ಬದುಕಿನಲ್ಲಿ ಬಾಗುವುದನ್ನು ಕಲಿಯಿರಿ
ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ. ನೀರು ತುಂಬಿಸಲು ಪ್ರಯಾಸ ಪಡಬೇಕು. ಬೇಗನೇ ಬಾಗುವುದೂ ಇಲ್ಲ. ಎತ್ತಿ ಕುಕ್ಕಿ ತುಂಬಿಸಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ. ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವುದಿಲ್ಲವೊ ಅದು ಅಪೂರ್ಣವೇ.
ಇದೇ ಬದುಕಿನ ಸತ್ಯವೂ ಕೂಡ. ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ ನೈವೇದ್ಯ ಮಾಡುವುದಿಲ್ಲ. ಕಾರಣ, ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ. ಇದರರ್ಥ ಇಷ್ಟೇ ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ, ಆ ಭಗವಂತನಿಗೆ, ಭೂತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವುದನ್ನು ನಾವು ಕಲಿಯಬೇಕು. ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವುದು. ಅಹಂಕಾರ ಅಧಿಕಾರ ಶಾಶ್ವತವಲ್ಲ. ನಾನು ಎಂಬ ಗರ್ವ ತನ್ನೊಡಲನ್ನೇ ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ.
ಎಲ್ಲವನ್ನೂ ನೋಡುತ್ತಿರುವ ಆ ಭಗವಂತ ಅಲ್ಲಿ ಕುಳಿತು ನಮ್ಮಾಟವನ್ನು ನೋಡುತ್ತಿರುತ್ತಾನೆ. ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ. ಎಂಬ ಸತ್ಯದ ಅರಿವಾಗಬೇಕು . ಜಾಸ್ತಿ ಓದಿದ್ದೀನಿ, ಎನ್ನುವ ಗರ್ವ ಬೇಡ. ಓದಲು ಸಾಗರದಷ್ಟಿದೆ ಇನ್ನೂ. ನಾನೆಲ್ಲವನ್ನೂ ಬರೆಯುತ್ತೇನೆ. ಎನ್ನುವ ಅಹಂ ಬೇಡ. ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ. ಎಲ್ಲ ಬಲ್ಲವರಿಲ್ಲ !! ಬಲ್ಲವರು ಬಹಳಿಲ್ಲ!!! ಮಗುವಿನಿಂದ ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವುದು ತುಂಬ ಇದೆ, ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ.
ನೀ ಸಾಗುವ ಪಥ ಹೊಸ ಹೊಸ ಪಾಠಗಳನ್ನು ಕಲಿಸುತ್ತಾ ಅನುಭವಗಳನ್ನು ನೀಡುತ್ತಾ ಸಾಗುತ್ತದೆ. ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು. ಏಕೆಂದರೆ ಪ್ರತಿಯೊಂದಕ್ಕೂ ಫಲಾಫಲ ನಮಗಿದೆ. ಆದ್ದರಿಂದ ಯೋಚಿಸಿ ನಡೆಯಬೇಕು.! ಆಲೋಚಿಸಿ ನುಡಿಯಬೇಕು.
ಗುರು ಕಲಿಸಿದ ವಿದ್ಯೆ. ತಾಯಿ ನೀಡಿದ ಮಮತೆ. ತಂದೆ ಹೇಳಿದ ಸಲಹೆ. ಕಿರಿಯರು ನೀಡಿದ ಪ್ರೀತಿ. ರೈತ ಕೊಟ್ಟ ಅನ್ನ. ಯೋಧ ನೀಡಿದ ರಕ್ಷಣೆ. ನಿನ್ನ ಹೊತ್ತ ಭೂಮಿತಾಯಿ, ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು- ದೇಶ, ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂಧವ್ಯಗಳನ್ನು ಎಂದಿಗೂ ಮರೆಯದಿರು.(ಹಾಗೆಂದು ಸ್ವಯಂಕೃತ 'ಅಪರಾಧ'ಗಳಿಂದ ಸೃಷ್ಟಿಸಿಕೊಂಡ ಅಯೋಗ್ಯರ ಕಷ್ಟಕಾಲಕ್ಕೆ ನೆರವಾಗಿ ಮೌಲ್ಯಗಳನ್ನು ಗಾಳಿಗೆ ತೂರುವುದಲ್ಲ)
ಬದುಕಿನಲ್ಲಿ ಬಾಗುವುದನ್ನು ಕಲಿ
ಬದುಕುವುದನ್ನು ಕಲಿ ..
ಈ ಬರಹ ಬರೆದವರು ಯಾರೋ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಮಾಹಿತಿ ಪೂರ್ಣವಾಗಿತ್ತು. ನಿಮ್ಮ ಜೊತೆ ಹಂಚಿಕೊಳ್ಳುವ ಎಂದೆನೆಸಿತು. ಹೇಗಿದೆ?
ಚಿತ್ರ: ಇಂಟರ್ನೆಟ್ ನಿಂದ ಆಯ್ದದ್ದು.