ಬದುಕಿನ ಗಾಯನ ನಿಲ್ಲಿಸಿದ ಪಂಡಿತ್ ಜಸರಾಜ್

ಬದುಕಿನ ಗಾಯನ ನಿಲ್ಲಿಸಿದ ಪಂಡಿತ್ ಜಸರಾಜ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ ಪಂಡಿತ್ ಜಸರಾಜ್ ೨೦೨೦ ರ ಆಗಸ್ಟ್ ೧೭ ರಂದು ತಮ್ಮ ಬದುಕಿನ ಗಾಯನ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ೯೦ ವರ್ಷಗಳ ಜೀವಿತಾವಧಿಯ ೮೦ ವರ್ಷಗಳನ್ನು ಸಂಗೀತ ಕಲಾದೇವಿಯ ಆರಾಧನೆಯಲ್ಲೇ ಕಳೆದ ಹೆಗ್ಗಳಿಕೆ ಪಂಡಿತ್ ಜಸರಾಜ್ ಅವರದ್ದು. ದೇಶ-ವಿದೇಶಗಳಲ್ಲಿ ಅಪಾರವಾದ ಸಂಗೀತ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಪಂಡಿತ್ ಜಸರಾಜ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

ಸಂಗೀತವೇ ಜೀವನವಾಗಿದ್ದ ಹರಿಯಾಣಾದ ಮೇವಾಟಿ ಘರಾನಾ (ಮನೆತನ) ದ ಕೂಸಾಗಿದ್ದ ಇವರು ಬಾಲ್ಯದಿಂದಲೇ ಸಂಗೀತವನ್ನೇ ಉಂಡು ಬೆಳೆದವರು. ೧೯೩೦ ಜನವರಿ ೨೮ರಂದು ಹರಿಯಾಣಾ ರಾಜ್ಯದ ಹಿಸ್ಸಾರ್ ಜಿಲ್ಲೆಯಲ್ಲಿ ಜನಿಸಿದರು ಜಸರಾಜ್. ಇವರ ತಂದೆ ಪಂಡಿತ್ ಮೋತೀರಾಮ್ ಆ ಕಾಲಕ್ಕೆ ದೊಡ್ಡ ಶಾಸ್ತ್ರೀಯ ಸಂಗೀತಕಾರರಾಗಿದ್ದರು. ತಮ್ಮ ತಂದೆಯವರಿಂದ ಕಲಿಯುವ ಭಾಗ್ಯ ಜಸರಾಜ್ ಅವರಿಗೆ ಇರಲಿಲ್ಲ. ಅವರಿಗೆ ನಾಲ್ಕು ವರ್ಷ ಆಗಿರುವಾಗ ತಂದೆಯವರ ನಿಧನವಾಗುತ್ತದೆ. ಜಸರಾಜ್ ನಂತರದ ದಿನಗಳಲ್ಲಿ ಅಣ್ಣಂದಿರಿಂದ ಸಂಗೀತದ ಆರಂಭಿಕ ಜ್ಞಾನವನ್ನು ಪಡೆಯುತ್ತಾರೆ. ಅಣ್ಣನವರಾದ ಪಂಡಿತ್ ಪ್ರತಾಪ್ ನಾರಾಯಣ್ ಹಾಗೂ ಪಂಡಿತ್ ಮಣಿರಾಮ್ ಅವರ ಸಂಗೀತ ಕಚೇರಿಗಳಿಗೆ ಜಸರಾಜ್ ಅವರೇ ತಬಲಾ ಬಾರಿಸುತ್ತಿದ್ದರು. ಪಂಡಿತ್ ಜಸರಾಜ್ ಅವರು ಉತ್ತಮ ಸಂಗೀತಗಾರರಷ್ಟೇ ಅಲ್ಲ ತಬಲಾ ಪಟುವೂ ಆಗಿದ್ದರು. 

ಜಸರಾಜ್ ಅವರು ಯುವಕರಾಗಿದ್ದಾಗ ಹೈದರಾಬಾದ್ ನಲ್ಲಿ ಸ್ವಲ್ಪ ಸಮಯ ನೆಲೆಸಿದ್ದರು. ಆದರೆ ತಮ್ಮ ಮೇವಾಟಿ ಘರಾನಾದ ಸಂಗೀತ ಶಿಕ್ಷಣಕ್ಕಾಗಿ ಆಗಾಗ ಗುಜರಾತ್ ನ ಸನಂದ್ ಎಂಬ ಪ್ರದೇಶಕ್ಕೆ ತೆರಳುತ್ತಿದ್ದರು. ಅಲ್ಲಿನ ಪ್ರಮುಖರಾದ ಮಹಾರಾಜ್ ಜಯವಂತ್ ಸಿಂಗ್ ವಾಘೇಲಾ ಬಳಿ ತರಭೇತಿಯನ್ನು ಪಡೆದು ಕೊಳ್ಳುತ್ತಿದ್ದರು. ಮುಂದಿನ ದಿನಗಳಲ್ಲಿ ಅಂದರೆ ೧೯೪೬ರ ಸುಮಾರಿಗೆ ಕಲ್ತತ್ತಾಗೆ ತೆರಳಿದ ಜಸರಾಜ್ ಅಲ್ಲಿಯೇ ರೇಡಿಯೋಗಾಗಿ ಶಾಸ್ತ್ರೀಯ ಸಂಗೀತ ನುಡಿಸುತ್ತಿದ್ದರು. ಭಾವ ಹಾಗೂ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಮೇವಾತಿ ಘರಾನಾದ ವಿಶೇಷ ಗಾಯನಕ್ಕೆ ಪಂಡಿತ್ ಜಸರಾಜ್ ಖ್ಯಾತರಾಗಿದ್ದರು. ತಮ್ಮ ೨೨ನೇ ವಯಸ್ಸಿನಲ್ಲಿ ನೇಪಾಳದ ರಾಜ ತ್ರಿಭುವನ್ ಬೀರ್ ವಿಕ್ರಮ್ ಸಿಂಗ್ ಎದುರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಯನ್ನು ಪಡೆದಿದ್ದರು. 

ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳದ ಜಸರಾಜ್ ತಮ್ಮ ಸಂಗೀತದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಮೇವಾತಿ ಮನೆತನದ ಶುದ್ಧ ಸಾಂಪ್ರದಾಯಿಕ ಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿ ಬೇರೆ ಬೇರೆ ಘರಾನಾಗಳ ಲಘು ಸಂಗೀತ ಶೈಲಿಯನ್ನು ಬೆರೆಸಿ ಹೊಸದಾದ ಸಂಗೀತವನ್ನು ಜಾರಿಗೆ ತಂದಿದ್ದರು. ಆಗಿನ ಸಂಗೀತ ಪಂಡಿತರಿಗೆ ಈ ‘ಬೆರಕೆ ಸಂಗೀತ' ಇಷ್ಟವಾಗಿರಲಿಲ್ಲ. ಆದರೆ ಕ್ರಮೇಣ ಯುವ ಜನಾಂಗದ ಸಂಗೀತ ಆಸಕ್ತರು ಈ ವಿಧಾನವನ್ನು ಇಷ್ಟ ಪಡತೊಡಗಿದರು. ಸಂಗೀತ ಜುಗಲ್ ಬಂದ್ ನಲ್ಲಿ ಜಸರಾಜರು ‘ಜಸರಂಗಿ' ಎಂಬ ಹೊಸ ಮಾದರಿಯನ್ನು ಜಾರಿಗೆ ತಂದರು. ಸಂಗೀತ ಸಾಮ್ರಾಜ್ಯಕ್ಕೆ ‘ಪಟದೀಪಕಿ’ ಹಾಗೂ ‘ಅಬಿರಿ ತೋಡಿ’ ಎಂಬ ಎರಡು ಹೊಸ ಅಪರೂಪದ ರಾಗಗಳನ್ನು ಪರಿಚಯ ಮಾಡಿಕೊಟ್ಟವರೇ ಪಂಡಿತ್ ಜಸರಾಜ್. ಸಂಗೀತ ತಿಳಿಯದವರಿಗಾಗಿಯೇ ‘ಹವೇಲಿ’ ಸಂಗೀತದ ಶೈಲಿಯನ್ನು ಜಾರಿಗೆ ತಂದು ಅರೆ ಶಾಸ್ತ್ರೀಯ ಸಂಗೀತ ಎಂದು ಕರೆದರು. ಇದರಿಂದ ಸಾಮಾನ್ಯ ಜನರಿಗೂ ಶಾಸ್ತ್ರೀಯ ಸಂಗೀತದ ಪರಿಚಯವಾಗಿ ಅವರೂ ಇದನ್ನು ಮೆಚ್ಚಲಾರಂಭಿಸಿದರು. 

ಜಸರಾಜ್ ಬಾಲಿವುಡ್ ಚಿತ್ರರಂಗದಲ್ಲೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದರು ಮತ್ತು ಹಾಡಿದರು. ‘ಲಡಕೀ ಸಹ್ಯಾದ್ರಿ ಕೀ’ (೧೯೬೬), ‘ಬೀರಬಲ್ ಮೈ ಬ್ರದರ್’ (೧೯೭೫) ಮೊದಲಾದ ಚಿತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ೧೯೬೨ರಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ವಿ.ಶಾಂತಾರಾಮ್ ಅವರ ಮಗಳಾದ ಮಧುರಾ ಜೊತೆ ಪಂಡಿತ್ ಜಸರಾಜ್ ಅವರ ವಿವಾಹವಾಗುತ್ತದೆ. ಮಧುರಾ ತಮ್ಮ ಪತಿಯ ಕುರಿತು ‘ಸಂಗೀತ ಮಾರ್ತಾಂಡ್ ಪಂಡಿತ್ ಜಸರಾಜ್' ಎಂಬ ಚಲನಚಿತ್ರವನ್ನು ೨೦೦೯ರಲ್ಲಿ ನಿರ್ಮಿಸಿದ್ದರು. ‘ಆಯಿ ತುಝಾ ಆಶೀರ್ವಾದ್' ಎಂಬ ಮರಾಠಿ ಚಿತ್ರದಲ್ಲಿ ಜಸರಾಜ್ ಅವರು ಲತಾ ಮಂಗೇಶ್ಕರ್ ಜೊತೆ ಹಾಡಿದ್ದರು. ಪಂಡಿತ್ ಜಸರಾಜ್ ಅವರಿಗೆ ಇಬ್ಬರು ಮಕ್ಕಳು. ಸಾರಂಗ್ ದೇವ್ ಪಂಡಿತ್ ಹಾಗೂ ದುರ್ಗಾ ಜಸರಾಜ್.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ವಿಶ್ವದಾದ್ಯಂತ ಪಸರಿಸಬೇಕೆಂಬ ಹೆಬ್ಬಯಕೆ ಜಸರಾಜ್ ಅವರಿಗೆ ಇತ್ತು. ಅವರಿಗೆ ದೇಶ ಮಾತ್ರವಲ್ಲ ವಿದೇಶಗಳಲ್ಲೂ ಅಸಂಖ್ಯಾತ ಶಿಷ್ಯರು ಇದ್ದರು. ೯೦ರ ಇಳಿವಯಸ್ಸಿನಲ್ಲೂ ಅಂತರ್ಜಾಲದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಸಂಗೀತದ ಶಿಕ್ಷಣ ನೀಡುತ್ತಿದ್ದರು. ಇದು ಅವರಿಗೆ ಸಂಗೀತದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಇವರ ಶಿಷ್ಯಂದಿರಲ್ಲಿ ಸಂಜೀವ ಅಭಯಂಕರ್, ಕಲಾ ರಾಮನಾಥ, ಅನುರಾಧಾ ಪೋಡ್ವಾಲ್, ಲೋಕೇಶ್ ಆನಂದ್, ಸಾಧನಾ ಸರ್ಗಮ್ ಮೊದಲಾದ ಖ್ಯಾತನಾಮರು ಇದ್ದಾರೆ. 

ಸಂಗೀತಕ್ಕೆ ಪಂಡಿತ್ ಜಸರಾಜ್ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಗಮನಿಸಿ ಭಾರತ ಸರಕಾರವು ೧೯೭೫ರಲ್ಲಿ ಪದ್ಮಶ್ರೀ, ೧೯೯೦ರಲ್ಲಿ ಪದ್ಮಭೂಷಣ, ೨೦೦೦ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅವುಗಳಲ್ಲದೇ ಸಂಗೀತ ಕಲಾರತ್ನ, ಮಾಸ್ಟರ್ ದೀನನಾಥ ಮಂಗೇಶ್ಕರ್ ಪಾರಿತೋಷಕ, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗಳೆಲ್ಲವೂ ದೊರೆತಿವೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರಾಗಿದ್ದೂ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಮೂರ್ತಿಯಾಗಿದ್ದ ಪಂಡಿತ್ ಜಸರಾಜ್ ಅವರು ತಮ್ಮ ಬದುಕಿನ ಆಲಾಪವನ್ನು ಮುಗಿಸಿದ್ದಾರೆ. ಆದರೆ ಅವರು ಬಿಟ್ಟು ಹೋಗಿರುವ ಜ್ಞಾನವನ್ನು ಮುಂದುವರೆಸಿಕೊಂಡು ಹೋಗುವುದೇ ಅವರಿಗೆ ಸಂಗೀತ ಪ್ರೇಮಿಗಳೂ ಹಾಗೂ ವಿದ್ಯಾರ್ಥಿಗಳೂ ನೀಡಬಹುದಾದ ನಿಜವಾದ ಶೃದ್ಧಾಂಜಲಿ.    

ಚಿತ್ರ ಕೃಪೆ: ಅಂತರ್ಜಾಲ ತಾಣ