ಬದುಕಿದ್ದಾಗ ವಿಘ್ನವಿನಾಶಕ. ಸತ್ತಾಗ.. ?

ಬದುಕಿದ್ದಾಗ ವಿಘ್ನವಿನಾಶಕ. ಸತ್ತಾಗ.. ?

ಬರಹ

ಇತ್ತೀಚೆಗೆ ನಾಡಿನ ಪಳಗಿದ ಆನೆಗಳು ಕೊಡಗಿನಲ್ಲಿ ಕಾಡಿನ ಪುಂಡಾನೆಯನ್ನು ಬಂಧಿಸಲು ಹೆಣಗಿದ ಸುದ್ದಿ ನೀವೆಲ್ಲ ಮಾಧ್ಯಮಗಳಲ್ಲಿ ಓದಿದ್ದೀರಿ. ಹಾಗೆಯೇ ತರಬೇತಿ ಶಿಬಿರದ ವರೆಗೆ ಬಂಧಿಸಿ ತರುವಾಗ ಆಘಾತಗೊಂಡು ಆ ಕಾಡಿನ ಸಲಗ ಸತ್ತಿದ್ದು ಸಹ ತಮ್ಮ ಅರಿವಿಗಿದೆ. ಒಟ್ಟಾರೆ ನಮ್ಮ ಕೆಲಸಗಳೆಲ್ಲ ದುರಂತಕ್ಕೆ ನಾಂದಿ ಹಾಡುತ್ತವೆ. ಏಕೆಂದರೆ ನಮ್ಮ ಕಾರ್ಯಾಚರಣೆಗಳೆಲ್ಲ "Trial & error method!" ಮಾದರಿಯವು.

ಕಾಡಾನೆ ಸತ್ತ ಪ್ರದೇಶದ ನ್ಯಾಯಿಕ ಅಧಿಕಾರ ಹೊಂದಿರುವ ಅರಣ್ಯ ವಲಯದ ಅಧಿಕಾರಿಗಳು ಮೊದಲು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಶ್ಚರ್ಯ ಎಂದರೆ ಸ್ಥಳೀಯರಿಗೆ ಗೊತ್ತಿರುವ ಮಾಹಿತಿ, ಗೊಂಡಾರಣ್ಯದ ಆಯಕಟ್ಟಿನ ಸ್ಥಳಗಳ ಪರಿಚಯ ಆ ವ್ಯಾಪ್ತಿಯ ಅರಣ್ಯ ರಕ್ಷಕರಿಗೂ ಇರುವುದಿಲ್ಲ! ಇನ್ನು ಪ್ರತಿಶತ ೭೦ ರಷ್ಟು ಅಧಿಕಾರಿಗಳು ಇಂತಹ ಘಟನೆ ನಡೆದಾಗಲೇ ಸ್ಥಳದ ಭೇಟಿಗೆ ಹೊರಡುವವರು. ಏಕೆಂದರೆ, ಅರಣ್ಯ ಪಾಲಕರಾದಿಯಾಗಿ ಅವರಿಗೆ ಇದು ಆಸಕ್ತಿಯ ವಿಷಯವಲ್ಲ. ಸರಕಾರಿ ನೌಕರಿ. ಒಂದರ್ಥದಲ್ಲಿ ಸರಕಾರಿ ಶ್ರಾದ್ಧ. ಮೇಜಿನ ಬುಡದ ಗಳಿಕೆಯ ಹಾದಿ. ಸ್ಥಳೀಯರ ಸಹಾಯ, ಸಹಕಾರ ಯಾಚಿಸುತ್ತಾರೆ. ಹಾಗೆಯೇ ತಮ್ಮ ‘ಕರ್ತವ್ಯ ಪರಾಯಣತೆ’ ಪ್ರದರ್ಶಿಸಿ, ಸ್ಥಳೀಯರ ಮೇಲೂ ಪ್ರಕರಣ ದಾಖಲಿಸಿ, ತಾವು ಇಲಾಖಾ ವಿಚಾರಣೆಯಿಂದ ಪಾರಾಗುವಲ್ಲಿ ನಿಸ್ಸೀಮರಿದ್ದಾರೆ.

ಹೀಗೆ, ವನ್ಯ ಪ್ರಾಣಿಯ ಶವದ ಮಹಜರು ನಡೆಸಿ, ಪಂಚನಾಮೆ ಮಾಡಿಸಿ ವರದಿ ಬರೆದು ನಿಟ್ಟುಸಿರು ಬಿಡುತ್ತಾರೆ. ಇಲ್ಲಿ ಜಿಜ್ಞಾಸೆಯ ವಿಷಯವೆಂದರೆ ಸತ್ತ ಆನೆಯ ಬಹುಮೂಲ್ಯದ ಕೋರೆ ಹಾಗು ಚರ್ಮ ಏನು ಮಾಡುತ್ತಾರೆ? ಎಂಬುದು.

ಸರ್ವೇ ಸಾಧಾರಣವಾಗಿ ಅರಣ್ಯ ಪಾಲಕರು ಆ ಶವಕ್ಕೆ ಕೈ ಹಚ್ಚುವುದು ಅಪರೂಪ. ಹಾಗಾಗಿ ಅಲ್ಪಸ್ವಲ್ಪ ಜ್ಞಾನವಿರುವ, ಸಣ್ಣಪುಟ್ಟ ಬೇಟೆಯಾಡುವ ಹವ್ಯಾಸವಿರುವ ಜನರನ್ನೇ ಗುರುತಿಸಿ ಶವದ ಅಂತಿಮ ವಿಧಿ ವಿಧಾನಗಳಿಗೆ ಬಳಸಿಕೊಳ್ಳುವುದು ವಾಡಿಕೆ. ಅವರ ಬಳಿ ಇರುವ ಮೊಂಡು ಅಸ್ತ್ರಗಳನ್ನೇ ಬಳಸಿ, ಹೃದಯವಿದ್ರಾವಕವಾಗಿ ಬರ್ಬರ ಎಂಬುವಂತೆ ಶವ ಕತ್ತರಿಸುವುದು ನಡೆದು ಬಂದ ಸಂಪ್ರದಾಯ. ಕಾಡು ಸಲಗ ನಾಡು ರಸ್ತೆಯ ಹತ್ತಿರದಲ್ಲಿಯೇ ಅಸುನೀಗಿದರೆ ಮುಖಕ್ಕೆ ಆಸಿಡ್ ಸುರಿದು ಕೋರೆಗಳನ್ನು ಕಿತ್ತುಕೊಳ್ಳಲಾಗುತ್ತದೆ. ಕಾರಣ ಬೆಳೆದ ಸಲಗದ ಕೋರೆಯ ಒಂದು ಮೂರಾಂಶ ಭಾಗ ತಲೆ ಬುರುಡೆಯ ತನಕ ಹರಡಿರುತ್ತದೆ. ಅದೆಷ್ಟು ವಿರೂಪಗೊಳ್ಳುತ್ತದೆ ಊಹಿಸಿ. ನಂತರ ಉಳಿದ ಯಾವುದೇ ಭಾಗ ತೆಗೆಯದೇ ನಾಲ್ಕಾರು ಟನ್ ಕಟ್ಟಿಗೆ ಪೇರಿಸಿ ಪರಿಸರ ಅಸ್ನೇಹಿಯಾಗಿ ಸುಡುತ್ತಾರೆ.

ಹಾಗೆಯೇ ಅದು ದಟ್ಟ ಕಾಡಿನ ಅತ್ಯಂತ ಮಧ್ಯಭಾಗದಲ್ಲಿ ಸಲಗ ಸಾವನ್ನಪ್ಪಿದ್ದರೆ ಅಲ್ಲಿಯ ತನಕ ಆಸಿಡ್ ಹೇಗೆ ಹೊತ್ತೊಯ್ಯುವುದು? ಆ ಕಾಡಿನ ಓರೆ ಕೋರೆಗಳನ್ನು ಬಲ್ಲ ಸ್ಥಳೀಯರ ಕೈಗೆ ಕೊಡಲಿ, ಕುಡಗೋಲು ಕೊಟ್ಟು ಆ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಅತ್ಯಂತ ಬರ್ಬರವಾಗಿ ಮುಖವನ್ನು ಕತ್ತರಿಸಿ, ಕೊಡಲಿ ಪೆಟ್ಟುಗಳಿಂದ ಘಾತಗೊಳಿಸಿ ಲಕ್ಷಾಂತರ ರುಪಾಯಿ ಕೋರೆಗಳನ್ನು ಕಿತ್ತುಕೊಂಡು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗುತ್ತದೆ. ಕಾನೂನು ಪರಿಧಿಯಲ್ಲಿದ್ದುಕೊಂಡು, ಕೋರೆಗಳನ್ನು ಕತ್ತರಿಸಲು ಕಾನೂನು ಮುರಿಯುವ ಕಾಡುಗಳ್ಳರ ‘ಕೌಶಲ್ಯ’ ಬಳಸುತ್ತಿರುವುದು ಅನಾಗರಿಕ ಎಂದು ನನ್ನ ಭಾವನೆ.

ಇಗಾಗಲೇ ಮೈಸೂರಿನ ಅರಣ್ಯ ವೃತ್ತದಲ್ಲಿ ೫ ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಕೋರೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಅವುಗಳಿಗೆ ಸರಕಾರ ಯಾವ ಗತಿ ಕಾಣಿಸುವುದೋ ಕಾದು ನೋಡಬೇಕು. ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಈಜುತ್ತಿದ್ದೇವೆ. ಆದರೂ ಒಂದು ವಿದ್ಯುತ್ ಚಾಲಿತ ಅಥವಾ ಮಾನವ ಚಾಲಿತ ಗರಗಸ ಇಲಾಖೆಗೆ ತಂದುಕೊಳ್ಳಲು ಸಾಧ್ಯವಿಲ್ಲವೇ? ವೈಜ್ಞಾನಿಕ ರೀತ್ಯಾ ಕಾಡು ಪ್ರಾಣಿಗಳನ್ನು ಬಂಧಿಸಲು, ಪಳಗಿಸಲು, ಸತ್ತಾಗ ಯೋಗ್ಯ ರೀತಿ ಗೌರವದ ವಿದಾಯ ಹೇಳುವ ವಿಧಾನಗಳನ್ನು ಇಲಾಖೆ ಮೈಗೂಡಿಸಿಕೊಳ್ಳಬಾರದೇ?

ಪತ್ರಿಕೆಗಳು ಇಂತಹ ವಿಷಯಗಳ ಕುರಿತು ವರದಿಗಳನ್ನು ಪ್ರಕಟಿಸಿದಾಗ ಓದುಗರು ಕೊನೆ ಪಕ್ಷ ಸಂಪಾದಕರಿಗೆ ಪತ್ರ ಬರೆದಾದರೂ ಪ್ರತಿಭಟಿಸುವ ಗುಣ ರೂಢಿಸಿಕೊಳ್ಳೋಣ.