ಬದುಕಿನ ದೊಡ್ಡ ಪಾಠ

ಬದುಕಿನ ದೊಡ್ಡ ಪಾಠ

ಗುಂಡನ ಮಗ ಪರೀಕ್ಷೆಯಲ್ಲಿ ಫೈಲಾದ. ಮಗನನ್ನು ಹಿಗ್ಗಾಮುಗ್ಗ ಬಡಿದು ಹಾಕಿದ ಗುಂಡ. ಮಗ ಸಿಕ್ಕಾಬಟ್ಟೆ ಅತ್ತ. ಆಗಲೇ ಮಗ ನಿರ್ಧರಿಸಿದ: ಇನ್ನು ಮುಂದೆ ಚೆನ್ನಾಗಿ ಕಲಿಯುತ್ತೇನೆಂದು.
ಮುಂದಿನ ವರುಷ ಗುಂಡನ ಮಗ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ. ಹೆಮ್ಮೆಯಿಂದ ಮನೆಗೆ ಬಂದ ಮಗ ಗುಂಡನಿಗೆ ತನ್ನ ಅಂಕಪಟ್ಟಿ ತೋರಿಸಿದ. ಅದನ್ನೊಮ್ಮೆ ನೋಡಿದ ಗುಂಡ, ತಕ್ಷಣವೇ ಮಗನನ್ನು ಹಿಡಿದುಕೊಂಡು ಕೋಲಿನಿಂದ ಚೆನ್ನಾಗಿ ಚಚ್ಚಿ ಹಾಕಿದ. ಅನಂತರ ಮಗನಿಗೆ ಅಬ್ಬರಿಸಿ ಹೇಳಿದ ಗುಂಡ: “ನಿನ್ನ ಕ್ಲಾಸಿನಲ್ಲಿ ಫಸ್ಟ್ ಬಂದು ಏನು ಪ್ರಯೋಜನ? ಆಟೋಟಗಳಲ್ಲಿ ನಿನಗೆ ಅಂಕಗಳೇ ಇಲ್ಲ. ನಿನಗೆ ಈ ಪಾಠ ಕಲಿಸಬೇಕಂತ ಕೋಲಿನಿಂದ ಚಚ್ಚಿದ್ದೇನೆ.”
ಅಳುತ್ತಾ ಹೋದ ಗುಂಡನ ಮಗ ಆಗಲೇ ನಿಶ್ಚಯಿಸಿದ: ಪಾಠದಲ್ಲೂ ಆಟಗಳಲ್ಲೂ ಅತ್ಯುತ್ತಮ ಅಂಕ ಗಳಿಸಬೇಕೆಂದು. ಮುಂದಿನ ವರುಷವಿಡೀ ಎರಡರಲ್ಲೂ ಸಾಧನೆ ಮಾಡಿದ. ಈ ವರುಷವಾದರೂ ತನ್ನ ತಂದೆ ತನ್ನ ಸಾಧನೆಯ ಬಗ್ಗೆ ಸಂತೋಷ ಪಡುತ್ತಾರೆಂದು ಮಗ ಭಾವಿಸಿದ. ಆದರೆ ಈ ವರುಷವೂ ಮಗನಿಗೆ ಜೋರಾಗಿ ಏಟುಗಳನ್ನಿತ್ತ ಗುಂಡ. ಯಾಕೆ ಬಡಿಯುತ್ತಿದ್ದೀರೆಂದು ಮಗ ಕೇಳಿದಾಗ ಗುಂಡ ಹೇಳಿದ: “ಯಾಕೇಂತ ಕೇಳ್ತಿಯಾ? ಪಠ್ಯೇತರ ಚಟುವಟಿಕೆಗಳಲ್ಲಿ ನೀನು ಸಾಧನೆ ಮಾಡದಿದ್ದರೆ, ಆಟ-ಪಾಠಗಳ ಸಾಧನೆಯಿಂದ ಏನು ಪ್ರಯೋಜನ? ನಿನಗೆ ಈ ಪಾಠ ಕಲಿಸಬೇಕಂತಲೇ ಏಟಿನ ಮೇಲೆ ಏಟು ಕೊಟ್ಟಿದ್ದೇನೆ.”
ಅಪ್ಪನ ಮೆಚ್ಚುಗೆ ಗಳಿಸಲೇ ಬೇಕೆಂದು ಸಂಕಲ್ಪ ಮಾಡಿದ ಗುಂಡನ ಮಗ. ತನ್ನೆಲ್ಲ ತಾಕತ್ತು ಬಳಸಿ ಕಲಿತ. ಮುಂದಿನ ವರುಷ ಪಾಠ-ಆಟ-ಪಠ್ಯೇತರ ಚತುವಟಿಕೆಗಳು ಎಲ್ಲದರಲ್ಲೂ ಗುಂಡನ ಮಗ ಮಿಂಚಿದ. ಅತನನ್ನು ಇಡೀ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಯೆಂದು ಘೋಷಿಸಲಾಯಿತು. ತನ್ನ ಸಾಧನೆಯಿಂದಾಗಿ ಅಪ್ಪನಿಗೆ ಸಂತೋಷ ಆಗಿಯೇ ಆಗುತ್ತದೆಂಬ ವಿಶ್ವಾಸದಿಂದ ಮನೆಗೆ ಬಂದ ಗುಂಡನ ಮಗ. ಈ ಸಲ ಮಗನ ಸಾಧನೆಯನ್ನೆಲ್ಲ ಕೇಳಿಸಿಕೊಂಡ ಗುಂಡ, ಕೋಣೆಗೆ ಹೋಗಿ ತನ್ನ ಬೆಲ್ಟ್ ತಂದ. ತಕ್ಷಣವೇ ಸಿಕ್ಕಸಿಕ್ಕಂತೆ ಮಗನಿಗೆ ಬೆಲ್ಟಿನಿಂದ ಬಾರಿಸತೊಡಗಿದ.
ಈಗ ಗುಂಡನ ಮಗನಿಗೂ ಸಿಟ್ಟು ಉಕ್ಕಿತು. ಸ್ವರವೇರಿಸಿ ಗುಂಡನನ್ನು ಕೇಳಿದ ಮಗ, “ಯಾಕೆ ನನಗೆ ಬಡಿಯುತ್ತಿದ್ದೀ? ನಿನಗೇನಾದರೂ ತಲೆ ಕೆಟ್ಟಿದೆಯಾ? ನಾನೇನು ಮಾಡಬೇಕೆನ್ನುತ್ತೀ? ಏನು ಸಾಧನೆ ಮಾಡಿ ಬಂದರೂ ಮತ್ತೆಮತ್ತೆ ಪೆಟ್ಟು ತಿನ್ನಬೇಕಾಗಿದೆ. ಯಾಕೆ?”
ಗುಂಡ ಮಗನಿಗೆ ಬೆಲ್ಟಿನಿಂದ ಬಡಿಯುವುದನ್ನು ನಿಲ್ಲಿಸಿದ. ನಂತರ ಮಗನತ್ತ ತುಸು ಬಾಗಿ ಗುಂಡ ಹೇಳಿದ, “ಮಗನೇ, ನಾಲ್ಕು ವರುಷಗಳೂ ಪರೀಕ್ಷೆ ಫಲಿತಾಂಶ ಬಂದಾಗ, ಬಾಸುಂಡೆ ಬರುವಂತೆ ನಿನಗೆ ಬಡಿದದ್ದಕ್ಕೆ ನನಗೂ ಬೇಸರವಿದೆ. ಆದರೆ, ಇದರಿಂದ ನೀನು ಜೀವನದ ದೊಡ್ಡ ಪಾಠ ಕಲಿಯಬೇಕಾಗಿದೆ. ನೀನು ಬದುಕಿನಲ್ಲಿ ಏನೇ ಮಾಡಿದರೂ, ಏನೇ ಸಾಧಿಸಿದರೂ, ಏಟು ತಿನ್ನಲು ತಯಾರಿರಬೇಕು. ಆಗ ಮಾತ್ರ ಯಾವುದೇ ಸಂಕಟ ಬಂದರೂ ನಿನಗೆ ಅದನ್ನು ಎದುರಿಸಲು ಸಾಧ್ಯವಾಗುತ್ತದೆ.”