ಬದುಕಿದು ಜಟಕಾ ಬಂಡಿ..ಮೊಹಮ್ಮದ್ ಗೌಸ್ ಅದರ ಸಾಹೇಬಾ!

ಬದುಕಿದು ಜಟಕಾ ಬಂಡಿ..ಮೊಹಮ್ಮದ್ ಗೌಸ್ ಅದರ ಸಾಹೇಬಾ!

ಬರಹ

ನಮ್ಮ ಪರಿಸರ ಸಂರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ `29th Day', ನಿಗದಿಗೊಳಿಸಿದ ಸಮಯಕ್ಕಿಂತ ಒಂಡು ಗಂಟೆ ಮುಂಚೆ `11th Hour', ಹಾಗೆಯೇ ಸುದ್ದಿ ಮನೆಯ ಬಾಣಸಿಗ ಪತ್ರಕರ್ತನಿಗೆ `Dead line' ಸುದ್ದಿ ಹೆಕ್ಕಿ, ಪೋಣಿಸಿ ನೀಡಲು ಲಕ್ಷ್ಮಣ ರೇಖೆ. ಹೀಗೆಯೇ ನಮ್ಮ ಇಂದ್ರಿಯಗಳನ್ನೆಲ್ಲ ಚುರುಕುಗೊಳಿಸಿಕೊಂಡು ಸೂಕ್ಷ್ಮವಾಗಿ ನಮ್ಮ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸಿದರೆ ‘ಅಭಿವೃದ್ಧಿ’ ಎಂಬ ಬೆಳವಣಿಗೆಗಳ ಓಘ ಗಮನಕ್ಕೆ ಬರುತ್ತದೆ. ಬಹುಶ: ಭೂಮಿಯ ಮೇಲೆ ಪ್ರತಿಯೊಂದು ಜೀವಿಯು `Dead line' ಹಾಕಿಕೊಂಡೇ ಬದುಕುತ್ತಿದೆ ಏನೋ?

‘ಬದುಕು ಜಟಕಾ ಬಂಡಿ’ ನಿಜ. ಆದರೆ ನಮ್ಮ ನ್ಯಾನೋ ತಂತ್ರಜ್ನಾನದ ಯುಗದಲ್ಲಿ ‘ವಿಧಿ’ ಅಲ್ಲ ಅದರ ಸಾಹೇಬಾ! ನಿಮ್ಮ, ನಮ್ಮೆಲ್ಲರ ಪರಿಕರಗಳು, ಸಾಂಪ್ರದಾಯಿಕ ಪದ್ಧತಿಗಳು, ಧೋರಣೆಗಳು ಈಗಾಗಲೇ `29th Day' ಕಂಡಿವೆ. ಇದು ಅಭಿವೃದ್ಧಿಯ ಸಂಕೇತವಂತೆ! ಇದನ್ನು ‘ಬೆಳವಣಿಗೆ’ ಎಂದು ನಾನು ಕರೆದು, ಆ ಪ್ರಕ್ರಿಯೆಯ ಭಾಗವಾಗಿರುವ ನಮ್ಮನ್ನು ‘ಅಭಿವೃದ್ಧಿ ರಥದ ಚಕ್ರದಡಿಯಲ್ಲಿ ಸಿಲುಕಿದವರು’ ಎಂದರೆ ಸಮಾಧಾನ ಎನಿಸುತ್ತದೆ.

ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿ ಆಸರೆಯಾಗಿ ಸಿಕ್ಕರೂ ಸಾಕು, ಬದುಕಿಸಬಲ್ಲುದು. ‘ವೃತ್ತಿ ಎಂದಿಗೂ ಮನುಷ್ಯನಿಗೆ ದ್ರೋಹ ಬಗೆಯುವುದಿಲ್ಲ. ಆದರೆ ಮನುಷ್ಯನೇ ತಾನು ನಂಬಿಕೊಂಡು ಬಂದ ವೃತ್ತಿಗೆ ದ್ರೋಹ ಬಗೆಯುತ್ತಾನೆ’ ಎಂಬುದು ರಷ್ಯನ್ ನಾಣ್ಣುಡಿ. ಈ ಪಡಿನುಡಿಗೆ ಒಂದು ಧಾರವಾಡದ ಉದಾಹರಣೆ.

೧೯೭೦-೮೦ರ ದಶಕದಲ್ಲಿ ವಿದ್ಯಾನಗರಿ ಧಾರವಾಡದಲ್ಲಿ ಅಂದಾಜು ೩೭೦ಕ್ಕೂ ಮಿಕ್ಕಿ ‘ಜಟಕಾ’ಗಳಿದ್ದವು. ಶ್ರೀಸಾಮಾನ್ಯನ ಬದುಕಿಗೆ ಹಾಸುಹೊಕ್ಕಾಗಿದ್ದವು. ಇಂದು ಇವುಗಳ ಸಂಖ್ಯೆ ಕೇವಲ ೭. ಹಾಗಿದ್ದರೆ ೩೬೩ ಜಟಕಾಗಳು ಏನಾದವು? ಜನ ಜಟಕಾ ಆಶ್ರಯಿಸುವುದನ್ನು ಬಿಟ್ಟು ಕ್ರಮೇಣ ಯಂತ್ರ ಚಾಲಿತ ರಿಕ್ಷಾಗಳ ಕಡೆಗೆ ವಾಲಿದರು. ಇತ್ತ ಜಟಕಾ ಓಡಿಸುವವರ ಬದುಕು ದುಸ್ಥರವಾಯಿತು. ೨ ದಶಕಗಳಲ್ಲಿ ಜಟಕಾ ಮಾಮುಗಳು ತಮ್ಮ ವೃತ್ತಿ ಬದಲಾಯಿಸಿದರು. ಜಟಕಾ ಕಾಲಗರ್ಭ ಸೇರಿತು.

ಜಟಕಾದಲ್ಲಿ ಒಂದು ಸುತ್ತು:

ಸಾಂಸ್ಕೃತಿಕ ರಾಜಧಾನಿ ಧಾರವಾಡ ೧೯೭೦-೮೦ರ ದಶಕದಲ್ಲಿ ೭ ಕೆರೆಗಳು ಹಾಗು ೭ ಗುಡ್ಡಗಳ ‘ಛೋಟಾ ಮಹಾಬಳೇಶ್ವರ’ ಆಗಿತ್ತು. ಬದುಕಿನ ಏರುಪೇರಿನ ಗಾಯನದಂತೆ ಇಲ್ಲಿನ ರಸ್ತೆಗಳನ್ನು ಸೈಕಲ್ ಮೂಲಕ ಕ್ರಮಿಸಲು ಜನ ಹರಸಾಹಸ ಪಡುತ್ತಿದ್ದ ಕಾಲವದು. ಶೈಕ್ಷಣಿಕ ರಾಜಾಧಾನಿಯಾದರೂ ಇಂದಿಗೂ ನಿವೃತ್ತರ ಸ್ವರ್ಗವೆಂದೇ ಖ್ಯಾತವಾಗಿರುವ ಧಾರವಾಡ, ಇಲ್ಲಿನ ಜನರನ್ನು ೭ ಗುಡ್ಡ, ೭ ಕೆರೆಗಳ ಏರುಪೇರಿನ ಹಾದಿ ಕ್ರಮಿಸಲು ಜಟಕಾ ಅವಿಭಾಜ್ಯ ಸಂಚಾರಿ ಸಾಧನವಾಗಿತ್ತು. ಈಗಿನಂತೆ ಆಗ ಮನೆಗೊಂದು ಕಾರು, ಮನೆಯಲ್ಲಿ ಇದ್ದವರಿಗೆಲ್ಲ ತಲಾ ಒಂದೊಂದು ದ್ವಿಚಕ್ರ ವಾಹನಗಳಿರಲಿಲ್ಲ.

ನಗರದ ಪ್ರೇಕ್ಷಣೀಯ ಸ್ಥಳಗಳಾದ -ಶ್ರೀ ಮುರುಘಾಮಠ, ಶ್ರೀಕ್ಷೇತ್ರ ಸೋಮೇಶ್ವರ, ಕುಮಾರ ಸ್ವಾಮಿಗಳ ತಪೋವನ, ಅಕ್ಕಮಹಾದೇವಿ ಆಶ್ರಮ, ನುಗ್ಗಿಕೇರಿ ವ್ಯಾಸರಾಯ ಪ್ರತಿಷ್ಠಾಪಿತ ಆಂಜನೇಯ ದೇವಸ್ಥಾನ, ಶ್ರೀ ಉಳವಿ ಚೆನ್ನಬಸವೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡುವ ಆಸ್ತಿಕರ ಆಸ್ತಿಯಾಗಿತ್ತು ಈ ಜಟಕಾ. ವಿದ್ಯಾನಗರಿಗೆ ಭೇಟಿ ನೀಡುವ ಜನರಿಗೆ ಜಗತ್ಪ್ರಸಿದ್ಧ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ಯವಿದ್ಯಾಲಯ, ಆಕಾಶವಾಣಿ ಕೇಂದ್ರಗಳಿಗೆ ಸುತ್ತಾಡಿಸಲು ‘ಟಾಂಗಾ’ ಆಧಾರವಾಗಿತ್ತು. ಆ ಅನುಭವ ತೆರೆದ ಜೀಪಿನ ಮೆರವಣಿಗೆಯಂತೆ ಖುಷಿ ಕೊಡುತ್ತಿತ್ತು.

ಇನ್ನು ಮನರಂಜನೆ ಆಸಕ್ತರಿಗೆ ನಗರದ ಹೃದಯ ಭಾಗದಲ್ಲಿರುವ ಆಝಾದ್ ಉದ್ಯಾನವನ, ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ ಹಾಗು ಮೃಗಾಲಯ, ಪಂಡಿತ ಮುಂಜಿ ಅವರ ಕೃಪಾ ಪೋಷಿತ ಜಮಖಂಡಿಮಠ ಲೇಔಟ್ ಉದ್ಯಾನ, ಸರ್ ಎಂ.ವಿಶ್ವೇಶ್ವರಯ್ಯನವರು ಕಟ್ಟಿದ ಕೆಲಗೇರಿ ಕೆರೆ, ಬೇಂದ್ರೆ ಮಾಸ್ತರ್ರಿಗೆ ಸಾಧನಾ ಸ್ಫೊರ್ತಿಯ ಕೆರೆ ಸಾಧನಕೇರಿ ವಿಹಾರಕ್ಕೆ ಸಾಥಿ ಟಾಂಗಾ ಆಗಿತ್ತು.

ಸಾಹಿತ್ಯಪ್ರಿಯರಿಗೆ ಡಾ. ದ.ರಾ.ಬೇಂದ್ರೆ ಮನೆ ‘ಶ್ರೀ ಮಾತಾ’ದ ಸಾಧನಕೇರಿ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಮನೆ, ಸಾಹಿತಿ ಶಂ.ಭಾ.ಜೋಶಿ ಅವರ ಶ್ರೀನಿವಾಸ, ಅಲ್ಲದೇ ಕಲ್ಯಾಣನಗರದ ಸಾಹಿತ್ಯ ದಂಪತಿ ಡಾ.ಸ.ಸ.ಮಾಳವಾಡ ಹಾಗು ಶ್ರೀಮತಿ ಶಾಂತಕ್ಕಾ ಮಾಳವಾಡ, ಚೆಂಬೆಳಕಿನ ಕವಿ ಚೆನ್ನವೀರ ಕಣವಿ, ಶ್ರೀಮತಿ ಶಾಂತಾದೇವಿ ಕಣವಿ, ಡಾ.ಎಂ.ಎಂ.ಕಲಬುರ್ಗಿ, ಪ್ರೊ.ಕೀರ್ತಿನಾಥ ಕುರ್ತಕೋಟಿ, ಡಾ.ಗಿರೀಶ ಕಾರ್ನಾಡ್, ಪದ್ಮವಿಭೂಷಣ ಡಾ.ಶ್ರೀಮತಿ ಗಂಗೂಬಾಯಿ ಹಾನಗಲ್, ಪದ್ಮವಿಭೂಷಣ ಪಂ.ಮಲ್ಲಿಕಾರ್ಜುನ್ ಮನ್ಸೂರ್, ಪಂ.ಬಸವರಾಜ್ ರಾಜಗುರು, ಪದ್ಮಭೂಷಣ ಪಂ.ಭೀಮಸೇನ್ ಜೋಶಿ ಸೇರಿದಂತೆ, ಪದ್ಮಶ್ರೀ ಜಿ.ಬಿ.ಜೋಶಿ, ಭಾಲಚಂದ್ರ ಘಾಣೇಕರ್, ಹೀಗೆಯೇ ಪಟ್ಟಿ ಬೆಳೆಯುತ್ತದೆ. ಬಸ್ ಸೌಕರ್ಯವಿರದಿದ್ದ ಈ ಎಲ್ಲ ಹೊರ ವಲಯಗಳಿಗೆ ಗಣ್ಯಾತಿಗಣ್ಯರನ್ನು ಹೊತ್ತೊಯ್ದ, ಸ್ವತ: ಇವರನ್ನೆಲ್ಲ ಹೊತ್ತು ತಿರುಗಿದ ಖ್ಯಾತಿ ಈ ಜಟಕಾಗಳಿಗಿದೆ!

ಹಾಗೆಯೇ ಈ ಧೃವತಾರೆಗಳಿಗೆ, ಸಾಂಸ್ಕೃತಿಕ ರಾಯಭಾರಿಗಳಿಗೆ ನಗರ ದರ್ಶನ ಮಾಡಿಸಿದ, ಅಲಂಕೃತಗೊಂಡು ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಕರೆ ತಂದ ಖ್ಯಾತಿ ಈ ಜಟಕಾಗಳದ್ದು.
ಇಷ್ಟು ಮಹತ್ವ ಪಡೆದುಕೊಂಡಿದ್ದ ಟಾಂಗಾ ಈಗ ಇತಿಹಾಸದ ಪುಟಗಳನ್ನು ಸೇರಲು ತಯಾರಿ ನಡೆಸಿದೆ.

ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿಯೂ ಟಾಂಗಾ ವೃತ್ತಿಯನ್ನು ನಂಬಿ ನಡೆದಿರುವ ಮೊಹೊಮ್ಮದ್ ಗೌಸ್ ಅವರನ್ನು ನಾನು ಮಾತನಾಡಿಸಿದಾಗ, ಕಳೆದ ೪ ದಶಕಗಳಿಂದ ಅವರ ಕುಟುಂಬ ಜಟಕಾ ಸೇವೆಯಲ್ಲಿ ನಿರತವಾಗಿದೆ,
ಎಂಬ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿತು. ಇಂದಿಗೂ ಈ ವೃತ್ತಿ ನಂಬಿ ಅವರು ಪಡುತ್ತಿರುವ ಪಾಡು ಇಲ್ಲಿ ನಾನು ಬರೆದು ತೀರದ್ದು.

ದಿನವೊಂದಕ್ಕೆ ಅವರಿಗೆ ಸಿಗುವ ಬಾಡಿಗೆ ೩೦ ರಿಂದ ೬೦ ರುಪಾಯಿ. ಕುದುರೆಯ ಖರ್ಚು ದಿನವೊಂದಕ್ಕೆ ೪೦ ರುಪಾಯಿ. ಮೊಹೊಮ್ಮದ್ ಗೌಸ್ ಅವರ ಆಶ್ರಿತರು ೬ ಜನ. ಹೀಗಾಗಿ ಬದುಕು ನಡೆಯುವುದೇ ದುಸ್ಥರ.
ಪತ್ನಿ ಮನೆಯಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಇಬ್ಬರು ಹೆಣ್ಣು ಮಕ್ಕಳು ಮನೆ, ಮನೆಗೆ ತೆರಳಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗಿ ತಂದೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ.
ಗಂಡು ಮಗ ಚಿಕ್ಕವನಿದ್ದು, ಗ್ಯಾರೇಜಿನಲ್ಲಿ ಕೆಲಸಕ್ಕಿದ್ದಾನೆ. ಸಮಯಸಿಕ್ಕಾಗ ಶಾಲೆಗೆ ಹೋಗುತ್ತಾನೆ. ಆತ ಇನ್ನೂ ಗ್ಯಾರೇಜಿನಲ್ಲಿ ತರಬೇತಿ ಪಡೆಯುತ್ತಿರುವುದರಿಂದ ಆತನಿಗೆ ಪಗಾರ ನೀಡಲಾಗುವುದಿಲ್ಲ. ವಯೋವೃದ್ಧ
ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದು ಬಳಲುತ್ತಿದ್ದಾರೆ.

ಇಷ್ಟೆಲ್ಲ ಇಲ್ಲಗಳ ಮಧ್ಯೆ ಮೊಹೊಮ್ಮದ್ ಗೌಸ್ ನಲುಗುತ್ತಿದ್ದರೂ ನಂಬಿದ ವೃತ್ತಿ ಕೈ ಬಿಡಲು ಸಿದ್ಧರಿಲ್ಲ. ಅವರಂತೆ ೬ ಜನ ಗೆಳೆಯರು ದಿಟ್ಟ ನಿರ್ಧಾರ ತೆಗೆದುಕೊಂಡು ಮನಸ್ಸು ಮಾಡಿರುವುದರಿಂದ ಒಟ್ಟು ೭ ಜಟಕಾಗಳು
ಇಂದು ಧಾರವಾಡದಲ್ಲಿ ಬದುಕಿಉಳಿದಿವೆ ಎನ್ನಲು ಅಡ್ಡಿ ಇಲ್ಲ.

"ಸಾಹೇಬ್ರ ಬಸ್ಸಿನಿಂದ ಫಿಲ್ಮ ರೀಲ್ ಹಾಕ್ಕ್ಕೊಂಡು ಥೇಟರ್ ಗೆ ಬರಾಕ, ಮದುಮಗನ್ನ ಊರೊಳಗ ಮೆರವಣಿಗೆ ಮಾಡಲಿಕ್ಕೆ, ಬೆಳಗಿನಹೊತ್ತು ಕಾಯಿಪಲ್ಲೆ ಹೇರಾಕ, ಒಂದು ನಾಲ್ಕು ಪರಿಚಯದ ಮನಿ ಮಕ್ಕಳನ್ನ ಸಾಲಿಗೆ ಬಿಡಾಕ
ಜಟಕಾ ಬಳಸ್ತೇವ್ರಿ. ಮಂದಿ ಹತ್ತೂದು ಕಡಿಮಿ. ಚೌಕಾಸ ಮಾಡೋದು ನೋಡಿದ್ರ ರಿಕ್ಷಾದವರಿಗೆ ಗಿಟ್ಟತೈತಿ..ನಮಗೇನು ಆ ರೇಟಿನ್ಯಾಗ ಗಿಟ್ಟುದುಲ್ಲ. ಇಡೀ ದಿವಸ ಇಲ್ಲೇ ನಿಂತಿರ್ತೀವಿ" ಅಂದವರೇ ಗೌಸ್ ನಿಟ್ಟುಸಿರು ಬಿಟ್ಟ್ರು.
ಕೊನೆಗೆ ಮರೆಯದೇ ’ಸಾಹೇಬ್ರ..ಬರ್ರಿ ನಿಮ್ಮ ಮನಿಗೆ ಬಿಡತೈನಿ" ಅಂದ್ರು. ‘ನನ್ನ ಸ್ಕೂಟರ್ ಅದರೀ.." ಅಂದೆ. "ಇನ್ನೊಮ್ಮೆ ಸ್ಕೂಟರ್ ಬಿಟ್ಟ ಬರ್ರಿ. ನಮ್ಮ ಟಾಂಗಾ ಹೆಂಗ ಓಡತೈತಿ..ಮತ್ತ ಈ ಮರ್ದ ಟಾಂಗೆವಾಲಾ ಹೆಂಗ
ಓಡಸ್ತಾನ ನೋಡುವಿರಂತ". ಅಂತ ಉಮೇದಿಯಿಂದ ಹೇಳಿದರು.

ಬಡವನ ಹೃದಯಶ್ರೀಮಂತಿಕೆ ನನ್ನ ಹೃದಯ ತಟ್ಟಿತ್ತು.