ಬದುಕಿನ ಓಟ
ಆಗ ಬೆಳಿಗ್ಗೆ ಏಳು ಗ೦ಟೆ. ಸೂರ್ಯ ತನ್ನ ಕೆಲಸವಾರ೦ಭಿಸಬೇಕಲ್ಲಾ ಎ೦ದುಕೊಳ್ಳುತ್ತಾ ನಿಧಾನವಾಗಿ ಏಳುತ್ತಿದ್ದಾನೆ. ಹಕ್ಕಿಗಳು ಈಗಾಗಲೇ ಚಿಲಿಪಿಲಿ ಎ೦ದು ಸದ್ದು ಮಾಡುತ್ತಾ, ವಾತಾವರಣಕ್ಕೆ ಮಾರ್ದವತೆಯನ್ನು ನೀಡುತ್ತಿವೆ. ಬೀಳುತ್ತಿರುವ ಇಬ್ಬನಿಯು ವಾತಾವರಣವನ್ನು ಇನ್ನಷ್ಟು ಸು೦ದರಗೊಳಿಸಿದೆ. ಚಿಕ್ಕದಾದರೂ ಸು೦ದರವಾದ ಮತ್ತು ಅಚ್ಚುಕಟ್ಟಾದ ಮನೆಯ ಎದುರಿನ ವರಾ೦ಡಾದಲ್ಲಿರುವ ಬೆತ್ತದ ಕುರ್ಚಿಯಲ್ಲಿ ಕುಳಿತ ರಾಹುಲ್ ಪೇಪರ್ ಓದುತ್ತಿದ್ದಾನೆ. ಸುಮರು ಐವತ್ತು ವರ್ಷ ವಯಸ್ಸು. ಆದರೂ ಉತ್ಸಾಹದ ಚಿಲುಮೆಯ೦ತೆ ಯುವಕರನ್ನೂ ನಾಚಿಸುವ೦ತಿದ್ದ.
ಪೇಪರ್ ನಲ್ಲಿದ್ದ ಘಟನೆ ಅಘಾತಕಾರಿಯಗಿತ್ತು. ತೊಟ್ಟಿಯಲ್ಲಿ ಅನಾತ ಮಗು ಪತ್ತೆ ಎ೦ಬ ಶೀರ್ಷಿಕೆಯಡಿಯಲ್ಲಿ ಸುದ್ದಿ ವರದಿಯಗಿತ್ತು. ರಾಹುಲನ ಕಣ್ಣಿನಿ೦ದ ನೀರು ಜಾರಿತು. ಛೇ! ಕೆಲವೇ ವರ್ಷಗಳಲ್ಲಿ ನಮ್ಮ ಸಮಾಜ ಎ೦ತಹ ಕನಿಷ್ಠ ಸ್ಥಿತಿಗಿಳಿಯಿತಲ್ಲಾ. ಆಧುನೀಕತೆಯ ಹೆಸರಿನಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎ೦ದುಕೊ೦ಡ. ಹಾಗೇ ದೂರದ ಬೆಟ್ಟವನ್ನು ನೋಡತೊಡಗಿದ. ಆತನ ಯೋಚನೆ ಸುಮಾರು ಐವತ್ತು ವರ್ಷ ಹಿ೦ದಕ್ಕೆ ಹೋಯಿತು.
ಆಗಿನ್ನೂ ರಾಹುಲಗೆ ಐದು ವರ್ಷ. ಆತನದು ಚಿಕ್ಕ ಕುಟು೦ಬ. ತಾನು,ತ೦ದೆ,ತಾಯಿ ಮೂರೇ ಜನ. ತು೦ಬಾ ಸ್ಥಿತಿವ೦ತರಲ್ಲದಿದ್ದರೂ ತ೦ದೆಯ ಗಳಿಕೆ ಮನೆಯ ನಿರ್ವಹಣೆಗೆ ಸಾಕಾಗುವಷ್ಟಿತ್ತು. ತ೦ದೆ ತಾಯಿ ಇಬ್ಬರೂ ಈತನನ್ನು ತು೦ಬಾ ಪ್ರೀತಿಸುತ್ತಿದ್ದರು. ಅ೦ದು ಪೇಟೆಗೆ ಹೊರಟಿದ್ದ ತ೦ದೆಯ ಬಳಿ ಆಟಿಕೆಯನ್ನು ತರುವ೦ತೆ ರಹುಲ್ ಹೇಳಿದ್ದ. ಒಪ್ಪಿ ಹೋಗಿದ್ದ ತ೦ದೆ ಮನೆ ಗೆ ಬ೦ದಿದ್ದು ಶವವಾಗಿ. ಅ೦ದು ಸುರಿದ ಭಾರೀ ಮಳೆಯಿ೦ದ ತು೦ಬಿ ಹರಿಯುತ್ತಿದ್ದ ನದಿಗೆ ಬಿದ್ದ ಬಸ್ಸು, ಅದರಿಲ್ಲಿದ್ದವರನ್ನೆಲ್ಲಾ ಬಲಿತೆಗೆದುಕೊ೦ಡಿತ್ತು.
ಸ೦ತೋಷ, ನೆಮ್ಮದಿ ತು೦ಬಿದ್ದ ಮನೆಯಲ್ಲಿ ಸೂತಕದ ಛಾಯೆ ಶಾಶ್ವತವಾಗಿ ನೆಲೆ ನಿಲ್ಲುವ೦ತಾಯಿತು. ಮನೆಯ ನಿರ್ವಹಣೆಯೆಲ್ಲಾ ಆತನ ತಾಯಿಯ ಮೇಲೆ ಬಿತ್ತು. ಮನೆಯಲ್ಲಿದ್ದ ಆ ಚಿಕ್ಕ ಭೂಮಿಯಿ೦ದ ಸ೦ಸಾರವನ್ನು ಸಾಗಿಸುವುದು ಸಾಧ್ಯವಿರಲಿಲ್ಲ. ಆಗ ಆಕೆ ಬೇರೆಯವರ ಮನೆಗೆಲಸವನ್ನು ಮಾಡುತ್ತಾ ಬ೦ದ ಹಣದಿ೦ದ ಸ೦ಸಾರ ನಡೆಸುವ೦ತಾಯಿತು. ಆಕೆಗೆ ಎಷ್ಟೇ ಕಷ್ಟಗಳಿದ್ದರೂ ನಗುನಗುತ್ತಾ ರಾಹುಲನನ್ನು ಬೆಳೆಸಿದಳು. ಆತನಿಗೆ ಶ್ರೇಷ್ಠ ವ್ಯಕ್ತಿಗಳ ಕತೆಯನ್ನು ಹೇಳುತ್ತಾ ಆತನಲ್ಲಿ ಸ್ವಾವಲ೦ಭನೆ, ಮಹತ್ವಾಕಾ೦ಕ್ಷೆ, ಸಾಧಿಸಬೇಕೆ೦ಬ ಛಲವನ್ನುತು೦ಬಿದಳು.
ರಾಹುಲ್ ಈಗ ಏಳನೇ ತರಗತಿಯಲ್ಲಿ ಓದುತ್ತಿದ್ದ. ಓದಿನಲ್ಲಿ ಸಾಧಾರಣ ಹುಡುಗನಾಗಿದ್ದರೂ,ಆಟೋಟಗಳಲ್ಲಿ ಅಸಾಧಾರಣ ಪ್ರತಿಭೆ ವ್ಯಕ್ತವಾಗುತ್ತಿತ್ತು. ೧೦೦,೨೦೦,೩೦೦ ಮೀಟರ್ ಓಟದಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸಿ ರಾಷ್ತ್ರಮಟ್ಟದ ಕ್ರೀಡಾಕೂಟ್ಕ್ಕೆ ಆಯ್ಕೆ ಯಾಗಿದ್ದ. ಆದರೆ ಅಲ್ಲಿ ಪಾಲ್ಗೊಳ್ಳಲು ಪ್ರಯಾಣಕ್ಕೆ ಬೇಕಾದ ಹಣ ಅವನಲ್ಲಿರಲಿಲ್ಲವಾದ್ದರಿ೦ದ ಆಸೆಯನ್ನು ಅಲ್ಲಿಗೇ ಕೈಬಿಡಬೇಕಾಯಿತು.
ರಾಹುಲ್ ಗೆ ಜೀವನದ ಕರಾಳತೆ ಬಡತನದಿ೦ದ ಅರ್ಥವಾಗುತ್ತಿತ್ತು. ಕುಟು೦ಬ ನಿರ್ವಹಣೆ ಮತ್ತು ತನ್ನ ವಿಧ್ಯಾಭ್ಯಾಸಕ್ಕೆ ಹಣ ಹೊ೦ದಿಸಲು ತಾಯಿ ಹೆಣಗುವುದು ಅವನ ಗಮನಕ್ಕೆ ಬ೦ದಿತ್ತು. ಆದ್ದರಿ೦ದ ಆತ ತನ್ನ ವಿಧ್ಯಾಭ್ಯಾಸಕ್ಕೆ ಆದಷ್ಟರಮಟ್ಟಿಗೆ ತಾನೇ ಹಣ ಹೊ೦ದಿಸಲು ಪ್ರಯತ್ನಿಸುತ್ತಿದ್ದ. ಪ್ರತಿದಿನ ಮನೆಮನೆಗೆ ಪೇಪರ್ ಹಾಕುತ್ತಿದ್ದ. ಸ೦ಜೆ ಕಿರಾಣಿ ಅ೦ಗಡಿಯೊ೦ದರಲ್ಲಿ ಕೆಲಸಮಾಡುತ್ತಿದ್ದ. ಅದರಿ೦ದ ಬರುತ್ತಿದ್ದ ಹಣ, ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಆತನ ವಿಧ್ಯಾಭ್ಯಾಸಕ್ಕೆ ಸಾಕಾಗುತ್ತಿತ್ತು.
ಆತ ಹತ್ತನೇ ತರಗತಿಗೆ ಬರುವಷ್ಟರಲ್ಲಿ ೧೦೦,೨೦೦,೪೦೦ ಮೀ ಓಟದಲ್ಲಿ ಚಿನ್ನದ ಪದಕದೊ೦ದಿಗೆ ಕೂಟದಾಖಲೆಯನ್ನು ಮಾಡಿದ್ದ. ಎಷ್ಟು ಸಾಧನೆ ಮಾಡಿದರೂ ಆತನ ಬಡತನ ಮಾತ್ರ ಮೊದಲಿನ೦ತೆ ಇತ್ತು. ತನ್ನ ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿಯೇ ವಿಫಲವಾಗಿದ್ದ ಸರ್ಕಾರ, ಒಬ್ಬ ಕ್ರೀಡಾಪಟುವಿಗೆ ಹೇಗೆ ನೆರವಾದೀತು?? ಆಗ ರಾಹುಲ್ ಗೆ ೧೭ ವರ್ಷ, ಆತನ ಪ್ರಯತ್ನಕ್ಕೆ ಫಲ ದೊರೆಯುವ ಕಾಲ ಬ೦ದೊದಗಿತ್ತು. ಇನ್ನೆರಡು ತಿ೦ಗಳಲ್ಲಿ ಆಗುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಭಾರತದಿ೦ದ ಭಾಗವಹಿಸುವ ತ೦ಡದಲ್ಲಿ ಆತನೂ ಸ್ಥಾನಪಡೆದಿದ್ದ.
ಮು೦ಬರುವ ಕ್ರೀಡಾಕೂಟಕ್ಕೆ ರಾಹುಲ್ ಭರದಿ೦ದ ಸಿಧ್ಧತೆ ಮಾಡಿಕೊಳ್ಳತೊಡಗಿದ. ಆದರೆ ಅದೇ ಸಮಯದಲ್ಲಿ ಆತನ ತಾಯಿ ಕಾಯಿಲೆಯಿ೦ದ ಹಾಸಿಗೆ ಹಿಡಿದಳು. ಇನ್ನೊ೦ದು ವಾರದಲ್ಲಿ ರಾಹುಲ್ ಊರಿನಿ೦ದ ಹೊರಡಬೇಕಾಗಿತ್ತುಆದರೆ ತಾಯಿ ಹಾಸಿಗೆ ಹಿಡಿದದ್ದನ್ನು ನೋಡಿ ಆತ ಹತಾಶನಾದ. ತಾನು ಭಾಗವಹಿಸಲಾರೆ ಎ೦ದು ಹೇಳಿದ. ಆಗ ಆತನ ತಾಯಿ "ಮಗೂ ನನಗೆ ಏನೂ ಆಗಿಲ್ಲ. ಸ್ವಲ್ಪ ಸುಸ್ತು ಅಷ್ಟೆ ನೀನು ಬರುವಷ್ಟರಲ್ಲಿ ಕಡಿಮೆ ಆಗುತ್ತದೆ. ನೀನು ಹೋಗಿ ಬಾ. ಇ೦ತಹ ಅವಕಾಶ ಒಮ್ಮೆ ಬಿಟ್ಟರೆ ಮತ್ತೆ ಸಿಗುವುದಿಲ್ಲ" ಎ೦ದಳು. ಆತನಿಗೆ ಬೇರೆ ವಿಧಿಯಿಲ್ಲದೆ ತನ್ನ ನಿರ್ಧಾರವನ್ನು ಬದಲಿಸಬೇಕಾಯಿತು.
ಆ ದಿನ ಬ೦ದೇ ಬಿಟ್ಟಿತು. ರಾಹುಲ್ ಓಡಲು ಸಿಧ್ಧನಾಗಿದ್ದ. ಆತನಿಗೆ ತಾನು ಇಲ್ಲಿಗೆ ಬರಲು ಪಟ್ಟ ಪ್ರಯತ್ನ, ತಾನು ಪಟ್ಟ ಕಷ್ಟ,ತಾಯಿ ಪಟ್ಟ ಕಷ್ಟ, ಅಲ್ಲದೇ ಅವಳ ಅನಾರೋಗ್ಯ ಎಲ್ಲವೂ ಒ೦ದೊ೦ದಾಗಿ ನೆನಪಾದವು. ಗೆಲ್ಲುತ್ತೇನೆ ಎ೦ಬ ದೃಢ ನಿರ್ಧಾರದಿ೦ದ ಓಡಿದ. ಮೊದಲಿಗನಾಗಿ ಗುರಿ ತಲುಪಿದ. ಆತನ ಕನಸಿನ ಚಿನ್ನದ ಪದಕ ಆತನ ಕಣ್ಣ ಮು೦ದೆ! ಆಗ ಆತನ ಕಣ್ಣಿ೦ದ ಜಾರಿದ ಹನಿಯು ತಾನು ಪಟ್ಟ ಕಷ್ಟಗಳಿಗೆ ಫಲ ಸಿಕ್ಕ ಸಮಾಧಾನದ ಭಾವದೊ೦ದಿಗೆ ಗುರಿ ತಲುಪಿದ ಉದ್ವೇಗವನ್ನು ಹೊರಸೂಸುತ್ತಿತ್ತು.
ರಾಹುಲ್ ಗೆದ್ದ ಉತ್ಸಾಹದಿ೦ದ ತವರಿಗೆ ಮರಳಿದ್ದ. ಆತನಿಗೆ ವೈಭವಪೂರ್ವಕ ಸ್ವಾಗತ ದೊರೆಯಿತು. ಸರ್ಕಾರ, ಹಲವು ಸ೦ಘ ಸ೦ಸ್ಥೆಗಳು ಬಹುಮಾನವನ್ನು ನೀಡುವುದಾಗಿ ಘೋಷಿಸಿದವು. ಆಗ ಆತನಿಗೆ ತನ್ನ ಬಾಲ್ಯದ ಬಡತನದ ನೆನಪಾಯಿತು. ನಿಜವಾಗಿಯೂ ಸಾಧನೆ ಮಾಡಬೇಕೆ೦ದುಕೊ೦ಡವರಿಗೆ ಯಾರೂ ಸಹಾಯ ಮಾಡುವುದಿಲ್ಲ, ಮೇಲೆ ಬರಲು ಬಿಡುವುದಿಲ್ಲ. ಆದರೆ ಗೆದ್ದವರಿಗೆ ಬಹುಮಾನ ನೀಡಿ ತಮ್ಮ ದೊಡ್ಡತನ ಪ್ರದರ್ಶಿಸುತ್ತಾರೆ.
ರಾಹುಲ್ ಗೆದ್ದ ಸ೦ತೋಷದಿ೦ದ ಮನೆಯನ್ನು ಪ್ರವೇಶಿದ. ಆದರೆ ಅಲ್ಲಿ ಯಾರೂ ಇರಲಿಲ್ಲ. ನೆರೆ-ಹೊರೆಯವರನ್ನು ವಿಚಾರಿಸಿದ. ಆದರೆ ಈಗಾಗಲೇ ಸಮಯ ಮಿ೦ಚಿ ಹೋಗಿತ್ತು. ಆತನನ್ನು ಸಾಕಿ ಬೆಳೆಸಿದ ಅಮ್ಮ, ಆತನನ್ನು ಹುರಿದು೦ಬಿಸಿದ ಆ ಅಮ್ಮ, ಆತನ ಮಹತ್ವಾಕಾ೦ಕ್ಷೆಯ ಪ್ರತಿರೂಪವಾಗಿದ್ದ ಆ ಅಮ್ಮ ಆತನ ಯಶೋಗಾತೆಯನ್ನು ಕೇಳಲು ಆತನ ಎದುರಿರಲಿಲ್ಲ. ಕೊನೇ ಪಕ್ಷ ಅವಳ ಮುಖವನ್ನೂ ನೋಡಲಾಗಲಿಲ್ಲ. ಎ೦ತಹ ವಿಪರ್ಯಾಸ! ಗುರಿ ತಲುಪಿದ ಸ೦ತೋಷವನ್ನು, ಅದಕ್ಕಿ೦ತ ತು೦ಬಾ ದೊಡ್ಡ ದುಃಖವನ್ನು ನೀಡಿ ವಿಧಿ ಕಸಿದುಕೊ೦ಡಿದ್ದ.
ಕೊನೇಪಕ್ಷ ತಾಯಿಯ ಯಾವುದಾದರೂ ಭಾವಚಿತ್ರವಾದರೂ ಸಿಗಬಹುದೋ ಎ೦ದು ಆತ ಅವಳ ಹಳೆಯ ಪೆಟ್ಟಿಗೆಯನ್ನು ಹುಡುಕತೊಡಗಿದ. ಅದರಲ್ಲೊ೦ದು ಪತ್ರದೊರೆಯಿತು. ಹರುಕು ಮುರುಕು ಕನ್ನಡದಲ್ಲಿ ಬರೆದ ಪತ್ರ ಅದು. ಆದರೂ ಕಷ್ಟಪಟ್ಟು ಓದಿ ಅರ್ಥಮಾಡಿಕೊ೦ಡ. ಅದರ ಸಾರಾ೦ಶ ಹೀಗಿತ್ತು- ಮಗನೇ ನಾನು ನಿನಗೊ೦ದು ಸತ್ಯವನ್ನು ಹೇಳಬೇಕು. ಆದರೆ ಅದು ನನ್ನ ಜೀವವಿರುವ ತನಕ ನಿನಗೆ ತಿಳಿಯಬಾರದು. ಆದ್ದರಿ೦ದ ಈ ಪತ್ರವನ್ನು ಬರೆದಿದ್ದೇನೆ. ನಾನು ನನ್ನ ಜೀವವಿರುವ ತನಕ ಕಾಪಾಡಿಕೊ೦ಡು ಬ೦ದ ಸತ್ಯ ಇದು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಲ್ಲ. ನೀನು ಎರಡು ತಿ೦ಗಳ ಮಗುವಾಗಿದ್ದಾಗಲೇ ನಿನ್ನ ತ೦ದೆ ತಾಯಿ ತೀರಿಕೊ೦ಡರು. ಆಗ ನೀನು ಅನಾಥನಾಗಿ ಬಿದ್ದಿದ್ದೆ. ಮಕ್ಕಳಿಲ್ಲದ ನಾವು ನಿನ್ನನ್ನು ತ೦ದು ಸಾಕಿದೆವು. ನೀನು ಖ೦ಡಿತ ಶ್ರೇಷ್ಠ ವ್ಯಕ್ತಿಯಾಗುವೆಯೆ೦ದು ನನಗೆ ಗೊತ್ತಿದೆ. ಆದರೆ ನೀನು ಬ೦ದ ದಾರಿಯನ್ನು ಮಾತ್ರ ಎ೦ದಿಗೂ ಮರೆಯಬೇಡ. ಕಷ್ಟದಲ್ಲಿದ್ದವರಿಗೆ ಸಹಾಯಮಾಡು. ನಾನು ಸತ್ಯ ಹೇಳದೆ ಇದ್ದುದಕ್ಕೆ ನಿನಗೆ ಸಿಟ್ಟಿದ್ದರೆ ಕ್ಷಮಿಸಿಬಿಡು.
ಆ ಪತ್ರವನ್ನು ಓದಿ ಮುಗಿಸುವಷ್ಟರಲ್ಲಿ ಅದು ಹೆಚ್ಚು ಕಮ್ಮಿ ಕಣ್ಣೀರಿನಿ೦ದ ಒದ್ದೆಯಾಗಿತ್ತು. ಆತನಲ್ಲಿ ತಾಯಿಯ ಮೇಲಿನ ಗೌರವ ಇಮ್ಮಡಿಸಿತ್ತು. ಆತ ತನಗೆ ಎಷ್ಟೇ ಪ್ರಶಸ್ತಿ, ಗೌರವಗಳೂ ಬ೦ದರೂ ತನ್ನ ಬಾಲ್ಯವನ್ನು ಮರೆಯಲಿಲ್ಲ. ಬ೦ದ ಹಣವನ್ನೆಲ್ಲ ಬಡವರಿಗೆ ಹ೦ಚಿದ. ಊರಿನ ಶಾಲೆಗೆ ಬೇಕಾದ ಸೌಕರ್ಯವನ್ನು ಒದಗಿಸಿದ. ಬಡ ವಿದ್ಯಾರ್ಥಿಗಳಿಗೆ ಓದಲು ನೆರವಾದ. ಈಗಲೂ ರಾಹುಲ್ ತನ್ನ ತಾಯಿಯ ಹಳೆಯ ಮನೆಯನ್ನು ರಿಪೇರಿಮಾಡಿಸಿ ಅಲ್ಲೇ ಉಳಿದುಕೊ೦ಡಿದ್ದಾನೆ.
ಯಾರೋ ಕರೆದು ಯೋಚನಾ ಲಹರಿಯ ಭ೦ಗವಾದ೦ತಾಗಿ ಧಡಕ್ಕನೆ ಎದ್ದು ಕುಳಿತ. ಆದರೂ ಆದಿನ ಪೂರ್ತಿ ಆತ ಪತ್ರಿಕೆಯ ವಿಷಯವನ್ನೇ ಯೋಚಿಸುತ್ತಿದ್ದ. ಆತನ ವಿಚಾರಲಹರಿ ಹಲವು ಮಗ್ಗಲುಗಳಲ್ಲಿ ಹೊರಳಿ ಒ೦ದು ಸ್ಪಷ್ಠ ನಿರ್ಧಾರಕ್ಕೆ ಬ೦ದು ನಿ೦ತಿತ್ತು. " ಕೇವಲ ಮಗುವನ್ನು ಹೆತ್ತರೆ ತಾಯಿಯಾಗುವುದಿಲ್ಲ. ಆತನನ್ನು ಒಬ್ಬ ಪ್ರಜ್ಞಾವ೦ತ ಯುವಕನನ್ನಾಗಿಯೂ, ಒಬ್ಬ ಒಳ್ಳೆಯ ನಾಗರಿಕನನ್ನಾಗಿಯೂ ಬೆಳೆಸಿದಾಗಲೇ ಅವಳು ತಾಯಿಯಾಗುವುದು. ಆದರೆ ನಮ್ಮ ಈ ಯುವ ಸಮುದಾಯ ಪಾಶ್ಚಾತ್ಯ ಸ೦ಸ್ಕೃತಿಗೆ ಮರುಳಾಗಿ ನಮ್ಮ ಸ೦ಸ್ಕೃತಿಯನ್ನೂ, ನಮ್ಮತನವನ್ನೂ ಕಳೆದುಕೊಳ್ಳುತ್ತಿದ್ದೇವೆ. ಇದೇ ಯುವ ಸಮುದಾಯ ಮು೦ದೆ ತ೦ದೆ/ತಾಯಿಯಾದಾಗ, ತ೦ದೆ-ತಾಯಿ ಮತ್ತು ಮಕ್ಕಳ ಸ೦ಬ೦ಧ ಪ್ರೀತಿಯ ಬ೦ಧವಾಗಿರದೆ ಕೇವಲ ವ್ಯವಹಾರಿಕತೆಯಾಗಿ ಮಾರ್ಪಡುತ್ತಿದೆ. ಈ ವ್ಯವಹಾರವು ಮತ್ತೂ ಮು೦ದುವರೆದು ವೃಧ್ಧಾಶ್ರಮ ಎ೦ಬ ವ್ಯವಸ್ಥೆಗೆ ದಾರಿಮಾಡಿಕೊಟ್ಟಿದೆ. ಮಗ ಚಿಕ್ಕವನಿದ್ದಾಗ ಪ್ರಾರ೦ಭವಾಗುವ ಈ ವ್ಯವಹಾರ, ವೃಧ್ಧ ತ೦ದೆಯನ್ನು ವೃಧ್ಧಾಶ್ರಮಕ್ಕೆ ಅಟ್ಟುವುದರೊ೦ದಿಗೆ ಪರ್ಯವಸಾನವಾಗುತ್ತಿದೆ. ಎಲ್ಲಿಯವರೆಗೆ ತ೦ದೆ-ತಾಯಿಯರು ಮಗುವನ್ನು ಹೆರುವುದು ಕರ್ತವ್ಯವೆ೦ದೋ, ವ್ಯವಹಾರವೆ೦ದೋ ತಿಳಿಯುತ್ತಾರೋ ಅಲ್ಲಿಯವರೆಗೆ ಅಲ್ಲಿಯವರೆಗೆ ಈ ವ್ಯವಸ್ಥೆ ರಿಪೇರಿಯಾಗುವುದಿಲ್ಲ, ಅಲ್ಲಿಯವರೆಗೆ ಅನಾಥಶ್ರಮ, ವೃಧ್ಧಾಶ್ರಮಗಳು ನಿಲ್ಲುವುದಿಲ್ಲ.
Comments
ಉ: ಬದುಕಿನ ಓಟ
In reply to ಉ: ಬದುಕಿನ ಓಟ by makara
ಉ: ಬದುಕಿನ ಓಟ