ಬದಲಾಗಬೇಕಿದೆ ಶಾಸನಗಳ ಹಣೆಬರಹ

ಬದಲಾಗಬೇಕಿದೆ ಶಾಸನಗಳ ಹಣೆಬರಹ

ಇಂಗ್ಲೀಷ್ ಮಯವಾಗಿರುವ ಭಾರತೀಯ ಕಾನೂನಿನ ಭಾಷೆಗಳು ಮತ್ತು ಶಾಸನಗಳ ಹಣೆಬರಹ ಬದಲಾಗಬೇಕಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿರುವುದು ಗಮನಾರ್ಹ. ಪ್ರಜಾತಂತ್ರದಲ್ಲಿ ಶಾಸನಗಳ ಪಾತ್ರ ಮಹತ್ವದ್ದು. ಏಕೆಂದರೆ ಶಾಸನಗಳೇ ಇಲ್ಲದ ದೇಶವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ದೇಶದಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದಲೂ ಜಾರಿಯಲ್ಲಿರುವ ವಿವಿಧ ಶಾಸನಗಳು ಸಾಮಾನ್ಯನಿಗೆ ಅರ್ಥವಾಗುವ ಮಟ್ಟದಲ್ಲಿಲ್ಲ ಎಂಬುದು ಸರ್ವ ಸತ್ಯ.

ಸಂಸತ್ ಅಥವಾ ವಿಧಾನ ಸಭೆಗಳಲ್ಲಿ ರೂಪುಗೊಳ್ಳುವ ಹಲವು ಹತ್ತು ಶಾಸನಗಳಿಗೆ ಈಗಲೂ ಇಂಗ್ಲಿಷ್ ಭಾಷೆಯದ್ದೇ ಹೆಚ್ಚಿನ ನಂಟು. ಮಿಗಿಲಾಗಿ ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶಾಸನಗಳೆಲ್ಲವೂ ರಚನೆಯಾಗಿರುವುದು ಇಂಗ್ಲಿಷ್ ಮತ್ತು ಮೊಘಲರ ದರ್ಬಾರಿನ ಅವಧಿಯಲ್ಲಿ. ಬಹುತೇಕ ಕಾನೂನುಗಳು ಇಂದಿಗೂ ಈ ದೇಶದ ಸಾಮಾನ್ಯನಿಗೆ ಅರ್ಥವಾಗಿಯೇ ಇಲ್ಲ. ಇನ್ನು ದೇಶದ ಶಾಸನಗಳ ಬಗ್ಗೆ ಮರುವ್ಯಾಖ್ಯಾನ ಮಾಡುವ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳು ಸಾಮಾನ್ಯ ಜನತೆಗೆ ಅರ್ಥವಾಗುವುದೆಂದರೆ ಅದು ಉಕ್ಕಿನ ಕಡಲೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ದೇಶದ ಸಾಮಾನ್ಯ ಜನತೆಗೆ ಕಾನೂನುಗಳು ಮತ್ತು ಶಾಸನಗಳನ್ನು ಅರ್ಥ ಮಾಡಿಕೊಳ್ಳುವುದೇ ಅತಿ ಕಷ್ಟ ಎಂದಾದಾಗ ಅದರ ಉದ್ದೇಶ ಮತ್ತು ಧ್ಯೇಯಗಳು ಪ್ರಜಾತಂತ್ರಕ್ಕೆ ಹೇಗೆ ನಿಜವಾದ ಮತ್ತು ತಾತ್ವಿಕ ಅರ್ಥ ನೀಡಲು ಸಾಧ್ಯ? ಹಾಗಾದರೆ ಶಾಸನ ಸಭೆಗಳಲ್ಲಿ ರಚನೆಯಾಗುವ ಶಾಸನಗಳು ಬರೀ ಅಧಿಕಾರಿಗಳಿಗೆ ಮತ್ತು ನ್ಯಾಯಾಧೀಶರಿಗೆ ಮಾತ್ರ ಅರ್ಥವಾದರೆ ನೆಲದ ಕಾನೂನುಗಳು ಸಾರ್ಥಕತೆ ಪಡೆಯಲು ಸಾಧ್ಯವೇ? ಮಿಗಿಲಾಗಿ ದೇಶದ ಬಹುತೇಕ ಶಾಸನಗಳು ಮೂಲತಃ ರಚನೆಯಾಗಿರುವುದು ಇಂಗ್ಲಿಷ್ ಭಾಷೆಯಲ್ಲಿ. ಈ ಕಾನೂನುಗಳು ದೇಶದ ಇತರೆ ಭಾಷೆಗಳಿಗೆ ಸರಿಯಾಗಿ ಮತ್ತು ಸಮರ್ಪಕವಾದ ಪ್ರಮಾಣದಲ್ಲಿ ಭಾಷಾಂತರ ಆಗದಿರುವುದು ದುರದೃಷ್ಟಕರ. ಏಕೆಂದರೆ ಮೂಲ ಶಾಸನಗಳಲ್ಲಿಯೇ ಹಲವು ಹತ್ತು ಕ್ಲೀಷೆಗಳಿವೆ. ಇವುಗಳನ್ನು ಸರಿಯಾಗಿ ಅರ್ಥೈಸಿ ಆಯಾ ಭಾಷೆಗಳಲ್ಲಿ ಶಾಸನಗಳನ್ನು ತಿದ್ದುಪಡಿಗೊಳಿಸಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ.

ಶಾಸನಗಳು ಸರಳ ಮತ್ತು ಸ್ಪಷ್ಟವಾಗಬೇಕಾದರೆ ಈಗಿನ ಶಾಸನಗಳ ಸಮಗ್ರ ಅಧ್ಯಯನ ಮತ್ತು ಸೂಕ್ತ ತಿದ್ದುಪಡಿಗಳೂ ಅಗತ್ಯ. ಅಮಿತ್ ಶಾ ಒತ್ತಿ ಹೇಳುತ್ರಿರುವುದು ಇದನ್ನೇ. ಸಂಸತ್ತಿನ ಮೂಲ ಉದ್ದೇಶ ಅರ್ಥವಾಗದ ಶಾಸನಗಳನ್ನು ಸರಳೀಕರಣಗೊಳಿಸಿ ಜನತೆಗೆ ತಿಳಿಸುವುದು. ಆದರೆ ಕಾನೂನು ಶಾಸ್ತ್ರದ ಬಹುತೇಕ ವಿಧಿನಿಯಮಗಳು ಈಗಲೂ ಇಂಗ್ಲೀಷ್ ನಲ್ಲಿಯೇ ಇವೆ. ಇಡೀ ಪ್ರಪಂಚದ ಸಮಾಜ ಮತ್ತು ವಿಜ್ಞಾನ ಶರವೇಗದಲ್ಲಿ ಬದಲಾಗುತ್ತಿದ್ದುಗುತ್ತಿದ್ದು ಉನ್ನತ ನ್ಯಾಯಾಲಯಗಳಂತೂ ಇಂತಹ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗದಿರುವುದು ಸೋಜಿಗ. ದೇಶದಲ್ಲಿ ಜಾರಿಯಲ್ಲಿರುವ ಎಲ್ಲ ಕಾನೂನುಗಳ ಬಗ್ಗೆ ಜನತೆಗೆ ಸಮಗ್ರ ತಿಳುವಳಿಕೆ ನೀಡುವ ಗುರುತರ ಹೊಣೆಗಾರಿಕೆ ಸರ್ಕಾರಗಳದ್ದು. ಸಾಧ್ಯವಾದಷ್ಟೂ ಇಂಗ್ಲೀಷ್ ನಲ್ಲಿರುವ ದೇಶದ ಕೆಲ ಕಠಿಣ ಶಾಸನಗಳನ್ನು ಆಯಾ ಭಾರತೀಯ ಭಾಷೆಗಳಲ್ಲಿ ಅನುವಾದಿಸಿ ಜನತೆಗೆ ನೀಡಬೇಕೆಂಬ ಅಮಿತ್ ಶಾ ಅವರ ಆಶಯ ನೆರವೇರಬೇಕಾದರೆ ಕಾರ್ಯಾಂಗ ಮತ್ತು ನ್ಯಾಯಾಂಗದ ಸಹಕಾರ ಮತ್ತು ಬೆಂಬಲವೂ ಅನಿವಾರ್ಯ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೭-೦೫-೨೦೨೩

ಚಿತ್ತ ಕೃಪೆ: ಅಂತರ್ಜಾಲ ತಾಣ