ಬದುಕಿನ ತಿರುವು (ಭಾಗ 2)

ಬದುಕಿನ ತಿರುವು (ಭಾಗ 2)

ಇದೀಗ ಮನೆಯನ್ನು ಏಲಂ ಮಾಡುವ ನೋಟೀಸು ಬಂದಿತ್ತು. ಮಗ ತನ್ನ ಅಸಹಾಯಕತೆ ಪ್ರಕಟಿಸಿದ್ದ. ಮನೆ ಹೋಗಲಿ ಯಾವುದಾದರೂ ಬಾಡಿಗೆ ಮನೆ ಮಾಡು ಅಂದಿದ್ದ. ಆದರೆ ತನ್ನ ಗಂಡ ಸತ್ತ ನಂತರ ತಾನು ಪ್ರೀತಿಸುತ್ತಿದ್ದ ಮನೆಯೂ ಕಳೆದುಕೊಳ್ಳುವುದು ಶಾಂತಿ ಟೀಚರಿಗೆ ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲ. ರಾತ್ರಿ ಪೂರ್ತಿ ಯೋಚನೆ. ಏಲಂಗೆ ಮೂರು ದಿನ ಉಳಿದಿದೆ. ದಿಕ್ಕು ಕಾಣದ ಶಾಂತಿ ಮನೆ ಏಲಂಗೆ ಮುಂಚೆನೇ ತಾನು ಸಾಯಬೇಕೆಂದು ನಿರ್ಧರಿಸುತ್ತಾರೆ. ತನ್ನ ಹಳೆಯ ಸೀರೆಯನ್ನು ಬಳಸಿ ಪ್ಯಾನ್ ಗೆ ನೇಣು ಹಾಕಿಕೊಳ್ಳಲು ತೀರ್ಮಾನಿಸುತ್ತಾರೆ. ಹಾಗೇ ಕಪಾಟಿನಿಂದ ಸೀರೆ ಎಳೆದಾಗ ಒಂದು ಫೋಟೋ ಕೆಳಗೆ ಬಿತ್ತು. ನೋಡಿದರೆ ಅದು ಸಚಿನ್ ಸಹಪಾಠಿ ಪ್ರಶಾಂತ್. ಕೆಲವು ವರ್ಷಗಳ ಹಿಂದೆ ಒಮ್ಮೆ ಟೀಚರ್ ಮನೆಗೆ ಬಂದಾಗ ಕೊಟ್ಟಿದ್ದ. ಈಗ ಆತ ದೊಡ್ಡ ಕಂಪೆನಿಯೊಂದರ ಸಿಇಒ ಆಗಿದ್ದ. ಟೀಚರಿಗೆ ಆತನ ಬಗ್ಗೆ ಬಹಳನೇ ಅಭಿಮಾನ. ಅವರ ಮನಸ್ಸಿನಲ್ಲಿ ಒಂದು ಸಣ್ಣ ಬೆಳಕು ಕಂಡಂತಾಯಿತು. ಪ್ರಶಾಂತ್ ಖಂಡಿತಾ ನನಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆ ಅವರಿಗಿತ್ತು. ಹೇಗೋ ಮಾಡಿ ಆತನನ್ನು ನಾಳೆ ಭೇಟಿ ಮಾಡಬೇಕೆಂದು ತೀರ್ಮಾನಿಸಿ ಸಾಯುವ ನಿರ್ಧಾರ ಕೈ ಬಿಟ್ಟರು. ಅದ್ಹೇಗೋ ಪ್ರಶಾಂತನ ವಿಳಾಸ ಪಡೆದು ಅವನಿರುವ ಊರಿಗೆ ಬಂದಿದ್ದರು. ಆತನ ತಲುಪುವಾಗ ಮಧ್ಯಾಹ್ನ ದಾಟಿತ್ತು. ಅಂದು ಆದಿತ್ಯವಾರವಾಗಿತ್ತು. ಮನೆಗೆ ಬಂದ ಟೀಚರನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಬರಮಾಡಿಕೊಂಡ ಪ್ರಶಾಂತನ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು. ಟೀಚರ್ ಯಾಕೆ ಬಂದಿರಬಹುದು...? ಏನಾದರೂ ಕೇಳಬಹುದೇ?.... ಹೀಗೆ ಅವನ ಯೋಚನೆ ಮುಂದುವರಿದಿತ್ತು. ಟೀಚರ್ ತುಂಬಾ ಹಸಿದಿದ್ದರು. ಸೌಜನ್ಯಕ್ಕೂ ಊಟ ಮಾಡುತ್ತೀರಾ.....? ಎಂದು ಕೇಳುವ ಮನಸ್ಸು ಪ್ರಶಾಂತನಿಗಿರಲಿಲ್ಲ. ಆತನ ಪತ್ನಿ ಒಳಗಿನಿಂದಲೇ "ಯಾರ್ರಿ ಬಂದದ್ದು?, ಶಾಪಿಂಗ್ ಹೋಗಲು ಟೈಂ ಆಯಿತು. ಅವರನ್ನು ಬೇಗ ಕಳುಹಿಸಿ ರೆಡಿಯಾಗಿ" ಎಂಬ ಕೂಗು ಒಳಗಿಂದ. ಪ್ರಶಾಂತ್ ಶಾಂತಿ ಟೀಚರ್ ಬಳಿ ಬಂದು "ನೋಡಿ ಟೀಚರ್, ಏನು ಬಂದದ್ದು ಹೇಳಿ, ನನಗೆ ಸ್ವಲ್ಪ ಕೆಲಸ ಇದೆ." ಅಂದಾಗ ಟೀಚರ್ ಗೆ ಹೇಳಬೇಕೋ ಬೇಡವೋ? ಗೊತ್ತಾಗುತ್ತಿರಲಿಲ್ಲ. ಕಟ್ಟಕಡೆಗೆ ಅಂತೂ ಸಾಯುವ ನಿರ್ಧಾರ ಮಾಡಿ ಆಗಿದೆ. ಇನ್ನು ಪ್ರತಿಷ್ಠೆ ಏಕೆ?... ಎಂದು ಭಾವಿಸಿ, ಒಂದೇ ಉಸಿರಿನಲ್ಲಿ ವಿಷಯ ತಿಳಿಸಿ, ಸಹಾಯ ಯಾಚಿಸಿದರು. ಈ ಮಧ್ಯೆ ಒಳಗಡೆ ಗೊಣಗುವಿಕೆ ಕೇಳುತ್ತಾನೇ ಇತ್ತು. ಒಳಗೆ ಹೋದ ಪ್ರಶಾಂತ್ ಐದು ಸಾವಿರ ರೂಪಾಯಿ ತಂದು ಟೀಚರ್ ಕೈಗಿತ್ತು, ಆಶೀರ್ವಾದ ಬೇಡಿದ. ಅದೇ ದಿನ ಬೆಳಿಗ್ಗೆ ತನ್ನ ಪ್ರೀತಿಯ ನಾಯಿಗೆ ಒಂದು ಲಕ್ಷದ ಗೂಡು ತಂದಿದ್ದ, ಇಂದು ಹೆಂಡತಿಗೆ ಡೈಮಂಡ್ ಖರೀದಿಸಲು ಹೊರಟಿದ್ದ. ಅದೂ ಹೆಂಡತಿಯ ಸ್ನೇಹಿತೆಗೆ ಗಿಪ್ಟ್ ನೀಡಲು. ಮನೆಯಂತೂ ಅರಮನೆಯಂತೆ ಕಾಣುತ್ತಿತ್ತು. ಆಶೀರ್ವಾದ ಪಡೆದ ಪ್ರಶಾಂತ್ "ನನಗೆ ಅರ್ಜಂಟ್ ಹೊರಡಬೇಕು ಟೀಚರ್ ನೀವಿನ್ನು ಹೊರಡಿ" ಎಂದವನೇ ಟೀಚರ್ ಉತ್ತರಕ್ಕೂ ಕಾಯದೆ ಒಳ ಹೊಕ್ಕ. ಶಾಂತಿ ಟೀಚರ್ ಭಾರವಾದ ಹೆಜ್ಜೆಯೊಂದಿಗೆ ಅಲ್ಲಿಂದ ಹೊರಟಿದ್ದರು. ಹೊರಬಂದ ಪ್ರಶಾಂತ್ ಗೆ ಸೋಫಾದ ಮೇಲೆ ತಾನು ಕೊಟ್ಟಿರುವ ಹಣ ಟೀಚರ್ ಅಲ್ಲೇ ಇಟ್ಟಿರುವುದು ಕಾಣಿಸಿತು. ಹಣದ ಕೆಳಗಡೆ ಒಂದು ಫೋಟೋ. ಅದು ತಾನು ಅಂದು ಟೀಚರಿಗೆ ಕೊಟ್ಟಿದ್ದ ಅದೇ ಫೋಟೋ.. ಗತಿಯಿಲ್ಲದಿದ್ದರೂ "ಅಹಂಕಾರಕ್ಕೇನೂ ಕಡಿಮೆಯಿಲ್ಲ" ಎಂದವನೇ ಶಾಪಿಂಗ್ ಗೆ ಹೊರಟಿದ್ದ. ಇದಿಷ್ಟು ಟೀಚರ್ ಕತೆಯಾಗಿತ್ತು. 

ಪ್ರಶಾಂತ್ ಮನೆಯಿಂದ ಹೊರಟ ಶಾಂತಿ ಟೀಚರ್ ಮತ್ತೆ ಎರಡನೇ ಬಾರಿ ಸಾಯುವ ನಿರ್ಧಾರ ಮಾಡಿ ನಿಲ್ದಾಣದತ್ತ ನಡೆಯುತ್ತಿದ್ದರು. ಅದೇ ಸಮಯಕ್ಕೆ ಸಚಿನ್ ಕಾರಿನಲ್ಲಿ ಬಂದಿದ್ದ. ಸಚಿನ್ ಅದೇ ಊರಿನ ಒಂದು ಪ್ರತಿಷ್ಠಿತ ಕಂಪೆನಿಯ ಮಾಲಕನಾಗಿದ್ದ. ಹೆಂಡತಿಯೂ ಅದೇ ಕಂಪೆನಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಳು. ಮದುವೆಯಾದ ನಂತರ ಸಚಿನ್ ಸಂಪೂರ್ಣ ಬದಲಾಗಿದ್ದ. ಅದಕ್ಕೆ ಪತ್ನಿ ರೇಖಾ ಕಾರಣವಾಗಿದ್ದಳು. ಎಂಬಿಎ ಪದವೀದರೆಯಾಗಿದ್ದ ಆಕೆ, ತನ್ನ ತಂದೆಯ ಕಂಪೆನಿಯನ್ನು ನೋಡಿಕೊಳ್ಳುತ್ತಿದ್ದಳು.
ಸಚಿನ್ ಕೂಡಾ ಪದವಿ ಪಡೆದಿದ್ದು, ಹೇಗೋ ಅವರಿಬ್ಬರ ಮಧ್ಯೆ ಪರಿಚಯ ಉಂಟಾಯಿತು. ಮನೆಯವರ ಒಪ್ಪಿಗೆ ಪಡೆದು ಅವರಿಬ್ಬರು ಮದುವೆಯಾಗಿದ್ದರು. ತಂದೆ ತನ್ನ ಕಂಪೆನಿಯನ್ನು ಮಗಳಿಗೇ ಬಿಟ್ಟುಕೊಟ್ಟಿದ್ದ. ಸಚಿನ್ ಮತ್ತು ರೇಖಾ ಕಠಿನ ಶ್ರಮ ಪಟ್ಟು ಕಂಪೆನಿಯನ್ನು ಬೆಳೆಸಿದ್ದರು. ಇಂದು ಅದೇ ಸಚಿನ್ ಮುಂದೆ ಶಾಂತಿ ಟೀಚರ್ ಕಣ್ಣೀರಿಡುತ್ತಿದ್ದರು. ಸಚಿನ್ ದಂಪತಿಗಳು ಇಂದು ಇಲ್ಲೇ ಇದ್ದು ಆತಿಥ್ಯ ಸ್ವೀಕರಿಸುವಂತೆ ಒತ್ತಾಯಿಸಿದರು. ಟೀಚರನ್ನು ಮಾಲ್ ಗೆ ಕರೆದೊಯ್ದು, ಹೋಟೇಲ್ ನಲ್ಲಿ  ಭರ್ಜರಿ ಪಾರ್ಟಿ ನೀಡಿದರು. ಅವರಿಬ್ಬರು ಅಲ್ಲೇ ಮಾಲ್ ನಲ್ಲಿ ಖರೀದಿ ಮಾಡಿ ಮೂವರೂ ಮನೆಗೆ ಹಿಂತಿರುಗಿದರು. ಶಾಂತಿ ಟೀಚರ್ ಕಾರನ್ನು ಹತ್ತಿ ಕುಳಿತು ಪಕ್ಕಕ್ಕೆ ತಿರುಗಿ ಹೊರಗಡೆ ಕಣ್ಣಾಯಿಸಿದಾಗ ಪ್ರಶಾಂತ್ ತನ್ನ ಕಾರಿನ ಡೋರ್ ಓಪನ್ ಮಾಡುತ್ತಿದ್ದ. ಇತ್ತ ರಾತ್ರಿ ಸಚಿನ್ ಮನೆಯಲ್ಲಿ ತಂಗಿದ್ದ ಶಾಂತಿ ಟೀಚರ್ ಗೆ ಯಾವುದೇ ಕೊರತೆ ಉಂಟಾಗದಂತೆ ಇಬ್ಬರೂ ನೋಡಿಕೊಂಡರು. ಆದರೆ ಶಾಂತಿ ಟೀಚರ್ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅವಳ ಸಮಸ್ಯೆ ಇನ್ನೂ ಪರಿಹಾರವಾಗಿರಲಿಲ್ಲ. ಮೆತ್ತಗೆಯ ಹಾಸಿಗೆಯಲ್ಲೂ ಆಕೆಗೆ ನಿದ್ರೆ ಸುಳಿಯಲಿಲ್ಲ. ತಂಪಾದ ಗಾಳಿ ಇದ್ದರೂ ಬೆವರು ನಿಂತಿರಲಿಲ್ಲ. ಬೆಳಿಗ್ಗೆ ಎದ್ದು ತಿಂಡಿ ಮುಗಿಸಿ ಟೀಚರ್ ಹೊರಡಲು ಸಿದ್ಧರಾದರು. ಸಚಿನ್ ಮತ್ತು ರೇಖಾ ಒಂದು ಕುರ್ಚಿ ನೀಡಿ ಟೀಚರನ್ನು ಕುಳ್ಳಿರಿಸಿದರು. ತಟ್ಟೆಯಲ್ಲಿ ಹಣ್ಣು ಹಂಪಲು ನೀಡಿ ಸತ್ಕರಿಸಿದರು. ರೇಖಾ ಒಂದು ಡೈಮಂಡ್ ಸರವನ್ನು ಎರಡು ಬೆಲೆಬಾಳುವ ಸೀರೆಯನ್ನು ಉಡುಗೊರೆ ನೀಡಿ ಆಶೀರ್ವಾದ ಬೇಡಿ ಕಾಲಿಗೆರಗಿದಳು. ಸಚಿನ್ ಒಂದು ಬೆಲೆಬಾಳುವ ವಾಚ್ ತೊಡಿಸಿ, ಸಹಿ ಮಾಡಿದ ಬ್ಲಾಂಕ್ ಚೆಕ್ ನೀಡಿ, "ಟೀಚರ್ ಕ್ಷಮಿಸಿ, ಎಷ್ಟು ಮೊತ್ತ ಬರೆದರೂ ಕಡಿಮೆಯೇ. ಅದಕ್ಕಾಗಿ ಖಾಲಿ ಚೆಕ್ ನೀಡುತ್ತಿದ್ದೇನೆ. ನಿಮಗೆ ಎಷ್ಟು ಅಗತ್ಯ ಇದೆಯೋ ಅಷ್ಟು ಬರೆಯಿರಿ. ಮುಂದೆ ಸಹಾಯ ಬೇಕಿದ್ದರೆ ಮುಲಾಜಿಲ್ಲದೆ ಕೇಳಿ. ಆತಿಥ್ಯದಲ್ಲಿ ಕೊರತೆಯಾಗಿದ್ದರೆ ದಯವಿಟ್ಟು ಕ್ಷಮಿಸಿ" ಎಂದು ಕಾಲಿಗೆರಗಿ ಆಶೀರ್ವಾದ ಬೇಡಿದ. ಶಾಂತಿ ಟೀಚರ್ ಮೌನಿಯಾಗಿದ್ದರು. ಅವರಲ್ಲಿ ಶಬ್ಧವೇ ಇರಲಿಲ್ಲ. ಕಾಣುತ್ತಿರುವುದು ಕನಸೋ ಅಥವಾ ನನಸೋ ಗೊತ್ತಾಗುತ್ತಿರಲಿಲ್ಲ. ಅವರಿಬ್ಬರೂ ಟೀಚರನ್ನು ಮನೆಗೆ ಬಿಟ್ಟು ಬರಲು ಕಾರಲ್ಲಿ ಹೊರಟರು. ಸ್ವಲ್ಪ ಮುಂದೆ ಹೊರಟಾಗ ಆಂಬುಲೆನ್ಸ್ ಶಬ್ಧ ಮಾಡುತ್ತಾ ವೇಗವಾಗಿ ಹಾದು ಹೋಗುತ್ತಿದ್ದಂತೆ ಸಚಿನ್ ಫೋನ್ ರಿಂಗಾಯಿತು. ಗೆಳೆಯ ಕರೆ ಮಾಡಿ ಪ್ರಶಾಂತ್ ಕಾರು ಆಕ್ಸಿಡೆಂಟಾಗಿ ಗಂಡ ಹೆಂಡತಿ ಇಬ್ಬರಿಗೂ ತೀವ್ರ ಗಾಯವಾಗಿದೆ ಎಂಬ ಸುದ್ದಿ ಮುಟ್ಟಿಸಿದ. ಹಿಂತಿರುಗಿ ನೋಡಿದರೆ ಶಾಂತಿ ಟೀಚರ್ ಸೀಟಿಗೊರಗಿ ಹಾಯಾಗಿ ಹೊರಗಡೆ ನೋಡುತ್ತಿದ್ದಾರೆ. ಸಚಿನ್ ವಿಷಯ ಶಾಂತಿ ಟೀಚರ್ ಗೆ ತಿಳಿಸಲಿಲ್ಲ. "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ! ಗುರು ಸಾಕ್ಷಾತ್ ಪರಬ್ರಹ್ಮ! ತಸ್ಮೈ ಶ್ರೀ ಗುರುವೇ ನಮಃ" ಎಂದು ಶಾಲೆಯ ಪ್ರಾರ್ಥನೆ ಕಿವಿಗೆ ಅಪ್ಪಳಿಸಿದಂತಾಯಿತು. ಕಾರು ವೇಗವಾಗಿ ಶಾಂತಿ ಟೀಚರ್ ಮನೆಯತ್ತ ಸಾಗುತ್ತಿತ್ತು.

(ಮುಗಿಯಿತು)

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ