ಬದುಕಿನೊಂದಿಗೆ ವಿಜ್ಞಾನ ಕಲಿಸಿದ ನನ್ನಪ್ಪ

ನನ್ನ ತಂದೆ ಓದಿದ್ದು ಎಂಟನೆಯ ತರಗತಿ. ಆಮೇಲೆ ಹತ್ತನೆಯ ತರಗತಿ ಪಾಸು ಮಾಡಿಕೊಂಡರು ಅದೂ ದನಗಳನ್ನು ಕಾಯುತ್ತಾ. ಆಮೇಲೆ HTC ತರಬೇತಿ ಮುಗಿಸಿ ತಾವೇ ಶಾಲೆ ತೆರೆದು ಶಿಕ್ಷಕರಾದರು. ಆದ್ದರಿಂದ ನನ್ನೂರಿಗೆ ಶಾಲೆ ಬಂದುದು ನಾನು ಹುಟ್ಟುವುದಕ್ಕಿಂತ ಎಷ್ಟೋ ಮೊದಲು. ಆದ್ದರಿಂದ ನನ್ನ ಶಾಲಾ ವ್ಯಾಪ್ತಿಗೆ ಬರುವ ನಾಲ್ಕಾರು ಮಜರೆಗಳು ಯಾವಾಗಲೋ ಸಂಪೂರ್ಣ ಸಾಕ್ಷರ. ನನ್ನೂರು ಆರ್ಥಿಕವಾಗಿ ಬಲಾಢ್ಯವಾಗಲೂ ನನ್ನ ಶಾಲೆ ಅಂದರೆ ನನ್ನ ತಂದೆಯೇ ಕಾರಣ ಎಂಬುದು ನನ್ನ ಅಭಿಮತ. ನಾನು ನನ್ನ ಅಣ್ಣಂದಿರಿಗಿಂತ ಹೆಚ್ಚು ನನ್ನ ತಂದೆಯ ಜೊತೆಗಿದ್ದುದರಿಂದ ತಂದೆಯ ಎಲ್ಲ ಚಟುವಟಿಕೆಗಳನ್ನೂ ಅತೀ ಹತ್ತಿರದಿಂದ ಬಲ್ಲೆ. ನನ್ನ ತಂದೆ ಓದಿದ್ದು ಕಡಿಮೆಯಾದರೂ ಅವರ ಕೃಷಿ ಮತ್ತು ವಿಜ್ಞಾನ ಜ್ಞಾನ ಅಪಾರ. ಕೃಷಿ ಚಟುವಟಿಕೆಗಳು ಹೀಗೆ ಎನ್ನುವುದಕ್ಕಿಂತ ಯಾಕೆ ಎನ್ನುವುದನ್ನು ಹೇಳುತ್ತಿದ್ದರು. ಇದೇ ಕಾರಣಕ್ಕೆ ನಾನು ವಿಜ್ಞಾನ ಅದರಲ್ಲಿಯೂ ಜೀವಶಾಸ್ತ್ರ ಕಲಿಯಲು ಅವರೇ ಕಾರಣ. ನಾನು ಶಿಕ್ಷಕನಾಗುವಂತೆ ಪ್ರಭಾವ ಬೀರಿದವರಲ್ಲಿ ಅವರೂ ಒಬ್ಬರು. ಅವರ ಆಸೆಯೂ ಹಾಗೆ ಇತ್ತು ತನ್ನ ಮಕ್ಕಳಲ್ಲಿ ಒಬ್ಬರು ಶಿಕ್ಷಕರಾಗಬೇಕು ಎಂಬುದು.
ನನ್ನ ವಿಜ್ಞಾನ ಕಲಿಕೆಯನ್ನು ಪ್ರಭಾವಿಸಿದ್ದು ಮಾತ್ರವಲ್ಲ ಅದನ್ನು ಅನ್ವಯಾತ್ಮಕ ಮತ್ತು ಪ್ರಾಯೋಗಿಕವನ್ನಾಗಿ ಮಾಡಿದವರು ಅವರೇ. ನನ್ನ ಸಹೋದರರ ಪೈಕಿ ತಂದೆಯವರೊಂದಿಗೆ ಅತಿ ಹೆಚ್ಚು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡವನು ನಾನೇ. ನನ್ನ ಬಾಲ್ಯದಿಂದ ತಂದೆಯವರ ಮರಣದ ವರೆಗೆ ನಾನು ಅವರೊಂದಿಗಿದ್ದೆ. ಆಗ ನೀರಾವರಿಗೆ ಬರ, ಉತ್ತಮ ಇಳುವರಿಯ ಬೀಜಗಳು ಅಪರೂಪ, ಕೃಷಿ ಮಾಹಿತಿಯ ಲಭ್ಯತೆಗೂ ಕಷ್ಟ. ಅಂದರೆ ಸಾಂಪ್ರದಾಯಿಕ ಕೃಷಿ ಮತ್ತು ಹಸಿರು ಕ್ರಾಂತಿಯ ಸಂಕ್ರಮಣ ಕಾಲ. ಈ ಬದಲಾವಣೆಯ ಕಿರಣಗಳು ಹಳ್ಳಿಯ ಅಂಧಕಾರವನ್ನು ತೂರಿ ಬರಲು ಬಹಳ ಸಮಯ ಹಿಡಿಯುತ್ತಿತ್ತು. ಯುವ ಪೀಳಿಗೆಗೆ ಕೃಷಿಯ ಬಗ್ಗೆ ಉಪೇಕ್ಷೆ ಬೆಳೆಯಲು ಆರಂಭದ ದಿನಗಳವು. ಅಂತದ್ದರಲ್ಲಿ ನನ್ನನ್ನು ತಂದೆ ಕೃಷಿಯೊಂದಿಗೆ ಉಳಿಸಿಕೊಂಡರು. ಬತ್ತದಿಂದ ಕಾಳು ಜೊಳ್ಳುಗಳನ್ನು ಬೇರ್ಪಡಿಸುವ ವಿವಿಧ ವಿಧಾನಗಳನ್ನು ತಂದೆ ವಿವರಿಸುತ್ತಿದ್ದರು. ಎಂಟನೆಯ ತರಗತಿಯಲ್ಲಿ ನನ್ನ ಶಿಕ್ಷಕರು ಇದನ್ನೊಂದು ಹೊಸ ಜ್ಞಾನವೆಂಬಂತೆ ಇದು ವಿನೋಯಿಂಗ್ (winnowing) ಎನ್ನುತ್ತಿದ್ದರೇ ಹೊರತು ಕಾಳುಗಳನ್ನು ತೂರುವುದು ಎಂದು ಹೇಳಿಕೊಟ್ಟಿರಲೇ ಇಲ್ಲ. ಅಮ್ಮನ ಮೊಸರಿನಿಂದ ಬೆಣ್ಣೆ ಬೇರ್ಪಡಿಸುವಿಕೆಯನ್ನು ಶಾಲೆಯ ಸೆಂಟ್ರಿಫ್ಯೂಗೇಶನ್ (centrifugation) ಎರಡೂ ಒಂದೇ ಎಂದು ಹೇಳಿಕೊಟ್ಟವರು ನನ್ನಪ್ಪನೇ.
ಆಗ ಬೇಸಿಗೆಯ ಬತ್ತದ ಸಸಿ ಮಡಿಗಳನ್ನು ತಯಾರಿಸಲು ಮಣ್ಣು ಚೆನ್ನಾಗಿ ಹುಡಿಯಾಗಬೇಕು ಎಂದು ದೊಡ್ಡ ಮಣ್ಣಿನ ಹೇಟೆಗಳನ್ನು ಒಡೆಸಿ ಪದೇ ಪದೇ ಗೋರಿ (leveller) ಹೊಡೆದು ಮಣ್ಣನ್ನು ಪುಡಿ ಮಾಡಿಸುತ್ತಿದ್ದರು. ಏಕೆ ಎಂದು ಕೇಳಿದರೆ ಮಣ್ಣಿನ ಕಣಗಳು ನುಣುಪಾದಷ್ಟು ನೀರು ಮೇಲೆ ಏರುತ್ತದೆ ಎನ್ನುತ್ತಿದ್ದರು. ಮನೆಯಲ್ಲಿ ದೀಪಕ್ಕೆ ಹತ್ತಿಯ ಬತ್ತಿ ಸಿದ್ಧಪಡಿಸಿವುದು, ಅದನ್ನು ಒತ್ತಾಗಿ ಹೊಡೆಯುವುದನ್ನು ಹೇಳಿಕೊಡುತ್ತಿದ್ದರು. ಏಕೆ ಎಂದು ಕೇಳಿದರೆ ತೆಂಗು ಮತ್ತು ಸಣಬಿನ ನಾರಿಗಿಂತ ಹತ್ತಿಯ ಎಳೆಗಳು ಹೆಚ್ಚು ಸೂಕ್ಷ್ಮವಾಗಿದ್ದು ಎಣ್ಣೆ ಮೇಲೇರಲು ಅವಶ್ಯಕ ಬಲ ನೀಡುತ್ತವೆ ಎಂದು ವಿವರಿಸುತ್ತಿದ್ದರು. ನಾನು ಪದವಿ ಪೂರ್ವ ತರಗತಿಗಳಲ್ಲಿ ಭೌತಶಾಸ್ತ್ರದಲ್ಲಿ ಲೋಮನಾಳ ಚಲನೆ, ಲೋಮನಾಳ ಬಲ ಲೋಮನಾಳ ಏರುವಿಕೆ (capillary movement, force, raise) ಇವುಗಳು ನನಗೆ ತಂದೆಯ ಪಾಠದ ಪುನರಾವರ್ತನೆ ಆಗಿತ್ತು. ಆದರೆ ನಮ್ಮ ಶಿಕ್ಷಕರು ಜನ ಸಾಮಾನ್ಯರು ತಿಳಿಯದ ರಾಕೆಟ್ ಸೈನ್ಸ್ ಅನ್ನು ವಿವರಿಸುವಂತೆ ಹೇಳುತ್ತಿದ್ದರು. ನನ್ನ ಸ್ನೇಹಿತರು ಇದನ್ನು ಬಾಯಿಪಾಠ ಮಾಡುತ್ತಿದ್ದರೆ ನಾನು ಆರಾಮವಾಗಿರುತ್ತಿದ್ದೆ.
ರಾತ್ರಿ ಅಡ್ಡ ಮಳೆಯಾಗುವುದಾದರೆ ಗದ್ದೆಯನ್ನು ಉತ್ತು ಹಾಗೆ ಬಿಡಬೇಕು, ಮಳೆ ಬರದೇ ಬಿಸಿಲೇ ಮುಂದುವರಿಯುವುದಾದರೆ ಅಥವಾ ಬೀಜ ಹಾಕಿದ ಮೇಲೆ ಗೋರಿ ಎಳೆಯಬೇಕು, ಅಂಗಳದಲ್ಲಿ ಬತ್ತ ಒಣಗಿಸುವಾಗ ಆಗಾಗ ಕಾಲಾಡುತ್ತಾ ಇರಬೇಕು ಎಂಬ ಬಗ್ಗೆ ವಿವರಣೆ ನೀಡುತ್ತಿದ್ದರು. ಮೇಲ್ಮೈ ವಿಸ್ತೀರ್ಣ ಜಾಸ್ತಿಯಾದರೆ ಒಣಗುವಿಕೆ ಬೇಗ ಆಗುತ್ತದೆ. ವಿಸ್ತೀರ್ಣ ಕಡಿಮೆಯಾದರೆ ತೇವಾಂಶ ಹೆಚ್ಚು ಹೊತ್ತು ಉಳಿಯುತ್ತದೆ ಎಂದು ಹೇಳುತ್ತಿದ್ದರು. ಅದೇ ನನ್ನ ಹೈಸ್ಕೂಲ್ ಶಿಕ್ಷಕರು ಭಾ಼ಷ್ಪೀಕರಣದ (evaporation) ಮೇಲೆ ಪ್ರಭಾವ ಬೀರುವ ಅಂಶಗಳು ಎಂಬ ವಿಷಯದಲ್ಲಿ ಮೇಲ್ಮೈ ವಿಸ್ತೀರ್ಣ ಎಂದು ತಿಳಿಸಿದರೇ ಹೊರತು ಉದಾಹರಣೆಗೆ ಬತ್ತಕ್ಕೆ ಕಾಲು ಹಾಕುವುದನ್ನು ಹೇಳಿಕೊಟ್ಟಿದ್ದರೆ ನನ್ನಂತಹ ರೈತ ಕುಟುಂಬದಿಂದ ಬಂದ ಇನ್ನಷ್ಟು ಮಕ್ಕಳು ವಿಜ್ಞಾನ ಓದುತ್ತಿದ್ದರೋ ಏನೋ. ಇಂತಹ ಉದಾಹರಣೆಗಳನ್ನು ನಾನು ಕೊಡುತ್ತಲೇ ಇರಬಲ್ಲೆ.
ಹೀಗೆ ಬದುಕಿನ ಮತ್ತು ಕೃಷಿಯ ಪ್ರತಿಯೊಂದು ಪ್ರಕ್ರಿಯೆಯ ಹಿಂದೆ ಕಾರಣವನ್ನು ನನ್ನ ತಂದೆ ವಿವರಿಸುತ್ತಿದ್ದುದರಿಂದ ನನ್ನ ಬದುಕಿಗೆ ಅನಿವಾರ್ಯವಲ್ಲದ ಕೃಷಿಯನ್ನು ಪ್ರೀತಿಸುವುದು ಅದರೊಂದಿಗೆ ಬದುಕುವುದನ್ನು ಕಲಿಸಿಕೊಟ್ಟ ನನ್ನ ತಂದೆಗೆ ತಂದೆಯ ದಿನದ (Father’s Day) ಶುಭಾಶಯಗಳು. ಇಂದು ನನ್ನ ಜೊತೆಗೆ ನೀವಿಲ್ಲವಾದರೂ ಕೃಷಿ ಬದುಕು ನನ್ನ ಕೈ ಹಿಡಿದಿದೆ.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ