ಬದುಕಿನ ಸತ್ವಗಳು

ಬದುಕಿನ ಸತ್ವಗಳು

ಕವನ

ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ

ಗೀತಾಸಾರದ ಮಹಾ ವೃಕ್ಷ/

ತನ್ನನ್ನು ನಂಬಿದವರ ಕೈಬಿಡದವನು

ಮೇಲೆತ್ತಿ ಪೊರೆಯುವ ರಕ್ಷಕನು//

 

ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ

ಬದುಕಿನ ಮಹಾಸಾಗರದ ಜಲರಾಶಿ/

ಬಿರುಗಾಳಿಯಂತೆ ಬದಲಾವಣೆ ಎಷ್ಟೇ ಬರಲಿ 

ಇತಿಹಾಸದ ಪುಟಗಳಲಿ ಬದಲಾಗದ ತತ್ವಸಿರಿ//

 

ಸತ್ವಭರಿತ ಸತ್ಯದ ಅರಿವಿನ ಜ್ಯೋತಿ

ಮನಸ್ಸಿನ ವಿಕಾರಗಳಿಗೆ ಮಂಥನ ದೀಪ್ತಿ/

ಪ್ರವಾಹದ ವಿರುದ್ಧ ಹೋಗಬಾರದೆಂಬ ಧ್ಯೇಯ

ಬದುಕಿನ ಮರ್ಮ ಸತ್ಯ ದರ್ಶನ ಪಾಯ//

 

ಮನದ ವಿಕಾರಗಳ ಹರಿಯಗೊಡದಿರು

ನಿಶ್ಚಲ ಗುರಿಯ ಪಥದೆಡೆಗೆ ಸಾಗು/

ಗಾಳಿಯೊಡನೆ ಗುದ್ದಾಟ ಲಕ್ಷಣವಲ್ಲ

ಅಂತರಂಗದ ಬೆಳಕನ್ನು ಹುಡುಕು//

 

ಅವರವರ ತಲೆಯಡಿಗೆ ಅವರವರ ಕೈಗಳು

ಎಸಗಿದ ಕರ್ಮಗಳ  ಪ್ರತಿಫಲದ ನೆರಳು/

ನಾನು ನನ್ನದು ಎಲ್ಲ ಬರಿಯ ಭ್ರಮೆ

ಶರೀರ-ಆತ್ಮ ಬೇರೆಯೆಂಬ ಸತ್ಯ//

 

ಇಟ್ಟ ಹೆಜ್ಜೆ ದಿಟವಾಗಿರಲಿ ಫಲ ಪ್ರಾಪ್ತಿ

ಕೆಡುಕು ಮತ್ಸರಗಳು ಬೂದಿಯಾಗಲಿ/

ನೈತಿಕ ಮೌಲ್ಯಗಳ ಸಾರ ಅಜರಾಮರ

ಅಲ್ಪಗೆಲುವಿಗೆ ಕಪಟಿಗೆ ಮಣೆಯ ಹಾಕದಿರು//

 

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಬೋಧಿಸಿದ ಭಗವಂತ ಅನವರತ ಸತ್ಯಾಂಶ/

ಪ್ರಯತ್ನ ನಮ್ಮದು ಫಲ ಅವನದು

ಯೋಗೀಶ್ವರನ ಮುಖ ಕಮಲ ಹನಿಗಳು//

 

ತನ್ನನ್ನು ತಾನೇ ಪರೀಕ್ಷೆಗೆ ಒಳಪಡಿಸಿ

ಸೋಲು-ಗೆಲುವುಗಳ ಸಮನಾಗಿ ಸ್ವೀಕರಿಸಿ/

ಸಾತ್ವಿಕತೆಯ ಜೀವನವ ತಳಹದಿಯಾಗಿಸಿ

ಸನಾತನ ಸಂಸ್ಕಾರದಿ ತನುವ ದಂಡಿಸಿ//

 

ಪರಹಿಂಸೆ ಸಲ್ಲದೆಂಬ ನೀತಿಯ ಸಾರಿ

ಮಾನಸಿಕ ತಪದಂತೆ ಬದುಕು ನಡೆಸಿ/

ಸರ್ವರಿಗು ಒಳಿತಾಗಲೆಂದು ಬಯಸಿ

ದೇವ ಮಧುಸೂದನನು ಉಪದೇಶಿಸಿದನು ನರರೂಪಿ ಪಾರ್ಥಂಗೆ//

(ಗೀತಾ ಜಯಂತಿ ವಿಶೇಷ)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್