ಬದುಕಿಗೆ ವಿದಾಯ ಹೇಳಿದ ‘ಅಭಿನಯ ಶಾರದೆ'- ಜಯಂತಿ
ಜಯಂತಿ ಎಂಬ ಹೆಸರು ಕೇಳಿದೊಡನೆಯೇ ನಿಮಗೆ ಒನಕೆ ಓಬವ್ವನ ನೆನಪಾಗುವುದು ಖಂಡಿತ. ‘ನಾಗರಹಾವು' ಚಿತ್ರದ ಆ ಪುಟ್ಟ ಪಾತ್ರದಲ್ಲಿ ಜಯಂತಿ ಓಬವ್ವನ ಪ್ರತಿರೂಪದಂತೆ ಕಂಡಿದ್ದರು. ಆ ಚಿತ್ರದಲ್ಲಿ ಜಯಂತಿಯದ್ದು ಅತಿಥಿ ನಟಿಯ ಪಾತ್ರ. ಕೆಲವೇ ನಿಮಿಷ ಇರುವ ಆ ಪಾತ್ರದಲ್ಲಿನ ನಟನೆಯ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದು ಈಗ ಇತಿಹಾಸ. ಒನಕೆ ಓಬವ್ವಳನ್ನು ನೋಡಿದವರು ಯಾರೂ ಇರಲಿಕ್ಕಿಲ್ಲ. ಆದರೆ ಆ ಹೆಸರು ಕೇಳಿದೊಡನೆಯೇ ನಮ್ಮ ಮುಂದೆ ಬಂದು ನಿಲ್ಲುವ ವ್ಯಕ್ತಿ ನಿಸ್ಸಂಶಯವಾಯವಾಗಿ ‘ಅಭಿನಯ ಶಾರದೆ' ಜಯಂತಿ.
ಕನ್ನಡ ಚಿತ್ರರಂಗದಲ್ಲಿ ಜಯಂತಿಯು ನಾಯಕಿ ನಟಿಯಿಂದ ಪೋಷಕ ನಟಿಯ ತನಕದ ಬಣ್ಣದ ಬದುಕಿನಲ್ಲಿ ಕಂಡ ಏಳು ಬೀಳುಗಳು ಸಾಕಷ್ಟಿವೆ. ೧೯೪೫ರ ಜನವರಿ ೬ರಂದು ಬಳ್ಳಾರಿಯಲ್ಲಿ ಜನಿಸಿದ ಜಯಂತಿಯ ಹುಟ್ಟು ಹೆಸರು ಕಮಲಾ ಕುಮಾರಿ. ಇವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದರು. ತಾಯಿ ಸಂತಾನಲಕ್ಷ್ಮಿ ಗೃಹಿಣಿ. ಇವರ ಮೂರು ಮಕ್ಕಳ ಪೈಕಿ ಜಯಂತಿಯವರು ಮೊದಲನೆಯವರು. ಜಯಂತಿಯವರ ಬಾಲ್ಯದಲ್ಲೇ ಇವರ ತಂದೆ ತಾಯಿಯವರು ವಿಚ್ಚೇದನ ಪಡೆದುಕೊಂಡ ಕಾರಣ, ಇವರ ತಾಯಿಯ ಊರಾದ ಮದರಾಸಿನಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಹೀಗೆ ಬಾಲ್ಯದಲ್ಲೇ ತಂದೆಯ ಪ್ರೀತಿಯಿಂದ ವಂಚಿತರಾದ ಇವರು ತಮ್ಮ ಮುಂದಿನ ಭವಿಷ್ಯದಲ್ಲೂ ಸಿಹಿ-ಕಹಿಯ ಸಮ್ಮಿಶ್ರ ಬದುಕನ್ನೇ ಕಂಡರು.
ಜಯಂತಿಯ ತಾಯಿಯವರಿಗೆ ತನ್ನ ಮಗಳು ಉತ್ತಮ ಭರತನಾಟ್ಯ ಕಲಾವಿದೆಯಾಗಬೇಕೆಂಬ ಆಸೆ ಇತ್ತು. ಆ ಕಾರಣದಿಂದ ಅವರು ಮಗಳನ್ನು ಮದರಾಸಿನ ಖ್ಯಾತ ಕಲಾವಿದೆ ಚಂದ್ರಕಲಾ ಅವರ ಭರತನಾಟ್ಯ ಶಾಲೆಗೆ ಸೇರಿಸಿದ್ದರು. ಒಮ್ಮೆ ಆ ಶಾಲೆಗೆ ಭೇಟಿ ಕೊಟ್ಟ ಸಿನೆಮಾ ನಿರ್ದೇಶಕ ವೈ. ಆರ್. ಪುಟ್ಟಸ್ವಾಮಿ ಜಯಂತಿಯ ನೃತ್ಯವನ್ನು ನೋಡಿ, ತಮ್ಮ ಮುಂದಿನ ಚಿತ್ರವಾದ ‘ಜೇನು ಗೂಡು' ನಲ್ಲಿ ಪಾತ್ರವಹಿಸಲು ಕೋರುತ್ತಾರೆ. ಈ ರೀತಿ ಜಯಂತಿಯವರ ಬಣ್ಣದ ಬದುಕಿನ ಪ್ರಯಾಣ ಆರಂಭವಾಗುತ್ತದೆ. ಚಿತ್ರದಲ್ಲಿ ಪಾತ್ರವಹಿಸುವ ಸಮಯದಲ್ಲಿ ನಿರ್ದೇಶಕರು ಇವರ ಹುಟ್ಟು ಹೆಸರಾದ ಕಮಲಾ ಕುಮಾರಿಯನ್ನು ಜಯಂತಿ ಎಂದು ಬದಲಾಯಿಸುತ್ತಾರೆ. ಈ ಹೆಸರೇ ಮುಂದಿನ ದಿನಗಳಲ್ಲಿ ಪ್ರಖ್ಯಾತಿಯನ್ನು ಪಡೆಯಿತು.
ಜೇನು ಗೂಡು ಚಿತ್ರದ ಬಳಿಕ ಜಯಂತಿ ಹಿಂದಿರುಗಿ ನೋಡಲೇ ಇಲ್ಲ. ಒಂದಾದ ಮೇಲೊಂದು ಚಿತ್ರಗಳಲ್ಲಿ ನಟಿಸುತ್ತಾ ಹೋದರು. ಜಯಂತಿಯ ಪ್ಲಸ್ ಪಾಯಿಂಟ್ ಏನೆಂದರೆ ಅವರು ಯಾವ ಪಾತ್ರಕ್ಕೂ ಸೈ ಅನಿಸಿಕೊಳ್ಳುತ್ತಿದ್ದರು. ಗಂಡು ಬೀರಿ ಹೆಣ್ಣು, ಅಳುಮುಂಜಿ, ಗ್ಲಾಮರಸ್, ಹಠಮಾರಿ, ಪೌರಾಣಿಕ, ಐತಿಹಾಸಿಕ ಎಲ್ಲಾ ಬಗೆಯ ಪಾತ್ರಗಳಿಗೆ ಬಣ್ಣತುಂಬುವಂತಹ ನಟನಾ ಕೌಶಲ್ಯ ಜಯಂತಿ ಅವರಿಗಿತ್ತು. ಈ ಕಾರಣದಿಂದಲೇ ಅವರು ಸುಮಾರು ೫೦೦ ಕ್ಕೂ ಮಿಕ್ಕಿದ ಚಲನ ಚಿತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಮರಾಠಿ ಭಾಷಾ ಚಿತ್ರಗಳಲ್ಲಿ ಜಯಂತಿಯವರು ಅಭಿನಯಿಸಿದ್ದಾರೆ.
ಅಂದಿನ ಕಾಲದಲ್ಲಿ ನಾಯಕಿ ನಟಿಗಳು ಗ್ಲಾಮರಸ್ ಆಗಿ ನಟಿಸುತ್ತಿರಲಿಲ್ಲ. ಆದರೆ ಆ ಮಡಿವಂತಿಕೆಯನ್ನು ತ್ಯಜಿಸಿ ಹಲವಾರು ‘ಬೋಲ್ಡ್’ ಪಾತ್ರಗಳಲ್ಲಿ ನಟಿಸಿದ ಖ್ಯಾತಿ ಜಯಂತಿಯವರದ್ದು. ೧೯೬೫ರಲ್ಲಿ ತೆರೆಕಂಡ ‘ಮಿಸ್ ಲೀಲಾವತಿ' ಚಿತ್ರದಲ್ಲಿ ಅವರೊಂದು ಗ್ಲಾಮರಸ್ ಬೊಂಬೆಯಂತೆ ನಟನೆ ಮಾಡಿದ್ದರು. ಆ ಚಿತ್ರದಲ್ಲಿ ಅವರು ಮೊದಲ ಬಾರಿ ಈಜುಡುಗೆಯಲ್ಲಿ ಕಾಣಿಸಿಕೊಳ್ಳುವ ಮುಖಾಂತರ ಸುದ್ದಿಯಾಗಿದ್ದರು. ಆದರೆ ಜಯಂತಿಯವರ ಹಿರಿಮೆಯೆಂದರೆ ಅವರು ಒಂದೇ ಬಗೆಯ ಪಾತ್ರಗಳಿಗೆ ಯಾವತ್ತೂ ಜೋತು ಬೀಳಲಿಲ್ಲ. ಎಲ್ಲಾ ಬಗೆಯ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗದ ಸವ್ಯಸಾಚಿಯಂತೆ ಆಗಿಹೋಗಿದ್ದರು.
ಕನ್ನಡದ ವರನಟ ಡಾ. ರಾಜ್ ಕುಮಾರ್ ಜೊತೆಗೆ ಅಭಿನಯಿಸುವುದೇ ಸುದೈವ ಎಂದು ಆ ಕಾಲದಲ್ಲಿ ನಟಿಯರು ನಂಬಿದ್ದರು. ಡಾ. ರಾಜ್ ಜೊತೆ ಒಂದು ಚಿತ್ರದಲ್ಲಿ ನಟಿಸಿದರೆ ತಮ್ಮ ಜೀವನ ಪಾವನವಾಗುವುದೆಂದು ತಿಳಿದಿದ್ದ ಸಮಯದಲ್ಲಿ ಜಯಂತಿಯವರು ಬರೋಬ್ಬರಿ ೩೯ ಚಿತ್ರಗಳಲ್ಲಿ ನಟಿಸಿದ್ದರು. ಡಾ. ರಾಜ್ ಚಿತ್ರಗಳೂ ಒಂದಕ್ಕಿಂತ ಒಂದು ಭಿನ್ನ. ಈ ಕಾರಣದಿಂದ ಅವರ ಜೊತೆ ನಟಿಸಬೇಕಾದ ನಟಿಯೂ ಅದೇ ರೀತಿಯ ಪಾತ್ರಗಳನ್ನು ಮಾಡುವಂಥವರಾಗಿರಬೇಕಿತ್ತು. ಹಲವಾರು ಬಾರಿ ಖುದ್ದು ಡಾ. ರಾಜ್ ಅವರೇ ಜಯಂತಿಯನ್ನು ತಮ್ಮ ನಾಯಕಿಯಾಗಿ ಈ ಚಿತ್ರದಲ್ಲಿ ಹಾಕಿಕೊಳ್ಳಿ ಎಂದು ಹೇಳಿದ್ದೂ ಇದೆಯಂತೆ. ಹೀಗಾಗಿ ಆ ಸಮಯದಲ್ಲಿ ಡಾ. ರಾಜ್ ಹಾಗೂ ಜಯಂತಿ ಜೋಡಿಯನ್ನು ಸೂಪರ್ ಹಿಟ್ ಜೋಡಿಯೆಂದೇ ಪರಿಗಣಿಸಲಾಗುತ್ತಿತ್ತು.
ಜಯಂತಿಯವರು ರಾಜ್ ಕುಮಾರ್ ಜೊತೆಗೆ ನಟಿಸಿದ ಮೊದಲ ಚಿತ್ರ ‘ಚಂದವಳ್ಳಿಯ ತೋಟ'(೧೯೬೪). ಈ ಚಿತ್ರ ಸೂಪರ್ ಹಿಟ್ ಆಗಿತ್ತು. ನಂತರದ ದಿನಗಳಲ್ಲಿ ಈ ಜೋಡಿ ಹಿಂದಿರುಗಿ ನೋಡಿದ್ದೇ ಇಲ್ಲ. ತುಂಬಿದ ಕೊಡ, ಮುರಿಯದ ಮನೆ, ಪ್ರತಿಜ್ಞೆ, ವಾತ್ಸಲ್ಯ, ಬೆಟ್ಟದ ಹುಲಿ, ಪ್ರೇಮಮಯಿ, ದೇವರ ಗೆದ್ದ ಮಾನವ, ಮಂತ್ರಾಲಯ ಮಹಾತ್ಮೆ, ಕಿಲಾಡಿರಂಗ, ಲಗ್ನಪತ್ರಿಕೆ, ಚಕ್ರತೀರ್ಥ, ಬೆಂಗಳೂರು ಮೈಲ್, ಕಸ್ತೂರಿ ನಿವಾಸ, ಮನಸ್ಸಿದ್ದರೆ ಮಾರ್ಗ, ಇಮ್ಮಡಿ ಪುಲಕೇಶಿ, ಜೇಡರ ಬಲೆ, ಶ್ರೀಕೃಷ್ಣದೇವರಾಯ, ಚೂರಿ ಚಿಕ್ಕಣ್ಣ, ಪುನರ್ಜನ್ಮ, ಭಲೇ ರಾಜ, ಚಿಕ್ಕಮ್ಮ, ಕ್ರಾಂತಿವೀರ, ಸಿಐಡಿ ರಾಜಣ್ಣ, ತನ್ನ ತಮ್ಮ, ಪರೋಪಕಾರಿ, ನಂದಗೋಕುಲ, ದೇವರು ಕೊಟ್ಟ ತಂಗಿ, ಮೂರುವರೆ ವಜ್ರಗಳು, ಕುಲಗೌರವ ಹೀಗೆ ೩೯ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ‘ಬಹಾದ್ದೂರ್ ಗಂಡು' ಚಿತ್ರ ಇವರ ಜೋಡಿಯ ಕೊನೆಯ ಚಿತ್ರ.
ಡಾ. ರಾಜ್ ಕುಮಾರ್ ಜೊತೆ ಇಷ್ಟೆಲ್ಲಾ ಚಿತ್ರಗಳಲ್ಲಿ ನಟಿಸಿದ ಜಯಂತಿಯವರು ಸಹಜವಾಗಿಯೇ ರಾಜ್ ಹಾಗೂ ಅವರ ಕುಟುಂಬದ ಜೊತೆ ಸುಮಧುರ ಬಾಂಧವ್ಯವನ್ನು ಹೊಂದಿದ್ದರು. ರಾಜ್ ಕುಮಾರ್ ಅವರನ್ನು ‘ರಾಜ್’ ಎಂದು ಸಲುಗೆಯಿಂದ ಕರೆಯುತ್ತಿದ್ದ ಏಕೈಕ ನಟಿ ಜಯಂತಿ ಮಾತ್ರ. ಉಳಿದ ಎಲ್ಲಾ ನಟಿಯರಿಗೂ ರಾಜ್ ಎಂದರೆ ಭಯಮಿಶ್ರಿತ ಗೌರವವಿತ್ತು.
ವಿಷ್ಣುವರ್ಧನ್ ಅವರ ಜೊತೆಯಲ್ಲೂ ‘ನಾಗರಹಾವು, ದೇವರು ಕೊಟ್ಟ ವರ, ಚಿನ್ನಾ ನಿನ್ನ ಮುದ್ದಾಡುವೆ, ಶ್ರೀಮಂತನ ಮಗಳು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಂತಿಯವರು ಪೋಷಕ ನಟಿಯಾಗಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ ನಟಿಯರ ಜೊತೆ ನಟಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲೂ ಶಮ್ಮಿ ಕಪೂರ್ ಹಾಗೂ ಮಹಮ್ಮೂದ್ ಜೊತೆ ಚಿತ್ರಗಳಲ್ಲಿ ನಟಿಸಿದ್ದಾರೆ. 'ತೀನ್ ಬಹುರಾನಿಯಾ, ತುಮ್ಸೆ ಅಚ್ಚಾ ಹೌನ್ ಹೇ’ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
೮೦ ರ ದಶಕದಲ್ಲಿ ಜಯಂತಿಯವರು ನಾಯಕಿಯ ಪಟ್ಟದಿಂದ ಪೋಷಕ ಪಾತ್ರಕ್ಕೆ ಬದಲಾದರು. ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ನೋವನ್ನು ಉಂಡಿದ್ದ ಜಯಂತಿ ಚಲನಚಿತ್ರ ನಿರ್ದೇಶನಕ್ಕೆ ಹೊರಳಿ ಅಲ್ಲೂ ಸೋಲನ್ನು ಅನುಭವಿಸಿದರು. ‘ವಿಜಯ್' ಹಾಗೂ 'ಏನ್ ಸ್ವಾಮಿ ಅಳಿಯಂದ್ರೆ' ಚಿತ್ರಗಳನ್ನು ನಿರ್ಮಿಸಿ-ನಿರ್ದೇಶಿಸಿದರೂ ಗೆಲುವು ಅವರ ಕೈಹಿಡಿಯಲಿಲ್ಲ. ರಾಜಕೀಯ ರಂಗದಲ್ಲೂ ಮಿಂಚುವ ಆಸೆಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಅಲ್ಲೂ ಸೋಲು ಅವರ ಪಾಲಾಯಿತು. ಆದರ ಪೋಷಕ ಪಾತ್ರಗಳು ಜಯಂತಿ ಅವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿತು ಎಂಬುವುದು ಸುಳ್ಳಲ್ಲ.
ಜಯಂತಿಯವರು ಯಾವ ಕಷ್ಟದ ಸಂದರ್ಭದಲ್ಲೂ ಯಾರ ಬಳಿಯೂ ನೆರವಿನ ಯಾಚನೆ ಮಾಡದೇ ಸ್ವಾಭಿಮಾನಿಯಾಗಿ ಬದುಕಿದವರು. ದೇವರು ಕೊಟ್ಟದ್ದರಲ್ಲೇ ತಾನು ತೃಪ್ತೆ ಎನ್ನುತ್ತಿದ್ದರು. ನಿರ್ಮಾಪಕರು ಸಂಭಾವನೆಯಾಗಿ ಕೊಟ್ಟ, ಆದರೆ ಖಾತೆಯಲ್ಲಿ ಹಣವಿಲ್ಲದೇ ಬೌನ್ಸ್ ಆದ ಹಲವಾರು ಚೆಕ್ ಗಳು ಜಯಂತಿ ಬಳಿಯಲ್ಲಿದ್ದುವಂತೆ. ಅವುಗಳನ್ನೆಲ್ಲಾ ಲೆಕ್ಕ ಮಾಡಿದರೆ ಲಕ್ಷಾಂತರ ರೂಪಾಯಿಗಳಾಗುತ್ತವೆ ಎಂದು ತಮ್ಮ ಆತ್ಮೀಯರ ಬಳಿ ಜಯಂತಿಯವರು ಹೇಳಿಕೊಳ್ಳುತ್ತಿದ್ದರು.
ಜಯಂತಿಯವರಿಗೆ ಆರು ಬಾರಿ ತಮ್ಮ ನಟನಾ ಪ್ರತಿಭೆಗಾಗಿ ರಾಜ್ಯ ಪ್ರಶಸ್ತಿಗಳು ಬಂದಿವೆ. ನಾಲ್ಕು ಬಾರಿ ಉತ್ತಮ ನಟಿ ಹಾಗೂ ಎರಡು ಬಾರು ಉತ್ತಮ ಪೋಷಕ ನಟಿ ವಿಭಾಗದಲ್ಲಿ ಪ್ರಶಸ್ತಿ ಸಂದಿವೆ. 'ಎಡಕಲ್ಲು ಗುಡ್ಡದ ಮೇಲೆ', ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಮಸಣದ ಹೂವು ಚಿತ್ರಗಳಿಗೆ ಉತ್ತಮ ನಟಿ ಪ್ರಶಸ್ತಿ ಹಾಗೂ ಆನಂದ್, ಟುವ್ವಿ ಟುವ್ವಿ ಟುವ್ವಿ ಚಿತ್ರಗಳಿಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿದೆ. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಡಾ. ರಾಜ್ ಕುಮಾರ್ ಪ್ರಶಸ್ತಿಯೂ ಇವರಿಗೆ ಸಂದಿದೆ.
ಅಲ್ಪಕಾಲದ ಅನಾರೋಗ್ಯ ಹಾಗೂ ದೀರ್ಘ ಕಾಲದಿಂದ ಕಾಡುತ್ತಿದ್ದ ಅಸ್ತಮಾ ಕಾಯಿಲೆಗಳ ಕಾರಣದಿಂದ ಬಳಲುತ್ತಿದ್ದ ಇವರು ೨೬, ಜುಲೈ, ೨೦೨೧ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಇತ್ತೀಚಿನವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವರ ಅಗಲುವಿಕೆ ಅಸಂಖ್ಯಾತ ಅಭಿಮಾನಿಗಳನ್ನು ನೋವಿನಲ್ಲಿ ಮುಳುಗಿಸಿರುವುದು ಸುಳ್ಳಲ್ಲ. ಇವರಿಗೆ ಕೃಷ್ಣ ಕುಮಾರ್ ಎಂಬ ಒಬ್ಬ ಮಗನಿದ್ದಾನೆ.
ಲೇಖನ ಮುಗಿಸುವ ಸಮಯದಲ್ಲಿ ಜಯಂತಿಯವರ ನಟನಾ ಕೌಶಲ್ಯದ ಬಗ್ಗೆ ಒಂದು ಸಣ್ಣ ಪ್ರಸಂಗವನ್ನು ನೆನಪು ಮಾಡಿಸಿಕೊಡುತ್ತಿದ್ದೇನೆ. 'ಮುರಿಯದ ಮನೆ' ಚಿತ್ರದ ಚಿತ್ರೀಕರಣದ ಸಂದರ್ಭ. ಬಾಲಕೃಷ್ಣ (ಬಾಲಣ್ಣ) ಇವರು ಅದರಲ್ಲಿ ಬೊಂಬಾಯಿ ಬಾಬು ಎಂಬ ಪಾತ್ರ ಮಾಡುತ್ತಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಜಯಂತಿಯವರು ಬಾಲಣ್ಣನವರಿಗೆ ಪೊರಕೆಯಲ್ಲಿ ಹೊಡೆಯುವ ಸನ್ನಿವೇಶ ಬರುತ್ತದೆ. ಹಿರಿಯ ನಟ ಬಾಲಣ್ಣನವರ ಬಗ್ಗೆ ಜಯಂತಿಯವರಿಗೆ ಬಹಳ ಗೌರವ. ನಾನು ಅವರಿಗೆ ಪೊರಕೆಯಲ್ಲಿ ಖಂಡಿತಾ ಹೊಡೆಯಲಾರೆ. ಸನ್ನಿವೇಶವನ್ನು ಬದಲಾಯಿಸಿ ಎಂದು ಜಯಂತಿ ಗೋಗರೆಯುತ್ತಾಳೆ. ಆಗ ಬಾಲಣ್ಣನವರೇ ಸಮಾಧಾನ ಮಾಡಿ ‘ಇದು ಕೇವಲ ನಟನೆ. ನಟನೆ ಸಹಜತೆಯಿಂದ ಕೂಡಿರಬೇಕಾದಲ್ಲಿ ನೀನು ನನ್ನನ್ನು ಪೊರಕೆಯಿಂದ ಬಾರಿಸಲೇ ಬೇಕಮ್ಮಾ’ ಎಂದು ಮನವೊಲಿಸಿದರು. ಜಯಂತಿ ನಟನೆಯಲ್ಲಿ ಎಷ್ಟು ತಲ್ಲೀನರಾಗಿ ನಟಿಸಿದರೆಂದರೆ ಬಾಲಣ್ಣನವರಿಗೆ ಪೊರಕೆಯಲ್ಲಿ ಬಾರಿಸಿದ್ದೇ ಬಾರಿಸಿದ್ದು. ಚಿತ್ರೀಕರಣ ಮುಗಿದ ಬಳಿಕ ತಮ್ಮ ಮೈಗೆ ಅಂಟಿಕೊಂಡ ಪೊರಕೆಯ ಕಡ್ಡಿ ಹುಡಿಯನ್ನು ಸ್ವಚ್ಚಗೊಳಿಸಲು ಬಾಲಣ್ಣನವರಿಗೆ ಸಾಕೋ ಸಾಕಾಯಿತಂತೆ. ಹೀಗಿದ್ದರು ‘ಅಭಿನಯ ಶಾರದೆ’ - ಜಯಂತಿ.
ಚಿತ್ರ ಕೃಪೆ: ಅಂತರ್ಜಾಲ ತಾಣ