ಬದುಕಿನ ತಿರುವು (ಭಾಗ 1)
ಶಾಂತಿ ಟೀಚರ್ ಮನಸ್ಸು ಸಂಪೂರ್ಣ ಕಲಿತ ಅಥವಾ ಕಲಿಸಿದ ಸಿದ್ದಾಂತಗಳ್ಯಾವುದೂ ಪರಿಹಾರ ಸೂಚಿಸುತ್ತಿಲ್ಲ. ಹೃದಯ ಭಾರವಾಗಿದೆ. ಅತ್ತು ಬಿಡಲು ಕಣ್ಣಲ್ಲಿ ಕಣ್ಣೀರೇ ಬತ್ತಿ ಹೋಗಿದೆ. ದಿಕ್ಕು ಕಾಣದೆ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಪರಿಚಯಸ್ಥರು ಇಲ್ಲದ ಊರಿನಲ್ಲಿ ಹೆಜ್ಜೆ ಹಾಕುತ್ತಿರುವ ಶಾಂತಿ ಟೀಚರ್ ಬಸ್ಸು ನಿಲ್ದಾಣದತ್ತ ಸಾಗುತ್ತಿದ್ದಾರೆ. ಬಸ್ಸು ಹೊರಡಲು ಹತ್ತು ನಿಮಿಷ ಉಳಿದಿದೆ. ಅಷ್ಟರೊಳಗೆ ನಿಲ್ದಾಣ ತಲುಪಬೇಕಿತ್ತು. ಇದಕ್ಕಿದ್ದಂತೆ ಪಕ್ಕದಲ್ಲಿ ಹಾದು ಹೋದ ಕಾರೊಂದು ಒಮ್ಮೆಲೇ ನಿಂತಿತು. ಬೆಲೆಬಾಳುವ ಕಾರಿನೊಳಗೆ ತಂಪು ಕನ್ನಡಕ ಧರಿಸಿದ ವ್ಯಕ್ತಿಯೊಬ್ಬ ಕುಳಿತಿದ್ದ. ಟೀಚರ್ ಮತ್ತಷ್ಟು ಭಯಗೊಂಡರು. ಈಗಾಗಲೇ ಗೊಂದಲದಲ್ಲಿದ್ದ ಶಾಂತಿ ಟೀಚರ್ ಏನನ್ನೂ ಯೋಚಿಸದಾದರು. ಕಾರಿನಿಂದ ಇಳಿದ ವ್ಯಕ್ತಿ ಶಾಂತಿ ಟೀಚರ್ ಬಳಿ ಹೆಜ್ಜೆ ಇಡುತ್ತಿದ್ದ. ಜೋರಾಗಿ ಕಿರುಚಿಕೊಳ್ಳೋಣವೆಂದರೆ ಗಂಟಲಿನಿಂದ ಶಬ್ಧವೇ ಹೊರಡುತ್ತಿಲ್ಲ. ಬಳಿ ಬಂದ ಆ ವ್ಯಕ್ತಿ ಶಾಂತಿ ಟೀಚರ್ ಕಾಲು ಮುಟ್ಟಿ ನಮಸ್ಕರಿಸುತ್ತಾನೆ. 'ಮೇಡಂ ನನ್ನ ಗುರುತು ಸಿಗಲಿಲ್ವಾ?' ಎಂದು ಪ್ರಶ್ನಿಸಿದ. ಶಾಂತಿ ಟೀಚರಿಗೆ ಒಮ್ಮೆಲೇ ಇಪ್ಪತ್ತು ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿದ್ದ ಸಚಿನ್ ನೆನಪಾದ. ಹೌದು ಇದು ಆತನೇ ಇರಬಹುದೆಂದು ದೃಢವಾಯಿತು. 'ನೀನು ಸಚಿನ್ ಅಲ್ವಾ?' ಅಂದರು. "ಹೌದು ಮೇಡಂ, ನೀವೇನು ಇಲ್ಲಿ?" ಅಂದಾಗ ಟೀಚರ್ ನಿಜಕ್ಕೂ ಆಶ್ಚರ್ಯಗೊಂಡಿದ್ದರು. ಶಾಂತಿ ಟೀಚರ್ "ಏನಿಲ್ಲಾ, ಹೀಗೆ ಬಂದಿದ್ದೆ, ಈಗ ಬಸ್ಸಿಗೆ ಹೋಗಬೇಕಿದೆ, ಎಂದವರೇ ಹೊರಡಲು ಅಣಿಯಾದರು. ಆದರೆ ಸಚಿನ್ ಮನೆಗೆ ಬಂದು ಹೋಗುವಂತೆ ಹಟ ಮಾಡಿದ. ಊರಿಗೆ ನಾನೇ ಕಾರಿನಲ್ಲಿ ಬಿಡುವುದಾಗಿ ಮಾತುಕೊಟ್ಟ. ಶಾಂತಿ ಟೀಚರ್ ಕಾರಿನ ಮುಂದಿನ ಸೀಟಿಗೆ ಕುಳಿತರು. ಕಾರಿನ ಒಳಗೆ ತುಂಬಾನೇ ನೀಟಾಗಿತ್ತು. ಟೀಚರ್ ನೆನಪು ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಹೊರಳಿತು. ಶಾಂತಿ ಟೀಚರ್ ಶಾಲೆಯೊಂದರಲ್ಲಿ ಗಣಿತ ಶಿಕ್ಷಕಿಯಾಗಿದ್ದರು. ಎಲ್ಲಾ ಶಿಕ್ಷಕರು ಅನುಭವಿಸುವ ಗೋಳೇ ಇವರದ್ದೂ ಆಗಿತ್ತು. ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಸಚಿನ್, ಅವರಿಗೊಂದು ತಲೆನೋವಾಗಿದ್ದ. ಶಿಸ್ತು ಎಂಬುವುದು ಅವನಿಗಿಂತ ಮಾರು ದೂರವಿತ್ತು. ಶಾಲೆಯ ಯಾವ ಕೆಲಸವೂ ಮಾಡುತ್ತಿರಲಿಲ್ಲ. ವಿಶೇಷ ವಿನ್ಯಾಸದ ಹೇರ್ ಸ್ಟೈಲ್. ಒರಟಾದ ಮಾತು. ಇಷ್ಟಬಂದಾಗ ರಜೆ. ಹೀಗೆ ಇದ್ದ ಸಚಿನ್, ಟೀಚರ್ ಮಾತು ಕೇಳಿದ್ದೇ ಇಲ್ಲ. ಎಲ್ಲರೂ ಅವನನ್ನು ಅವನಷ್ಟಕ್ಕೇ ಬಿಟ್ಟಿದ್ದರು. ಪೂರ್ತಿ ಶಾಲೆಗೆ ಆತ ತಲೆನೋವಾಗಿದ್ದ. ಶಾಂತಿ ಟೀಚರ್ ಆತನಲ್ಲಿ ಮಾತೇ ಆಡುತ್ತಿರಲಿಲ್ಲ. "ಆತ ಮುಂದೆ ಒಬ್ಬ ದೊಡ್ಡ ರೌಡಿ ಆಗುತ್ತಾನೆ" ಎಂದು ಎಲ್ಲಾ ಶಿಕ್ಷಕರ ಅಭಿಪ್ರಾಯವಾಗಿತ್ತು. ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷೆಯಲ್ಲಿ ಪಕ್ಕ ಕುಳಿತದ್ದು ಸಂಜನಾ. ಆಕೆಯನ್ನು ಹೆದರಿಸಿ, ಅವಳ ಪೇಪರ್ ನಕಲು ಹೊಡೆದು, ಹತ್ತನೇ ಪಾಸು ಆಗಿದ್ದ. ಅಂದು ಶಾಂತಿ ಟೀಚರ್ ಮುಂದೆ ಟಿಸಿ ಪಡೆದು ತೆರಳುವಾಗ ಕುಹಕ ನಗೆ ಬೀರಿದ್ದ. ಅದೇ ತರಗತಿಯ ಪ್ರಶಾಂತ ತಾಲೂಕಿಗೆ ಪ್ರಥಮ ಬಂದಿದ್ದ. ಆತ ಬಹಳನೇ ಬುದ್ಧಿವಂತ. ಎಲ್ಲರಿಗೂ ಅಚ್ಚುಮೆಚ್ಚು. ಶಿಕ್ಷಕರು ಆತನನ್ನು ಹೊಗಳದ ದಿನಗಳೇ ವಿರಳ. ಎಲ್ಲಾ ವಿಷಯಕ್ಕೂ ಪ್ರಶಾಂತನೇ ಮುಂಚೂಣಿ. ಇಂದು ಅದೇ ಸಚಿನ್ ತನ್ನ ಕಾರಿನಲ್ಲಿ ಶಾಂತಿ ಟೀಚರನ್ನು ಕುಳ್ಳಿರಿಸಿ ಡ್ರೈವ್ ಮಾಡ್ತಿದ್ದಾನೆ. ಅಂದಿನ ಯಾವ ಸ್ವಭಾವವೂ ಇಲ್ಲ. ಸಂಪೂರ್ಣ ಬದಲಾದ ವ್ಯಕ್ತಿತ್ವ. ಇದು ಹೇಗೆ ಸಾಧ್ಯ?.. ಯಾವುದೋ ರೌಡಿಯಾಗಿ ಬೀದಿಯ ಹೆಣವಾಗಬಹುದೆಂದು ಅಂದುಕೊಂಡಿದ್ದ ಸಚಿನ್, ಈ ರೀತಿ ಬದಲಾಗಬಹುದೇ?... ಅಥವಾ ಶಿಕ್ಷಕರಾಗಿ ನಾವು ಅವನನ್ನು ತಪ್ಪಾಗಿ ನಡೆಸಿಕೊಂಡಿದ್ದೇವೆಯೇ?.... ಹೀಗೇ ನೂರಾರು ಯೋಚನೆಗಳು ಅರೆಕ್ಷಣದಲ್ಲಿ ಟೀಚರ್ ಮನದಲ್ಲಿ ಹಾದುಹೋದವು.
"ಸಚಿನ್ ನೀನೇನು ಮಾಡುತ್ತಿರುವೆ?... ಇಲ್ಲಿಗೆ ಹೇಗೆ ಬಂದೆ?..." ಎಂದು ಶಾಂತಿ ಟೀಚರ್ ಕೇಳತೊಡಗಿದರು. ಎಲ್ಲವನ್ನೂ ಹೇಳುತ್ತೇನೆ ಮೇಡಂ. ಮೊದಲು ಮನೆಗೆ ಹೋಗೋಣ.... ಎಂದು ಹೇಳುತ್ತಲೇ ಒಂದು ಮನೆಯ ಗೇಟಿನ ಮುಂದೆ ಕಾರು ನಿಂತಿತು. ಭವ್ಯವಾದ ಮನೆ. ಗೇಟ್ ತೆಗೆಯಲು ಆಳು ಇದ್ದ. ಕಾರು ನಿಲ್ಲಿಸಿ, ಇಬ್ಬರೂ ಮನೆಯೊಳಗೆ ಬಂದರು. ಮನೆಯಲ್ಲಿ ಸಚಿನ್ ಪತ್ನಿ ರೇಖಾಗೆ ಶಾಂತಿ ಟೀಚರ್ ಪರಿಚಯ ಮಾಡಿಸಿದ. ಆಕೆಯೂ ಟೀಚರ್ ಕಾಲಿಗೆ ನಮಸ್ಕರಿಸಿ, ಬಹಳನೇ ಪ್ರೀತಿಯಿಂದ ಬರಮಾಡಿಕೊಂಡಳು. ಮುಖ ತೊಳೆದು ಸೋಪಾದಲ್ಲಿ ಕುಳಿತ ಶಾಂತಿ ಟೀಚರ್ ಗೆ ತಣ್ಣನೆ ಜ್ಯೂಸ್ ತಂದುಕೊಟ್ಟ ರೇಖಾಳ ಸ್ವಭಾವ ಟೀಚರಿಗೆ ತುಂಬಾನೇ ಇಷ್ಟವಾಯಿತು. ಸಚಿನ್ ಮತ್ತು ರೇಖಾ ದಂಪತಿಗಳು ಆದರದಿಂದ ಸತ್ಕರಿಸಿ ಮಾತಿಗಿಳಿದು, ಇಲ್ಲಿಗೆ ಬಂದ ಬಗ್ಗೆ ಪ್ರಶ್ನಿಸಿದರು. ಶಾಂತಿ ಟೀಚರ್ ಕಣ್ಣುಗಳಲ್ಲಿ ಕಣ್ಣೀರು ಜಾರಿ ಬೀಳುತ್ತಿತ್ತು. ಅವರಿಬ್ಬರೂ ಸಮಾಧಾನ ಮಾಡಿ, ವಿಷಯ ತಿಳಿಸುವಂತೆ, ಸಾಧ್ಯವಾದರೆ ಸಹಾಯ ಮಾಡುವುದಾಗಿ ತಿಳಿಸಿದರು. ಒಂದು ವರ್ಷದ ಹಿಂದೆ ಶಾಂತಿ ಟೀಚರ್ ಗಂಡ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಟೀಚರಿಗೆ ಒಬ್ಬನೇ ಮಗ ಮದುವೆಯಾಗಿ ಹೆಂಡತಿ ಜೊತೆ ಪುಣೆಯಲ್ಲಿ ವಾಸವಿದ್ದ. ಶಾಂತಿ ಟೀಚರ್ ತನ್ನ ಶಕ್ತಿಮೀರಿ ಗಂಡನ ಸೇವೆ ಮಾಡಿದ್ದರು. ಆಸ್ಪತ್ರೆ ಖರ್ಚು ಭರಿಸಲು ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ಮಾರಿಯಾಗಿತ್ತು. ಮಗ ಆರಂಭದಲ್ಲಿ ಸ್ವಲ್ಪ ಸಹಾಯ ಮಾಡಿದ್ದ. ಆದರೆ ನಂತರ ಮಾತೇ ಬಿಟ್ಟು ಬಿಟ್ಟ. ಶಾಂತಿ ಟೀಚರಿಗೆ ಖರ್ಚಿನ ಭಾರ ಹೊತ್ತುಕೊಳ್ಳೋದು ಕಷ್ಟವಾಯಿತು. ಬಂದ ಸಹಾಯಗಳು ಸಾಲದಾಯಿತು. ಬೆಟ್ಟದಷ್ಟು ಸಾಲವಾಯಿತು. ಆದರೂ ಗಂಡನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಲವನ್ನು ತೀರಿಸಲು ದಾರಿ ಕಾಣಲಿಲ್ಲ. ಸ್ವಯಂ ನಿವೃತ್ತಿ ಪಡೆದು ಬಂದ ಹಣದಿಂದ ಸಾಲ ತೀರಿಸುವ ತೀರ್ಮಾನ ಮಾಡಿದರು. ಬಂದ ಹಣದಲ್ಲಿ ಸಾಲ ತೀರಿಸಲಾಗಲಿಲ್ಲ. ತನ್ನ ಅತ್ಯಂತ ಪ್ರೀತಿಯ ಮನೆಯನ್ನು ಅಡವಿಟ್ಟು ಸಾಲ ತೀರಿಸಿದ್ದರು. ಆದರೆ ಮನೆಯ ಸಾಲ ಹಾಗೇ ಬೆಳೆಯುತ್ತಿತ್ತು. ಮಗ ಅಲ್ಪಸ್ವಲ್ಪ ಕಳುಹಿಸುತ್ತಿದ್ದ. ಹಾಗೂ ಪಿಂಚಣಿಯಿಂದ ಟೀಚರ್ ಜೀವನ ಸಾಗುತ್ತಿತ್ತು.
(ಇನ್ನೂ ಇದೆ)
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ