ಬದಲಾವಣೆಯ ಅವಶ್ಯಕತೆ...
ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಭಕ್ತಿ, ನಂಬಿಕೆ ಬಗ್ಗೆ ಅಪಾರ ಅಭಿಮಾನವಿರುವ ಆತ ರಾತ್ರಿಯೆಲ್ಲ ಬಸ್ಸಿನಲ್ಲಿ ಪ್ರಯಾಣಿಸಿ ಬೆಳಗಿನ ಹೊತ್ತಿಗೆ ಮೆಜಸ್ಟಿಕ್ ನ ಗಿಜಿಗುಡುವ ಬಸ್ ನಿಲ್ದಾಣದಲ್ಲಿ ಇಳಿಯುತ್ತಾನೆ ನಗರ ಜೀವನದ ಬಗ್ಗೆ ಅಷ್ಟೇನೂ ಅರಿವಿರದ ಆತ ದಟ್ಟ ಜನಸಂದಣಿಗೆ ಸ್ವಲ್ಪ ಬೆಚ್ಚುತ್ತಾನೆ.
ಜನರ ನೂಕಾಟ ತಳ್ಳಾಟಗಳ ನಡುವೆ ತಲೆ ಎತ್ತಿ ನೋಡುತ್ತಾನೆ. ಅಲ್ಲಿ ಒಂದು ದೊಡ್ಡ ಬೋರ್ಡ (ಫಲಕ)
“ಕಳ್ಳರಿದ್ದಾರೆ ಎಚ್ಚರಿಕೆ”
ಆ ಯುವಕನಿಗೆ ಶಾಕ್. ರಾಜ್ಯದ ರಾಜಧಾನಿ ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣದಲ್ಲಿ ಈ ಅಸಹ್ಯಕರವಾದ ಫಲಕ. ಛೆ,.. ಇರಲಾರದು, ಏನೋ ತಪ್ಪಾಗಿರಬೇಕು, ಬಸ್ ನಿಲ್ದಾಣದಲ್ಲಿ ಕಳ್ಳರೇ ! ಎಂದು ಭಾವಿಸಿ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಅದರ ಬಗ್ಗೆ ಕೇಳುತ್ತಾನೆ.........
ಆ ವ್ಯಕ್ತಿ "ಹೌದು ಸಾರ್ ಇಲ್ಲಿ ಕಳ್ಳರು - ಪಿಕ್ ಪಾಕೆಟರ್ಸ್ ಜಾಸ್ತಿ. ಕಣ್ಣುಮುಚ್ಚಿ ತಗೆಯೋದರೊಳಗೆ ಚಕ್ ಅಂತ ಎಗರಿಸಿಬಿಡುತ್ತಾರೆ. ನೀವ್ಯಾರೊ ಹೊಸಬರು ಇರಬೇಕು, ಹುಷಾರು, ಯಾಮಾರಿದ್ರೆ ನಿಮ್ ಚಡ್ಡೀನೂ ಇರಲ್ಲ "
ಇದನ್ನು ಕೇಳಿ ಆ ಯುವಕನಿಗೆ ತಲೆತಿರುಗಿದಂತಾಯಿತು. ಸತ್ಯ, ಅಹಿಂಸೆ, ಪ್ರಾಮಾಣಿಕತೆ, ನಂಬಿಕೆ, ದೇವರು, ಧರ್ಮ ಅಂತ ಇಡೀ ವಿಶ್ವಕ್ಕೇ ಆಧ್ಯಾತ್ಮಿಕ ಚಿಂತನೆ ಕೊಟ್ಟ ಜನ ನಾವು ಅಂತ ಹಿರಿಯರು ಹೇಳುತ್ತಾರೆ. ಪವಿತ್ರ ಗ್ರಂಥವೂ ಹೇಳುತ್ತೆ, ಆದರೆ ವಾಸ್ತವ ಬೇರೇನೆ ಇದೆ ಎಂದು ಯೋಚಿಸುತ್ತಾ, ಅಲ್ಲಿಯೇ ಇದ್ದ ಹೋಟೆಲ್ ಗೆ ತಿಂಡಿ ತಿನ್ನಲು ಹೋಗುತ್ತಾನೆ.
ಖಾಲಿ ಇದ್ದ ಒಂದು ಟೇಬಲ್ಲಿನ ಮೇಲೆ ಕುಳಿತು ಬ್ಯಾಗ್ ಪಕ್ಕಕ್ಕಿರಿಸಿ ತಲೆ ಎತ್ತುತ್ತಾನೆ, ಅಲ್ಲಿ ಮತ್ತೊಂದು ಫಲಕ.
“ಎಚ್ಚರಿಕೆ, ನಿಮ್ಮ ವಸ್ತುಗಳಿಗೆ ನಾವು ಜವಾಬ್ದಾರರಲ್ಲ”
ಅರೆ, ನಾನು ಈ ಹೋಟಿಲ್ ನ ಅತಿಥಿ, ಗ್ರಾಹಕ, ನನ್ನ ವಸ್ತುಗಳಿಗೆ ಈ ಹೋಟೆಲ್ ಒಳಗಡೆ ಇವರು ಜವಾಬ್ದಾರರಾಗದೆ ಮತ್ಯಾರು ಆಗಬೇಕು. ಕನಿಷ್ಠ ಸೌಜನ್ಯ ಬೇಡವೇ, ನಮ್ಮ ವಸ್ತುಗಳು ಸೇಪ್ ಇರದ ಜಾಗದಲ್ಲಿ ಹೋಟೆಲ್ ಇದೆಯೇ?
ಯೋಚಿಸುತ್ತಿರಬೇಕಾದರೆ,
ಏನು ತಿಂಡಿ ಬೇಕು ಎಂದು ಕೇಳಲು ಬಂದ ಮಾಣಿಯನ್ನೇ ಈ ಬಗ್ಗೆ ಕೇಳಿದ
ಮಾಣಿ "ಅಯ್ಯೋ ಸಾರ್ ಇಲ್ಲಿ ಕಳ್ಳರ ಕಾಟ ಜಾಸ್ತಿ. ಯಾರನ್ನೂ ನಂಬೋಹಾಗಿಲ್ಲ. ನೀವು ಸ್ವಲ್ಪ ಪಕ್ಕಕ್ಕೆ ತಿರುಗಿದರೆ ಸಾಕು ನಿಮ್ಮ ವಸ್ತು ಮಂಗ ಮಾಯ. ಎಲ್ಲಾ ಕಳ್ಳರೆ, ಅದಕ್ಕೆ ನಮಗ್ಯಾಕೆ ತಲೆ ನೋವು ಅಂತ ನಮ್ಮ ಹೋಟೆಲ್ ಯಜಮಾನರು ಬೋರ್ಡ್ ಹಾಕಿದ್ದಾರೆ .ಇದು ಇಲ್ಲೆಲ್ಲ ಕಾಮನ್ ಸಾರ್"
ಯುವಕ ಕುಸಿದು ಬೀಳುವ ಹಂತ ತಲುಪುತ್ತಾನೆ. ಇಡ್ಲಿಗೆ ಆರ್ಡರ್ ಮಾಡಿ ಕೈ ತೊಳೆಯಲು ವಾಷ್ ಬೇಸಿನ್ ಬಳಿ ಬರುತ್ತಾನೆ, ಅಲ್ಲಿ ಇನ್ನೊಂದು ಬೋರ್ಡ.
" ತಟ್ಟೆ, ಪ್ಲೇಟುಗಳಲ್ಲಿ ಕೈ ತೊಳೆಯಬೇಡಿ "
ಯುವಕನಿಗೆ ಮತ್ತಷ್ಟು ಆಶ್ಚರ್ಯ,ತಿಂಡಿ ಕೊಡಲು ಬಂದ ಮಾಣಿಯನ್ನು ಕೇಳುತ್ತಾನೆ, ವಾಷ್ ಬೇಸಿನ್ ಇದ್ದರೂ ಈ ಫಲಕ ಯಾಕೆ ?
ಮಾಣಿ " ಅಯ್ಯೋ ನಮ್ಮ ಜನಕ್ಕೆ ಬುದ್ಧಿ ಇಲ್ಲ ಸಾರ್, ಎದ್ದೋಗಕ್ಕೂ ಸೋಮಾರಿತನ , ತಟ್ಟೆಯಲ್ಲಿ ಕೈ ತೊಳೆಯೋದು ಇರಲಿ ಅಲ್ಲೇ ಉಗಿದು ಬಿಡ್ತಾರೆ, ಥೂ ಏನ್ ಜನ. ಸಪ್ಲೈಯರ್ ಗಳೂ ಮನುಷ್ಯರು ಅಂತ. ತಿಳ್ಕೊಳಲ್ಲ, ಅದಕ್ಕೆ ಬೋರ್ಡ್”
ಯುವಕ ತಿಂಡಿ ತಿಂದು ಬಿಲ್ ಕೊಡಲು ಕ್ಯಾಷ್ ಕೌಂಟರ್ ಬಳಿ ಬರುತ್ತಾನೆ, ಅಲ್ಲಿ ಮಗದೊಂದು ಬೋರ್ಡ್
" ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ."
ಈ ಭಾರಿ ಆತ ಯಾರನ್ನೂ ಪ್ರಶ್ನಿಸುವುದಿಲ್ಲ. ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾನೆ.
ಮಾನವ ಅನಾಗರಿಕತೆಯಿಂದ ನಾಗರಿಕತೆಯತ್ತ ಎಂದು ನಾವು ಭಾವಿಸಿದ್ದೇವೆ, ಆದರೆ ವಾಸ್ತವದಲ್ಲಿ ನಾವು ಸಾಗುತ್ತಿರುವುದು ನಾಗರಿಕತೆಯಿಂದ ಅನಾಗರಿಕತೆಯತ್ತ.
ಇಂತಹ ಕಳ್ಳರ ಸಂತೆಯಲ್ಲಿ ನನಗೇನು ಕೆಲಸ. ಈ ಊರಿನ ಸಹವಾಸವೇ ಬೇಡ ಎಂದು ಆತ ವಾಪಸ್ ಆಗಲು ತಕ್ಷಣ ಬಸ್ ಹತ್ತುತ್ತಾನೆ.
ಅನಿವಾರ್ಯವಾಗಿ ನಾವು ಮಾತ್ರ ಇಲ್ಲಿಯೇ, ಇಂತಹ ವಾತಾವರಣದಲ್ಲಿಯೇ ಸಹಿಸಿಕೊಂಡು ಬದುಕುತ್ತಿದ್ದೇವೆ.
ಬದಲಾವಣೆಯ ಅವಶ್ಯಕತೆ ತುಂಬಾ ಇದೆ,
ನಮ್ಮ ಮಕ್ಕಳ ಭವಿಷ್ಯಕ್ಕಾಗಿ…
-ವಿವೇಕಾನಂದ. ಹೆಚ್.ಕೆ., ಬೆಂಗಳೂರು