ಬದಲಾದ ಯುಗಾದಿ

ಬದಲಾದ ಯುಗಾದಿ

ಯಾರೊ ಹೇಳಿದರು ಎಂಟನೆ ತಾರೀಖು ಯುಗಾದಿ ಹಬ್ಬ ಕಂಡ್ರೀ ಇನ್ನೂ ಹಬ್ಬ ಒಂದು ತಿಂಗಳು ಇರುವಾಗಲೆ. ಅಯ್ಯೊ ಹೌದಾ? ಮನಸ್ಸಿಗೇನೊ ಹೊಸ ಉತ್ಸಾಹ. ಯಾಕೆ ಗೊತ್ತಾ ಇಷ್ಟು ವಷ೯ಕ್ಕಿಂತ ಈ ಸಾರಿ ಸ್ಪೆಷಲ್. ಯಾಕಂತೀರಾ? ಅದೆ ಈ ಗೀಚೊ ಅಭ್ಯಾಸ ಇತ್ತೀಚೆಗೆ ಜಾಸ್ತಿ ಅಂಟಿಕೊಂಡುಬಿಟ್ಟಿದೆಯಲ್ಲ. ಆಹಾ! ಏನಾದರೂ ಸ್ಪೆಷಲ್ಲಾಗಿ ಬರೀಬೇಕು.
ಸರಿ ನೇರವಾಗಿ ವಾಕಿಂಗಿಂದ ಮನೆಗೆ ಬಂದ್ನಾ ಗೀಚಿ ಬಿಟ್ಟೆ ಹಾಕದೆ ಬ್ಲಾಗಿಗೆ. ಬಂದೇ ಬಿಡ್ತು ಕಮೆಂಟು, “ಬಂದೇ ಬರ್ತಾನೆ ಯುಗಪುರುಷ”. ಅಯ್ಯೋ ಎಂತಾ ಪ್ರಮಾದ ಆಗಿಹೋಯಿತು. ನಾ ಏನಾದರು ತಪ್ಪು ಮಾಡಿದೆನಾ. ಛೆ! ಇಲ್ಲ ಬಿಡು, ನಿ ಬರೆದೆ ಹಾಕದೆ. ಓದಲಿ ಬಿಡು. ನೀನೆ ಪಸ್ಟ ಬರೆದಿದ್ದು ಅಂತ ಕಿಸಕ್ಕನೆ ನಕ್ಕಿತು ಒಳ ಮನಸ್ಸು. ಹೋಗಲಿ ಬಿಡು ಈಗ್ಯಾಕೆ ಅದರ ಚಿಂತೆ. ಬಿಟ್ಟಾಕದೆ.
ಹಬ್ಬ ಹತ್ತಿರ ಬರತಾ ಇದೆ. ಮನಸ್ಸಿನಲ್ಲಿ ಎನೇನೊ ಗೊಂದಲ. ಜಡತ್ವ. ಆರೋಗ್ಯವು ಕೈ ಕೊಡ್ತಾ ಇದೆ. ಆದರೂ ಮಾಮೂಲಿ ವಾಕಿಂಗ ಹೋಗುತ್ತಿದ್ದೆ.
ನಡೆಯುವ ಹಾದಿಯ ಗುಂಟ ತಂಗಾಳಿಗೆ ತೂಗುಯ್ಯಾಲೆ ಆಡುವ ಮರಗಳು ಬುಡ ಸಮೇತ ಬರಿದಾಗಿವೆ. ಬರಿ ಪಳಯುಳಿಕೆಗಳ ದಶ೯ನ. ಮಾನವನ ನಡೆಯುವ ದಾರಿ ಅಗಲವಾಗೋದಕ್ಕೊ ಅಥವಾ ಮನೆ ಕಟ್ಟುವ ಸಂಭ್ರಮಕ್ಕೊ ಅಥವಾ ಇನ್ಯಾವುದಕ್ಕೊ ಮಸಣದ ಹಾದಿ ಹಿಡಿದಿವೆ. ಬಟಾ ಬಯಲು.
ಪೇಪರ ಓದಲಿ, ಟಿವಿ ನೋಡಲಿ , ಸಿಟಿ ಒಂದು ರೌಂಡ ಸುತ್ತಲಿ ಎಲ್ಲಿ ನೋಡಿದರೂ ಒಂದಲ್ಲಾ ಒಂದು ದುಃಖದ ಛಾಯೆಯೆ ಕಾಣ್ತಾ ಇದೆ. ಹಬ್ಬ ಮಾಡಬೇಕಾ? ಯಾವ ಸಂತೋಷಕ್ಕೆ ಹಬ್ಬ ಮಾಡಲಿ? ಹಬ್ಬದ ಹೆಸರಲ್ಲಿ ಏನೆಲ್ಲಾ ಮಾಡೋದು. ಆಮೇಲೆ ತಿನ್ನೋದೂ ನಾವೆ. ಹಬ್ಬದ ಉತ್ಸಾಹ ದಿನ ಕಳೆದಂತೆ ಜರ್ರನೆ ಇಳಿತಾ ಬಂತು. ಬರೆಯೊ ಹುಚ್ಚಿಗೆ ಏನೇನೊ ಬರೆದೆ.
ಇನ್ನೇನು ಎರಡು ದಿನ ಇದೆ. ಮಾಮೂಲು ಮನೆ ಕ್ಲೀನಾಯಿತು. ಹಬ್ಬದ ತಯಾರಿ ಇದೊಂದೆ. ಬೆಳಗಿನ ಸುಪ್ರಭಾತ “ಅವಧಿ” ಯಲ್ಲಿ ಪ್ರಕಟವಾದ ಒಂದು ಕವನ “ತೋರಣ ಕಟ್ಟಲಿಲ್ಲ”. ತತ್ತರಕಿ ಇಲ್ಲೂ ಇದೇ ಶೋಕ ಗೀತೆ. ನಾನೂ ತೋರಣ ಕಟ್ಟಿಲ್ಲ. ಬಡಕನೆ ಎದ್ದೆ.
ಆಗಲೆ ನಾಲ್ಕು ಕಾಲಿನ ಕಿಟ್ಟಾಣಿ ರೆಡಿ, ಮಾಮೂಲಿ ಬೆಳಗಿನ ಕೆಲಸ ಮುಗಿಸಿ ಕೋಲಿಡಿದು ಹೊರಟ ನಮ್ಮ ಸವಾರಿ ಮಾವು, ಬೇವಿನೊಂದಿಗೆ ಗೃಹ ಪ್ರವೇಶ. ಅಷ್ಟಿದ್ದರೆ ಸಾಕಾ. ಪಂಚಾಂಗ? ತೀಮಾ೯ನ ಬದಲಾಯಿತು. ಕಸದ ಗಾಡಿಯವನಿಗೆ ಪಂಚಾಂಗದೆರಡರಷ್ಟು ಕಾಸು ಕೊಟ್ಟೆ. ಅವನ ಮುಖ ಊರಗಲವಾಯಿತು. ಓದಿದಷ್ಟೆ ಪುಣ್ಯ ಬಂತು ಅಂದುಕೊಂಡೆ. ಏಕೆಂದರೆ ಪರಿಸರ ಶುಚಿಯಾಗಿಡಲು ಅವನ ಪಾತ್ರ ಮುಖ್ಯವಲ್ಲವೆ. ಹೂಗಾಡಿ, ತರಾವರಿ ಹೂ ಪೂಜೆ ಮಾಡೋದು ಬಿಡೋಕಾಗುತ್ತ? ಪಾಪ, ಹಬ್ಬದಲ್ಲೆ ವ್ಯಾಪರ. ಹೇಳಿದಷ್ಟು ಕಾಸು ಕೊಟ್ಟೆ ತುಟಿ ಪಿಟಕ್ ಅನ್ನದೆ. ಮೊದಲಿನ ದಿನ ತರಕಾರಿಯವನಿಗೂ ಇದೆ ಉದಾರ ಬುದ್ದಿ ತೋರಿಸಿಬಿಟ್ಟೆ, “ಅಕಾ, ಹಬ್ಬ ತಕಳಿ” ಮರುಳಾದೆ ಮಾತಿಗೆ. ಬೇಕಾದ್ದು ಬೇಡಾದ್ದು ಎಲ್ಲ ಖರೀದಿ ಆಗಿತ್ತು.
ತಳಿರು ತೋರಣ ರಂಗೋಲಿಯ ಶೃಂಗಾರ ಪೂಜೆಗೆ ಹೂ ಪತ್ರೆ, ಹಣ್ಣು ಕಾಯಿ ಎಲ್ಲ ರೆಡಿ.
“ಅಮ್ಮ ಒಬ್ಬಟ್ಟಾ?” ” ಏಯ್ ಹೋಗೆ ಮೈದಾ ಹಿಟ್ಟಿಲ್ಲ. ನನಗೆ ಏನೂ ಮಾಡೊ ಮೂಡಿಲ್ಲ. ನೀನೆ ಮಾಡು ಇವತ್ತಿನ ನಳಪಾಕ. ” ” ಓ.ಕೆ. ”
ಸಣ್ಣಕ್ಕಿ ಕಡಲೆ ಬೇಳೆ ಪಾಯಸ, ಮಾವಿನಕಾಯಿ ಚಿತ್ರಾನ್ನ. ಮುಗೀತು ಹಬ್ಬದ ಅಡುಗೆ.
ಪೊಗದಸ್ತಾಗಿ ಸಂಭ್ರಮದಿಂದ ತರಾವರಿ ಹೂ ಪತ್ರೆಗಳಿಂದ ಇರೊ ಬರೊ ಮಂತ್ರ ಎಲ್ಲ ಹೇಳಿ ನೈವೇದ್ಯ ಗಂಟೆ ಜಾಗಟೆಗಳ ನಾದದಲ್ಲಿ ಕಪೂ೯ರದಾರತಿ ಬೆಳಗಿ ಹಾಡೇಳಿ ಬೇವು ಬೆಲ್ಲದೊಂದಿಗೆ ಮುಗಿಯಿತು ಯುಗಾದಿ ಪೂಜೆ.
ಸಾಯಂಕಾಲ ಮತ್ತೆ ಧ್ಯಾನ, ಜಪದೊಂದಿಗೆ ಮನಸ್ಸು ಫ್ರಪುಲ್ಲವಾಯಿತು. ಒಬ್ಬಟ್ಟಿನ ಸೇವನೆ ಇಲ್ಲದ ದೇಹ ಮಾರನೆ ದಿನ ಲವಲವಿಕೆಯಿಂದ ವಾಕಿಂಗ, ಯೋಗದಲ್ಲಿ ಮಗ್ನವಾಗಿ ನನ್ನ ಚಿಕ್ಕ ಹೂದೋಟದ ಪಾಲನೆಯಲ್ಲಿ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಪೃಕೃತಿಯ ಸೇವೆ ಹೊಸ ವಷ೯ಕೆ ನಾನೂ ಮಾಡಿದೆ ಅನ್ನುವ ಸಂತೃಪ್ತಿ. ಬೀದಿ ಕಸ ಗುಡಿಸುವವಳಿಗೆ ಸೀರೆ, ಕಾಸು ಕೊಟ್ಟು ಯುಗಾದಿ ಸೇವೆ ಮುಗಿಸಿದೆ.
ಟೀವಿಯಲ್ಲಿ ಬಂದ “ಬೇವು ಬೆಲ್ಲ” ಕಾಯ೯ಕ್ರಮದಲ್ಲಿ ಡಾ: ವಿಜಯಲಕ್ಷ್ಮೀ ಯವರಿಂದ ಯುಗಾದಿ ಹಬ್ಬದ ವಿವರಣೆ ಪಹಾಡಿ ರಾಗದಲ್ಲಿ ಹಾಡಿದ “ಪಾರಿಜಾತದ ಪುಷ್ಪ ನಂದನವನದ ಭೂಮಿಗಿಳಿತಯ್ಯ” ವಸಂತ ರಾಗದಲ್ಲಿ ಶ್ರೀ ಜಿ. ಎಸ್. ಶಿವರುದ್ರಪ್ಪನವರ ಹಾಡು ಕೇಳಿ ಮನಸ್ಸು ಉಲ್ಲಾಸದಿಂದ ತುಂಬಿಹೋಯಿತು.
ಪಂಚಾಂಗ, ಒಬ್ಬಟ್ಟಿಲ್ಲದ ಯುಗಾದಿಯಾದರೂ ಏನೊ ವಿಶೇಷ ಖುಷಿ, ಸಂತೃಪ್ತಿ ಮನೆ ಮಾಡಿತು.