೆ ಸೇರಿದ ಕವಿಗಳೆಲ್ಲರೂ ಅನುಸರಿಸಬೇಕು ಎಂಬುದು ನನ್ನ ಆಕಾಂಕ್ಷೆ. ಇಂದಿನ ಕವಿಗಳಷ್ಟೇ ಅಲ್ಲದೆ ಮುಂಬರುವ ಕವಿಗಳೂ ಸಹ ಈ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ವಿನಮ್ರತೆಯಿಂದ ಆಶಿಸುತ್ತೇನೆ."

ಕೆಲವು ಅಬಾಬಿಗಳು ಇಲ್ಲಿವೆ, 

1.

ಈ ಭೂಮಿಯ ಸುತ್ತಲೂ

ಕಗ್ಗತಲು ಕವಿದಿದೆ

ಸೂರ್ಯೋದಯ ಆಗುವುದೋ? ಇಲ್ಲವೋ?

ಕರೀಮ್!

ಇನ್ನು ಬೆಳದಿಂಗಳ ರಾತ್ರಿಗಳಿಲ್ಲ.

2.

ದುಃಖದ ಮಳೆಯಲ್ಲಿ

ತೋಯ್ದು ಮುದ್ದೆ ಆಗುತ್ತಿದ್ದೇನೆ.

ಕುರುಡು ಬಸ್ತಿಗೆ ಕನಿಕರವಿಲ್ಲ.

ಕರೀಮ್!

ಈ ನೆಲವಿಡೀ ನನ್ನ ಸಮಾಧಿಯಂತೆ ಭಾಸವಾಗುತ್ತಿದೆ.

3.

ಕುರ್ತಾದ ಮೇಲೆ ಅತ್ತರು ವಾಸನೆ

ಕುಕ್ಷಿಯಲ್ಲಿ ಕರಕಲು ಕಮಟು ವಾಸನೆ

ಹಸಿವಿಗೂ ಮಿಗಿಲಾದ ಗೆಳೆಯನಿಲ್ಲ.

ಕರೀಮ್!

ರಾತ್ರಿ ಯಾಕೋ ಗಹಗಹಿಸಿ ನಗುತ್ತಿದೆ.

4.

ರಿಕ್ಟರ್ ಮಾಪಕದ ಮೇಲೆ ದೇಶಭಕ್ತಿ

ಬೀಳುತ್ತ ಏಳುತ್ತ ಪರದಾಡುತ್ತಿದೆ.

ಗುಂಡಿಗೆಯನ್ನು ಸೀಳಿ ತೋರಿಸಂತಾನೆ.

ಕರೀಮ್!

ಕಾಷಾಯದ ಮೊಸಳೆ ಕಚ್ಚಿಹಿಡಿದಿದೆ ಅಂತ ಹೇಳು!

5.

ಅವನ ಅಂಬು

ಮಹಾಟವಿಯನ್ನು ಸುಡುತ್ತಲೇ ಇದೆ.

ಮೊಹಲ್ಲಾಗಳೆಲ್ಲಾ ಖಾಂಡವ ವನಗಳೇ!

ಕರೀಮ್!

ನಾಗಾಸ್ತ್ರದಂತೆ ಗುರಿ ತಪ್ಪದಿರಲಿ.

6.

ಎದೆಯಲ್ಲಿ ಧಮನಿಗಳು

ಮುದುಡಿಕೊಳ್ಳುತ್ತಿವೆ

ಭಯದಿಂದಲೋ, ಉದ್ವೇಗದಿಂದಲೋ

ಕರೀಮ್!

ಈ ರಾಜ್ಯ ಎಷ್ಟು ಮಂದಿಯ ಉಸಿರು ಕಸಿದಿದೆಯೋ!

7.

ಹಕ್ಕಿಗಳೇ ಅಲ್ಲವೆ ಅಂತ

ಬಾಣಗಳ ಬಿಡಬೇಡ

ಅಬಾಬಿಲ್ ಪಕ್ಷಿಗಳಾಗಿ ದಂಡು ಕಟ್ಟುತ್ತವೆ

ಕರೀಮ್!

ಅಬ್ರಹಾ ಸೇನೆಯ ಗತಿ ಹೇಳು.

8.

ಅವನ ಕಾರಿನ ಅಡಿಯಲ್ಲಿ

ನಾವು ನಾಯಿಯ ಮರಿಗಳಂತೆ

ಅವಕ್ಕೂ ಕೋರೆಗಳಿರುತ್ತವೆ ಅಂತ ಹೇಳು.

ಕರೀಮ್!

ಕರ್ಬಲಾ ವಿಸ್ತರಿಸುತ್ತಿದೆ ನೋಡು.

9.

ಅವನು ನಮ್ಮನ್ನು

ಎದುರುಮತದವರು ಅಂತಾನೆ

ತಲೆಗೆ ಮೆಟ್ಟುಕೊಂಡಿರುವ ಜೋಡುಗಳನ್ನು ನೋಡಿಕೊಳ್ಳುವುದಿಲ್ಲ

ಕರೀಮ್!

ನೀನು ಕಾಲುಗಳಿಂದಲೇ ನಡೆ.

10.

ನನ್ನ ವರ್ಣಮಾಲೆಯ ಮೇಲೆ

ಅವರು ಸಂಕೋಲೆಗಳ ಬಲೆ ಬೀಸಿದ್ದಾರೆ.

ಅವು ಪರಿವಾಳಗಳಾಗಿ ಅಂಬರಕ್ಕೆ ಹಾರಿದವು.

ಕರೀಮ್!

ಹುರಿಯನ್ನು ಕತ್ತರಿಸುವ ಇಲಿ ಎಲ್ಲಿ?!

11,

ಎದೆಯ ವೇದನೆ

ಹಳೆಯ ಕಬ್ಬಿಣದ ಪೆಟ್ಟಿಗೆಯಂತಲ್ಲದೆ

ಹೊಸ ಅಂಗಿಯಂತೆ ಹೊಳೆಯುತ್ತಿದೆ

ಕರೀಮ್!

ಹೊಲಿದ ಚಿಂದಿಗಳನ್ನು ಉಡುವುದರಲ್ಲಿ ನೀನು ದಿಟ್ಟನೇ.

ಹೊಸ ಸಾಹಿತ್ಯದ ಪ್ರಕಾರವನ್ನು ಓದುವ ಕುತೂಹಲವಿರುವವರಿಗೆ ಒಳ್ಳೆಯ ಪುಸ್ತಕ ಇದು. ಸುಮಾರು ೧೨೦ ಪುಟಗಳು ಪುಟ್ಟ ಪುಸ್ತಕವನ್ನು ಅನುವಾದಕರಾದ ಧನಪಾಲ ನಾಗರಾಜಪ್ಪ ಇವರೇ ಪ್ರಕಟಿಸಿದ್ದಾರೆ.