ಬದುಕಿನ ಸಾರ್ಥಕ ಕ್ಷಣಗಳು...

ಬದುಕಿನ ಸಾರ್ಥಕ ಕ್ಷಣಗಳು...

ಶಾಲೆಯಲ್ಲಿ ಪೋಷಕರ ಸಭೆ. ನನಗೆ ಎಲ್ಲವೂ ಹೊಸತು. ಇಪ್ಪತ್ತೆಂಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಬಡ್ತಿ ಮೂಲಕ ಅನಿವಾರ್ಯವಾಗಿ ಈ ಶಾಲೆಗೆ ಬಂದಿದ್ದೆ. ಪೋಷಕರ ಸಭೆಗೆ ಬಹುತೇಕ ಪೋಷಕರು ಆಗಮಿಸಿದ್ದರು. ಅವರೆಲ್ಲರೂ ನನಗೆ ಹೊಸಬರು. ಆದರೆ ಅವರು ತೋರಿದ ಪ್ರೀತಿಗೆ ಅವರೆಂದೂ ಹೊಸಬರು ಇಲ್ಲವೇ ಪರಿಚಯವಿಲ್ಲದವರು ಎಂದು ಅನ್ನಿಸಲೇ ಇಲ್ಲ. ಪ್ರತಿಯೊಬ್ಬರು ಮುನ್ನುಗ್ಗಿ ನನ್ನಲ್ಲಿ ಮಾತನಾಡಲು ಹಾತೊರೆಯುತ್ತಿದ್ದರು. ತರಗತಿಯಿಂದ ತಮ್ಮ ಮಕ್ಕಳನ್ನು ಕರೆದು ಇವನು ನನ್ನ ಮಗ, ಇವಳು ನನ್ನ ಮಗಳು ಎಂದು ಪರಿಚಯಿಸುತ್ತಿದ್ದರು. ಪ್ರತಿಯೊಬ್ಬರಿಗೂ ನನ್ನಲ್ಲಿ ಯಾವುದೋ ಭರವಸೆ. ನಾನೇನಾದರೂ ಪರಿವರ್ತನೆ ಮಾಡಬಹುದೆಂಬ ನಿರೀಕ್ಷೆ. ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಮಕ್ಕಳಿಗೆ ಒಬ್ಬ ಉತ್ತಮ ಶಿಕ್ಷಕರು ದೊರೆತರೆಂಬ ನಂಬಿಕೆ. (ನಂಬಿಕೆಗೆ ಅದೆಷ್ಟು ಅರ್ಹನೋ ತಿಳಿಯದು)

ಮಾತಿನ ಮಧ್ಯೆ ನನಗೆ ಅತೀವ ಸಂತಸ ತಂದ ಒಂದು ಸಂದರ್ಭ ಅಲ್ಲಿತ್ತು. ಮಹಿಳೆಯೊಬ್ಬರು ಬಂದು ನನಗೆ ನಮಸ್ಕರಿಸಿ ಪ್ರೀತಿಯಿಂದ ಮಾತನಾಡಿದರು. ನನ್ನ ಬಗ್ಗೆ ಈ ಹಿಂದೆ ಒಂದಿನಿತೂ ಪರಿಚಯವಿಲ್ಲದಿದ್ದರೂ, ಅತ್ಯಂತ ಗೌರವದಿಂದ ನಮಿಸಿದರು. ಹಳ್ಳಿ ಜನಗಳೇ ಹಾಗೆ. ಪ್ರೀತಿಯಲ್ಲಿ ಅವರು ನಿಜಕ್ಕೂ ಮುಗ್ಧರು. ಆಕೆ ನನ್ನಲ್ಲಿ ಮಾತನಾಡುತ್ತಾ "ಸರ್, ಈ ತಿಂಗಳು ನನ್ನ ಮಗಳ ಬರ್ತ್ ಡೇ ಇತ್ತು. ಪ್ರತಿವರ್ಷ ಅವಳಿಗೆ ಕಷ್ಟವಾದರೂ ಹೊಸ ಬಟ್ಡೆ, ಸಿಹಿ ತಿಂಡಿ ಕೊಡುತ್ತಿದ್ದೆ. ಅದಕ್ಕಾಗಿ ಅವಳು ಹಠ ಮಾಡುತ್ತಿದ್ದಳು. ಆದರೆ ಈ ವರ್ಷ ಬರ್ತ್ ಡೇ ಗೆ ನನಗೆ ಯಾವುದೇ ಹೊಸ ಬಟ್ಟೆ ಬೇಡ ಅಂದಳು. ಇರುವ ಒಳ್ಳೆಯ ಹಳತು ಬಟ್ಟೆಯೇ ಸಾಕು" ಅಂದಾಗ ನನಗೆ ಬಹಳನೇ ಆಶ್ಚರ್ಯವಾಯಿತು. "ಅದೇನು ಮಗಳೇ ನಿನ್ನಲ್ಲಿ ಈ ಬದಲಾವಣೆ?" ಅಂತ ಕೇಳಿದಾಗ, "ಅಮ್ಮ, ನಮ್ಮ ಹೊಸ ಸರ್ ಇಂದು ತರಗತಿಗೆ ಬಂದು, ಅಪ್ಪ- ಅಮ್ಮ ನಮಗಾಗಿ ಕಷ್ಟ ಪಡುವ ಬಗ್ಗೆ ಹೇಳಿದರು. ನೀವು ನಮಗಾಗಿ ಅದೆಷ್ಟು ಕಷ್ಟ ಪಡುತ್ತೀರಲ್ವಾ ಅಮ್ಮ. ನಾನು ಇನ್ನು ಎಂದೂ ನಿಮ್ಮಲ್ಲಿ ಹಟ ಮಾಡಿ ಕಷ್ಟ ಕೊಡಲ್ಲ ಅಮ್ಮ" ಎಂದು ಅತ್ತಾಗ ನನ್ನ ಕಣ್ಣೀರು ಕಟ್ಟೆಯೊಡೆಯಿತು ಸರ್.

 "ಸರ್, ನಿಜಕ್ಕೂ ನಾವು ಕಷ್ಟದಲ್ಲಿದ್ದೇವೆ. ಹೊಸ ಬಟ್ಟೆ ಕೊಟ್ಟು ಬರ್ತ್ ಡೇ ಆಚರಿಸುವ ಶಕ್ತಿ ನಮಗಿಲ್ಲ. ಆದರೆ ಮಕ್ಕಳು ಹಟ ಮಾಡಿದಾಗ ಇಷ್ಟು ವರ್ಷವೂ ಸಾಲ ಮಾಡಿ ಬಟ್ಟೆ ಕೊಡುತ್ತಿದ್ದೆವು. ಈ ವರ್ಷ ನಿಮ್ಮಿಂದ ಆ ಕಷ್ಟ ನಮಗೆ ಬರಲಿಲ್ಲ" ಎನ್ನುತ್ತಾ ಮತ್ತೊಮ್ಮೆ ಕೈ ಮುಗಿದರು. ಮಗುವಿನ ಮೇಲೆ ನನಗೆ ತುಂಬಾ ಗರ್ವ ಮೂಡಿತು. ಅಮ್ಮನ ಎದುರೇ ಬಳಿ ಕರೆದು ತಲೆ ನೇವರಿಸಿದೆ." ಅಮ್ಮ ತೃಪ್ತರಾಗಿ ತೆರಳಿದರು.

ಹೌದು ಬದುಕಿನ ಪ್ರತಿಯೊಂದು ಕ್ಷಣವೂ ಹೊಸ ಪಾಠವನ್ನು ನೀಡುತ್ತದೆ. ಹಳೆಯ ದುಃಖಗಳನ್ನು ಮರೆಯಲು ಹೊಸ ಹೊಸ ಘಟನೆಗಳು ಕಾರಣವಾಗುತ್ತದೆ ಎಂಬುವುದು ಸತ್ಯ. ನಾವು ಕಟ್ಟಿಕೊಂಡ ಭ್ರಮಾಲೋಕದಲ್ಲಿ ಬದುಕುತ್ತಾ, ವಾಸ್ತವಿಕತೆಯನ್ನು ಮರೆಯುತ್ತೇವೆ. ನಮ್ಮ ಸುತ್ತ ಮುತ್ತ ಇರುವವರು ಮಾತ್ರ ನಮ್ಮವರು ಎಂಬ ಆಳವಾದ ಭಾವನೆ ನಮ್ಮದು. ನಮ್ಮ ಸಾಧನೆಗೆ ಇದಕ್ಕಿಂತ ಉತ್ತಮ ಪರಿಸರ ಮತ್ತೊಂದು ಸಿಗಲಾರದು ಎಂಬ ಮಿಥ್ಯ ನಂಬಿಕೆ ನಮ್ಮದು.  ಆದರೆ ನಮ್ಮ ಸುತ್ತಲಿನ ಕೋಟೆಯನ್ನು ಕೆಡವಿದಾಗ ಇರುವುದಕ್ಕಿಂತಲೂ ಉತ್ತಮವಾದದ್ದು ಮತ್ತೊಂದು ಇದೆ ಎಂಬ ವಾಸ್ತವದ ದರ್ಶನವಾಗುತ್ತದೆ.  

ಬದುಕಿನಲ್ಲಿ ಹತಾಶರಾಗಬಾರದು ಎಂಬ ಸತ್ಯ ನನಗೀಗ ಅರಿವಾಗುತ್ತಿದೆ. ನಾವೇನನ್ನು ಕಳೆದುಕೊಳ್ಳುತ್ತೇವೆಯೋ, ಅದಕ್ಕೆ ಪರ್ಯಾಯವಾಗಿ ಖುಷಿಪಡುವ ಮತ್ತಷ್ಟು ಸಂದರ್ಭಗಳನ್ನು ಜಗದೊಡೆಯ ಒದಗಿಸುತ್ತಾನೆ ಎಂಬುವುದು ನಾನು ಅರಿತುಕೊಂಡೆ. ನನ್ನೊಳಗಿನ ಒಂದು ಪೊರೆಯನ್ನು ಕಳಚಿದಾಗ ಸುಂದರತೆಯ ಅರಿವಾಗುತ್ತದೆ. ನಮ್ಮನ್ನು ಆದರಿಸುವವರು, ಸ್ವೀಕರಿಸುವವರು, ಗೌರವಿಸುವವರು ಮತ್ತೆಲ್ಲೋ ಇದ್ದಾರೆ ಎಂಬುವುದು ಸತ್ಯ. ಒಂದನ್ನು ಕಳೆದುಕೊಂಡಾಗ ಮತ್ತೊಂದು ಉತ್ತಮವಾದದ್ದು ನಮ್ಮ ನಿರೀಕ್ಷೆಯಲ್ಲಿರುತ್ತದೆ. ಕಡೆಗೂ ನನಗೆ ಅರಿವಾದದ್ದು "ಆಗುವುದೆಲ್ಲಾ ಒಳ್ಳೆಯದಕ್ಕೆ"

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ