ಬದುಕಿನ ಕತೆ ಹೇಳುವ 'ಬಿಳಿಯ ಚಾದರ'
ಬರಹ
`ಬಿಳಿಯ ಚಾದರ' ಗುರುಪ್ರಸಾದ್ ಕಾಗಿನೆಲೆಯವರ ಹೊಸ ಮತ್ತು ಮೊದಲ ಕಾದಂಬರಿ. ಇದನ್ನು ಧಾರವಾಡದ ಮನೋಹರ ಗ್ರಂಥ ಮಾಲೆಯವರು ಹೊರತಂದಿದ್ದಾರೆ.
ಕಾಗಿನೆಲೆಯವರು ತಮ್ಮ ಕಾದಂಬರಿಯಲ್ಲಿ ಇಂಗ್ಲೀಷ್‌ಗೆ ಪರ್ಯಾಯವಾಗಿ ಕೆಲವು ಹೊಸ ಕನ್ನಡ ಶಬ್ದಗಳನ್ನು ಬಳಸಿದ್ದಾರೆ. ಹಾಗೆ ಮಾಡಿರುವುದಕ್ಕೆ ತಮಗಿರುವ ನಿರ್ದಿಷ್ಟ ಉದ್ದೇಶಗಳ ಕುರಿತೂ ಹೇಳಿದ್ದಾರೆ. ಹಾಗೆಯೇ ತಮ್ಮ ಮುನ್ನುಡಿಯಲ್ಲಿ ಅನಂತಮೂರ್ತಿಯವರು ಕಾದಂಬರಿಯ ಉಜ್ವಲ ಅಂಶಗಳತ್ತ ಗಮನ ಸೆಳೆಯುತ್ತಲೇ ಈ ಭಾಷಾಪ್ರಯೋಗದ ಪರಿಣಾಮದ ಕುರಿತೂ ಬರೆದಿದ್ದಾರೆ. ಕಾಗಿನೆಲೆಯವರು ಬಿಡುಗಡೆಗೂ ಪಲಾಯನಕ್ಕೂ ವ್ಯತ್ಯಾಸ ಅರಿಯದ, ಸಾವಧಾನದಿಂದ ಏರುವುದನ್ನು ಬಿಟ್ಟು ಹಾರಲೆಳಸುವ ಪೀಳಿಗೆಯ ಪ್ರಯತ್ನಗಳನ್ನು ದಾಖಲಿಸುವುದು ಮಾತ್ರ ತಮ್ಮ ಉದ್ದೇಶ ಎಂದು ಹೇಳಿಕೊಂಡಿದ್ದರೂ ಈ ಕಥಾನಕ ಅದಕ್ಕಿಂತ ಹೆಚ್ಚಿನದನ್ನು ಕುರಿತು ಹೇಳುತ್ತಿದೆ ಅನಿಸದಿರದು.