ಬದುಕಿನ ಸಂಚಾರ ಮುಗಿಸಿದ ವಿಜಯ್

ಬದುಕಿನ ಸಂಚಾರ ಮುಗಿಸಿದ ವಿಜಯ್

‘ನಾನು ಅವನಲ್ಲ... ಅವಳು’ ಕನ್ನಡ ಚಲನಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ರಾಷ್ಟೀಯ ಪುರಸ್ಕಾರವನ್ನು ಪಡೆದುಕೊಂಡ ನಟ ‘ಸಂಚಾರಿ’ ವಿಜಯ್ ತಮ್ಮ ಬದುಕಿನ ಸಂಚಾರವನ್ನು ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ತಮ್ಮ ಸ್ನೇಹಿತನ ಬೈಕ್ ನ ಹಿಂದುಗಡೆ ಕುಳಿತು ಹೋಗುತ್ತಿದ್ದ ವಿಜಯ್ ಅಪಘಾತವಾಗಿ ಗಂಭೀರ ಗಾಯಗೊಂಡು ವೈದ್ಯರು ‘ಬ್ರೈನ್ ಡೆಡ್' ಘೋಷಿಸಿದಾಗ ಅವರ ಮನೆಯವರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದರು. ಈ ಕಾರಣದಿಂದ ಮುಂದೆಯೂ ವಿಜಯ್ ಹಲವಾರು ಮಂದಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ (ಕಣ್ಣು, ಹೃದಯ, ಕಿಡ್ನಿ, ಲಿವರ್ ಹೀಗೆ) ಜೀವಂತವಾಗಿರುತ್ತಾರೆ. ಇದೊಂದು ಶ್ಲಾಘನೀಯ ನಡೆ ಎಂದರೆ ತಪ್ಪಾಗದು.

‘ನಾನು ಅವನಲ್ಲ..ಅವಳು’ ಚಿತ್ರದಲ್ಲಿನ ವಿಜಯ್ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಪ್ರಶಸ್ತಿ ಬಂದು ೨೯ ವರ್ಷಗಳೇ ಆಗಿಹೋಗಿದ್ದವು. ಅದಕ್ಕಿಂತ ಮೊದಲು ‘ಚೋಮನ ದುಡಿ' ಚಿತ್ರದಲ್ಲಿನ ನಟನೆಗೆ ವಾಸುದೇವ ರಾವ್ ಹಾಗೂ ‘ತಬರನ ಕಥೆ' ಚಿತ್ರದ ಅಭಿನಯಕ್ಕೆ ಚಾರುಹಾಸನ್ ಗೆ ಉತ್ತಮ ನಟ ಪ್ರಶಸ್ತಿ ಬಂದಿತ್ತು. ಇದೆಲ್ಲಾ ೨೯ ವರ್ಷಗಳ ಹಿಂದಿನ ಕಥೆ. ಈ ಪ್ರಶಸ್ತಿಯ ಬರವನ್ನು ನೀಗಿಸಿದ್ದು ಸಂಚಾರಿ ವಿಜಯ್. ಮಂಗಳಮುಖಿಯಾಗಿ ತಮ್ಮ ಮನೋಜ್ಞ ಅಭಿನಯಕ್ಕಾಗಿ ಅವರು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡರು. ಹಾಗೆ ನೋಡಲು ಹೋದರೆ ವಿಜಯ್ ನಟಿಸಿದ್ದ ಬಹುತೇಕ ಚಿತ್ರಗಳು ವಿಷಯಾಧಾರಿತ ಅಥವಾ ಕಂಟೆಂಟ್ ಸಿನೆಯಾಗಳೇ. ಅವರಿಗೆ ಮನೋರಂಜನೆಯೇ ಜೀವಾಳವಾಗಿರುವ ಚಿತ್ರಗಳಿಗಿಂತ, ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡುವ ಚಿತ್ರಗಳಲ್ಲಿ ನಟಿಸುವುದೇ ಕನಸಾಗಿತ್ತು. 

ಕಮರ್ಷಿಯಲ್ ಚಿತ್ರಗಳಲ್ಲಿ ಕಡಿಮೆಯೇ ನಟಿಸಿದ್ದ ವಿಜಯ್ ಸುಮಾರು ೨೦ ಚಿತ್ರಗಳಲ್ಲಿ ನಟಿಸಿಯೂ ಜನರ ಪಾಲಿಗೆ ಸ್ವಲ್ಪ ಅಪರಿಚಿತರಾಗಿಯೇ ಉಳಿದಿದ್ದರು. ಅವರ ಚಿತ್ರಗಳ ಪಟ್ಟಿ ಗಮನಿಸುವಾಗ ನಮಗೆ ಅದರ ಅರಿವಾಗುತ್ತದೆ. ಹರಿವು, ಒಗ್ಗರಣೆ, ನಾನು ಅವನಲ್ಲ ಅವಳು, ೬ನೇ ಮೈಲಿ, ನಾತಿಚರಾಮಿ, ಆಡುವ ಗೊಂಬೆ, ಆಕ್ಟ್ ೧೯೭೮, ರಂಗಪ್ಪ ಹೋಗ್ನಿಟ್ನಾ ಇವು ಕೆಲವು ಸ್ಯಾಂಪಲ್ ಗಳಷ್ಟೇ. 

ಬಿ.ವಿಜಯ್ ಕುಮಾರ್ ಎಂಬ ಪುಟ್ಟ ಗ್ರಾಮದ ಹುಡುಗ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಒಂದು ಅದ್ಭುತವೇ ಸರಿ. ಜುಲೈ ೧೫, ೧೯೮೩ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಜನಿಸಿದ ಇವರದ್ದು ಕಲಾವಿದರ ಕುಟುಂಬವೇ. ಇವರ ತಂದೆ ಬಸವರಾಜಯ್ಯ ಹಾಗೂ ತಾಯಿ ಗೌರಮ್ಮ ಕಲಾವಿದರೇ. ತಂದೆ ಚಿತ್ರಕಲಾವಿದರಾಗಿದ್ದರು. ತಾಯಿ ಗೌರಮ್ಮ ವೃತ್ತಿಯಲ್ಲಿ ಶುಶ್ರೂಕಿಯಾಗಿದ್ದರೂ ಉತ್ತಮವಾಗಿ ಹಾಡುತ್ತಿದ್ದರು. ೧೯೯೯ರಲ್ಲಿ ತಾಯಿ ಹಾಗೂ ೨೦೦೦ರಲ್ಲಿ ತಂದೆಯ ನಿಧನದ ಬಳಿಕ ವಿಜಯ್ ಅವರ ಮನೆಯ ಪರಿಸ್ಥಿತಿ ಬಿಗಡಾಯಿಸತೊಡಗಿತ್ತು. ವಿಜಯ್ ಕಲಿಯುವುದರಲ್ಲಿ ತುಂಬಾನೇ ಚುರುಕಾಗಿದ್ದರು. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿ ಸ್ವಲ್ಪ ಸಮಯ ಅರೆಕಾಲಿಕ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.

ವಿಜಯ್ ಗೆ ಸದಾ ಕಾಲ ರಂಗಭೂಮಿಯ ತುಡಿತ. ನೋಡಲೂ ಸುಂದರವಾಗಿದ್ದ ಹಾಗೂ ನಟನೆಯಲ್ಲೂ ಚುರುಕಾಗಿದ್ದ ವಿಜಯ್ ಬಹುಬೇಗನೇ ರಂಗಭೂಮಿ ನಟನಾಗಿ ಹೆಸರು ಮಾಡುತ್ತಾರೆ. ವಿಜಯ್ ಮೊದಲು ನಟಿಸಿದ ನಾಟಕ ‘ಸಾವು ಧ್ಯೇಯಕ್ಕಿಲ್ಲ' ಅದರಲ್ಲಿ ಇವರಿಗೆ ಬಹು ಸಣ್ಣ ಪಾತ್ರ. ಡೈಲಾಗ್ ಸಹಾ ಇಲ್ಲ. ಬರೀ ವೇದಿಕೆಗೆ ಹೋಗಿ ನಿಲ್ಲುವುದು ಮತ್ತು ಹಿಂದಕ್ಕೆ ಬರುವುದು. ಈ ಅವಕಾಶಕ್ಕೇ ವಿಜಯ್ ಬಹಳ ರೋಮಾಂಚನಗೊಂಡಿದ್ದರು. ಈ ನಟನೆಗಾಗಿ (?!) ವಿಜಯ್ ಪ್ರತೀ ದಿನ ಬೆಳ್ಳಂಬೆಳಗ್ಗೆ ಎದ್ದು ನಾಟಕದ ತರಭೇತಿ ನಡೆಯುವ ಸ್ಥಳಕ್ಕೆ ಹೋಗಿ ತದೇಕಚಿತ್ತದಿಂದ ಅಭಿನಯವನ್ನು ಕಲಿಯುತ್ತಿದ್ದರು. ಇವರ ಈ ಬದ್ಧತೆಯು ನಿರ್ದೇಶಕರಿಗೆ ಬಹಳ ಮೆಚ್ಚುಗೆಯಾಯಿತು. ಬೆಳಿಗ್ಗೆ ಅಭಿನಯ ನಂತರ ಕಾಲೇಜಿಗೆ ಹೋಗಿ ಕಲಿಕೆ, ಸಾಯಂಕಾಲ ಕರ್ನಾಟಕ ಸಂಗೀತ ಕಲಿಕೆ ಹೀಗೆ ದಿನವಿಡೀ ಏನಾದರೊಂದನ್ನು ಕಲಿಯುತ್ತಿದ್ದ ವಿಜಯ್ ಬಹುಬೇಗನೇ ಪ್ರವರ್ಧಮಾನಕ್ಕೆ ಬಂದರು. ‘ಸಂಚಾರಿ' ಎಂಬ ತಂಡದ ಜೊತೆ ಇವರ ನಂಟು ಇದ್ದುದರಿಂದ ಇವರ ಹೆಸರಿನ ಮುಂದುಗಡೆ ಸಂಚಾರಿ ಸೇರಿ ಇವರು ಸಂಚಾರಿ ವಿಜಯ್ ಆದರು. 

ಬಹಳಷ್ಟು ನಾಟಕಗಳಲ್ಲಿ ನಟಿಸಿದರೂ ವಿಜಯ್ ಅವರಿಗೆ ಸಿನೆಮಾ ರಂಗದ ಬಾಗಿಲು ತೆರೆದಿರಲಿಲ್ಲ. ಆದರೆ ಸಿನೆಮಾರಂಗದಲ್ಲಿ ಅವರು ಪ್ರಾರಂಭದಲ್ಲಿ ಮಾಡಿದ್ದು ಪೋಷಕನಟನೆಯ ಪಾತ್ರಗಳನ್ನೇ. ‘ರಂಗಪ್ಪಾ ಹೋಗ್ಬಿಟ್ನಾ’ ಎಂಬುವುದು ಇವರ ಮೊದಲ ಚಿತ್ರ. ನಂತರ ‘ದಾಸವಾಳ' ಚಿತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿನ ಇವರ ನಟನೆಯನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡರು. ಪ್ರಕಾಶ್ ರೈ ಪ್ರಧಾನ ಭೂಮಿಕೆಯ ‘ಒಗ್ಗರಣೆ' ಚಿತ್ರದಲ್ಲಿ ನಟಿಸಿದರು. ನಿರ್ದೇಶಕ ಮಂಸೋರೆಯವರು ತಮ್ಮ ‘ಹರಿವು' ಚಿತ್ರದಲ್ಲಿ ಇವರಿಗೊಂದು ಪಾತ್ರ ನೀಡಿದರು. ಇದರಲ್ಲಿಯ ನಟನೆಯನ್ನು ಗಮನಿಸಿ ನಿರ್ದೇಶಕ ಬಿ.ಎಸ್.ಲಿಂಗದೇವರು ತಮ್ಮ ಕನಸಿನ ಚಿತ್ರ ‘ನಾನು ಅವನಲ್ಲ, ಅವಳು' ಇದರಲ್ಲಿ ಪ್ರಧಾನ ಪಾತ್ರವಹಿಸಲು ವಿಜಯ್ ಗೆ ಅವಕಾಶ ನೀಡಿದರು. ಈ ಅವಕಾಶವೇ ವಿಜಯ್ ಪಾಲಿಕೆ ಟಾನಿಕ್ ಆಯಿತು. ಅದನ್ನು ಸಮರ್ಥವಾಗಿ ಬಾಚಿಕೊಂಡರು. ಇವರು ಮಂಗಳಮುಖಿಯಾಗಿ ಮಾಡಿದ ನಟನೆಯು ಬಹಳ ಮೆಚ್ಚುಗೆಗೆ ಪಾತ್ರವಾಯಿತು. ಅರ್ಹವಾಗಿಯೇ ಇವರಿಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂತು. ನಂತರದ ದಿನಗಳಲ್ಲೂ ಬಹಳ ಬೇಡಿಕೆ ಇದ್ದರೂ ವಿಜಯ್ ತಮ್ಮ ಚಿತ್ರಗಳನ್ನು ಬಹಳ ಚೂಸಿಯಾಗಿ ಆಯ್ಕೆ ಮಾಡಿಕೊಂಡರು. ನಟನಾ ಕೌಶಲ್ಯಕ್ಕೆ ಅವಕಾಶವಿರುವ (ಪಾತ್ರ ಪುಟ್ಟದಾಗಿದ್ದರೂ ಸಹ) ಚಿತ್ರಗಳನ್ನು ಮಾತ್ರ ಆರಿಸಿಕೊಂಡರು. ಈ ಕಾರಣದಿಂದ ಇವರ ಚಿತ್ರಗಳ ಸಂಖ್ಯೆ ಬೆಳೆಯಲಿಲ್ಲ. ತಮಿಳು, ತೆಲುಗು, ಹಿಂದಿ ಚಿತ್ರದಲ್ಲೂ ಇವರು ನಟಿಸಿದ್ದಾರೆ. ೨೦೨೦ರಲ್ಲಿ ಇವರ ಹಲವಾರು ಚಿತ್ರಗಳು ಬಿಡುಗಡೆಯಾಗಬೇಕಿತ್ತು, ಆದರೆ ಕೋವಿಡ್ ಕಾರಣದಿಂದ ಆಕ್ಟ್ ೧೯೭೮ ಮಾತ್ರ ಬಿಡುಗಡೆಯ ಭಾಗ್ಯ ಕಂಡಿತ್ತು. ಪುಕ್ಸಟ್ಟೆ ಲೈಫ್, ತಲೆದಂಡ, ಮೇಲೊಬ್ಬ ಮಾಯಾವಿ ಮೊದಲಾದ ಕೆಲವು ಚಿತ್ರಗಳು ಇನ್ನೂ ತೆರೆಗೆ ಬರಲು ಬಾಕಿಯಿದೆ. 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟನಾದರೂ ವಿಜಯ್ ಗೆ ಯಾವುದೇ ಹಮ್ಮುಬಿಮ್ಮು ಇರಲಿಲ್ಲ. ಬಹಳ ಸರಳ ಜೀವನ ನಡೆಸುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಹಲವಾರು ಜನರಿಗೆ ತಮ್ಮಿಂದ ಆದಷ್ಟು ಸಹಾಯ ಮಾಡುತ್ತಿದ್ದರು. ತಮ್ಮ ಕಾರ್ ನ ಇಎಂಐ ಸಹಾ ಕಟ್ಟದೇ ಆ ಹಣದಲ್ಲೂ ಅವರು ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ್ದರು ಎನ್ನುತ್ತಾರೆ ಚಿತ್ರ ನಟ ಜಗ್ಗೇಶ್. ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅವರದ್ದೇ ಸ್ವಂತ ವೆಚ್ಚದಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಬರುತ್ತಿದ್ದ ವಿಜಯ್ ಯಾವತ್ತೂ ನನಗೆ ಕಾರ್ ಕಳಿಸಿ ಎಂದು ಹೇಳಿದವರೇ ಅಲ್ಲ. ಯಾವ ವಾಹನ ಸಿಗದಿದ್ದರೆ ಆಟೋ ಹತ್ತಿ ಬರುತ್ತಿದ್ದರು. ಅಷ್ಟೊಂದು ಸಿಂಪಲ್ ಆಗಿದ್ದರು ಎನ್ನುತ್ತಾರೆ ಇವರನ್ನು ಹತ್ತಿರದಿಂದ ಬಲ್ಲವರು.

ವಿಜಯ್ ಅವರ ಅಂಗಾಂಗ ದಾನದಿಂದಾಗಿ ಸುಮಾರು ೭ ಮಂದಿ ಹೊಸ ಬದುಕನ್ನು ಕಾಣಲಿದ್ದಾರೆ. ಈ ಕಾರಣದಿಂದಾಗಿಯಾದರೂ ವಿಜಯ್ ಸತ್ತ ಬಳಿಕವೂ ಜೀವಂತವಾಗಿರುತ್ತಾರೆ. ೩೮ ವರ್ಷ ಸಾಯುವ ವಯಸ್ಸಲ್ಲ. ಕಳೆದ ವರ್ಷ ಇದೇ ಜೂನ್ ತಿಂಗಳಲ್ಲಿ ಕನ್ನಡದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಹಾಗೂ ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಧನರಾಗಿದ್ದರು. ಈ ವರ್ಷ ವಿಜಯ್ ಸಾವಿನಿಂದ ನಿಜಕ್ಕೂ ಚಿತ್ರರಂಗ ಉತ್ತಮ ನಟನೊಬ್ಬನನ್ನು ಕಳೆದುಕೊಂಡಿದೆ. ಚಿತ್ರರಂಗದ ಬಗ್ಗೆ ಹಲವಾರು ಕನಸುಗಳನ್ನು ಹೊಂದಿದ್ದ ಸಂಚಾರಿ ವಿಜಯ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ನಟಿಸಿದ ಹಲವಾರು ಚಿತ್ರಗಳು ಅವರ ನೆನಪನ್ನು ಸದಾ ಜೀವಂತವಾಗಿಡುವುದರಲ್ಲಿ ಸಂಶಯವಿಲ್ಲ. 

ಚಿತ್ರ ಕೃಪೆ: ಪ್ರಜಾವಾಣಿ ಜಾಲತಾಣ